ಮಳೆಗೆ ತಕ್ಕಂತೆ ನೀರು ರಾಜ್ಯದ ಹೊಸ ವಾದ

7

ಮಳೆಗೆ ತಕ್ಕಂತೆ ನೀರು ರಾಜ್ಯದ ಹೊಸ ವಾದ

Published:
Updated:
ಮಳೆಗೆ ತಕ್ಕಂತೆ ನೀರು ರಾಜ್ಯದ ಹೊಸ ವಾದ

ಬೆಳಗಾವಿ: `ಅಚ್ಚುಕಟ್ಟು ಪ್ರದೇಶದಲ್ಲಿನ ಮಳೆಯ ಪರಿಸ್ಥಿತಿಗೆ ಅನುಗುಣವಾಗಿ ಕಾವೇರಿ ನದಿ ನೀರನ್ನು ವೈಜ್ಞಾನಿಕವಾಗಿ ಹಂಚಿಕೆ ಮಾಡಬೇಕು ಎಂಬ ಅಂಶವನ್ನು ಮುಂದಿಟ್ಟುಕೊಂಡು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲಾಗುವುದು~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.ಇದೇ 11ರಂದು ಉದ್ಘಾಟನೆಗೊಳ್ಳಲಿರುವ `ಸುವರ್ಣ ವಿಧಾನ ಸೌಧ~ಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. `205 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.ಆದರೆ, 2002ರಿಂದ ಇದುವರೆಗಿನ ಅವಧಿಯಲ್ಲಿ ಮೂರು ಸಲ ಬಿಟ್ಟರೆ ಉಳಿದ ಎಲ್ಲ ವರ್ಷವೂ 200ಕ್ಕೂ ಹೆಚ್ಚು ಟಿಎಂಸಿ ನೀರನ್ನು ತಮಿಳುನಾಡಿಗೆ ನೀಡಿದ್ದೇವೆ. ಈ ವರ್ಷ ಮಳೆಯ ಅಭಾವದಿಂದಾಗಿ ಕಾವೇರಿ ನದಿ ಪಾತ್ರದ 49 ತಾಲ್ಲೂಕುಗಳು ಬರ ಪೀಡಿತವಾಗಿವೆ. ಇದರಿಂದಾಗಿಯೇ ನೀರಿನ ಹಂಚಿಕೆ ಬಗ್ಗೆ ವಿವಾದ ಹುಟ್ಟಿಕೊಂಡಿದೆ~ ಎಂದರು.

`ಏಳೆಂಟು ವರ್ಷಗಳಿಂದ ಮಳೆ ಬೀಳುವ ಪ್ರಮಾಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಯಬೇಕು. ವಸ್ತುಸ್ಥಿತಿಗೆ ತಕ್ಕಂತೆ ನೀರಿನ ಹಂಚಿಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕೇ ಹೊರತು, ಈ ಹಿಂದೆ ನೀಡಿದ ಆದೇಶದಂತೆ ನೀರು ಹಂಚಿಕೆ ಮಾಡುವುದು ಸೂಕ್ತವಲ್ಲ~ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.`ಅ. 8ರಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯುವ ವಿಚಾರಣೆಯಲ್ಲಿ ರಾಜ್ಯದ ಪರ ವಕೀಲ ನಾರಿಮನ್ ಈ ಅಂಶಕ್ಕೆ ಒತ್ತು ನೀಡಲಿದ್ದಾರೆ. ವಾಸ್ತವಾಂಶ ಅಧ್ಯಯನ ನಡೆಸಲು ಕೇಂದ್ರ ತಂಡವನ್ನು ಕಳುಹಿಸಿಕೊಡುವಂತೆ ಕಾವೇರಿ ನದಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಪ್ರಧಾನಿ ಸಿಂಗ್ ಅವರನ್ನು ಸಭೆ ಸಂದರ್ಭದಲ್ಲಿ ಕೇಳಿಕೊಂಡಿದ್ದೆವು.ಆದರೆ, ನಾವು ನೀಡಿದ ಯಾವುದೇ ದಾಖಲೆಯನ್ನೂ ಪರಿಗಣಿಸದೇ, ಏಕಪಕ್ಷೀಯವಾಗಿ 9 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿದ್ದರು. ಇದನ್ನು ಪ್ರತಿಭಟಿಸಿ ನಾವು ಸಭೆಯಿಂದ ಹೊರಗೆ ಬಂದಿದ್ದೆವು. ಆದೇಶದಂತೆ ನೀರು ಹರಿಸಿರುವುದರಿಂದ ಜನರು ಆಕ್ರೋಶಗೊಂಡು ರಾಜ್ಯದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಆ ಬಳಿಕ ಕೇಂದ್ರದ ಅಧ್ಯಯನ ತಂಡವನ್ನು ಇಲ್ಲಿಗೆ ಕಳುಹಿಸಿಕೊಡುತ್ತಿದ್ದಾರೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು.`ಪ್ರಧಾನಿ ಎದುರು ನಾವು ಸಮರ್ಥವಾಗಿ ವಾದ ಮಂಡಿಸಿದ್ದೇವೆ. ಕಾವೇರಿ ವಿವಾದ ಪ್ರಕರಣವನ್ನು  30 ವರ್ಷ ಕಾಲ ನಾರಿಮನ್ ಅವರೇ ನೋಡಿಕೊಂಡು ಬಂದಿದ್ದಾರೆ. ಈ ವಿಷಯದಲ್ಲಿ ಅವರು ತಜ್ಞರಾಗಿದ್ದು, ರಾಜ್ಯದ ಹಿತ ಕಾಯುತ್ತಾರೆ ಎಂಬ ವಿಶ್ವಾಸ ನಮಗಿದೆ ~ ಎಂದು ಮುಖ್ಯಮಂತ್ರಿ  ತಿಳಿಸಿದರು.ಹೊಗೇನಕಲ್‌ನಲ್ಲಿ ಭಾರಿ ಮಳೆ

ಚೆನ್ನೈ: ಕರ್ನಾಟಕ- ತಮಿಳುನಾಡು ಮಧ್ಯೆ ಘರ್ಷಣೆಗೆ ಕಾರಣವಾಗಿ, ಹೋರಾಟದ ಕಿಚ್ಚನ್ನು ಹಚ್ಚಿರುವ ಕಾವೇರಿ ನದಿ ನೀರು ಹಂಚಿಕೆ ಜಗಳವನ್ನು ತಾತ್ಕಾಲಿಕವಾಗಿ ಪರಿಹರಿಸಲು ವರುಣ ಕೃಪೆದೋರಿದ್ದಾನೆ.  ಕರ್ನಾಟಕ- ತಮಿಳುನಾಡು ಗಡಿ ಭಾಗದ ಬಿಳಿಗುಂಡ್ಲು ಮತ್ತು ಮೆಟ್ಟೂರು ಅಣೆಕಟ್ಟೆ ಮಧ್ಯೆ ಭಾನುವಾರ ಮುಂಜಾನೆ ಭಾರಿ ಮಳೆಯಾಗಿ ಹೊಗೇನಕಲ್ ಜಲಪಾತದ ಬಳಿ ದಿಢೀರ್ ಪ್ರವಾಹ ಬಂದಿತ್ತು.ಈ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ಜಲಪಾತದ ಸಮೀಪಕ್ಕೆ ಹೋಗದಂತೆ ಪೊಲೀಸರು ನಿರ್ಬಂಧಿಸಿದ್ದಾರೆ ಎಂದು ಮೂಲಗಳು `ಪ್ರಜಾವಾಣಿ~ಗೆ  ತಿಳಿಸಿವೆ. ಭಾನುವಾರ ಸಂಜೆ 4 ಗಂಟೆಯ ವೇಳೆಗೆ ಒಳ ಹರಿವಿನ ಪ್ರಮಾಣ 29,926 ಕ್ಯೂಸೆಕ್‌ಗೆ ಏರಿಕೆ ಆಗಿದ್ದು, ಜಲಾಶಯದಲ್ಲಿ 71.10 ಅಡಿ (ಗರಿಷ್ಠ 120 ಅಡಿ) ನೀರು ಸಂಗ್ರಹ ಇದೆ.ಈಗ ಅಣೆಕಟ್ಟೆಯಿಂದ 14,719 ಕ್ಯೂಸೆಕ್ ನೀರನ್ನು ಹೊರ ಬಿಡಲು ಯಾವುದೇ ಅಡ್ಡಿಯಿಲ್ಲ ಎಂದೂ ಮೂಲಗಳು ತಿಳಿಸಿವೆ. ತನ್ನ ರೈತರ ಬೆಳೆ ರಕ್ಷಣೆಗಾಗಿ 14,000 ಕ್ಯೂಸೆಕ್ ನೀರು ಅಗತ್ಯವಿದೆ. ಅದಕ್ಕಾಗಿ ಕರ್ನಾಟಕದಿಂದ ನೀರು ಬಿಡಿಸಬೇಕು ಎಂಬುದು ತಮಿಳುನಾಡಿನ ಬೇಡಿಕೆಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry