ಮಳೆಗಾಲದ ಮೇಕಪ್

7

ಮಳೆಗಾಲದ ಮೇಕಪ್

Published:
Updated:
ಮಳೆಗಾಲದ ಮೇಕಪ್

ಮಳೆಯಲ್ಲಿ ನೆನೆದವಳೇ ಸುಂದರಿ ಎನ್ನುವುದೊಂದು ಮಾತಿದೆ. ಮಳೆಯಲ್ಲಿ ನೆನೆದಾಗ ಕಾಗೆಯೂ ಸುಂದರವಾಗಿಯೇ ಕಾಣಿಸಿಕೊಳ್ಳುತ್ತದೆ ಎಂದು ಹೇಳುವವರೂ ಇದ್ದಾರೆ. ಮಳೆ ಹಾಗೂ ಸಹಜ ಸೌಂದರ್ಯಕ್ಕೆ ತಳಕು ಹಾಕಿರುವ ಹೇಳಿಕೆಗಳಿವು. ಆದರೆ ಮಳೆ ಬಂದಾಗ ಮೇಕಪ್ ಎಲ್ಲ ಅಳಿಸಿಹೋಗಿ, ಬಣ್ಣಗೆಟ್ಟಾಗ ಕಾಣುವುದು ನಿಜವಾದ ಸೌಂದರ್ಯ.

ಮಳೆಗಾಲದಲ್ಲಿ ಮೇಕಪ್ ಬೇಡವೇ ಬೇಡ ಎಂದು ಹೇಳುವಂತಿಲ್ಲ. ಈಗಂತೂ ಮೇಕಪ್‌ನ ಲೇಪವಿಲ್ಲದೇ ಮನೆಯಂಗಳಕ್ಕೆ ಬರುವುದೂ ದುಸ್ತರ ಎಂಬಂತೆ ಆಗಿರುವಾಗ ಹೊರ ಹೋಗುವುದು ಹೇಗೆ? ಅದಕ್ಕೂ ಪರಿಹಾರವಿದೆ. ವಾಟರ್ ಪ್ರೂಫ್ ಮೇಕಪ್!

ಕಣ್ಣಂಚಿನ ಕಾಡಿಗೆ ಕಣ್ಣನ್ನು ದೊಡ್ಡದಾಗಿಸಿ, ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಮಸ್ಕರಾ ಲೇಪ ಕಣ್ರೆಪ್ಪೆಯನ್ನು ಉದ್ದವಾಗಿಯೂ ನೇರವಾಗಿಯೂ ಕಾಣುವಂತೆ ಮಾಡುತ್ತದೆ. ಕಾಜಲ್, ಐ ಲೈನರ್ ಹಾಗೂ ಮಸ್ಕರಾ ಎಲ್ಲವೂ ವಾಟರ್‌ಪ್ರೂಫ್ ಆಗಿದ್ದರೆ ನೀವು ಮಳೆಯಲ್ಲಿ ನೆಂದರೂ ಚೆನ್ನಾಗಿಯೇ ಕಾಣುವಿರಿ. ಮಳೆ ನೀರು ಮುಖದ ಮೇಲಿಳಿದರೂ ಕಣ್ಣಿನ ಸೌಂದರ್ಯ ಅಳಿಸಿ ಹೋಗುವುದಿಲ್ಲ.

ಇನ್ನು ಕೆನ್ನೆಗೆ ನವಿರಾದ ತಿಳಿ ಗುಲಾಬಿ ಅಥವಾ ಪೀಚ್ ಬಣ್ಣದ `ವಾಟರ್‌ಪ್ರೂಫ್ ಗ್ಲಾಸ್~ ಲೇಪಿಸಿದರೆ ಸಹಜವಾಗಿಯೇ ಕಾಣುವಿರಿ. ಆದರೆ ಗಾಢ ವರ್ಣದ ಬಣ್ಣಗಳನ್ನು ಢಾಳಾಗಿ ಬಳಸಬೇಡಿ. ಮಳೆಯಲ್ಲಿ ನೆನೆದರೆ ಅದು ಢಾಳಾಗಿ ಕಾಣಿಸುತ್ತದೆ.

ತುಟಿರಂಗು ಸಹ ಆದಷ್ಟು ತಿಳಿ ವರ್ಣದ್ದಾಗಿರಲಿ. ಲಿಪ್‌ಗ್ಲಾಸ್ ಬಳಕೆ ಬೇಡ.

ಆದರೆ ಮಲಗುವ ಮುನ್ನ ಅಥವಾ ಮನೆಗೆ ಮರಳಿದೊಡನೆ ಈ ಮೇಕಪ್ಪನ್ನು ಕೂಡಲೇ ತೆಗೆಯುವುದನ್ನು ಮಾತ್ರ ಮರೆಯದಿರಿ.

ತಿಳಿ ವರ್ಣದ ಮೇಕಪ್ ಇದ್ದಷ್ಟೂ ಚಂದ ಕಾಣುವವವರು ಈ ಕಾಲದಲ್ಲಿ ಗಾಢ ವರ್ಣದ ಬಟ್ಟೆಗಳನ್ನೇ ಧರಿಸಬೇಕು. ಮಳೆ ಬರುವ ಲಕ್ಷಣವಿದ್ದರೆ ಯಾವುದೇ ಕಾರಣಕ್ಕೂ ಬಿಳಿಯ ಅಥವಾ ತಿಳಿ ಬಣ್ಣದ ಬಟ್ಟೆ ಬೇಡವೇ ಬೇಡ. ಭಾರತೀಯ ಔಟ್‌ಫಿಟ್ ಧರಿಸುವಂತಿದ್ದರೆ ಸಲ್ವಾರ್ ಕಮೀಜ್ ಮಳೆಗಾಲಕ್ಕೆ ಹೇಳಿ ಮಾಡಿಸಿದ ಉಡುಪು. ಕುರ್ತೀಸ್ ತೊಡುವವರು ಆದಷ್ಟು ಸಡಿಲವಾದ ಉಡುಪನ್ನೇ ಧರಿಸಿ. ಕಾಟನ್ ಬಟ್ಟೆ ಎಲ್ಲ ಋತುಗಳಿಗೂ ಹೇಳಿ ಮಾಡಿಸಿದಂತಿರುತ್ತದೆ.

ಆಧುನಿಕ ಉಡುಪುಗಳನ್ನು ಧರಿಸುವಂತಿದ್ದರೆ, ಮೊಣಕಾಲುದ್ದದ ಸ್ಕರ್ಟುಗಳು, ಕೇಪ್ರಿಗಳು ಸಹ ಚಂದ ಕಾಣುತ್ತವೆ. ಬಟ್ಟೆಯ ಅಂದ ಹೆಚ್ಚಿಸಲು ಪಾರದರ್ಶಕ ರೇನ್‌ಕೋಟ್ ಧರಿಸಲು ಮರೆಯದಿರಿ. ಹೂವಿನಲಂಕಾರದ ಕೊಡೆ ನಿಮ್ಮಂದಿಗಿರಲಿ. ಮಳೆಗಾಲದಲ್ಲಿ ನೆಂದರೂ ನೆನಪಿಸಿಕೊಳ್ಳುವಂತಿರಬೇಕು ನಿಮ್ಮ ಸೌಂದರ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry