ಮಂಗಳವಾರ, ಮಾರ್ಚ್ 9, 2021
18 °C
ಮೆಸ್ಕಾಂ ವ್ಯಾಪ್ತಿಯಲ್ಲಿ ಬಿಕ್ಕಟ್ಟಿಲ್ಲ– ಎಂ.ಡಿ.

ಮಳೆಯಿಂದ ಒಂದಿಷ್ಟು ನಿರಾಳ, ಒಂದಷ್ಟು ನಷ್ಟ

ಎಂ.ಜಿ.ಬಾಲಕೃಷ್ಣ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆಯಿಂದ ಒಂದಿಷ್ಟು ನಿರಾಳ, ಒಂದಷ್ಟು ನಷ್ಟ

ಮಂಗಳೂರು: ವಿದ್ಯುತ್‌ ಸಮಸ್ಯೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ, ಅನಿಯಮಿತ ಲೋಡ್‌ಶೆಡ್ಡಿಂಗ್, ಉತ್ಪಾದನಾ ಕ್ಷೇತ್ರಕ್ಕೆ ಹೊಡೆತ ಮೊದಲಾದ ಸುದ್ದಿಗಳು ರಾಜ್ಯದ ವಿವಿಧ ಭಾಗಗಳಿಂದ ಕೇಳಿಸತೊಡಗಿದೆ. ಆದರೆ ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿಯ (ಮೆಸ್ಕಾಂ) ವ್ಯಾಪ್ತಿ­ಯಲ್ಲಿ ಇಂತಹ ದೂರುಗಳು ಅಷ್ಟಾಗಿ ಕೇಳಿ­ಬಂದಿಲ್ಲ. ಬದಲಿಗೆ ಗುಡುಗು, ಸಿಡಿಲು ಸಹಿತ ಮಳೆ ಸುರಿಯತೊಡಗಿರುವುದರಿಂದ ವಿದ್ಯುತ್‌ ಮೇಲಿನ ಒತ್ತಡ ಗಣನೀಯವಾಗಿ ಕುಸಿದಿದೆ.ಮುಂಗಾರು ಪೂರ್ವ ಮಳೆಯೊಂದಿಗೆ ಗಾಳಿ, ಸಿಡಿಲು, ಮಿಂಚು ಕಾಣಿಸುವುದು ಸಾಮಾನ್ಯ. ಜಿಲ್ಲೆಯಾದ್ಯಂತ ಈಗಾಗಲೇ ಸಿಡಿಲಿಗೆ 6 ಮಂದಿ ಬಲಿಯಾಗಿ­ದ್ದಾರೆ, ಹಲವರು ಗಾಯಗೊಂಡಿ­ದ್ದಾರೆ. ಸಿಡಿಲಿನಿಂದ ದಕ್ಷಿಣ ಕನ್ನಡ ಜಿಲ್ಲೆಯೊಂದ­ರಲ್ಲೇ ಸುಮಾರು 50ರಷ್ಟು ವಿದ್ಯುತ್‌ ಟ್ರಾನ್‌್ಸ­ಫಾರ್ಮರ್‌­ಗಳು ಕೆಟ್ಟುಹೋಗಿವೆ ಇಲ್ಲವೇ ಸುಟ್ಟು­ಹೋಗಿವೆ. ಭಾರಿ ಗಾಳಿ, ಮಳೆಯಿಂದಾಗಿ ಜಿಲ್ಲೆ­ಯಲ್ಲಿ 600ರಷ್ಟು ವಿದ್ಯುತ್‌ ಕಂಬಗಳು ನಾಶ­ವಾಗಿವೆ. ಇದೆಲ್ಲ ಆಗಿರುವುದು ಮಳೆಯ ‘ಟ್ರೇಲರ್‌’ಗೆ. ಮಳೆಗಾಲ ಆರಂಭವಾಗಲು ಇನ್ನೂ ಒಂದು ತಿಂಗಳು ಇರುವುದರಿಂದ ಭಾರಿ ಅನಾಹುತದ ಮುನ್ಸೂಚನೆಯನ್ನು ನಿರೀಕ್ಷಿಸು­ವುದು ತಪ್ಪಲ್ಲ.‘ಮಳೆ ಬಂದಿರುವುದರಿಂದ ಮೆಸ್ಕಾಂ ವ್ಯಾಪ್ತಿಯ ನಾಲ್ಕೂ ಜಿಲ್ಲೆಗಳಲ್ಲಿ ವಿದ್ಯುತ್‌ ಬೇಡಿಕೆಯಲ್ಲಿ ಶೇ 20ರಿಂದ 30ರಷ್ಟು ಕಡಿಮೆ­ಯಾಗಿದೆ. ಸಹಜವಾಗಿಯೇ ಬಿಕ್ಕಟ್ಟಿನ ಪರಿಸ್ಥಿತಿ ಇಲ್ಲವಾಗಿದೆ. ಬಿರು ಬೇಸಿಗೆಯಲ್ಲಿ ಸಹ ರೈತರಿಗೆ, ಜನ­ಸಾಮಾನ್ಯರಿಗೆ ಕಷ್ಟ ಆಗದ ರೀತಿಯಲ್ಲೇ ವಿದ್ಯುತ್‌ ಹಂಚಿಕೆ ಮಾಡಿ ಕೊಡುವ ಪ್ರಯತ್ನ ನಡೆ­ದಿತ್ತು’ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎಂ.ಗೋವಿಂದಪ್ಪ ಸೋಮವಾರ  ‘ಪ್ರಜಾವಾಣಿ’ಗೆ ತಿಳಿಸಿದರು.ಎರಡು ವಾರದ ಹಿಂದೆ ಮಂಗಳೂರಿನಲ್ಲಿ ನಡೆದ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಸಭೆಯಲ್ಲಿ ಮೆಸ್ಕಾಂ ಎದುರಿಸುತ್ತಿರುವುದು ಮುಖ್ಯವಾಗಿ ಲೈನ್‌ಮನ್‌­ಗಳ ಸಮಸ್ಯೆ ಎಂದು ತಿಳಿಸಲಾಗಿತ್ತು. ಖಾಲಿ ಇರುವ 1,492 ಲೈನ್‌ಮನ್‌ಗಳ ಪೈಕಿ ಸುಮಾರು 340 ಮಂದಿಯನ್ನು ಶೀಘ್ರ ನೇಮಿಸಿ­ಕೊಳ್ಳ­­ಲಾಗುವುದು ಎಂದು ಎಂ.ಡಿ. ಅವರು ಸಭೆಗೆ ತಿಳಿಸಿದ್ದರು. ಲೈನ್‌ಮನ್‌ ನೇಮಕಾತಿ ಆಗುತ್ತಿ­ದೆ­ಯೇ ಎಂಬ ಪ್ರಶ್ನೆಗೆ ಅವರು ಉತ್ತ­ರಿಸಲು ನಿರಾಕರಿಸಿದರು.ತಾತ್ಕಾಲಿಕ ನೇಮಕಾತಿ: ಮಳೆಗಾಲದ ಆರಂಭ ಮೆಸ್ಕಾಂ ಮಾತ್ರವಲ್ಲ, ಎಲ್ಲಾ ವಿದ್ಯುತ್‌ ಸರಬ­ರಾಜು ಕಂಪೆನಿಗಳಿಗೂ ಸವಾಲಿನ ಕಾಲ. ಭಾರಿ ಗಾಳಿ, ಮಳೆಗೆ ಕಂಬಗಳು, ತಂತಿಗಳು ತುಂಡಾಗಿ ಬೀಳುವುದು, ಮರಗಳ ಕೊಂಬೆ ಮುರಿದು ತಂತಿಯ ಮೇಲೆ ಬೀಳುವುದು, ಸಿಡಿಲಿಗೆ ಅಧಿಕ ವಿದ್ಯುತ್‌ ಪ್ರವಹಿಸಿ ಟ್ರಾನ್ಸಫಾರ್ಮರ್‌ ಕೆಟ್ಟು ಹೋಗುವ ಈ ಕಾಲದಲ್ಲೇ ಅಧಿಕ. ಸದ್ಯ ಪ್ರತಿ ಉಪವಿಭಾಗದಲ್ಲೂ ತಾತ್ಕಾಲಿಕವಾಗಿ 15 ಗ್ಯಾಂಗ್‌­ಮನ್‌ಗಳನ್ನು ಹೆಚ್ಚುವರಿಯಾಗಿ ಬಳಸಿ­ಕೊಳ್ಳ­­ಲಾಗುತ್ತಿದೆ. ಮಳೆಗಾಲದ ನಾಲ್ಕೂ ತಿಂಗಳು ಅವರ ಸೇವೆ ಸಿಗಲಿದೆ, ಅಗತ್ಯ ಬಿದ್ದರೆ ಇನ್ನಷ್ಟು ದಿನ ಅವರ ಸೇವೆ ವಿಸ್ತರಿಸಲಾಗುವುದು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.‘ಗ್ರಾಮೀಣ ಪ್ರದೇಶಗಳಲ್ಲಿ ದಿನದ 7 ಗಂಟೆ ತ್ರೀ ಫೇಸ್‌ ವಿದ್ಯುತ್‌ ಕೊಡುವುದು ಮೆಸ್ಕಾಂನ ಧ್ಯೇಯವಾಗಿತ್ತು. ಉಳಿದ ಅವಧಿಯಲ್ಲಿ ಸಿಂಗಲ್‌ ಫೇಸ್‌ ವಿದ್ಯುತ್‌ ಒದಗಿಸಬೇಕು ಎಂಬ ಕಳಕಳಿ ಕಂಪೆನಿಯದ್ದಾಗಿತ್ತು. ವಿದ್ಯುತ್‌ಗೆ ಭಾರಿ ಬೇಡಿಕೆ ಇದ್ದ ಸಮಯದಲ್ಲೂ ಕನಿಷ್ಠ 7 ಗಂಟೆ ತ್ರೀ ಫೇಸ್ ವಿದ್ಯುತ್‌ ಕೊಡುವ ಕೆಲಸ ನಡೆದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಲೈನ್‌ ತೊಂದರೆಗಳಿಂದಾಗಿ ಅನಿ­ಯಂ­ತ್ರಿತ ಲೋಡ್‌ಶೆಡ್ಡಿಂಗ್‌ನಂತಹ ಸನ್ನಿವೇಶ ನಿರ್ಮಾಣವಾಗಿರಬಹುದು, ಆದರೆ ಇದೆಲ್ಲ ಅನಿವಾರ್ಯ ಸಂದರ್ಭಗಳಲ್ಲೇ ಹೊರತು ಉದ್ದೇಶ­ಪೂರ್ವಕ ಅಲ್ಲ. ಸದ್ಯ ಮಳೆ ಬಂದಿರುವು­ದರ­ರಿಂದ ತ್ರೀ ಫೇಸ್‌ ವಿದ್ಯುತ್‌ ನೀಡಿಕೆ ಅವಧಿ­ಯನ್ನು ಹೆಚ್ಚಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.ಮೆಸ್ಕಾಂನಲ್ಲಿನ ಖಾಲಿ ಹುದ್ದೆಗಳ ವಿವರ­ಗಳನ್ನು ತಿಳಿದುಕೊಂಡಾಗ ಒಂದು ರೀತಿಯ ಅಚ್ಚರಿ ಕಾಡುತ್ತದೆ. ಮುಖ್ಯವಾಗಿ ಬೇಕಿರುವ ಲೈನ್‌­ಮನ್‌ಗಳ ಹುದ್ದೆಯಲ್ಲಿ ಶೇ 52ರಷ್ಟು ಹುದ್ದೆಗಳು ಖಾಲಿ ಬಿದ್ದಿವೆ. ಆದರೆ ಎಸ್ಇಇ/ ಇಇ/ಎಇಇ ಹುದ್ದೆಗಳಲ್ಲಿ ಶೇ 7ರಷ್ಟು ಹುದ್ದೆಗಳು ಮಾತ್ರ ಖಾಲಿ ಬಿದ್ದಿವೆ! ವಿದ್ಯುತ್‌ ಸಮಸ್ಯೆ ಪರಿಹಾರಕ್ಕೆ ವಿಳಂಬವಾಗುವುದು ಇದೇ ಕಾರಣಕ್ಕೆ ಎಂಬ ಆರೋಪವೂ ಕೇಳಿಬಂದಿದೆ. ಲೈನ್‌­ಮನ್‌ಗಳ ನೇಮಕಾತಿ ನಡೆಯದೆ ಇದ್ದರೆ, ಎಇಇಗಳನ್ನೇ ಕಂಬ ಹತ್ತಿಸಿ ವಿದ್ಯುತ್‌ ಸಮಸ್ಯೆ ಬಗೆಹರಿಸುವಂತೆ ಮಾಡಬೇಕಾಗಬಹುದು ಎಂಬ ಎಚ್ಚರಿಕೆಯನ್ನು ಕೆಇಆರ್‌ಸಿ ಸಭೆಯಲ್ಲಿ ‘ಮ್ಯಾಮ್ಕೋಸ್‌’ ಉಪಾಧ್ಯಕ್ಷ ನರಸಿಂಹ ನಾಯಕ್‌ ನೀಡಿದ್ದರು.ಅಲ್ಲಲ್ಲಿ ಮಳೆ ಸುರಿಯುತ್ತಿರುವ, ಗಾಳಿ ಬೀಸುತ್ತಿರುವ ಸನ್ನಿವೇಶ ಇದೆ. ಗ್ರಾಮೀಣ ಪ್ರದೇಶಗಳಲ್ಲಂತೂ ವಿದ್ಯುತ್‌ ಕಣ್ಣಾಮುಚ್ಚಾಲೆ ಈಗ ಇದ್ದದ್ದೇ. ಎಲ್ಲವೂ ಸರಿಯಾಗಿಯೇ ಇದೆ ಎಂದು ಹೇಳಿದರೆ ಆ ಭಾಗದ ಜನ ನಕ್ಕಾರೇ ಹೊರತು ಇದು ವಾಸ್ತವ ಅಲ್ಲ ಎಂದು ಅವರು ಹೇಳುತ್ತಾರೆ. ಆದರೆ ಮೆಸ್ಕಾಂ ಪ್ರಕಾರ ಎಲ್ಲವೂ ಸರಿಯಾಗಿಯೇ ಇದೆ.19.95 ಲಕ್ಷ ಗ್ರಾಹಕರು

4 ಜಿಲ್ಲೆಗಳು, 22 ತಾಲ್ಲೂಕುಗಳನ್ನು ಒಳಗೊಂಡ ಮೆಸ್ಕಾಂ ವ್ಯಾಪ್ತಿ 25,222 ಚದರ ಕಿ.ಮೀ. ಹೊಂದಿದೆ. ಒಟ್ಟು 61.55 ಲಕ್ಷ ಜನಸಂಖ್ಯೆ ಇದೆ. 12 ವಿಭಾಗಗಳು, 49 ಉಪ ವಿಭಾಗಗಳು, 189 ಸೆಕ್ಷನ್‌ ಕಚೇರಿಗಳು, 77 ಕೆಪಿಟಿಸಿಎಲ್‌ ಸ್ಟೇಷನ್‌ಗಳು, 34 ಮೆಸ್ಕಾಂ 33 ಕೆವಿ ಸ್ಟೇಷನ್‌ಗಳು, 111 ಸಬ್‌ಸ್ಟೇಷನ್‌ಗಳು, 44,803 ವಿತರಣಾ ಟ್ರಾನ್ಸಫಾರ್ಮರ್‌ ಕೇಂದ್ರಗಳು (ಡಿಟಿಸಿ) ಇವೆ. ಒಟ್ಟು 11 ಕೆವಿ ಫೀಡರ್‌ಗಳ ಸಂಖ್ಯೆ 705ರಷ್ಟಿದೆ.ಮೆಸ್ಕಾಂ ವ್ಯಾಪ್ತಿ ನಿರಾಳ

‘ವಿದ್ಯುತ್‌ ಬಿಕ್ಕಟ್ಟು ವಿಷಯದಲ್ಲಿ ರಾಜ್ಯದ ಬೇರೆಡೆಗೂ, ಮೆಸ್ಕಾಂ ವ್ಯಾಪ್ತಿಗೂ ಹೋಲಿಸುವುದು ಸರಿಯಲ್ಲ. ಮೆಸ್ಕಾಂ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ. ಇದೀಗ ಮಳೆ ಆರಂಭವಾಗಿರುವುದರಿಂದ ವಿದ್ಯುತ್‌ ಬೇಡಿಕೆಯೂ ಕುಸಿದು ಒಟ್ಟಾರೆ ಪರಿಸ್ಥಿತಿ ಸುಧಾರಿಸಿದೆ.

ಎಂ.ಗೋವಿಂದಪ್ಪ,ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.