ಮಂಗಳವಾರ, ನವೆಂಬರ್ 19, 2019
26 °C

ಮಳೆಯಿಲ್ಲ, ಬೆಳೆಯಿಲ್ಲ, ಶುಲ್ಕ ಹೆಚ್ಚಳ ಬೇಡ

Published:
Updated:

ಗದಗ: ಎರಡು ವರ್ಷಗಳಿಂದ ಬರಗಾಲ, ಮಳೆಯೂ ಇಲ್ಲ, ಬೆಳೆಯೂ ಇಲ್ಲ. ಯಾವುದೇ ಕಾರಣಕ್ಕೂ ಬೋದನಾ ಶುಲ್ಕವನ್ನು ಹೆಚ್ಚಳ ಮಾಡಬೇಡಿ ಎಂದು ಪೋಷಕರು ಜೇಸಿ ಆಡಳಿತ ಮಂಡಳಿಯನ್ನು ಒತ್ತಾಯಿಸಿದರು.ನಗರದ ಜೇಸಿ ಶಾಲೆಯಲ್ಲಿ ಮಂಗಳವಾರ ನಡೆದ ಪೋಷಕರ ಸಭೆಯಲ್ಲಿ ಮಾತನಾಡಿದ ಬಹುತೇಕ ಪಾಲಕರು, `ಶಿಕ್ಷಣ ಸಂಸ್ಥೆ ಹೆಚ್ಚಳ ಮಾಡಿರುವ ಶುಲ್ಕ ರದ್ದುಗೊಳಿಸಬೇಕು. ವರ್ಷದಿಂದ ವರ್ಷಕ್ಕೆ ಶುಲ್ಕ ಹೆಚ್ಚಳ ಮಾಡಿದರೆ ಎಲ್ಲಿಂದ ಹಣ ತಂದು ಕಟ್ಟಬೇಕು.ಕೂಲಿಕಾರರು, ಕಾರ್ಮಿಕರು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈಗಾಗಲೇ ವರ್ಷಕ್ಕೆ 12 ಸಾವಿರ ರೂಪಾಯಿ ಶುಲ್ಕ ಪಾವತಿಸಲಾಗುತ್ತಿದೆ. ಮತ್ತೆ ರೂ. 6 ಸಾವಿರ ಹೆಚ್ಚಳ ಮಾಡಿರುವುದು ಹೊರೆಯಾಗಿದೆ. ಸಾಲ ಮಾಡಿ ಬಡ್ಡಿ ಕಟ್ಟುವ ಪರಿಸ್ಥಿತಿ ಬಂದಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬುದು ಪೋಷಕರ ಆಸೆ. ಅದಕ್ಕಾಗಿ ಉತ್ತಮ ಶಾಲೆಗೆ ಸೇರಿಸುತ್ತಾರೆ. ಇದನ್ನೇ ದುರುಪಯೋಗ ಪಡಿಸಿಕೊಳ್ಳುವುದು ಸರಿಯಲ್ಲ. ಗದುಗಿನ ಎಲ್ಲ ಶಾಲೆಗಿಂತ ಜೇಸಿ ಶಾಲೆಯಲ್ಲಿ ಹೆಚ್ಚು ಶುಲ್ಕ ವಸೂಲು ಮಾಡಲಾಗುತ್ತಿದೆ' ಎಂದು ಅಳಲು ತೋಡಿಕೊಂಡರು.`ಕಳೆದ ವರ್ಷ ಅನುತ್ತೀರ್ಣರಾದ 45 ಮಕ್ಕಳಿಗೆ ಟಿ.ಸಿ. ಕೊಟ್ಟು ಕಳುಹಿಸಲಾಗಿದೆ. ಎಲ್ಲ ಬುದ್ಧಿವಂತ ಮಕ್ಕಳೇ ಇದ್ದರೆ ಇತರೆ ಮಕ್ಕಳು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ ಅವರು, ಕಳೆದ ವರ್ಷವೂ ಶುಲ್ಕ ಹೆಚ್ಚಳ ಮಾಡಲಾಗಿದೆ' ಎಂದು ಆಡಳಿತ ಮಂಡಳಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.ಉಷಾ ಎಂಬುವರು ಮಾತನಾಡಿ, `ಶಾಲೆಯ ಅವಧಿ ಅವೈಜ್ಞಾನಿಕವಾಗಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಶುಲ್ಕ ಹೆಚ್ಚಳ ಒಂದೆಡೆಯಾದರೆ ಮತ್ತೊಂದಡೆ ಆಸ್ಪತ್ರೆಗಾಗಿ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಶಾಲಾ ವೇಳೆ ಬದಲಿಸಬೇಕು' ಎಂದು ಸಲಹೆ ನೀಡಿದರು.ಮೂರು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಪೋಷಕರು ಮತ್ತು ಆಡಳಿತ ಮಂಡಳಿ ಸದಸ್ಯರ ನಡುವೆ ಮಾತಿನ ಚಕಮಕಿಯೂ ನಡೆಯಿತು.ಶಾಲಾ ಆಡಳಿತ ಮಂಡಳಿ ಮುಖ್ಯಸ್ಥ ಓದುಗೌಡರ ಮಾತನಾಡಿ, `ಶುಲ್ಕ ಹೆಚ್ಚಳ ಮಾಡುವುದು ಉದ್ಧೇಶವಲ್ಲ. ಪಾಲಕರಿಗೆ ಹೊರೆ ಮಾಡಿ ಹಣ ವಸೂಲು ಮಾಡುತ್ತಿಲ್ಲ. ಶಿಕ್ಷಕರಿಗೆ ಆರನೇ ವೇತನ ಆಯೋಗದ ಪ್ರಕಾರ ಸಂಬಳ ನೀಡಬೇಕು. ಅದಕ್ಕಾಗಿ ಶುಲ್ಕ ಹೆಚ್ಚಳ ಮಾಡಲಾಗುತ್ತಿದೆ' ಎಂದು ಸ್ಪಷ್ಟನೆ ನೀಡಿದರು.ಓದುಗೌಡರ ಉತ್ತರಕ್ಕೆ ತೃಪ್ತರಾಗದ ಪೋಷಕರು ಶುಲ್ಕ ಹೆಚ್ಚಳ ರದ್ದುಗೊಳಿಸಬೇಕು ಎಂದು ಪಟ್ಟು ಹಿಡಿದರು. ಒಂದು ಹಂತದಲ್ಲಿ ಸಭೆಯಲ್ಲಿ ಗದ್ದಲ ಉಂಟಾಗಿ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ಗೊತ್ತಾಗಲಿಲ್ಲ.`ಆಡಳಿತ ಮಂಡಳಿ ಸದಸ್ಯರು ಮತ್ತು ಪೋಷಕರು ಒಟ್ಟಿಗೆ ಹೋಗಿ ಡಿಡಿಪಿಐ ಮತ್ತು ಜಿಲ್ಲಾಡಳಿತ ಭೇಟಿ ಮಾಡೋಣ. ಶಿಕ್ಷಕರಿಗೆ ಆರನೇ ವೇತನ ಆಯೋಗದ ಪ್ರಕಾರ ಸಂಬಳ ನೀಡಲು ಆಗುವುದಿಲ್ಲ ಎಂದು ಹೇಳುತ್ತೇವೆ. ಅದಕ್ಕೆ ಒಪ್ಪಿದರೆ ಶುಲ್ಕ ಹೆಚ್ಚಳ ಮಾಡುವುದಿಲ್ಲ' ಎಂದು ಓದುಗೌಡರು ಸಲಹೆ ನೀಡಿದರು.ಇದಕ್ಕೆ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಶುಲ್ಕ ರದ್ದುಗೊಳಿಸಲು ಆಡಳಿತ ಮಂಡಳಿ ಒಪ್ಪಿಕೊಳ್ಳದ ಕಾರಣ ಸಭೆ ಅರ್ಧಕ್ಕೆ ರದ್ದುಗೊಳಿಸಲಾಯಿತು. ಇದರಿಂದ ಆಕ್ರೋಶಗೊಂಡ ಪೋಷಕರು ಆಡಳಿತ ಮಂಡಳಿ ಸದಸ್ಯರನ್ನು ಹೊರಗೆ ಹೋಗದಂತೆ ಗೇಟ್ ಬಳಿ ನಿಂತು ತಡೆದರು. ಶುಲ್ಕ ಹೆಚ್ಚಳ ವಿವಾದ ಇಂದೇ ಇತ್ಯರ್ಥ ಪಡಿಸಿ ಎಂದು ಪಟ್ಟು ಹಿಡಿದರು.ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ವಾಸಣ್ಣ ಕುರಡಗಿ, ಹಬೀಬ್, ಮಾನ್ವಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)