ಮಳೆಯಾದಳು ನೀರಾ...

7

ಮಳೆಯಾದಳು ನೀರಾ...

Published:
Updated:
ಮಳೆಯಾದಳು ನೀರಾ...

ಹಚ್ಚು ಎಂಬುದೊಂದು ಕಾಡು. ಅಲ್ಲಿ ನೀರಾ ಎಂಬ ಸುಂದರ ತರುಣಿ. ಆಕೆ ಕೈಯಿಟ್ಟಲ್ಲೆಲ್ಲಾ ನೀರಿನ ಒರತೆ. ಕಾಲಿಟ್ಟಲೆಲ್ಲಾ ನೀರಿನ ಚಿಲುಮೆ, ನಕ್ಕರೆ ತುಂತುರು. ಕಾಡು ಪ್ರಾಣಿಗಳಿಗೂ, ನಾಡಿನ ಜನರಿಗೂ ಅವೆಳೆಂದರೆ ಇಷ್ಟ.

 

ಅವಳಿದ್ದಲ್ಲೆಲ್ಲಾ ತಂಪು ಎಂದು ಎಲ್ಲರೂ ಕೊಂಡಾಡುತ್ತಿದ್ದರು. ಆಗಾಗ ನಾಡಿನೊಳಗೂ ಬಂದು ಹೋಗುವುದು ಅವಳ ಅಭ್ಯಾಸ.  ಹೀಗಿರಲು ನೀರಾ ಒಂದು ದಿನ ಕಾಲು ಜಾರಿ ಬೆಟ್ಟದಿಂದ ಉರುಳಿದಳು. ಪ್ರಜ್ಞೆ ತಪ್ಪಿದಳು.ಅವಳೊಂದಿಗೆ ನೀರೂ ಹರಿಯಿತು. ರಾತ್ರಿಯಲ್ಲಿ ಹರಿವ ಆ ಬಿಳಿ ಧಾರೆ ಕಂಡ ಆಕಾಶದ ಚಂದ್ರ, ತಾರೆಗಳು ಆಶ್ಚರ್ಯ ಪಟ್ಟವು. ಓ! ಇಂಥ ಅದೃಷ್ಟಧಾರೆಗೆ ಆ ಹುಡುಗಿ ಕಾರಣ ಎಂದು ತಿಳಿದು ಅವಳನ್ನು ತಮ್ಮ ಆಕಾಶ ಲೋಕಕ್ಕೆ ಹೊತ್ತೊಯ್ದವು. ಅವಳು ಹೋದದ್ದೇ ತಡ ಕಾಡು ನಾಡು ನೀರಿಲ್ಲದೆ ಬೆಂಗಾಡಾಗಿ ಸೊರಗಿದವು.ನೀರಾ ಕಣ್ಣು ಬಿಟ್ಟು ನೋಡಿದಳು. `ಇದೇನಿದು? ಕಾಡು ಅಲ್ಲ ನಾಡೂ ಅಲ್ಲ. ಕಣ್ಣು ಬಿಟ್ಟರೆ ಕೈಲಾಸವೆಂಬಂತೆ ಎಲ್ಲಾ ನೀಲಿ ನೀಲಿಯಾಗಿದೆಯಲ್ಲ!~ ಎಂದು ಆಶ್ಚರ್ಯ ಪಟ್ಟಳು. ನಂತರ `ನೀವೆಲ್ಲ ಯಾರು? ನನ್ನನ್ನೇಕೆ ಕರೆ ತಂದಿರಿ?~ ಎಂದು ಕೇಳಿದಳು. ಅದಕ್ಕೆ ಚಂದ್ರ, ಗ್ರಹ ತಾರೆಗಳು `ನಿನ್ನಲ್ಲಿರುವ ಆ ಜೀವಜಲವನ್ನು ಕಂಡು ಬೆರಗಾದೆವು. ನಿನ್ನ ಸೌಂದರ‌್ಯಕ್ಕೆ ಮರುಳಾದೆವು. ನಿನ್ನನ್ನು ಮದುವೆಯಾಗಬೇಕೆಂದಿದ್ದೇವೆ~ ಎಂದವು.`ನಾನು ಒಬ್ಬರನ್ನು ಮಾತ್ರ ಮದುವೆಯಾಗುವೆ. ನೋಡೋಣ ನಿಮ್ಮ ಪರಿಚಯ ಮಾಡಿಕೊಳ್ಳಿ~ ಎಂದಳು ನೀರಾ. ಆಗ ಕತ್ತಲೆ ಮರೆಯಲ್ಲಿದ್ದ ಸೂರ್ಯ, `ನಾನು ನಾಡಿಗೆ ಬೆಳಕು ಕೊಡುವೆ. ನನ್ನಿಂದಲೇ ಜೀವರಾಶಿ ಬದುಕಿದೆ~ ಎಂದ. `ಅಯ್ಯೋ, ಸದಾ ಉರಿವ ನೀ ನನಗೆ ಬೇಡ~ ಎಂದು ನಿರಾಕರಿಸಿದಳು. ಮುಂದೆ ಬಂದ ನಕ್ಷತ್ರ, `ನಾನು ರಾತ್ರಿ ಮಿನುಗುವೆ. ಸದಾ ಹೊಳೆಯುವೆ. ಕತ್ತಲ ಆಗಸಕ್ಕೆ ಚೆಲುವು ತಂದಿರುವೆ~ ಎಂದಿತು.ಆಗ ಆಕೆ `ನೀನು ಅತ್ತಿತ್ತ ಚಲಿಸಲೊಲ್ಲೆ, ಕೆಳಗೆ ಇಳಿಯಲೊಲ್ಲೆ. ಬಹುದೂರ ನೀನಿರುವೆ. ಒಲ್ಲೆ~ ಎಂದಳು. ಖುಶಿಯಿಂದ ಮುಂದೆ ಬಂದ ಚಂದ್ರ  `ನಾನು ಬೆಳದಿಂಗಳು ಕೊಡುವ ಸುಂದರ ಕಾಯ. ಹುಣ್ಣಿಮೆಯಲ್ಲಿ ಪೂರ್ಣವಾಗಿ ಹೊಳೆಯುವೆ. ನಿಮ್ಮೂರಿನವರು ನನ್ನ ಹತ್ತಿರ ಬಂದು ಹೋಗಿದ್ದಾರೆ. ಇಲ್ಲಿ ನೀರಿನ ಪಸೆ ಇಲ್ಲ.ನನ್ನ ದಾಹ ಇಂಗಿಸು ಬಾ~ ಎಂದ.ನೀರಾಗೆ ಚಂದ್ರನ ಮೇಲೂ ಮನಸ್ಸಾಗಲಿಲ್ಲ. `ನಿನಗೆ ಸ್ವಂತದ್ದೆಂಬುದು ಏನೂ ಇಲ್ಲ. ನಿನ್ನ ಬೆಳದಿಂಗಳು ಕೂಡ ನಿನ್ನದಲ್ಲ. ಬೇರೆಯವರಿಂದ ಮಾತ್ರ ಪಡೆದಿದ್ದು. ಅದರಲ್ಲೂ ಹದಿನೈದು ದಿನ ಮಾತ್ರ ಕಾಣುತ್ತೀ. ಉಳಿದ ದಿನ ನಿನ್ನ ಬೆಳಕೇ ಇಲ್ಲ~ ಎಂದು ಕಡ್ಡಿ ತುಂಡಾದಂತೆ ಮಾತು ಮುಗಿಸಿದಳು. ಅಷ್ಟರಲ್ಲಿ ಅವಳ ಕಣ್ಣಿಗೆ ಬಿದ್ದದ್ದು ಒಂದು ಕಪ್ಪು ದೇಹ. ಅದಾರು ಎಂದು ಕೇಳಿದಳು. `ನಾನು ಕರಿಮೋಡ~ ಎಂಬ ಉತ್ತರ ಬಂತು ಅಲ್ಲಿಂದ. ಇತ್ತ ಸೂರ್ಯ, ಚಂದ್ರ, ತಾರೆಗಳಿಗೆ ನಗುವೋ ನಗು. `ಮೋಡಕ್ಕೊಂದು ಸ್ಪಷ್ಟ ಆಕಾರವೇ ಇಲ್ಲ~ ಎಂಬುದು ಅವುಗಳ ಅಪಹಾಸ್ಯ. ತಿರಸ್ಕಾರದ ದೃಷ್ಟಿಯಿಂದ ನೋಡುತ್ತಾ `ಮೋಡವನ್ನು ಆಕೆ ಒಪ್ಪುವುದು ಸಾಧ್ಯವೇ ಇಲ್ಲ~ ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಂಡವು.ನೀರಾ ಮೆಲ್ಲನೆ ಮೋಡದ ಬಳಿ ಹೋದಳು. ಆ ಕಪ್ಪು ಶರೀರವನ್ನೊಮ್ಮೆ ನೋಡಿ, `ಕಡೆಗಣ್ಣಿಗೆ ತುತ್ತಾದವರನ್ನು ಕಡೆಗಾಲಕ್ಕೆ ದೇವರು ಕೈಬಿಡುವುದಿಲ್ಲ ಎಂಬುದು ನಮ್ಮ ನಾಡಿನ ಗಾದೆ. ನಿನ್ನೊಂದಿಗೆ ನಾನಿರುತ್ತೇನೆ~ ಎಂದು ಮೋಡವನ್ನು ಸೇರಿಕೊಳ್ಳುತ್ತಾಳೆ.ನೀರಾ ಮುಟ್ಟಿದೊಡನೆ ಮೋಡಕ್ಕೆ ಎಲ್ಲಿಲ್ಲದ ಸಂತಸ. `ನನ್ನಂತಹ ಆಕಾರವಿಲ್ಲದ, ಸುಂದರನೂ ಅಲ್ಲದವನಿಗೆ ಒಲಿದೆಯಲ್ಲಾ ನೀನು~ ಎಂದು ನೀರಾಳನ್ನು ಕೂಡಿದ ಮೋಡ ಸಮೃದ್ಧವಾಗುತ್ತದೆ. ಖುಶಿಯಿಂದ ಮೈ ಉಬ್ಬಿಸಲು ಧೋ ಧೋ ಎಂದು ಆಗಸದಿಂದ ನೀರಾ ಧಾರೆಯಾಗಿ ಹರಿಯುತ್ತಾಳೆ. ಭೂಮಿಗೆ ತಂಪು ತರುತ್ತಾಳೆ. ಹಸಿರು ಹುಟ್ಟಿಸುತ್ತಾಳೆ. ಭೂಮಿ ತೊರೆದ ನೀರಾ ಮಳೆಯಾಗಿ ಮತ್ತೆ ಭೂಮಿಗೆ ಬರುತ್ತಾಳೆ. ಹಾಗೆ ಅವಳು ಬಂದಾಗಲೆಲ್ಲಾ ನಾವು `ಮಳೆ ಬಂತೋ ಮಳೆ~ ಎಂದು ಕುಣಿದಾಡುತ್ತೇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry