ಶುಕ್ರವಾರ, ಮೇ 7, 2021
19 °C

ಮಳೆಯಲಿ, ಆಟೊ ಏರಿ...

-ಆರ್‌ಸಿಎಚ್ Updated:

ಅಕ್ಷರ ಗಾತ್ರ : | |

ಪ್ರಸಂಗ 1: ಮಕ್ಕಳ ಹುಟ್ಟುಹಬ್ಬ ಆಚರಿಸುವುದು ಮಾಮೂಲಿ. ಇಲ್ಲೊಬ್ಬ ಆಟೊ ಡ್ರೈವರ್ ಪಾಲಿಗೆ ಅವರ ಆಟೊ ರಿಕ್ಷಾ ಮಗು ಇದ್ದಂತೆ. ತಾನು ರಿಕ್ಷಾವಾಲಾ ಆದ ದಿನವನ್ನು ಅವರು `ಆಟೊದ ಹುಟ್ಟುಹಬ್ಬ'ವಾಗಿ ಆಚರಿಸುತ್ತಾರೆ. ಗೆಳೆಯರಿಗೆ, ಪ್ರಯಾಣಿಕರಿಗೆ ಸಿಹಿ ಕೊಟ್ಟು ಸಂಭ್ರಮಿಸುತ್ತಾರೆ.ಪ್ರಸಂಗ 2: ಈ ಆಟೊ ಡ್ರೈವರ್‌ಗೆ ಪರಿಸರದ ಬಗ್ಗೆ ಇನ್ನಿಲ್ಲದ ಕಾಳಜಿ. ಅವರ ಆಟೊದಲ್ಲಿ ಗಿಡಗಳ ಸಣ್ಣದೊಂದು ನರ್ಸರಿಯೇ ಇರುತ್ತದೆ. ತಮ್ಮ ಆಟೊದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅವರು ಉಚಿತವಾಗಿ ಗಿಡ ನೀಡುತ್ತಾರೆ, `ಗಿಡ ಬೆಳೆಸಿ' ಎಂದು ಕೋರಿಕೊಳ್ಳುತ್ತಾರೆ.ಆಟೊ ಡ್ರೈವರ್‌ಗಳ ಬಗೆಗಿನ ಪ್ರಸಂಗಗಳು ರಾಮಾಯಣ, ಮಹಾಭಾರತದ ಉಪಕಥನಗಳಿದ್ದಂತೆ- ಒಂದಕ್ಕಿಂತ ಒಂದು ಸ್ವಾರಸ್ಯ. ಇಂಥ ಆಟೊ ಕಥನಗಳೇ ನಿರ್ದೇಶಕ ಉದಯ್ ಪ್ರಕಾಶ್ ಅವರ `ಆಟೋರಾಜ' ಚಿತ್ರದ ಹೂರಣ. ಸುಮಾರು ಎರಡು ವರ್ಷಗಳ ಕಾಲ ಆಟೊ ಮತ್ತು ಆಟೊ ಡ್ರೈವರ್‌ಗಳ ಹಿಂದೆ ಬಿದ್ದು ಅವರು ಚಿತ್ರಕಥೆ ರೂಪಿಸಿದ್ದಾರಂತೆ.`ಆಟೋರಾಜ' ಚಿತ್ರದಲ್ಲಿ ರಿಕ್ಷಾ ಡ್ರೈವರ್ ಆಗಿ ಗಣೇಶ್ ಖಾಕಿ ತೊಟ್ಟಿದ್ದಾರೆ. ಆದರೆ, ಕನ್ನಡ ಸಿನಿಮಾ ಪ್ರೇಕ್ಷಕರಿಗೆ `ಆಟೋರಾಜ' ಎಂದರೆ ತಕ್ಷಣ ನೆನಪಿಗೆ ಬರುವುದು ಶಂಕರ್‌ನಾಗ್. ರಿಕ್ಷಾವಾಲಾಗಳಿಗೆ ಶಂಕರ್‌ನಾಗ್ ಬಗ್ಗೆ ಇನ್ನಿಲ್ಲದ ಅಭಿಮಾನ. ಈ ಅಭಿಮಾನ ಹಾಗೂ ಶಂಕರ್‌ನಾಗ್ ನೆರಳು ಗಣೇಶ್ ಚಿತ್ರದಲ್ಲೂ ಇರಲಿದೆ. `ಶಂಕರ್‌ನಾಗ್' ನೆರಳು ಚಿತ್ರದುದ್ದಕ್ಕೂ ಸಿನಿಮಾದಲ್ಲಿ ಇರಲಿದೆ. ಅಂದಮೇಲೆ, ಇದು ಶಂಕರ್‌ನಾಗ್‌ಗೆ ಶ್ರದ್ಧಾಂಜಲಿ ರೂಪದ ಚಿತ್ರವಾ?`ಹೌದು ಎಂದರೆ ಹೌದು, ಇಲ್ಲ ಎಂದರೆ ಇಲ್ಲ' ಎನ್ನುವುದು ನಿರ್ದೇಶಕರ ಮಾತು. `ಸಿನಿಮಾದ ಆತ್ಮದ ರೂಪದಲ್ಲಿ ಶಂಕರ್‌ನಾಗ್ ಇದ್ದಾರೆ. ಶೀರ್ಷಿಕೆಯಿಂದಾಗಿ ಅವರ ಪಾತ್ರವನ್ನು ಎಳೆದುತಂದಿಲ್ಲ. ಇದು ಕಥೆಯ ಅಗತ್ಯ. ಈಗಾಗಲೇ ಶಂಕರ್‌ಗೆ ಶ್ರದ್ಧಾಂಜಲಿ ರೂಪದಲ್ಲಿ ಸಾಕಷ್ಟು ಚಿತ್ರಗಳು ಬಂದಿವೆ. ಆ ಚಿತ್ರಗಳ ಸಾಲಿಗೆ ನನ್ನ ಚಿತ್ರವೂ ಸೇರ್ಪಡೆ ಎಂದು ಹೇಳಲು ನಾನು ಬಯಸುವುದಿಲ್ಲ. ಸಿನಿಮಾ ತೆರೆಕಂಡ ನಂತರ ಈ ಚಿತ್ರಕ್ಕೂ ಶಂಕರ್‌ನಾಗ್ ಅವರಿಗೂ ಇರುವ ಸಂಬಂಧವನ್ನು ಅಭಿಮಾನಿಗಳು ನಿರ್ಣಯಿಸುತ್ತಾರೆ' ಎಂದು ಪ್ರಕಾಶ್ ಹೇಳುತ್ತಾರೆ.ಸಿನಿಮಾ ನಂಟಿನ ಮಾತು ಏನಾದರೂ ಇರಲಿ, `ಆಟೋರಾಜ' ಬದುಕಿನ ಸೌಂದರ್ಯವನ್ನು ಹೆಚ್ಚಿಸುವ ಸಂಬಂಧಗಳ ಕಥೆಯನ್ನಂತೂ ಹೇಳಲಿದೆ. ಪ್ರೇಮದ ಆಳದ ಕುರಿತು ಚಿತ್ರ ಮಾತನಾಡಲಿದೆ. ಓರ್ವ ಸಾಮಾನ್ಯ ಯುವಕ ರಿಕ್ಷಾ ಓಡಿಸುತ್ತಲೇ ತನ್ನ ಬದುಕಿನ ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳಲು ತುಡಿಯುವುದು, ಆತನ ವ್ಯಕ್ತಿತ್ವ ಇಬ್ಬರು ನಾಯಕಿಯರ ಬದುಕನ್ನೇ ಬದಲಿಸುವ ಕಥೆ ಚಿತ್ರದಲ್ಲಿದೆ.`ಕಥೆ ನಿಜ ಜೀವನಕ್ಕೆ ಹತ್ತಿರವಾದುದು ಎನ್ನುವ ಬದಲು ನಿಜ ಜೀವನದ ಘಟನೆಗಳಿಂದಲೇ ಪ್ರೇರಿತವಾದುದು. ನಾನು ಕಂಡ ಆಟೊ ಡ್ರೈವರ್ ಒಬ್ಬರ ಬದುಕನ್ನು ಆಧರಿಸಿಯೇ ಕಥೆ ರಚಿಸಿರುವೆ. ಚಿತ್ರದ ನಾಯಕಿಯರಲ್ಲಿ ಒಬ್ಬರಾದ ದೀಪಿಕಾ ಕಾಮಯ್ಯ ಅವರ ಪಾತ್ರವೂ ನಿಜ ಜೀವನದ್ದು' ಎಂದು ಪ್ರಕಾಶ್ ರೀಲು-ರಿಯಲ್ಲುಗಳ ಕಥೆಯ ಸಿಕ್ಕು ಬಿಡಿಸುತ್ತಾರೆ.`ಮುಂಗಾರುಮಳೆ' ಚಿತ್ರದಲ್ಲಿ ಗಣೇಶ್‌ಗೆ ಗೆಳೆಯನಾಗಿ ಮೊಲವೊಂದು ಕಾಣಿಸಿಕೊಂಡಿತ್ತು. ಈ ಚಿತ್ರದಲ್ಲಿ ಬೆಕ್ಕು ಇರಲಿದೆ. ಇತರರಿಗೆ ಬೆಕ್ಕು ಅಪಶಕುನವಾದರೆ, `ಆಟೋರಾಜ'ನಿಗೆ ಶುಭಶಕುನ!`ಅಂದಹಾಗೆ, `ಆಟೋರಾಜ' ಗಣೇಶ್‌ರ ಈವರೆಗಿನ ಇಪ್ಪತ್ತೆರಡು ಚಿತ್ರಗಳಲ್ಲೇ ಅತ್ಯಂತ ಭಿನ್ನ' ಎನ್ನುವುದು ಚಿತ್ರತಂಡದ ಅನಿಸಿಕೆ.  ಕಲಾವಿದನಾಗಿ ಗಣೇಶ್ ಅವರ ಪ್ರಬುದ್ಧತೆಯನ್ನು ಈ ಚಿತ್ರದಲ್ಲಿ ಕಾಣಬಹುದು. ಜನರ ಮನಸ್ಸಿನಲ್ಲಿ ನೆಲೆಯೂರಿನ ಹಿರಿಯ ನಟನೊಬ್ಬರನ್ನು ನೆನಪಿಸುವ ಪಾತ್ರದಲ್ಲಿ ನಟಿಸುವ ಸವಾಲನ್ನು ಗಣೇಶ್ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ನಿರ್ದೇಶಕ ಪ್ರಕಾಶ್ ಆತ್ಮವಿಶ್ವಾಸದಿಂದ ಹೇಳುತ್ತಾರೆ.ಅಲ್ಲಿಗೆ, ಗಣೇಶ್‌ರ ಮಳೆಯ ಇಮೇಜ್‌ಗೆ ಈಗ ಆಟೊ ಸ್ಪರ್ಶ ಸೇರಿಕೊಳ್ಳುವ ಸಾಧ್ಯತೆಯಿದೆ ಎಂದಾಯಿತು.

ರಾಜ್ಯದಲ್ಲಿ ಮುಂಗಾರುಮಳೆ ಚುರುಕಾಗುತ್ತಿರುವ ಸಂದರ್ಭದಲ್ಲೇ `ಆಟೋರಾಜ' ಈ ಶುಕ್ರವಾರ (ಜೂನ್ 21) ತೆರೆಕಾಣುತ್ತಿದೆ. ಮಳೆ ಹುಡುಗನ ಮಳೆಯಲ್ಲಿನ ಆಟೊ ಪಯಣ ಚಿತ್ರರಸಿಕರಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.