ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ

ಭಾನುವಾರ, ಮೇ 26, 2019
26 °C

ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ

Published:
Updated:
ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ

ತೀರ್ಥಹಳ್ಳಿ: ತಾಲ್ಲೂಕಿನಾದ್ಯಂತ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರಮುಖ ನದಿಗಳಾದ ತುಂಗಾ, ಮಾಲತಿ, ಕುಶಾವತಿ ಹೊಳೆ, ಕುಂಟೇಹಳ್ಳ ಸೇರಿದಂತೆ ಹಳ್ಳಗಳು, ತೊರೆಗಳು ಮೈದುಂಬಿ ಹರಿಯುತ್ತಿವೆ.ಬತ್ತದ ಗದ್ದೆಗಳು, ಅಡಿಕೆ ತೋಟಗಳು ಜಲಾವೃತಗೊಂಡಿವೆ. ಮೇಗರವಳ್ಳಿ ಸಮೀಪ ಮಾಲತಿ ನದಿಯ ನೀರಿನಿಂದ ಅಣ್ಣುವಳ್ಳಿ ಸೇತುವೆ ಬಳಿ ಸಿಮೆಂಟ್ ತುಂಬಿದ ಲಾರಿಯೊಂದು ನೀರಿನಲ್ಲಿ ಮುಳುಗಿದ  ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಲಾರಿ ಚಾಲಕ ಶಿಕಾರಿಪುರ ತಾಲ್ಲೂಕು ಈಸೂರು ಗ್ರಾಮದ ಕುಮಾರ್(27) ಹಾಗೂ ಅದೇ ಗ್ರಾಮದ ಲಾರಿ ಕ್ಲೀನರ್ ಮನು (24) ಎಂದು ಗುರುತಿಸಲಾಗಿದೆ.ಶಿವಮೊಗ್ಗದಿಂದ ಮಂಗಳೂರಿಗೆ ಸಿಮೆಂಟ್ ಸಾಗಿಸುತ್ತಿದ್ದಾಗ ಸೋಮವಾರ ರಾತ್ರಿ ಅಪಘಾತ ಸಂಭವಿಸಿದ್ದು, ಮೃತ ದೇಹಗಳು ಪತ್ತೆಯಾಗಿವೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆಗುಂಬೆ ಹೋಬಳಿಯ ಕೇಳೂರು, ಬರ್ಲಗುಡ್ಡ ಗ್ರಾಮದ ಏಳೆಂಟು ಮನೆಗಳು ಜಲಾವೃತಗೊಂಡಿದ್ದು, ದ್ವೀಪಗಳಾಗಿವೆ. ತುಂಗಾ ನದಿ ನೀರಿನ ಮಟ್ಟ 86 ಅಡಿಗಳಷ್ಟಿದ್ದು, ಗರಿಷ್ಠಮಟ್ಟವನ್ನು ಮೀರಿ ಹರಿಯುತ್ತಿದೆ.

ಶಿವಮೊಗ್ಗ - ತೀರ್ಥಹಳ್ಳಿ ನಡುವಿನ ಮಂಡಗದ್ದೆ, ತೂದೂರು, ಬೇಗುವಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತಿದ್ದು, ಸಂಚಾರ ಸ್ಥಗಿತಗೊಂಡಿದೆ. ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಕನ್ನಂಗಿ, ಹಣಗೆರೆ, ಆಯನೂರು ಮಾರ್ಗವನ್ನು ಬಳಸಲಾಗುತ್ತಿದೆ. ತೀರ್ಥಹಳ್ಳಿ ಉಡುಪಿ ಮಾರ್ಗದ ಶಿವರಾಜಪುರ, ಅಣ್ಣುವಳ್ಳಿ, ಕಲ್ಮನೆಯಲ್ಲಿ ರಸ್ತೆ ಸಂಪರ್ಕ ಕಡಿದಿದೆ.ತಾಲ್ಲೂಕಿನಾದ್ಯಂತ 6,700 ಎಕರೆ ಬತ್ತದ ನಾಟಿ ಕೆಲಸ ಮುಗಿದಿದ್ದು, 1,435 ಹೆಕ್ಟೇರ್ ಪ್ರದೇಶದ ಬತ್ತದ ಗದ್ದೆಗಳು, ಅಡಿಕೆ  ತೋಟಗಳು ಜಲಾವೃತಗೊಂಡಿವೆ ಎಂದು ಶಿರಸ್ತೆದಾರ್ ರಾಜಪ್ಪ ಮಾಹಿತಿ ನೀಡಿದ್ದಾರೆ.

ತೀರ್ಥಹಳ್ಳಿಯಲ್ಲಿ ಮಂಗಳವಾರ 20.7 ಸೆಂ.ಮೀ ಹಾಗೂ ಆಗುಂಬೆಯಲ್ಲಿ 22.6 ಸೆಂ.ಮೀ ಮಳೆಯಾದ ಬಗ್ಗೆ ವರದಿಯಾಗಿದೆ. ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಳೆಯ ಪ್ರಮಾಣ ಇದೇ ರೀತಿ ಮುಂದುವರಿದರೆ ನೀರಿನಮಟ್ಟ ಹೆಚ್ಚಾಗುವ ಸಂಭವವಿದೆ. ಸಂಭವನೀಯ ತೊಡಕು ಎದುರಿಸಲು  ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.ಮುಂದುವರಿದ ಹಾನಿ

ಹೊಸನಗರ:
ತಾಲ್ಲೂಕಿನಾದ್ಯಂತ ಮಳೆಯ ಅಬ್ಬರ ಮಂಗಳವಾರವೂ ಮುಂದುವರಿದು ಅಪಾರ ಪ್ರಮಾಣದ ಹಾನಿಯಾಗಿರುವುದು ವರದಿಯಾಗಿದೆ.ಹೊನ್ನಾಳಿ-ಬೈಂದೂರು ಚಿಕ್ಕಪೇಟೆ ಸಮೀಪದ ಎರಡು ವರ್ಷದ ಹಿಂದೆಯಷ್ಟೆ ಮರು ನಿರ್ಮಿಸಿದ ಕೊಲ್ಲೂರು ಸೇತುವೆಗೆ ಕಟ್ಟಿದ್ದ ಕಲ್ಲಿನ ಕಟ್ಟಣ(ಪಿಚ್ಚಿಂಗ್) ನೀರಿನ ಹೊಡೆತಕ್ಕೆ ಕೊಚ್ಚಿಕೊಂಡು ಹೋಗಿದೆ.

ಹೊಸನಗರದ ಹೊರವಲಯದ ನಗರ ರಸ್ತೆಯಲ್ಲಿನ ಟೈಲರ್ ಅಣ್ಣಪ್ಪ ಎಂಬುವವರ ಮನೆಯ ಗೋಡೆ ರಾತ್ರಿ ಮಳೆಗೆ ಕುಸಿದಿದೆ. ಮೂಡುಗೊಪ್ಪ ನಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇವಗಂಗೆ ಚಂದ್ರಶೇಖರ ಉಡುಪ ಅಡಿಕೆ ತೋಟ, ನಾಗಪ್ಪ ಜಮೀನಿಗೆ ನೆರೆ ನೀರು ನುಗ್ಗಿ ಹಾನಿಯಾಗಿದೆ.ಮಾಸ್ತಿಕಟ್ಟೆ: ದಾಖಲೆ ಮಳೆ

ವಾರಾಹಿ ವಿದ್ಯುತ್ ಯೋಜನಾ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಮಾಸ್ತಿಕಟ್ಟೆ-40.8 ಸೆಂ.ಮೀ, ಹುಲಿಕಲ್-40 ಸೆಂ.ಮೀ., ಯಡೂರು - 32.8 ಸೆಂ.ಮೀ, ಮಾಣಿ ಡ್ಯಾಂ -31.9 ಸೆಂ.ಮೀ. ಮಳೆಯಾಗಿದ್ದು ಮಾಣಿ ಅಣೆಕಟ್ಟಿನ ನೀರಿನ ಮಟ್ಟ-584 ಮೀಟರ್‌ಗೆ ಏರಿದೆ. ಶರಾವತಿ ಜಲಾನಯ ಪ್ರದೇಶವಾದ ನಗರ- 27.1 ಸೆಂ.ಮೀ., ಹುಂಚಾ-10.1,  ಹೊಸನಗರ-17.5 ಸೆಂ.ಮೀ, ರಿಪ್ಪನ್‌ಪೇಟೆ-6.5 ಸೆಂ.ಮೀ ಬಿದ್ದಿದೆ.    ಜಮೀನು ಜಲಾವೃತ: ಪರಿಹಾರಕ್ಕೆ ಒತ್ತಾಯ

ಸೊರಬ:
ತಾಲ್ಲೂಕಿನಾದ್ಯಂತ ಸತತ ಸುರಿಯುತ್ತಿರು ಮಳೆಯಿಂದಾಗಿ ಚಂದ್ರಗುತ್ತಿ ಹೋಬಳಿಯ ನೂರಾರು ಎಕರೆ ಜಮೀನು ಜಲಾವೃತಗೊಂಡಿವೆ.ಗುಂಜನೂರು, ಬಾಡದಬೈಲು, ಕಡಸೂರು, ಜೋಳದಗುಡ್ಡೆ ಸೇರಿದಂತೆ ಹೋಬಳಿಯ ಇನ್ನು ಹಲವು ಗ್ರಾಮಗಳಲ್ಲಿ ಮಳೆಯಿಂದ ಪ್ರವಾಹ ಉಂಟಾಗಿದೆ. ಸಣ್ಣಪುಟ್ಟ ಹಳ್ಳ ತುಂಬಿ ಹರಿಯುತ್ತಿದ್ದು, ಬತ್ತದ ಗದ್ದೆಗಳಲ್ಲಿ ನೀರು ನುಗ್ಗಿದ್ದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕಡಸೂರಿನಲ್ಲಿ 150 ಎಕರೆ, ಗುಂಜನೂರು- 125 ಎಕರೆ, ಬಾಡದಬೈಲಿನಲ್ಲಿ 100 ಎಕರೆ, ಚಂದ್ರಗುತ್ತಿಯಲ್ಲಿ 100 ಎಕರೆ ಗದ್ದೆಗಳು ಜಲಾವೃತವಾಗಿವೆ. ಪರಿಸ್ಥಿತಿ ಅರಿತು ಮುಂಗಾರು ಆರಂಭದಲ್ಲಿ ರೈತರು, ಜಮೀನುಗಳಲಿ ನೀರು ನಿಂತರೂ ಹಾಳಾಗದ `ನೆರೆಕುಳಿ~ ಎಂಬ ವಿಶೇಷ ತಳಿ ಬತ್ತವನ್ನು ಬಿತ್ತನೆ ಮಾಡುತ್ತಾರೆ. ಕಡಸೂರು ಗ್ರಾಮದಲ್ಲಿ ಸುಮಾರು 350 ಕುಟುಂಬಗಳಿದ್ದು, 150 ಕುಟುಂಬಗಳು ಪ್ರತಿ ವರ್ಷ ಮುಳುಗಡೆಯಾಗುವ ಪ್ರದೇಶದಲ್ಲಿ ಜಮೀನು ಹೊಂದಿವೆ.ಪ್ರತಿ ವರ್ಷ ಇದೇ ಪರಿಸ್ಥಿತಿ ತಾವು ಎದುರಿಸುತ್ತಿದ್ದು, ಬತ್ತ ಬಿತ್ತಿದ ಜಮೀನಿನಲ್ಲಿ 10ರಿಂದ 15 ದಿನ ನೀರು ನಿಂತರೆ ಈ ಬತ್ತ ಹಾಳಾಗುವುದಿಲ್ಲ. 15 ದಿನಕ್ಕಿಂತ ಹೆಚ್ಚು ಕಾಲ ನೀರು ನಿಂತರೆ ಬತ್ತದ ಸಸಿಗಳು ನೀರಿನಲ್ಲಿ ಕೊಳೆತು ಫಸಲು ಕೈಗೆ ಬಾರದೇ ನಷ್ಟ ಅನುಭವಿಸುವ ಪರಿಸ್ಥಿತಿ ಉಂಟಾಗಲಿದೆ.ರೈತರ ಸಂಕಷ್ಟ ಅರಿತು ತಿಂಗಳಗಟ್ಟಲೇ ಪ್ರವಾಹ ಮುಂದುವರಿದರೆ ಕಂದಾಯ ಇಲಾಖೆ  ಪರಿಹಾರ ಕೊಡುವಲ್ಲಿ ಮುಂದಾಗಬೇಕು ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.ಪ್ರವಾಹಪೀಡಿತ ಪ್ರದೇಶಗಳಿಗೆ ತಹಶೀಲ್ದಾರ್ ಶ್ರೀಧರಮೂರ್ತಿ ಪಂಡಿತ್ ಭೇಟಿ ಸ್ಥಳ ಪರಿಶೀಲಿಸಿದರು.

ಬತ್ತದ ಗದ್ದೆಗಳಿಗೆ ನೀರು ನುಗ್ಗಿರುವುದರಿಂದ ಬತ್ತದ ಸಸಿಗಳು ಮುಳುಗಿವೆ. ಯಾವುದೇ ಆಸ್ತಿ-ಪಾಸ್ತಿ, ಪ್ರಾಣಹಾನಿಯಾದ ಬಗ್ಗೆ ವರದಿ ಆಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ವಾಡಿಕೆಯಂತೆ 107.3 ಸೆಂ.ಮೀ. ಮಳೆ ಆಗಬೇಕಿದ್ದು, ಇದೂವರೆಗೆ 76.87 ಸೆಂ.ಮೀ. ಮಳೆ ಬಿದ್ದಿ ಎಂದು ಕೃಷಿ ಅಧಿಕಾರಿ ತಿಳಿಸಿದ್ದಾರೆ.

 

1,100 ಎಕರೆ ಬತ್ತದ ಗದ್ದೆ ಜಲಾವೃತ

ಸಾಗರ: ತಾಲ್ಲೂಕಿನಲ್ಲಿ ಮೂರು ದಿನಗಳಿಂದ ಸತತ ಸುರಿಯುತ್ತಿರುವ ಮಳೆಯಿಂದ ತಾಳಗುಪ್ಪ ಹೋಬಳಿಯ ಕಾನ್ಲೆ, ಮಂಡಗಳಲೆ, ಸೈದೂರು, ತಡಗಳಲೆ, ಹಾರೆಗೊಪ್ಪ ಸುತ್ತಮುತ್ತಲ ಗ್ರಾಮಗಳ 1,100 ಎಕರೆ ಬತ್ತದ ಗದ್ದೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.ಪ್ರತಿವರ್ಷದ ಮಳೆಗಾಲದಲ್ಲಿ ಭಾರೀ ಮಳೆಯಾದ ಸಂದರ್ಭದಲ್ಲಿ ಈ ಭಾಗದಲ್ಲಿ ಬತ್ತದ ಗದ್ದೆಗಳು ನೀರಿನಲ್ಲಿ ಮುಳುಗುತ್ತಿದ್ದು ನೆರೆಗುಳಿ ಬತ್ತದ ತಳಿ ಇಲ್ಲಿರುವುದರಿಂದ ಅದನ್ನು ತಾಳಿಕೊಳ್ಳುವ ಗುಣ ಇಲ್ಲಿನ ಗದ್ದೆಗಳಿಗೆ ಇವೆ. ಆದರೆ ಸತತವಾಗಿ ಇದೇ ರೀತಿ ಮಳೆ ಮುಂದುವರಿದಲ್ಲಿ ಬೆಳೆ ನಾಶವಾಗುವ ಅಪಾಯವಿದೆ.ತಾಳಗುಪ್ಪ ಸುತ್ತಮುತ್ತಲ ಕೆಲವು ಗ್ರಾಮಗಳಲ್ಲಿ ಮಳೆಯ ಕಾರಣ ಅಲ್ಲಲ್ಲಿ ಮನೆಯ ಗೋಡೆಗಳು ಕುಸಿದಿವೆ. ಗದ್ದೆ ಹಾಗೂ ತೋಟಗಳಲ್ಲಿ ಮಾತ್ರವಲ್ಲದೆ ರಸ್ತೆಯ ಮೇಲೂ ನೀರು ನಿಂತಿದ್ದು ವಾಹನ ಸಂಚಾರ ದುಸ್ತರವೆನಿಸಿದೆ.

ತಾಲ್ಲೂಕಿನ ಕೆರೆಕಟ್ಟೆಗಳು ಮಳೆಯ ನೀರಿನಿಂದ ತುಂಬಿ ತುಳುಕುತ್ತಿವೆ.ಸೈದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೀಸನಗದ್ದೆ ಗ್ರಾಮ ಭಾಗಶಃ ಜಲಾವೃತಗೊಂಡಿದ್ದು ಮಳೆ ನಿಲ್ಲದೆ ಇದ್ದಲ್ಲಿ ನಡುಗಡ್ಡೆಯಾಗುವ ಅಪಾಯವಿದೆ. ಮಳೆಯ ಕಾರಣ ಅಲ್ಲಲ್ಲಿ ಮರದ ರೆಂಬೆಕೊಂಬೆಗಳು ಮುರಿದು ಬಿದ್ದಿವೆ. ತಹಶೀಲ್ದಾರ್ ರಾಜಣ್ಣ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮಂಗಳವಾರ ತಾಳಗುಪ್ಪ ಹೋಬಳಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry