ಮಳೆಯಿಂದ ಸಂಕಷ್ಟಕ್ಕೀಡಾದ ಈರುಳ್ಳಿ ಬೆಳೆ

ರಾಯಚೂರು: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಿರುವುದರಿಂದ ಕಟಾವಿನ ಹಂತಕ್ಕೆ ಬಂದಿರುವ ಈರುಳ್ಳಿ ಬೆಳೆಯನ್ನು ಕೊಯ್ಲು ಮಾಡಲು ಆಗುತ್ತಿಲ್ಲ. ಇದರಿಂದ ಈರುಳ್ಳಿ ಕೊಳೆಯುವಂತಾಗಿದೆ. ಮತ್ತೊಂದೆಡೆ ಬೆಲೆಯೂ ಕಡಿಮೆಯಿರುವುದರಿಂದ ರೈತರ ಬದುಕು ಅಡಕತ್ತರಿಯಲ್ಲಿ ಸಿಲುಕಿದೆ.
ಕಳೆದ ವರ್ಷ ಈರುಳ್ಳಿ ಕ್ವಿಂಟಲ್ಗೆ ₹ 3– 4 ಸಾವಿರ ದರ ಬಂದಿದ್ದರಿಂದ ಈಬಾರಿ ಕೂಡ ಉತ್ತಮ ಬೆಲೆ ದೊರೆಯಲಿದೆ ಎಂಬ ನಿರೀಕ್ಷೆಯಿಂದ ಜಿಲ್ಲೆಯಲ್ಲಿ ಸಾವಿರಾರು ಎಕರೆಯಲ್ಲಿ ಅದರಲ್ಲೂ ನೀರಾವರಿ ಪ್ರದೇಶದಲ್ಲಿ ಹೆಚ್ಚಿನ ಮಟ್ಟದಲ್ಲಿ ಈರುಳ್ಳಿ ಬೆಳೆಯಲಾಗಿದೆ.
ಆದರೆ, ಅಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರ ಪರಿಣಾಮ ಹೊಲದಲ್ಲಿ ನೀರು ನಿಂತು ಈರುಳ್ಳಿ ಕೊಳೆಯುತ್ತಿದೆ. ಇದರಿಂದ ರೈತರಿಗೆ ಕೈಯಿಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ತಡವಾಗಿ ಬಿತ್ತನೆಯಾದ ಕಡೆಗಳಲ್ಲಿ ಈರುಳ್ಳಿ ಬೆಳೆಗೆ ಹಾನಿಯಾಗಿಲ್ಲ. ಆದರೆ, ಮಳೆ ಮುಂದುವರೆದರೆ ಆ ಬೆಳೆಯೂ ಹಾನಿಯಾಗುವ ಆತಂಕ ಎದುರಾಗಿದೆ.
ಅಲ್ಲದೆ, ಈರುಳ್ಳಿ ದರ ಕ್ವಿಟಂಲ್ಗೆ ₹ 1 ಸಾವಿರದೊಳಗೆ ಇರುವುದರಿಂದ ರೈತರು ಈರುಳ್ಳಿ ಬೆಳೆಯನ್ನು ತಾವೆ ನಾಶ ಮಾಡಿ, ಭತ್ತ ನಾಟಿ ಮಾಡುವ ಮನಸ್ಸು ಮಾಡಿದ್ದಾರೆ.
ಒಂದು ಎಕರೆ ಭೂಮಿಯಲ್ಲಿ ಈರುಳ್ಳಿ ಬೆಳೆಯಲು ಅಂದಾಜು ₹ 30ರಿಂದ ₹40 ಸಾವಿರ ವೆಚ್ಚವಾಗಿದೆ. ಒಂದು ಕೆಜಿ ಬೀಜಕ್ಕೆ ₹1500, ಸಸಿ ನಾಟಿ ಮಾಡುದರೆ ₹10 ಸಾವಿರ, ಕಳೆ ನಾಶಕ ಮತ್ತು ಗೊಬ್ಬರಕ್ಕೆ ₹5 ಸಾವಿರ ಹಾಗೂ ಕಳೆ ತೆಗೆಯಲು ₹10 ಸಾವಿರ ವೆಚ್ಚ ಮಾಡಲಾಗಿದೆ. ಆದರೆ, ಮಳೆಯಿಂದ ಬೆಳೆ ಕೈಯಿಗೆ ಬಾರದಂತಾಗಿದೆ ಎಂದು ರೈತರು ನೋವು ತೋಡಿಕೊಂಡರು.
ಜಿಲ್ಲೆಯಲ್ಲಿ ರಾಯಚೂರು, ಮಾನ್ವಿ ಹಾಗೂ ದೇವದುರ್ಗ ತಾಲ್ಲೂಕಿನಲ್ಲಿ ಹೆಚ್ಚಿನ ಬೆಳೆಗೆ ಹಾನಿಯಾಗಿದೆ. ತಾಲ್ಲೂಕಿನ ಜಂಬಲದಿನ್ನಿ, ಮಾಸದೊಡ್ಡಿ, ಬಿಚ್ಚಾಲಿ, ತುಂಗಭದ್ರ, ಯರಗೇರಾ, ಚಂದ್ರಬಂಡಾ, ರಾಜೊಳ್ಳಿ, ರಾಜಲಬಂಡ ಗ್ರಾಮಗಳಲ್ಲಿ ಈರುಳ್ಳಿ ಬೆಳೆ ಕೊಳೆಯುತಿದೆ ಎಂದು ರೈತರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 25 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿರುವ ಈರುಳ್ಳಿ ಬೆಳೆಯಲ್ಲಿ ಈಗಾಗಲೇ ಅರ್ಧದಷ್ಟು ಹಾನಿಗೊಂಡಿದೆ. ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು ಕೆಲವರು ಮಾತ್ರ ಮಾಡಿಸಿಕೊಂಡಿದ್ದು, ಬಹಳಷ್ಟು ರೈತರು ಮಾಡಿಸಿಕೊಂಡಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೆ.ಎಸ್.ಪುಟ್ಟಣ್ಣಯ್ಯ ಬಣ) ಜಿಲ್ಲಾ ಘಟಕ ಅಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ ಹೇಳಿದರು.
*
ಮಳೆ ನೀರು ಹೊಲದಲ್ಲಿ ನಿಂತು ಈರುಳ್ಳಿ ಕೊಳೆಯುತ್ತಿವೆ. ಹೆಸರು, ತೊಗರಿ, ಹತ್ತಿ ಬೆಳೆಗಳ ಇಳುವರಿಯೂ ಕಡಿಮೆಯಾಗುವ ಆತಂಕ ಎದುರಾಗಿದೆ.
-ಲಕ್ಷ್ಮಣಗೌಡ ಕಡಗಂದೊಡ್ಡಿ,
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಅಧ್ಯಕ್ಷ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.