ಮಂಗಳವಾರ, ಮೇ 11, 2021
28 °C

ಮಳೆಯ ಅಭಾವ: ರೈತರಲ್ಲಿ ಆತಂಕ

ಪ್ರಜಾವಾಣಿ ವಾರ್ತೆ/ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಮಳೆಯ ಅಭಾವ: ರೈತರಲ್ಲಿ ಆತಂಕ

ಬಳ್ಳಾರಿ: ದೇಶದ ಉತ್ತರ ಭಾಗದ ವಿವಿಧೆಡೆ ಹಾಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರೆ, ಜೂನ್ ತಿಂಗಳು ಕಳೆಯುತ್ತ ಬಂದರೂ ಜಿಲ್ಲೆಯಲ್ಲಿ ನಿರೀಕ್ಷೆಯಷ್ಟು ಮಳೆ ಸುರಿಯದೆ, ಮುಂಗಾರು ಬಿತ್ತನೆಯ ತಯಾರಿಯಲ್ಲಿರುವ ರೈತರನ್ನು ಚಿಂತೆಗೀಡಾಗಿಸಿದೆ.ಜಿಲ್ಲೆಯ ಕೂಡ್ಲಿಗಿ, ಹಗರಿ ಬೊಮ್ಮನಹಳ್ಳಿ, ಹೂವಿನ ಹಡಗಲಿ ಮತ್ತು ಸಂಡೂರು ತಾಲ್ಲೂಕಿನಲ್ಲಿ ಮಳೆಯಾಶ್ರಿತ ಬೆಳೆಯನ್ನೇ ಅವಲಂಬಿಸಿರುವ ರೈತರು, ಮೇ ತಿಂಗಳ ಮಧ್ಯ ಭಾಗದಿಂದ ಇದುವರೆಗೆ ಒಂದು ಊರಿಗೆ ಮಳೆಯಾದರೆ, ಇನ್ನೊಂದು ಊರಿಗೆ ಮಳೆ ಇಲ್ಲ ಎಂಬಂಥ ಸ್ಥಿತಿ ಕಂಡುಬಂದಿದ್ದರಿಂದ ಆತಂಕಕ್ಕೀಡಾಗಿದ್ದಾರೆ.ಮೇ ಅಂತ್ಯದಿಂದಲೇ ನಿತ್ಯ ಮೋಡ ಕವಿದ ವಾತಾವರಣ ಕಂಡುಬಂದರೂ, ಕಪ್ಪು ಮೋಡಗಳು ಮಳೆ ಸುರಿಸದೆ ಸತಾಯಿಸುತ್ತರುವುದು ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತೆ ಮಾಡಿದೆ.ಕೇವಲ ಶೇ 23ರಷ್ಟು ಬಿತ್ತನೆ

ಜಿಲ್ಲೆಯ ಕೂಡ್ಲಿಗಿ, ಹೂವಿನ ಹಡಗಲಿ, ಸಂಡೂರು ಮತ್ತು ಹಗರಿ ಬೊಮ್ಮನಹಳ್ಳಿ ತಾಲ್ಲೂಕುಗಳಲ್ಲಿನ ರೈತರು ಮೇ ಮತ್ತು ಜೂನ್ ಮೊದಲ ವಾರ ಸುರಿದಿರುವ ರೋಹಿಣಿ ಮಳೆಯನ್ನೇ ಆಧರಿಸಿ ಇದುವರೆಗೆ ಅತ್ಯಲ್ಪ ಪ್ರಮಾಣದಲ್ಲಿ ಜೋಳದ ಬಿತ್ತನೆ ಮಾಡಿದ್ದಾರೆ.ಕೂಡ್ಲಿಗಿ ತಾಲ್ಲೂಕಿನಲ್ಲಿ ಇದುವರೆಗೆ ಕೇವಲ ಶೇ 23ರಷ್ಟು ಬಿತ್ತನೆಯಾಗಿದ್ದು,  ಹಡಗಲಿ, ಹಗರಿ ಬೊಮ್ಮನಹಳ್ಳಿ ಮತ್ತು ಸಂಡೂರು ತಾಲ್ಲೂಕಿನಲ್ಲಿ ಮೃಗಶಿರಾ ಮಳೆ ನೆಚ್ಚಿನ ಪ್ರಮಾಣದಷ್ಟು ಸುರಿಯದ್ದರಿಂದ ಬಿತ್ತನೆ ಪ್ರಮಾಣ ಇನ್ನೂ ಕಡಿಮೆ ಪ್ರಮಾಣದಲ್ಲಿ ಆಗಿದೆ.ಮೃಗಶಿರಾ ಮಳೆ ಮುಗಿದ ನಂತರ ಆರಂಭವಾಗುವ ಆರಿದ್ರಾ ಮಳೆಯೂ ಉತ್ತಮ ರೀತಿಯಲ್ಲಿ ಸುರಿದಲ್ಲಿ, ಜುಲೈ ಮಧ್ಯ ಭಾಗದವರೆಗೂ ಬಿತ್ತನೆ ಕಾರ್ಯ ಆರಂಭಿಸಬಹುದಾಗಿದೆ. ರೈತರು ಶೇಂಗಾ, ಮೆಕ್ಕೆಜೋಳ, ಸಜ್ಜೆ ಮತ್ತಿತರ ಬಿತ್ತನೆಯನ್ನು ಜುಲೈ ಮಧ್ಯದವರೆಗೂ ಮಾಡಬಹುದಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ಹೇಳಿವೆ.ಜುಲೈ ಅಂತ್ಯದವರೆಗೆ ಮಳೆ ಸುರಿದಲ್ಲಿ ತೊಗರಿ, ಹುರುಳಿ, ನೆವಣಿ, ರಾಗಿ, ಸಜ್ಜೆ ಬೆಳೆಯಲು ಅವಕಾಶವಿದೆ. ಕಳೆದ ಎರಡು ವರ್ಷಗಳಿಂದ ಸತತ ಬರಗಾಲ ಎದುರಿಸಿರುವ ಜಿಲ್ಲೆಯ ರೈತರು ಈ ಬಾರಿಯೂ ಸಹಜವಾಗಿಯೇ ಆತಂಕಕ್ಕೆ ಈಡಾಗಿದ್ದು, ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹಾಗೂ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಘಟಕಗಳು ಮುನ್ಸೂಚನೆ ನೀಡಿರುವುದು ಆಶಾದಾಯಕವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಕೃಷಿ ಇಲಾಖೆ ನೀಡುವ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಅಧಿಕ ಮಳೆ ಸುರಿದಿದೆ. ಆದರೆ, ವಾಸ್ತವದಲ್ಲಿ ಅನೇಕ ಗ್ರಾಮಗಳಲ್ಲಿ ಅಗತ್ಯ ಪ್ರಮಾಣದ ಮಳೆಯೇ ಸುರಿದಿಲ್ಲ. ಕೆಲವೆಡೆ ಮಳೆಯಾದರೆ, ಇನ್ನು ಕೆಲವೆಡೆ ಮಳೆಯ ಸುಳಿವಿಲ್ಲ.`15 ದಿನಗಳ ಹಿಂದೆ ಜೋಳ ಬಿತ್ತನೆ ಮಾಡಿದ್ದು, ಇದೀಗ ಎಡೆಕುಂಟೆ ಹೊಡೆಯುತ್ತಿದ್ದೇವೆ. ಮತ್ತೆ ಮಳೆ ಸುರಿದರೆ ಮಾತ್ರ ಈಗಾಗಲೇ ಮೇಲಕ್ಕೆದ್ದಿರುವ ಜೋಳದ ಬೆಳೆ ಉತ್ತಮ ರೀತಿಯಲ್ಲಿ ಚಿಗುರುತ್ತದೆ. ಇಲ್ಲದಿದ್ದರೆ ಒಣಗಿ ಹೋಗುತ್ತದೆ. ಕಳೆದ ವಾರ ಸುರಿದ ಮಳೆ ಪ್ರಯೋಜನಕ್ಕೆ ಬಂದಿಲ್ಲ' ಎಂದು ಕೂಡ್ಲಿಗಿ ತಾಲ್ಲೂಕಿನ ಕಕ್ಕುಪ್ಪಿ ಗ್ರಾಮದ ರೈತರು ಪ್ರಜಾವಾಣಿ ಎದುರು ಮಂಗಳವಾರ ತೀವ್ರ ಬೇಸರ ವ್ಯಕ್ತಪಡಿಸಿದರು.

`ಊರಲ್ಲಿ ಅನೇಕರು ಶೇಂಗಾ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದು, ಮಳೆ ಸುರಿದರೆ ಮಾತ್ರ ಬಿತ್ತನೆ ಇಲ್ಲದಿದ್ದರೆ ದೇವರೇ ಗತಿ ಎಂದು' ಅವರು ಅವಲತ್ತುಕೊಂಡರು.ನೀರಾವರಿ ರೈತರ `ವರಿ'

ಜಿಲ್ಲೆಯ ಹೊಸಪೇಟೆ, ಬಳ್ಳಾರಿ ಮತ್ತು ಸಿರುಗುಪ್ಪ ತಾಲ್ಲೂಕಿನ ಬಹುತೇಕ ಗ್ರಾಮಗಳ ನೀರಾವರಿ ಆಶ್ರಿತ ರೈತರು, ತುಂಗಭದ್ರಾ ಜಲಾಶಯದಿಂದ ಜುಲೈ ಮಧ್ಯ ಭಾಗದಲ್ಲಿ ಹರಿಸುವ ನೀರನ್ನೇ ಅವಲಂಬಿಸಿ ಭತ್ತ, ಮೆಣಸಿನಕಾಯಿ, ಹತ್ತಿ ಬೆಳೆಯುತ್ತಾರಾದರೂ, ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ರೀತಿಯ ಮಳೆ ಸುರಿಯದಿರುವುದು ಈ ಭಾಗದ ರೈತರನ್ನೂ ಆತಂಕಕ್ಕೆ ಈಡು ಮಾಡಿದೆ.ಮಲೆನಾಡು ಪ್ರದೇಶವಾಗಿರುವ ಶಿವಮೊಗ್ಗ ಮತ್ತಿತರ ಭಾಗಗಳಲ್ಲಿ ಉತ್ತಮ ಮಳೆ ಸುರಿದರೆ ಮಾತ್ರ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದು ಬರಲಿದೆ. ಆದರೆ, ಭರಪೂರ ಮಳೆಗಾಲದಲ್ಲೇ ಜಲಾಶಯದ ಒಳಹರಿವು ಮಂಗಳವಾರ ಕೇವಲ 904  ಕ್ಯೂಸೆಕ್‌ನಷ್ಟಿದ್ದು, 50 ಸಾವಿರಕ್ಕಿಂತ ಅಧಿಕ ಕ್ಯೂಸೆಕ್‌ನಷ್ಟು ಪ್ರಮಾಣದ ಒಳಹರಿವು ಕಂಡುಬಂದಲ್ಲಿ ಮಾತ್ರ ಜುಲೈ ಮಧ್ಯ ಭಾಗಕ್ಕೆ ನೀರು ಬಿಡಲು ಸಾಧ್ಯ.ಈ ಕಾರಣದಿಂದ ಈ ಮೂರೂ ತಾಲ್ಲೂಕುಗಳು ಮಾತ್ರವಲ್ಲದೆ, ಕೊಪ್ಪಳ, ರಾಯಚೂರು ಜಿಲ್ಲೆಯ ರೈತರೂ ಚಿಂತೆಗೆ ಒಳಗಾಗುವಂತಾಗಿದೆ. ಕಳೆದ ವರ್ಷ ಇದೇ ದಿನದ ಒಳಹರಿವಿನ ಪ್ರಮಾಣವೂ ಹೆಚ್ಚುಕಡಿಮೆ ಇಷ್ಟೇ ಪ್ರಮಾಣದಲ್ಲಿದ್ದು, ಜುಲೈ ಮತ್ತು ಆಗಸ್ಟ್ ವೇಳೆಗೆ ಸುರಿದ ಮಳೆಯಿಂದಲೇ ಜಲಾಶಯ ಭರ್ತಿಯಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.