ಶನಿವಾರ, ಮಾರ್ಚ್ 6, 2021
21 °C

ಮಳೆ ಅಬ್ಬರ: ಕಡಲ್ಕೊರೆತ ತೀವ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆ ಅಬ್ಬರ: ಕಡಲ್ಕೊರೆತ ತೀವ್ರ

ಮಂಗಳೂರು: ಕರಾವಳಿ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಬುಧವಾರ ದಿನವಿಡೀ ಬಿಟ್ಟು ಬಿಟ್ಟು ಧಾರಾಕಾರ ಮಳೆಯಾಗಿದೆ. ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿರುವ ಕಾರಣ ಕಡಲ್ಕೊರೆತವೂ ತೀವ್ರಗೊಂಡಿದೆ.ಉಳ್ಳಾಲ ಸಮೀಪದ ಉಚ್ಚಿಲದಲ್ಲಿ ಖಾಸಗಿ ಅತಿಥಿ ಗೃಹವೊಂದು ಕಡಲ್ಕೊರೆತದಿಂದಾಗಿ ಬುಧವಾರ ಸಮುದ್ರಪಾಲಾಗಿವೆ. ಅರಬ್ಬಿ  ಸಮುದ್ರದಲ್ಲಿ ಏಳುತ್ತಿರುವ ಭಾರಿ ಗಾತ್ರದ ಅಲೆಗಳು ಕಿನಾರೆಯ ನಿವಾಸಿಗಳ ಆತಂಕಕ್ಕೆ ಕಾರಣವಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ತಾಲ್ಲೂಕಿನಲ್ಲಿ ಅತೀ ಹೆಚ್ಚು (48.8 ಮಿ.ಮೀ) ಮಳೆಯಾಗಿದೆ.ಮಡಿಕೇರಿ ವರದಿ:  ಕೊಡಗು ಜಿಲ್ಲೆಯ ಮಡಿಕೇರಿ, ಸಂಪಾಜೆ, ನಾಪೋಕ್ಲು, ಭಾಗಮಂಡಲ, ಶ್ರಿಮಂಗಲ, ಶಾಂತಳ್ಳಿ, ಕೊಡ್ಲಿಪೇಟೆಯಲ್ಲಿ ಬುಧವಾರ ಉತ್ತಮ ಮಳೆಯಾಗಿದೆ. ಇತರ ಪ್ರದೇಶಗಳಲ್ಲಿ ಸಾಧಾರಣ ಮಳೆ ಸುರಿದಿದೆ. ಜಿಲ್ಲೆಯ ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಕಾವೇರಿ, ಲಕ್ಷ್ಮಣ ತೀರ್ಥ ನದಿಯ ಆಸುಪಾಸಿನ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.ಶಿವಮೊಗ್ಗ ವರದಿ:  ಜಿಲ್ಲೆಯ ತೀರ್ಥಹಳ್ಳಿ, ಶಿಕಾರಿಪುರ, ಸಾಗರ ತಾಲ್ಲೂಕುಗಳಲ್ಲಿ ಮಳೆ ಚುರುಕುಗೊಂಡಿದೆ. ಜೋಗ ಮತ್ತು ಕಾರ್ಗಲ್ ಸುತ್ತಮುತ್ತ ಉತ್ತಮ ಮಳೆ ಆಗಿದ್ದು, ಶಿವಮೊಗ್ಗ, ಹೊಸನಗರ, ಸೊರಬ ತಾಲ್ಲೂಕುಗಳಲ್ಲಿ ಬುಧವಾರ ಸಾಧಾರಣ ಮಳೆ ಆಗಿದೆ. ಭದ್ರಾ ಜಲಾಶಯದ ನಾಲೆಗಳಿಗೆ ಬುಧವಾರ ನೀರು ಬಿಟ್ಟಿದ್ದರಿಂದ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಲಿಂಗನಮಕ್ಕಿ, ಭದ್ರಾ ಜಲಾಶಯಗಳಲ್ಲಿ ಒಳ ಹರಿವು ಕಡಿಮೆ ಆಗಿದ್ದು, ತುಂಗಾ ಜಲಾಶಯದ ಒಳಹರಿವು ತುಸು ಏರಿಕೆ ಆಗಿದೆ.

ಹುಬ್ಬಳ್ಳಿ ವರದಿ: ಉತ್ತರ ಕರ್ನಾಟಕ ಭಾಗದ ಎಲ್ಲೆಡೆ ಬುಧವಾರ ಚದುರಿದಂತೆ ಮಳೆಯಾಗಿದೆ. ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಬಾಗಲಕೋಟೆ, ವಿಜಾಪುರ, ಬಳ್ಳಾರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.