ಮಳೆಗೆ ಮುಳುಗುವ ವಾಹನ ಗಣಪ

7

ಮಳೆಗೆ ಮುಳುಗುವ ವಾಹನ ಗಣಪ

Published:
Updated:
ಮಳೆಗೆ ಮುಳುಗುವ ವಾಹನ ಗಣಪ

ಸಿಲಿಕಾನ್ ಸಿಟಿ ಸಾಫ್ಟ್‌ವೇರ್ ನಗರವಾಗಿ ಸಾಕಷ್ಟು ಮುಂದುವರಿದಿದ್ದರೂ ಹೊಸ ಸಂಪ್ರದಾಯಗಳನ್ನು ಸೃಷ್ಟಿಸುವಲ್ಲಿ ಹಿಂದೆ ಬಿದ್ದಿಲ್ಲ. ಈ ಮಾತಿಗೆ ಜ್ವಲಂತ ಸಾಕ್ಷಿ ಸಿಗಬೇಕಾದರೆ ನೀವು ಒಮ್ಮೆ ಕಸ್ತೂರ್‌ಬಾ ರಸ್ತೆಯ ಗಣಪತಿ ದೇವಾಲಯಕ್ಕೆ ಭೇಟಿ ನೀಡಲೇಬೇಕು. ಕೆಂಪೇಗೌಡನ ಕಾಲದಲ್ಲಿ ಹಳ್ಳ ಗಣಪತಿ ಎಂದು ಕರೆಯಿಸಿಕೊಳ್ಳುತ್ತಿದ್ದ ಈ ವಿಘ್ನೇಶ ವಾಹನ ಗಣಪತಿಯಾಗಿ ಬದಲಾದ ಕತೆ ಇಲ್ಲಿದೆ...

ಆಚಾರ್ಯರು ಹೇಳುವಂತೆ ಈ ಗಜಮುಖನಿಗೆ ಏಳ್ನೂರು ವರ್ಷಗಳ ಇತಿಹಾಸವಿದೆ. ಹಿಂದಿನಿಂದಲೂ ಪೂಜಿಸಿಕೊಂಡು ಬರುತ್ತಿದ್ದ ಈ ಗಣಪನ ಪ್ರತಾಪ ಬ್ರಿಟಿಷರಿಗೂ ತಟ್ಟಿತ್ತು. ಹೊಸದಾಗಿ ನೇಮಕಗೊಂಡ ಎಲ್ಲಾ ಅಧಿಕಾರಿಗಳೂ ಈ ಗಣಪನಿಗೆ ನಮಸ್ಕರಿಸಿ ತಮ್ಮ ಕೆಲಸ ಆರಂಭಿಸುತ್ತಿದ್ದರು.

ರಸ್ತೆಯ ಮಟ್ಟಕ್ಕಿಂತ ಹತ್ತು ಅಡಿ ಕೆಳಗೆ ಪ್ರತಿಷ್ಠಿತನಾದ ಈ ಗಣಪನನ್ನು ಹಳ್ಳ ಗಣಪತಿ ಎಂದು ಕರೆಯುವುದು ರೂಢಿಯಾಯಿತು. ಬ್ರಿಟಿಷರ ಕಾಲದಲ್ಲಿ ಕುದುರೆ ಮೇಲೆ ಹೋಗುತ್ತಿದ್ದ ದಂಡಾಧಿಕಾರಿಗಳೂ ಇಲ್ಲಿ ನಮನ ಸಲ್ಲಿಸುತ್ತಿದ್ದರಂತೆ.

ಆಮೇಲೆ ಬಂದ ಕೆಂಪೇಗೌಡ ದೈವಭಕ್ತನೂ ಆಗಿದ್ದ. ಎಲ್ಲೇ ಹೋಗುವುದಿದ್ದರೂ ತನ್ನದೊಂದು ಕುದುರೆ ಏರಿಯೇ. ಹಾಗೆ ಹೊರಟ ಅವನ ಪ್ರಯಾಣ ಮೊದಲು ನಿಲ್ಲುತ್ತಿದ್ದುದು ಈ ದೇವಸ್ಥಾನದ ಎದುರು. ಯಾವುದೇ ಕಾರ್ಯಕ್ಕೆ ಹೊರಟರೂ ಇಲ್ಲಿ ಬಂದು ತನ್ನ ಕುದುರೆ ನಿಲ್ಲಿಸಿ, ಕೆಳಗಿಳಿದು ಗಣಪತಿಗೆ ಕೈಮುಗಿದು ಮುಂದೆ ಹೋಗುತ್ತಿದ್ದ. ಇಲ್ಲೇ ಪಕ್ಕದಲ್ಲಿನ ಕೆರೆಯಲ್ಲಿ ಕುದುರೆಗೂ ನೀರು ಕುಡಿಸಿ ಮುಂದುವರೆಯುತ್ತಿದ್ದ. ಅದು ಅವನು ಪಾಲಿಸಿಕೊಂಡು ಬರುತ್ತಿದ್ದ ನಿಯಮವೂ ಆಗಿತ್ತು ಎನ್ನುತ್ತಾರೆ ಹಿರಿಯ ಅರ್ಚಕರು.

ಆಗ ಬೆಂಗಳೂರು ಬೆಳೆದಿರಲಿಲ್ಲ. ಇಲ್ಲಿ ಸಮರ್ಪಕ ರಸ್ತೆಯೂ ಇರಲಿಲ್ಲ. ಈ ಕಸ್ತೂರ್‌ಬಾ ರಸ್ತೆಯ ಸುತ್ತಮುತ್ತೆಲ್ಲ ದಟ್ಟವಾಗಿ ಬೆಳೆದಿದ್ದ ಕಾಡು, ಕರಿ ಬಂಡೆ. ಅದರ ಕುರುಹೆಂಬಂತೆ ಇಂದಿಗೂ ದೇಗುಲದ ಹಿಂಬದಿಯಲ್ಲಿ ದೊಡ್ಡ ಕಲ್ಲಿನ ಬಂಡೆಯಿದೆ. ಇನ್ನೊಂದು ಕಡೆಯಿಂದ ನೋಡಿದರೆ ದೇವಾಲಯವೇ ಕಾಣದಷ್ಟು ದೊಡ್ಡ ಬಂಡೆಯಿದೆ. ಇಲ್ಲಿನ ಗಣಪನ ಮೂರ್ತಿಯೂ ಅದೇ ಕಲ್ಲಿನಿಂದ ಉದ್ಭವಿಸಿದ್ದು ಎಂದು ವಿವರಣೆ ನೀಡುತ್ತಾರೆ ಅವರು.

ಹೀಗೆ, ಕೆಂಪೇಗೌಡ ಕುದುರೆ ನಿಲ್ಲಿಸಿ ದೇವರ ದರ್ಶನ ಪಡೆದು ಹೋಗುತ್ತಿದ್ದುದು ಸಾರ್ವಜನಿಕರಿಗೆ ಚೋದ್ಯವೆನಿಸಿರಬೇಕು. ಅದನ್ನೇ ಕುದುರೆ ಪೂಜೆ ಎಂದು ಪರಿಗಣಿಸಿ ತಮ್ಮ ವಾಹನವನ್ನೂ ತಂದು ಪೂಜೆ ನಡೆಸುವ ಪ್ರವೃತ್ತಿ ಬೆಳೆಯಿತು. ನಗರ ಬೆಳೆಯುತ್ತಿದ್ದಂತೆ ಪೆಟ್ರೋಲ್, ಡೀಸೆಲ್ ಬಳಸುವ ವಾಹನಗಳೂ ಪೂಜೆಗೆ ಬಂದವು. ಈ ರೀತಿ ಗಣಪ ತನ್ನ ಹರವನ್ನು ಹೆಚ್ಚಿಸಿಕೊಂಡು ವಾಹನ ಗಣಪತಿಯಾಗಿ ಬದಲಾದ.

ಇಂದು ಪ್ರತಿ ಅಪಾರ್ಟ್‌ಮೆಂಟ್ ಎದುರು ಗಣಪನ ಜನನವಾಗಿದ್ದರೂ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ. ಇತ್ತೀಚೆಗೆ ರಸ್ತೆ ದುರಸ್ತಿ ನೆಪದಲ್ಲಿ ಏಕಮುಖ ಚಾಲನೆಗೆ ಮಾತ್ರ ಅವಕಾಶ ನೀಡಿರುವುದರಿಂದ ವಾಹನ ನಿಲುಗಡೆ ಕಷ್ಟವಾಗುತ್ತಿದೆ. ಸೋಮವಾರ ಹಾಗೂ ಶುಕ್ರವಾರ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಅತ್ಯಧಿಕ. ಕೆಲವೊಮ್ಮೆ ಅದು ಟ್ರಾಫಿಕ್ ಜಾಮ್‌ಗೂ ಕಾರಣವಾಗುವುದೂ ಉಂಟು. ನಮ್ಮ ವಾಹನವನ್ನು ರಸ್ತೆಯಲ್ಲೇ ನಿಲ್ಲಿಸಬೇಕು, ಅದಕ್ಕೂ ಇಲ್ಲಿ ಸೂಕ್ತ ಸ್ಥಳವಿಲ್ಲ ಎಂಬುದು ಪ್ರತಿನಿತ್ಯ ಭೇಟಿ ನೀಡುವ ಭಕ್ತರ ದೂರು.

ಇನ್ನು ಮಳೆಗಾಲದಲ್ಲಿ ಇಲ್ಲಿ ಪೂಜೆ ನಡೆಯುವುದೇ ಅಪರೂಪ. ಜೋರಾಗಿ ಸುರಿದ ಮಳೆಯಿಂದ ತುಂಬಿ ಹರಿಯುವ ಚರಂಡಿಯ ನೀರೆಲ್ಲಾ ದೇವಸ್ಥಾನದ ಗರ್ಭಗುಡಿಗೆ ನುಗ್ಗುತ್ತದೆ. ಅದನ್ನು ಸ್ವಚ್ಛಗೊಳಿಸಲು ಪಡಬೇಕಾದ ಪಡಿಪಾಟಲು ಅಷ್ಟಿಷ್ಟಲ್ಲ. ಆ ದಿನಗಳಲ್ಲಿ ತುಂಬಿದ್ದ ನೀರನ್ನು ರಾತ್ರಿಯೆಲ್ಲಾ ಪಾತ್ರೆಯಲ್ಲಿ ಎತ್ತಿ ಹೊರಚೆಲ್ಲಿ ಪೂಜೆ ನಡೆಸುತ್ತಿದ್ದದ್ದೂ ಉಂಟು ಎಂದು ನೆನಪಿಸಿಕೊಳ್ಳುತ್ತಾರೆ ಅರ್ಚಕರು.

`ಮಳೆಗಾಲದಲ್ಲಿ ನೀರು ತುಂಬಿದಾಗೆಲ್ಲ ಬಿಬಿಎಂಪಿಯವರು ಬಂದು ನೋಡಿ ಫೋಟೊ ತೆಗೆದು ಹೋಗುತ್ತಾರಷ್ಟೇ. ಈವರೆಗೆ ನೀರೆತ್ತಲು ನೆರವು ನೀಡಿಲ್ಲ. ಸಮೀಪದ ಸಂಸ್ಥೆಯಲ್ಲಿ ಕೆಲಸ ಮಾಡುವ ನಾವು ಜತೆಗೂಡಿ ಪಂಪ್ ವ್ಯವಸ್ಥೆ ಮಾಡಿ ನೀರೆತ್ತುತ್ತಿದ್ದೇವೆ. ಚರಂಡಿಯಲ್ಲಿ ಹರಿಯುವ ಕೊಳಚೆ ನೀರೆಲ್ಲಾ ದೇವಸ್ಥಾನದೊಳಗೆ ಪ್ರವೇಶಿಸುತ್ತದೆ. ಯಾವ ಇಲಾಖೆಯೂ ಈವರೆಗೆ ಸ್ಪಂದಿಸಿಲ್ಲ~ ಎನ್ನುವ ಉದ್ಯೋಗಿ ಶ್ರೀನಿವಾಸ್ ಪ್ರತಿ ಬಾರಿ ನೀರು ತುಂಬಿದಾಗಲೂ ಪಂಪ್ ಆನ್ ಮಾಡಿ ಪೈಪ್ ಸಿಕ್ಕಿಸಿ ನೀರು ಹೊರಬಿಡುತ್ತಾರಂತೆ.

ಹೀಗೆ ಉದ್ಭವ ಮೂರ್ತಿಯಾಗಿದ್ದ ಪ್ರಸನ್ನ ಗಣಪತಿ, ವಾಹನ ಗಣಪನಾಗಿ ಬದಲಾಗಿ ಪ್ರತಿ ಮಳೆಗೆ ನೆನೆದು ಮತ್ತಷ್ಟು ಪರಿಶುದ್ಧನಾಗುತ್ತಾನೋ ಅಥವಾ ಚರಂಡಿಯ ಕೊಳಚೆ ನೀರನ್ನು ಮೈಗೆ ಮೆತ್ತಿಕೊಂಡು ಮತ್ತಷ್ಟು ಬೇಸರ ಪಡುತ್ತಾನೋ? ವಿನಾಯಕನೇ ಉತ್ತರ ನೀಡಬೇಕು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry