ಭಾನುವಾರ, ಮೇ 22, 2022
22 °C

ಮಳೆಗೆ ಬಂದ ಇಳೆಯ ಕಂದ

-ರಾಜೇಂದ್ರ ಶಿಂಗನಮನೆ . Updated:

ಅಕ್ಷರ ಗಾತ್ರ : | |

ಳೆಯ ಸಿಂಚನದಿಂದ ಅದ್ಯಾವ ಮಾಯೆಯಲ್ಲಿ ಭೂತಾಯಿ ಗರ್ಭ ಧರಿಸಿ ಪ್ರಸವಕ್ಕೆ ಅಣಿಯಾಗುತ್ತಾಳೋ ಆಕೆಯೇ ಉತ್ತರಿಸಬೇಕು. ಮಳೆ ನೀರು ಇಂಗಿ ಮಣ್ಣಿನ ತೇವ ಹೆಚ್ಚಿದಂತೆ ಭೂತಾಯಿ ಉದರದಿಂದ ಅದೆಷ್ಟೋ ಜೀವಿಗಳು ಜನ್ಮ ತಳೆಯುತ್ತವೆ. ಇಷ್ಟು ದಿನ ಇಲ್ಲದ ಹೊಸ ಪ್ರಪಂಚದ ಪ್ರಸವ ನಮ್ಮ ಕಣ್ಣೆದುರು ತೆರೆದುಕೊಳ್ಳುತ್ತದೆ. ಮುಂಗಾರಿನ ಲಾಲಿತ್ಯಕ್ಕೆ ಅಣಬೆಗಳು ಸಾರಥ್ಯ ವಹಿಸುತ್ತವೆ.ಬೇಸಿಗೆಯಲ್ಲಿ ಕಾಣದ ಅಣಬೆಗಳ ಸಾಲು ಮಳೆಗಾಲ ಪ್ರಾರಂಭದ ಸಿಡಿಲಿನ ಸದ್ದಿನ ಜೊತೆಗೆ ಮಳೆಯ ಮುದ್ದಿಗೆ ಕೊಡೆ ಹಿಡಿಯುತ್ತವೆ. ಮನುಷ್ಯ ಪ್ರಯತ್ನದಿಂದಲೂ ಅಸಾಧ್ಯ ಎಂಬ ವೈವಿಧ್ಯಮಯ ಆಕಾರದಲ್ಲಿ ಜನಿಸುವ ಅಣಬೆಗಳು ಕೊಡೆಯ ಆಕಾರ ನೆನಪಿಸುತ್ತವೆ. ಮರದ ಬುಡ, ಕೊಳೆತ ಬೊಡ್ಡೆ, ತೋಟದಲ್ಲಿ ಗೊಬ್ಬರವಾದ ಸೋಗೆ ಅಟ್ಟಲು, ತರಗಲೆಗಳ ರಾಶಿಯಲ್ಲಿ ಇವು ಹೆಚ್ಚಾಗಿ ಕಂಡು ಬರುತ್ತವೆ.ಕೆಲವೊಂದು ಅಣಬೆಗಳು ಹೂವಿನ ಆಕಾರದಲ್ಲಿ ಬೆಳೆದು ಒಣಗಿ ಬಹುಕಾಲ ಕೃತಕ ಹೂವಿನಂತೆ ಅಡವಿ, ಬೆಟ್ಟಗಳಲ್ಲಿ ಕಾಣಸಿಗುತ್ತವೆ. ಅಣಬೆಗಳಲ್ಲಿ ಗಾತ್ರ, ಆಕಾರ, ಬಣ್ಣಗಳು ಲೆಕ್ಕಕ್ಕೆ ಸಿಗದಷ್ಟು ಇವೆ. ಕೆಲವೊಂದು ಪ್ರಬೇಧಗಳನ್ನು ಖಾದ್ಯವಾಗಿ ಬಳಸಲಾಗುತ್ತದೆ. ಕೃತಕವಾಗಿ ಬೆಳೆಸುವ ಅಣಬೆಗಳು ಹೆಚ್ಚಾಗಿ ಬಿಳಿ ಬಣ್ಣ ಹೊಂದಿರುತ್ತದೆ. ಆದರೆ ನೈಸರ್ಗಿಕ ಅಣಬೆ ಜಗತ್ತಿನಲ್ಲಿ ಕಣ್ಣಾಡಿಸಿದರೆ ಅದರ ವಿಸ್ತಾರ ಅನಂತದವರೆಗೆ ಚಾಚಿಕೊಂಡಂತೆ ಭಾಸವಾಗುತ್ತದೆ.

ಮರಗಳ ಮೇಲೆ ಬೆಳೆಯುವ ಅಣಬೆಗಳು ಹೆಚ್ಚಿನದಾಗಿ ವಿಷಯುಕ್ತವಾಗಿದ್ದು, ಅಪಾಯ ಉಂಟುಮಾಡುತ್ತವೆ. ಆದರೆ ಅಂದ ಸವಿಯುವ ಕಣ್ಣು ಹಾಗೂ ಮನಸಿಗೆ ಯಾವುದೇ ಅಪಾಯವಿಲ್ಲ!ಅಣಬೆ ಸೇವನೆ ಇತ್ತೀಚಿನ ಅಭ್ಯಾಸವಲ್ಲ. ಕಲ್ಲಲಾಂಬು ಎಂದು ಕರೆಯಲ್ಪಡುವ ಇವುಗಳಲ್ಲಿನ ಪದಾರ್ಥ ಮಾಂಸಾಹಾರದಷ್ಟೇ ರುಚಿ ನೀಡುತ್ತದೆ ಎನ್ನುವುದು ಮಾಂಸಾಹಾರಿಗಳ ಮನಸಿನ ಮಾತು. ಅಣಬೆ ಪುಟ್ಟದಾಗಿದ್ದರೂ ಅದು ಪೌಷ್ಟಿಕಾಂಶಗಳ ಆಗರ. ಸಕ್ಕರೆ, ಕೊಬ್ಬಿನ ಅಂಶ ಕಡಿಮೆ ಇರುವುದರಿಂದ ಮಧುಮೇಹಿಗಳು, ಹೃದ್ರೋಗದ ಸಮಸ್ಯೆಗಳಿಂದ ಬಳಲುತ್ತಿರುವವರು ಸೇವಿಸಬಹುದು.ಮಕ್ಕಳಿಗೆ ಅತ್ಯುತ್ತಮ ಪೋಷಕಾಂಶ ನೀಡುವ ಆಹಾರವಿದು. ಅಣಬೆ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಹೆಚ್ಚಿನ ಅಣಬೆಗಳು ಬಿಳಿ ಬಣ್ಣಹೊಂದಿದ್ದರೂ ಕೂಡ ಕೆಂಪು, ಕಂದು, ಕಪ್ಪು, ಗುಲಾಬಿ, ನೇರಳೆ, ಹಳದಿ ಸೇರಿದಂತೆ ವಿವಿಧ ವರ್ಣದಲ್ಲಿ ನೋಡಲು ಲಭ್ಯ.

ಸಾಮಾನ್ಯವಾಗಿ ಮಳೆಗಾಲ ಹಾಗೂ ನಂತರ ಹುಟ್ಟುವ ಅಣಬೆಗಳು ಒಂದು ರೀತಿಯ `ಫಂಗಸ್' ಆಗಿದ್ದು, ಅಲ್ಪ ಕಾಲದ ಆಯಸ್ಸನ್ನು ಪಡೆದಿವೆ. ಹುಟ್ಟಿ ಸಾಯುವ ಕ್ಷಣಿಕ ಸಮಯದಲ್ಲಿ ಅವು ಜೀವಜಾಲದಲ್ಲಿ ಸ್ಫುರಿಸುವ ಸೊಬಗು ಅನನ್ಯ ಹಾಗೂ ವರ್ಣನಾತೀತ. 

-ರಾಜೇಂದ್ರ ಶಿಂಗನಮನೆ .

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.