ಭಾನುವಾರ, ಏಪ್ರಿಲ್ 18, 2021
31 °C

ಮಳೆ ಅಬ್ಬರಕ್ಕೆ ನಾಲ್ವರ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆ ಅಬ್ಬರಕ್ಕೆ ನಾಲ್ವರ ಬಲಿ

ಬೆಂಗಳೂರು: ರಾಜ್ಯದ ಕೊಡಗು, ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಮಂಗಳವಾರವೂ ಮುಂದುವರೆದಿದ್ದು ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ವಿವಿಧ ಜಲಾಶಯಗಳು ಭರ್ತಿಯಾಗಿದ್ದು ಕೆಲ ದೇಗುಲಗಳು ಜಲಾವೃತವಾಗಿದ್ದರೆ ಹಲವೆಡೆ ಕೃಷಿ ಭೂಮಿ ಕೊಚ್ಚಿಕೊಂಡು ಹೋಗಿದೆ. 

 ಭೂಕುಸಿತದಿಂದಾಗಿ ಸಕಲೇಶಪುರ ಸುಬ್ರಹ್ಮಣ್ಯ ನಡುವೆ ರೈಲು ಸಂಚಾರ ಸ್ಥಗಿತಗೊಂಡಿದೆ. ತುಂಗಭದ್ರಾ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದರೆ ಕೃಷ್ಣಾ ಪ್ರವಾಹದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಕರಾವಳಿಯ ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ಉತ್ತರ ಕನ್ನಡದ ಕಾಳಿ ನದಿಗೆ ಪ್ರವಾಹ ಬಂದಿದ್ದು 20ಕ್ಕೂ ಹೆಚ್ಚು ಗ್ರಾಮಗಳು ಕೇಂದ್ರ ಸ್ಥಾನದ ಜತೆ ಸಂಪರ್ಕ ಕಳೆದುಕೊಂಡಿವೆ.

ಅಪಾಯ ಮಟ್ಟ ಮೀರಿ ಹರಿಯುತ್ತಿರುವ ತೀರ್ಥಹಳ್ಳಿಯ ಆಗುಂಬೆ ಬಳಿ ಮಾಲತಿ ನದಿಯಲ್ಲಿ ಕ್ಯಾಂಟರ್ ಲಾರಿ ಮುಳುಗಿ ಚಾಲಕ ಮತ್ತು ಕ್ಲೀನರ್ ಇಬ್ಬರೂ ಕೊಚ್ಚಿಕೊಂಡು ಹೋಗಿದ್ದರೆ, ಹೆಬ್ರಿಯಲ್ಲಿ ರಸ್ತೆಗೆ ನುಗ್ಗಿದ ಸೀತಾನದಿಯ ನೀರಿನಲ್ಲಿ ಕೂಲಿ ಕಾರ್ಮಿಕ ಶಂಕರ ಶೆಟ್ಟಿ ಎಂಬವರು ಕೊಚ್ಚಿಹೋಗಿದ್ದಾರೆ. ವಿರಾಜಪೇಟೆ ತಾಲ್ಲೂಕಿನಲ್ಲಿ ಕಾವೇರಿ ನದಿಗೆ ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ.

ಕಾರವಾರ ವರದಿ: ಜಿಲ್ಲೆಯ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ನಿರಂತರ ಮಳೆಯಿಂದ ಜೋಯಿಡಾ ತಾಲ್ಲೂಕಿನ ಕಾಳಿ ಮತ್ತು ಚಾಂದೆಹಳ್ಳಕ್ಕೆ ಪ್ರವಾಹ ಬಂದಿದ್ದು 20ಕ್ಕೂ ಹೆಚ್ಚು ಹಳ್ಳಿಗಳು ಜಿಲ್ಲಾ ಕೇಂದ್ರದ ಜತೆ ಸಂಪರ್ಕ ಕಳೆದುಕೊಂಡಿವೆ.

ಕದ್ರಾ ಮತ್ತು ಕೊಡಸಳ್ಳಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿದ್ದು ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಕದ್ರಾ ಜಲಾಶಯದ ನೀರಿನ ಮಟ್ಟ 33.84 ಮೀ (ಗರಿಷ್ಠ ಮಟ್ಟ 34.50) ಮತ್ತು ಕೊಡಸಳ್ಳಿ ಜಲಾಶಯದ ನೀರಿನ ಮಟ್ಟ 72.73 ಮೀ (ಗರಿಷ್ಠ 75.50)ಕ್ಕೆ ತಲುಪಿದೆ. ಮಳೆ ಇದೇ ರೀತಿ ಮುಂದುವರಿದರೆ ಎರಡೂ ಜಲಾಶಯದಿಂದ ನೀರು ಬಿಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಘಟ್ಟದ ಮೇಲಿನ ತಾಲ್ಲೂಕಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗಂಗಾವಳಿ, ಅಘನಾಶಿನಿ, ಶರಾವತಿ, ಗುಂಡಬಾಳ ನದಿಯಲ್ಲೂ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.

ಮಂಗಳವಾರ ಬೆಳಿಗ್ಗೆ 8.30ಕ್ಕೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ಜೋಯಿಡಾದಲ್ಲಿ 13.2 ಸೆಂ.ಮೀ. ಶಿರಸಿ 13.4, ಸಿದ್ದಾಪುರದಲ್ಲಿ 9.4 ಸೆಂ.ಮೀ ಮತ್ತು ಭಟ್ಕಳದಲ್ಲಿ 5 ಸೆಂ.ಮೀ ಮಳೆಯಾಗಿದೆ.

ಶಿರಸಿ: ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಬನವಾಸಿಯಲ್ಲಿ ವರದಾ ನದಿಯ ನೀರಿನ ಮಟ್ಟ ಏರಿದ್ದು ಮಂಗಳವಾರ ಪ್ರವಾಹದ ಭೀತಿ ಎದುರಾಗಿದೆ.

ಅಜ್ಜರಣಿ ಗ್ರಾಮಕ್ಕೆ ತೆರಳುವ ಸೇತುವೆ  ನೀರಿನಲ್ಲಿ ಮುಳುಗಿದೆ. ಗ್ರಾಮಸ್ಥರು ಪರ್ಯಾಯ ಮಾರ್ಗ ಅನುಸರಿಸುವಂತಾಗಿದೆ.

ಹೊಸಪೇಟೆ : ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ  ಮಂಗಳವಾರ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಸೋಮವಾರ ಮುಂಜಾನೆ 8 ಗಂಟೆಗೆ 23,000 ಕ್ಯೂಸೆಕ್ ಇದ್ದ ಒಳಹರಿವು, ಸಂಜೆಯ ಹೊತ್ತಿಗೆ 54,222 ಕ್ಯೂಸೆಕ್‌ಗೆ ಏರಿದೆ.

ಚಿಕ್ಕೋಡಿ : ತಾಲ್ಲೂಕಿನಲ್ಲಿ ಕೃಷ್ಣಾ ಹಾಗೂ ಉಪನದಿಗಳಾದ ದೂಧಗಂಗಾ, ವೇದಗಂಗಾ ನದಿಗಳಲ್ಲಿ ಮಂಗಳವಾರ ಪ್ರವಾಹ ಇಳಿಮುಖವಾಗಿದೆ. 

ಜಲಾವೃತಗೊಂಡಿದ್ದ ಒಟ್ಟು ಏಳು ಕೆಳಮಟ್ಟದ ಸೇತುವೆಗಳ ಪೈಕಿ ಮಂಗಳವಾರ ಎರಡು ಸೇತುವೆಗಳು ಸಂಚಾರಕ್ಕೆ ಮುಕ್ತಗೊಂಡಿವೆಯಾದರೂ ಇನ್ನೂ ಐದು ಸೇತುವೆಗಳು ಮುಳುಗಡೆ ಸ್ಥಿತಿಯಲ್ಲಿಯೇ ಇವೆ. ತಾಲ್ಲೂಕಿನ ಕಾರದಗಾ-ಭೋಜ, ಭೋಜವಾಡಿ-ಕುನ್ನೂರ ಗ್ರಾಮಗಳ ಮಧ್ಯದ ಸೇತುವೆಗಳು ಸಂಚಾರಕ್ಕೆ ತೆರೆದುಕೊಂಡಿವೆ.

ಖಾನಾಪುರದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿ ಮಲಪ್ರಭೆ ತುಂಬಿ ಹರಿಯುತ್ತಿದ್ದರೂ ಸವದತ್ತಿ ತಾಲ್ಲೂಕಿನ ನವಿಲುತೀರ್ಥದಲ್ಲಿರುವ ಮಲಪ್ರಭಾ ಜಲಾಶಯ ಕೇವಲ ಶೇ 25ರಷ್ಟು ಮಾತ್ರ ಮಾತ್ರ ಭರ್ತಿಯಾಗಿದೆ.  

ಬರದಿಂದ ತತ್ತರಿಸಿರುವ ರೋಣ, ಗುಳೇದಗುಡ್ಡ ಊರುಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ನವೀಲುತೀರ್ಥ ಜಲಾಶಯದಿಂದ ನದಿಗೆ 1600 ಕ್ಯೂಸೆಕ್ ನೀರು ಬಿಡಲಾಗಿದೆ. ಪರಿಣಾಮವಾಗಿ ಮುನವಳ್ಳಿಯ ಪುಂಡಲೀಕೇಶ್ವರ ದೇವಾಲಯ ಮಂಗಳವಾರ ಜಲಾವೃತವಾಗಿದೆ.

ಮಂಗಳೂರು : ಕರಾವಳಿ ಭಾಗಕ್ಕಿಂತಲೂ ಘಟ್ಟ ಪ್ರದೇಶಗಳಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಬಿರುಸಿನಿಂದ ಮಳೆ ಸುರಿದಿದೆ. ಪರಿಣಾಮ ಕರಾವಳಿಯ ಬಹುತೇಕ ನದಿಗಳು ತುಂಬಿ ಹರಿಯುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಧಾರಾ ಸೇತುವೆ ಮಂಗಳವಾರ ಹಲವು ಗಂಟೆ ಮುಳುಗಿತ್ತು. 

ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸೇತುವೆಯ ಮೇಲೆ ಸೋಮವಾರ ರಾತ್ರಿ ಬೃಹತ್ ಪ್ರಮಾಣದಲ್ಲಿ ಪ್ರವಾಹ ಬಂದುದರಿಂದ ನೀರಿನಲ್ಲಿ ಸುಮಾರು 40 ಅಡಿ ಉದ್ದದ ಮರವೊಂದು ಸೇತುವೆಯ ಮೇಲೆ ಬಂದು ನಿಂತಿತು. ಇದರಿಂದಾಗಿ ಸೇತುವೆಯಿಂದ ನೀರು ಇಳಿದ ನಂತರವೂ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಬಂಟ್ವಾಳ ತಾಲ್ಲೂಕಿನಾದ್ಯಂತ ಮಂಗಳವಾರ  ಧಾರಾಕಾರ ಮಳೆಯಾಗಿದ್ದು, ನೇತ್ರಾವತಿ ನದಿಯಲ್ಲಿ ಈ ವರ್ಷದಲ್ಲಿ ಎರಡನೇ ಬಾರಿಗೆ ಗರಿಷ್ಠ ಪ್ರಮಾಣದಲ್ಲಿ ನೆರೆ ನೀರು ಉಕ್ಕಿ ಹರಿದಿದೆ. ಏಳು ಮನೆಗಳಿಗೆ ಹಾನಿಯಾಗಿದ್ದು, ಬಂಟ್ವಾಳ, ಪಾಣೆಮಂಗಳೂರು, ಆಲಡ್ಕ, ಬಸ್ತಿಪಡ್ಪು, ಕಂಚಿಕಾರಪೇಟೆ, ಜಕ್ರಿಬೆಟ್ಟು ಮತ್ತಿತರ ತಗ್ಗು ಪ್ರದೇಶಗಳಲ್ಲಿ ಹಲವಾರು ಮನೆ ಮತ್ತು ಅಂಗಡಿಗಳಿಗೆ ನೆರೆನೀರು ಪ್ರವೇಶಿಸಿದೆ.

ಚಾರ್ಮಾಡಿ ಘಾಟಿಯಲ್ಲಿ ಮಂಗಳವಾರ ಗುಡ್ಡ ಕುಸಿದಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ತಡೆಯಾಗಿತ್ತು. ಮಣ್ಣು ತೆರವುಗೊಳಿಸಿದ ಬಳಿಕ ಮತ್ತೆ ವಾಹನ ಸಂಚಾರ ಸುಗಮವಾಗಿದೆ.

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡಿನಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಮೂಡಿಗೆರೆ, ಕೊಪ್ಪ ಹಾಗೂ ಶೃಂಗೇರಿ ತಾಲ್ಲೂಕಿನಲ್ಲಿ ಭಾರಿ ಮಳೆಯಾಗಿದ್ದು, ನದಿಗಳು ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿವೆ.

ಕೊಪ್ಪ ತಾಲ್ಲೂಕಿನಲ್ಲಿ  ಕೃಷಿ ಭೂಮಿ ಜಲಾವೃತವಾಗಿವೆ. ತುಂಗಾ ಮತ್ತು ಅದರ ಉಪನದಿಗಳು ತುಂಬಿ ಹರಿದಿದ್ದು, ರಸ್ತೆಗಳು ಮುಳುಗಿ ವಾಹನ ಸಂಚಾರಕ್ಕೆ ಕೆಲಕಾಲ ಅಡ್ಡಿಯಾಗಿದೆ. ತಾಲ್ಲೂಕಿನ ನಾರ್ವೆ, ಬಿ.ಜಿ. ಕಟ್ಟೆ, ಆರಡಿಕೊಪ್ಪ, ಅಂಬಳಿಕೆ, ನಾಗಲಾಪುರ, ಕಾರಂಗಿಗಳಲ್ಲಿ ತುಂಗಾಪ್ರವಾಹ ರಸ್ತೆಗೆ ನುಗ್ಗಿ ಸಾರಿಗೆ ಸಂಚಾರ ಸ್ಥಗಿಗೊಂಡಿದೆ.

ಚಿಕ್ಕಮಗಳೂರು ರಸ್ತೆಯ ನಾರ್ವೆ ಘಾಟಿಯಲ್ಲಿ ಭೂ ಕುಸಿತ ಉಂಟಾಗಿ ರಸ್ತೆ ಸಂಪೂರ್ಣ ಬಂದಾಗಿತ್ತು. ಲೋಕೋಪಯೋಗಿ ಇಲಾಖೆ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ರಸ್ತೆಗೆ ಬಿದ್ದ ಬಂಡೆ, ಮಣ್ಣನ್ನು ತೆರವುಗೊಳಿಸಿದರು. ನರಸಿಪುರದಲ್ಲಿ ಒಡ್ನಾಳ್ಳದ ಪ್ರವಾಹ ರಸ್ತೆ ಮೇಲೆ ನುಗ್ಗಿ ಸಂಚಾರಕ್ಕೆ ಅಡ್ಡಿಯಾಗಿದ್ದು, ಆಗುಂಬೆ, ಚಿಕ್ಕಮಗಳೂರು ಹಾಗೂ ಶೃಂಗೇರಿ ಮಾರ್ಗದ ಸಾರಿಗೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಬಾಳೆಹೊನ್ನೂರಿನಲ್ಲಿ ಸೋಮವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭದ್ರಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.  ಬಾಳೆಹೊನ್ನೂರು ಮತ್ತು ಕಳಸ ಸಂಪರ್ಕ ಕಲ್ಪಿಸುವ  ಬೈರೆಗುಡ್ಡದಲ್ಲಿ ರಸ್ತೆಯ ಮೇಲೆ ಭದ್ರಾ ನದಿಯ ನೀರು ಹರಿಯುತ್ತಿದ್ದು ಸಂಪರ್ಕ ಕಡಿತಗೊಂಡಿದೆ. ರಂಭಾಪುರಿ ಮಠ ಮತ್ತು ನರಸಿಂಹರಾಜಪುರ ರಸ್ತೆ, ಬಸರಿಕಟ್ಟೆ, ಕವನಹಳ್ಳ, ಹುತ್ತಿನಗದ್ದೆ ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಳೆದ ಮೂರು ದಿನಗಳಿಂದ ವಿದ್ಯುತ್ ಇಲ್ಲದಂತಾಗಿದೆ.

ಶಿವಮೊಗ್ಗ: ಮಂಡಗದ್ದೆಯ ರಸ್ತೆ  ಮೇಲೆ ತುಂಗಾ ನದಿ ನೀರು ಹರಿದಿರುವ ಪರಿಣಾಮ ಶಿವಮೊಗ್ಗ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಂಚಾರ ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಸ್ಥಗಿತಗೊಂಡಿದೆ. ಮಂಡಗದ್ದೆಯಲ್ಲಿ ಸಾಕಷ್ಟು ಮನೆಗಳು ಜಲಾವೃತಗೊಂಡಿವೆ.

ತಾಲ್ಲೂಕಿನ ಆಗುಂಬೆ ಬಳಿಯ ಕೋಳೂರು ಹಾಗೂ ಬರ್ಲಗುಡ್ಡೆ ಗ್ರಾಮದ 7-8 ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. 

ತುಂಗಾ ನದಿಗೆ 1.19 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಣೆಕಟ್ಟೆಯ ಎಲ್ಲಾ 22 ಕ್ರೆಸ್ಟ್‌ಗೇಟುಗಳನ್ನು ತೆಗೆದು, ಅಷ್ಟೇ ಪ್ರಮಾಣದ ನೀರು ಹೊರಕ್ಕೆ ಬಿಡಲಾಗುತ್ತಿದೆ. ಶಿವಮೊಗ್ಗ ನಗರದಲ್ಲಿ ಹಾದು ಹೋಗುವ ತುಂಗಾ ನದಿ ಪ್ರವಾಹ ಭೀತಿ ಸೃಷ್ಟಿಸಿದೆ. ನಗರದ ಕೋರ್ಪಳಯ್ಯನ ಛತ್ರದ ಬಳಿ ಇರುವ ಮಂಟಪ ತುಂಗಾ ನದಿಯಲ್ಲಿ ಮುಳುಗಿದೆ. ಮಳೆ ಮುಂದುವರಿದರೆ ನಗರದ ನದಿಪಾತ್ರದಲ್ಲಿರುವ ಬಡಾವಣೆಗಳು, ತಗ್ಗುಪ್ರದೇಶಗಳು ಜಲಾವೃತವಾಗುವ ಸಾಧ್ಯತೆಗಳಿವೆ.

ಲಿಂಗನಮಕ್ಕಿ ಅಣೆಕಟ್ಟಿಗೆ 24 ಗಂಟೆಗಳ ಅವಧಿಯಲ್ಲಿ ಸುಮಾರು 4 ಅಡಿಯಷ್ಟು ನೀರು ಬಂದಿದೆ. ಮಂಗಳವಾರ ಜಲಾಶಯದ ನೀರಿನ ಮಟ್ಟ 1783.20 (ಗರಿಷ್ಠ 1,819) ಅಡಿಯಿದೆ. ಒಳಹರಿವು  84,610 ಕ್ಯೂಸೆಕ್‌ಗೆ ಏರಿದೆ.

ಹೊಸನಗರ ತಾಲ್ಲೂಕಿನಲ್ಲಿ ಮಳೆಯ ಅಬ್ಬರ ಜೋರಾಗಿದೆ. ಬೇಳೂರು ಗ್ರಾಮದ ಹೆನ್ನೆಬೈಲ್ ಕಿರುಸೇತುವೆ ಕುಸಿದಿದೆ. ಇಳುಕುಂಜಿ ಬಳಿ ಸೇತುವೆ ಕುಸಿದು ತೀರ್ಥಹಳ್ಳಿ-ನಗರ ರಸ್ತೆ ಸಂಚಾರ ಸ್ಥಗಿತವಾಗಿದೆ. ಬಯಸೆ ಗ್ರಾಮದಲ್ಲಿ ಕಿರು ಸೇತುವೆ ಮಳೆ ಆರ್ಭಟಕ್ಕೆ ಕೊಚ್ಚಿ ಹೋಗಿದೆ. ತಾಲ್ಲೂಕಿನಲ್ಲಿ ಸುಮಾರು 150ಕ್ಕೂ ಅಧಿಕ ಬತ್ತದ ಗದ್ದೆ ಜಲಾವೃತವಾಗಿವೆ ಎಂದು ಹೊಸನಗರ ತಹಶೀಲ್ದಾರ್ ಕೃಷ್ಣಮೂರ್ತಿ ತಿಳಿಸಿದರು.

ಸಕಲೇಶಪುರ : ಮಳೆಯ ಅಬ್ಬರಕ್ಕೆ ತಾಲ್ಲೂಕಿನಾದ್ಯಂತ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ಹಾಗೂ ಆಸ್ತಿ-ಪಾಸ್ತಿ ಹಾನಿಯಾಗಿದೆ.

ತಾಲ್ಲೂಕಿನ ಹೆಗ್ಗದ್ದೆ ಗ್ರಾಮದಲ್ಲಿ ಭಾರೀ ಪ್ರಮಾಣದ ಭೂ ಕುಸಿತ ಉಂಟಾಗಿದ್ದು, ನೀರಿನೊಂದಿಗೆ ಮಣ್ಣು ಕೊಚ್ಚಿಹೋದ ಪರಿಣಾಮ ನಾಟಿ ಮಾಡಲಾದ 12 ಎಕರೆ ಭತ್ತದ ಗದ್ದೆ ಮುಚ್ಚಿದೆ. ಗ್ರಾಮದ ರೈತ ವೀರೇಶ್, ಹೂವಣ್ಣಾಚಾರ್, ಸುರೇಶ್, ಮಹದೇವೇಗೌಡ ಇವರುಗಳು 8 ದಿನಗಳ ಹಿಂದೆ ನಾಟಿ ಮಾಡಿದ್ದ ಭತ್ತದ ಸಸಿ ಮುಚ್ಚಿದ್ದು, ಕೆಲವು ಭಾಗ ಕೊಚ್ಚಿಹೋಗಿದೆ.

ಶಾಲಾ ಕಾಲೇಜುಗಳಿಗೆ ರಜೆ: ತಾಲ್ಲೂಕಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಮಂಗಳವಾರ ರಜೆ ನೀಡಲಾಗಿದ್ದು, ಮಳೆ ಇದೇ ರೀತಿ ಮುಂದುವರಿದರೆ ಬುಧವಾರವೂ ರಜೆ ಮುಂದುವರೆಸಲಾಗುವುದು ಎಂದು ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮಂಗಳವಾರವೂ ಮುಂದುವರಿದಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಕಾವೇರಿ ನದಿಗೆ ಜಾರಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಸಂಭವಿಸಿದ್ದು, ಜಿಲ್ಲೆಯ ಹಲವೆಡೆ ಮಣ್ಣು ಕುಸಿದಿರುವ ಬಗ್ಗೆ ವರದಿಗಳು ಬಂದಿವೆ.

ಮಡಿಕೇರಿ, ಭಾಗಮಂಡಲ, ಸಂಪಾಜೆ, ನಾಪೋಕ್ಲು, ವಿರಾಜಪೇಟೆ, ಶ್ರೀಮಂಗಲ, ಪೊನ್ನಂಪೇಟೆ, ಶಾಂತಳ್ಳಿ, ಶನಿವಾರಸಂತೆ, ಇತರೆಡೆ ಧಾರಾಕಾರವಾಗಿ ಮಳೆ ಸುರಿದಿದೆ. ಮಡಿಕೇರಿಯಲ್ಲಿ ಮಳೆಯ ನಡುವೆ ದಟ್ಟವಾಗಿ ಮಂಜು ಕೂಡ ಕವಿದಿತ್ತು.

ಕಾವೇರಿ ಕಣಿವೆ ಪ್ರದೇಶದಲ್ಲಿ ಸಾಕಷ್ಟು ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನದಿಯ ನೀರಿನ ಮಟ್ಟ ಏರುಗತಿಯಲ್ಲಿ ಸಾಗಿದೆ. ಲಕ್ಷ್ಮಣತೀರ್ಥ, ಹಾರಂಗಿ ನದಿಯ ನೀರಿನ ಮಟ್ಟವೂ ಏರಿಕೆ ಕಂಡಿದೆ.

ಮಡಿಕೇರಿಯಲ್ಲೂ ಹಲವು ಕಡೆ ಮಣ್ಣು ಕುಸಿದು, ರಸ್ತೆ ಸಂಚಾರಕ್ಕೆ ಅಡೆ-ತಡೆಯುಂಟಾದ ಬಗ್ಗೆಯೂ ವರದಿಯಾಗಿವೆ.

ನಗರದ ಅಂಬೇಡ್ಕರ್ ಬಡಾವಣೆಯಲ್ಲಿ, ಸ್ಟುವರ್ಟ್ ಹಿಲ್, ತ್ಯಾಗರಾಜನಗರ, ರೋಷನಾರ ಕೆರೆ ಬಳಿ ಮಣ್ಣು ಕುಸಿದಿದೆ. ಸುಬ್ರಮಣ್ಯ ನಗರದಲ್ಲಿ ಮನೆಯೊಂದರ ಗೋಡೆಯು ಭಾಗಶಃ ಕುಸಿದಿದೆ.

ಕೇರಳ - ಒಂಬತ್ತು ಸಾವು

ಕೋಯಿಕ್ಕೋಡ್  (ಪಿಟಿಐ): ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು ಒಂಬತ್ತು ಜನರು ಕೋಯಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಕೋಯಿಕ್ಕೋಡ್‌ನ ಗುಡ್ಡ ಪ್ರದೇಶ ಪುಲ್ಲೂ ರಾಂಪಾರದಲ್ಲಿ ಎಂಟು ಜನರು ಮೃತಪಟ್ಟಿದ್ದಾರೆ. ಮಂಗಳವಾರ ಬೆಳಿಗ್ಗೆ ಕಣ್ಣೂರಿನಲ್ಲಿ ಪ್ರವಾಹಕ್ಕೆ ಸಿಲುಕಿ ಬಾಲಕನೊಬ್ಬ ಮೃತಪಟ್ಟಿದ್ದಾನೆ.

ಮಳೆಯ ರಭಸಕ್ಕೆ ಒಂದು ಬಲಿ

ವಿರಾಜಪೇಟೆ ತಾಲ್ಲೂಕಿನ ಕಾಕೋಟುಪರಂಬು-ನಾಲ್ಕೇರಿ ಗ್ರಾಮದ ಬಳಿ ಕಳ್ಳೀರ ಪಿ. ಬೋಪಯ್ಯ (45) ಎಂಬುವವರು ಕಾವೇರಿ ನದಿಗೆ ಜಾರಿ ಬಿದ್ದು ಮೃತರಾಗಿದ್ದಾರೆ.

ಭಾಗಮಂಡಲ ಹೋಬಳಿಯ ಅಯ್ಯಂಗೇರಿಯಲ್ಲಿ ಮಳೆಯ ರಭಸಕ್ಕೆ ಕೊಟ್ಟಿಗೆ ಮುರಿದು ಬಿದ್ದ ಪರಿಣಾಮ ಜಾನುವಾರು ಮೃತಪಟ್ಟಿದೆ.

ಶ್ರೀಮಂಗಲ ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಹಲವು ಮನೆಗಳು ಜಖಂಗೊಂಡಿವೆ. ಈ ಪ್ರದೇಶಕ್ಕೆ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಜಿಲ್ಲಾಧಿಕಾರಿ ಡಾ.ಶಿವಶಂಕರ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಹೆಬ್ರಿಯಲ್ಲಿ ಕಾರ್ಮಿಕ ಸಾವು

ಹೆಬ್ರಿಯಲ್ಲಿ ರಸ್ತೆಗೆ ನುಗ್ಗಿದ ಸೀತಾನದಿಯ ನೀರಿನಲ್ಲಿ ಕೂಲಿ ಕಾರ್ಮಿಕ ಶಂಕರ ಶೆಟ್ಟಿ ಎಂಬವರು ಕೊಚ್ಚಿಹೋಗಿದ್ದಾರೆ.

ಸೋಮವಾರ ಸಂಜೆ ಕೆಲಸ ಮುಗಿಸಿ ಅಂಗಡಿಯತ್ತ ತೆರಳಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಸೀತಾನದಿಯಲ್ಲಿ ನೀರು ತುಂಬಿ ರಸ್ತೆಗೆ ಬಂದಿತ್ತು. ಇವರು ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಮನೆಯವರೆಲ್ಲ ಅಂಗಡಿ ಮತ್ತು ನದಿಯ ಬಳಿ ಹುಡುಕಿದರೂ ಪತ್ತೆಯಾಗಲಿಲ್ಲ. ಮಂಗಳವಾರ ನದಿಯಲ್ಲಿ ಶಂಕರ ಶೆಟ್ಟಿಯವರ ಮೃತದೇಹ ಪತ್ತೆಯಾಗಿದೆ. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ಚಾಲಕ, ಕ್ಲೀನರ್ ಸಾವು

ಶಿವಮೊಗ್ಗ: ಅಪಾಯ ಮಟ್ಟ ಮೀರಿ ಹರಿಯುತ್ತಿರುವ ತೀರ್ಥಹಳ್ಳಿಯ ಆಗುಂಬೆ ಬಳಿ ಮಾಲತಿ ನದಿಯಲ್ಲಿ ಕ್ಯಾಂಟರ್ ಲಾರಿ ಮುಳುಗಿ ಚಾಲಕ ಮತ್ತು ಕ್ಲೀನರ್ ಇಬ್ಬರೂ ಕೊಚ್ಚಿಕೊಂಡು ಹೋಗಿದ್ದಾರೆ.

ಶಿವಮೊಗ್ಗದಿಂದ ಸಿಮೆಂಟ್ ತುಂಬಿಕೊಂಡು ಹೋಗುತ್ತಿದ್ದ ಲಾರಿ, ಆಗುಂಬೆ ಬಳಿಯ ಅನ್ನುವಳ್ಳಿ ಸೇತುವೆ ಬಳಿ ಉಕ್ಕಿ ಹರಿಯುತ್ತಿದ್ದ ಮಾಲತಿ ನದಿಗೆ ಬೆಳಿಗ್ಗೆ ಬಿದ್ದಿದೆ. ಜಲಾವೃತಗೊಂಡಿದ್ದ ಸೇತುವೆ ಚಾಲಕನ ಗಮನಕ್ಕೆ ಬಾರದಿರುವುದರಿಂದ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ.

ಚಾಲಕ ಕುಮಾರ್ (23) ಹಾಗೂ ಕ್ಲೀನರ್ ಮುನ್ನಾ (24) ಇವರಿಬ್ಬರೂ ಶಿಕಾರಿಪುರದ ಈಸೂರು ಗ್ರಾಮಕ್ಕೆ ಸೇರಿದವರು ಎಂದು ಗುರುತಿಸಲಾಗಿದೆ. ಮೃತ ದೇಹಗಳು ಮಧ್ಯಾಹ್ನ ಪತ್ತೆಯಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.