ಮಳೆ ಅಬ್ಬರ: ಗುಲ್ಬರ್ಗ ಜಿಲ್ಲೆಯಲ್ಲಿ ಇಬ್ಬರ ಸಾವು

7

ಮಳೆ ಅಬ್ಬರ: ಗುಲ್ಬರ್ಗ ಜಿಲ್ಲೆಯಲ್ಲಿ ಇಬ್ಬರ ಸಾವು

Published:
Updated:
ಮಳೆ ಅಬ್ಬರ: ಗುಲ್ಬರ್ಗ ಜಿಲ್ಲೆಯಲ್ಲಿ ಇಬ್ಬರ ಸಾವು

ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಹಾಗೂ ಹೈದರಾಬಾದ್‌ ಕರ್ನಾಟಕ ಜಿಲ್ಲೆಗಳ ಹಲವಡೆ ಮಳೆ ಶುಕ್ರವಾರವೂ ಮುಂದುವರಿದಿದೆ. ಮಳೆ ಸಂಬಂಧಿ ಅನಾಹುತಗಳಲ್ಲಿ ಗುಲ್ಬರ್ಗ ಜಿಲ್ಲೆಯಲ್ಲಿ ಇಬ್ಬರು ಸಾವಿಗೀಗಾಡಿದ್ದಾರೆ.ಗುಲ್ಬರ್ಗ ವರದಿ: ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದೆ.  ಆಳಂದ ತಾಲ್ಲೂಕಿನ ಲೇಂಗಟಿ ಗ್ರಾಮದಲ್ಲಿ ಸಿಡಿಲು ಬಡಿದು ಕೊಂಡಾಬಾಯಿ ಸುಭಾಷ ಚಿಲ್ಲಾಳ (53) ಮೃತಪಟ್ಟರೆ, ಕಾಳಗಿಯ ಚಿಂಚೋಳಿ ಎಚ್. ತಾಂಡಾದಲ್ಲಿ ಅರಣಕಲ್ ಸಿಂಗೇನಹಳ್ಳಿ ತಾಂಡಾದ ವೃದ್ಧ ಟೋಪು ಸೋಮಲಾ ಜಾಧವ (60) ಮಾರಾಮುರಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ.ಜಿಲ್ಲೆಯ ಹಲವೆಡೆ ನೂರಾರು ಮನೆಗಳು ಮುಳುಗಿವೆ. ಸಿಡಿಲು ಹಾಗೂ ಪ್ರವಾಹದಿಂದ 2 ಎತ್ತುಗಳು ಸತ್ತಿವೆ. ಜಿಲ್ಲೆಯ ಕಾಗಿಣ, ರೌದ್ರಾವತಿ, ಭೀಮಾ, ಅಮರ್ಜಾ, ಬೆಣ್ಣೆತೊರಾ ನದಿಗಳು ಸೇರಿದಂತೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಆಳಂದ, ಚಿತ್ತಾಪುರ, ಸೇಡಂ ತಾಲ್ಲೂಕು ಕೇಂದ್ರದಿಂದ ಗುಲ್ಬರ್ಗ ಸಂಪರ್ಕಿಸುವ ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿದು­ಕೊಂಡಿತ್ತು.  ಬೆಣ್ಣೆತೊರಾ ನದಿಯಲ್ಲಿ ಭಾರಿ ಪ್ರವಾಹ ಬಂದು ಮಲಕೂಡ ಹತ್ತಿರದ ಬ್ರಿಜ್ ಕಂ ಬ್ಯಾರೇಜು ಮುಳುಗಡೆಯಾಗಿದೆ. ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.ಕಾಳಗಿಯಲ್ಲಿ ರೌದ್ರಾವತಿ ನದಿ ಉಕ್ಕಿಹರಿದು ನೀಲಕಂಠ ಕಾಳೇಶ್ವರ ದೇವಾಲಯ ಪ್ರವೇಶಿಸಿದೆ. ಸೇಡಂ ತಾಲ್ಲೂಕಿನಲ್ಲಿ ಕಾಗಿಣಾ ನದಿ ಉಕ್ಕಿ ಹರಿದು ಮಳಖೇಡದ ಉತ್ತರಾದಿ ಮಠದ ಜಯತೀರ್ಥ ಬೃಂದಾವನ ಮುಳುಗಡೆಯಾಗಿದೆ. ಗುಲ್ಬರ್ಗ–ಕೊಡಂಗಲ್‌ ರಾಜ್ಯ ಹೆದ್ದರಿ 6 ಗಂಟೆ ಸ್ಥಗಿತಗೊಂಡಿತ್ತು.ಅಫಜಲಪುರ ತಾಲ್ಲೂಕಿನ  ಗಾಣಗಾಪುರದಲ್ಲಿ ಅಮರ್ಜಾ ಮತ್ತು ಭೀಮಾ ನದಿ ಸಂಗಮದಲ್ಲಿ ಉಕ್ಕಿ ಹರಿಯು­ತ್ತಿದೆ. ಜಿಲ್ಲೆಯಾದ್ಯಂತ  ತೊಗರಿ, ಸೊಯಾಬಿನ್, ಸೂರ್ಯ­ಕಾಂತಿ , ಉದ್ದು, ಜೋಳ, ಕಡಲೆ, ಕುಸುಬಿ, ಅಗಸಿ ಬೆಳೆ ನಷ್ಟವಾಗಿದೆ. 

ರಾಯಚೂರು ವರದಿ: ಜಿಲ್ಲೆಯಲ್ಲಿ ರಾಯಚೂರು ಹಾಗೂ ದೇವದುರ್ಗ ತಾಲ್ಲೂಕುಗಳನ್ನು ಹೊರತುಪಡಿಸಿದರೆ ಉಳಿದೆಡೆ ಮಳೆ ಆರ್ಭಟ ಕಡಿಮೆ ಆಗಿದೆ. ರಾಯಚೂರು ನಗರ ಮತ್ತು ತಾಲ್ಲೂಕಿನಲ್ಲಿ ಮಳೆ ಧಾರಾಕಾರ ಸುರಿದಿದೆ.ಒಡೆದ ಕೆರೆ: ಶುಕ್ರವಾರ ಬೆಳಿಗ್ಗೆ ತಾಲ್ಲೂಕಿನ ಪೋತಗಲ್‌ ಗ್ರಾಮದ ಕೆರೆ ಕಟ್ಟೆ ಒಡೆದು ನೀರು ಪೋಲಾಗಿ ಹರಿದಿದೆ.ರೈಲು ಹಳಿಗೆ ಹಾನಿ: ಚಂದ್ರಬಂಡಾ ಗ್ರಾಮದ ಹತ್ತಿರ ದಕ್ಷಿಣ ಮಧ್ಯ ರೈಲ್ವೆ ವಿಭಾಗವು ಗದ್ವಾಲ ರೈಲು ಮಾರ್ಗ ನಿರ್ಮಾಣದ ಭಾಗವಾಗಿ ಚಂದ್ರಬಂಡಾ ರೈಲು ನಿಲುಗಡೆ ತಾಣ ನಿರ್ಮಾಣ ಮಾಡಿದೆ. ಇದಿನ್ನೂ ಉದ್ಘಾಟನೆ ಆಗಿಲ್ಲ. ರೈಲು ಸಂಚಾರ ಈ ಮಾರ್ಗದಲ್ಲಿ ಆರಂಭಗೊಂಡಿಲ್ಲ. ಆದರೆ ಗುರುವಾರ ರಾತ್ರಿ ಸುರಿದ ಮಳೆಗೆ ರೈಲು ಹಳಿ ಪಕ್ಕ ಹಾಕಿದ ಉಬ್ಬು ಮಣ್ಣು ಕೊಚ್ಚಿ ಹೋಗಿದ್ದು, ಅಪಾಯದ ಮುನ್ಸೂಚನೆ ನೀಡಿದೆ.ಯಾದಗಿರಿ ವರದಿ: ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಶುಕ್ರವಾರ ಸ್ವಲ್ಪ ಕಡಿಮೆಯಾಗಿದೆ. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ, ಹಳ್ಳಗಳು ತುಂಬಿ ಹರಿಯುತ್ತಿವೆ. ಗುರುವಾರ ರಾತ್ರಿಯೂ ಮಳೆ ಸುರಿದಿದ್ದು, ಕೆಂಭಾವಿ ವಲಯದಲ್ಲಿ ಮತ್ತೆ 15 ಮನೆಗಳಿಗೆ ಹಾನಿಯಾಗಿದೆ.ಯಾದಗಿರಿ ತಾಲ್ಲೂಕಿನಲ್ಲಿ ಮಳೆ ಮುಂದುವರಿದಿದ್ದು, ತಾಲ್ಲೂಕಿನ ಹತ್ತಿಕುಣಿ ಜಲಾಶಯ ಭರ್ತಿಯಾಗಿದೆ. ಕೆರೆಗೆ ಅಡ್ಡಲಾಗಿ ನಿರ್ಮಿಸಿರುವ ಈ ಜಲಾಶಯದಿಂದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನೀರು ಹೊರಗೆ ಬಿಡಲಾಗುತ್ತಿದೆ. ಹತ್ತಿಕುಣಿ ಜಲಾಶಯದ ಕೆಳಭಾಗದಲ್ಲಿರುವ ತಾಲ್ಲೂಕಿನ ಚಾಮನಳ್ಳಿ ಬಳಿ ಹಳ್ಳ ತುಂಬಿ ಹರಿದಿದ್ದು, ಸೇತುವೆ ಮೇಲೆ ನೀರು ಹರಿದಿದ್ದರಿಂದ ಸಂಚಾರ ಸ್ಥಗಿತಗೊಂಡಿತ್ತು.ಭೀಮಾ ನದಿಯಲ್ಲೂ ನೀರಿನ ಪ್ರಮಾಣ ಹೆಚ್ಚಾಗಿದ್ದು, ದಡದಲ್ಲಿರುವ ಗದ್ದೆಗಳಿಗೆ ನೀರು ನುಗ್ಗಿದೆ. ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿ ಆಗಿಲ್ಲ.ಮಂಗಳೂರು ವರದಿ: ಕಳೆದ ಎರಡು ವಾರಗಳಿಂದ ಕರಾವಳಿಯಲ್ಲಿ ಇಳಿಮುಖವಾಗಿದ್ದ ಮಳೆ ಶುಕ್ರವಾರ ಮತ್ತೆ ಅಬ್ಬರಿಸಿದೆ.

ನಗರದಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ರಾತ್ರಿವರೆಗೂ ಬಿಟ್ಟು ಬಿಟ್ಟು ಮಳೆಯಾಗಿದೆ. ದಿನವಿಡೀ ಮೋಡಕವಿದ ವಾತಾವರಣವಿತ್ತು. ಧಾರಾಕಾರ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳ ರಸ್ತೆಗಳು ಜಲಾವೃತ­ವಾಗಿದ್ದು, ವಾಹನ ಸವಾರರು ಪರದಾ­ಡಿದರು. ಕೆಲವೆಡೆ ಮನೆಗಳಿಗೂ ನೀರು ನುಗ್ಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ, ಬೆಳ್ತಂಗಡಿಗಳಲ್ಲೂ ಬಿರುಸಿನ ಮಳೆಯಾಗಿದೆ. ಪುತ್ತೂರು, ಸುಳ್ಯ ಹಾಗೂ ಬಂಟ್ವಾಳ ತಾಲ್ಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ.ಮಡಿಕೇರಿ ವರದಿ: ಕೊಡಗು ಜಿಲ್ಲೆಯಾದ್ಯಂತ ಶುಕ್ರವಾರ ಮಳೆ ಬಿರುಸುಗೊಂಡಿದೆ. ನಾಲ್ಕೈದು ದಿನಗಳಿಂದ ತುಂತುರಾಗಿ ಸುರಿಯುತ್ತಿದ್ದ ಮಳೆ ಕೊಂಚ ಬಿರುಸುಗೊಂಡಿದೆ.ಮಡಿಕೇರಿ, ನಾಪೋಕ್ಲು, ಸಂಪಾಜೆ, ಕೊಯಿನಾಡು, ಭಾಗಮಂಡಲ, ವಿರಾಜಪೇಟೆ, ಹುದಿಕೇರಿ, ಶ್ರೀಮಂಗಲ, ಪೊನ್ನಂಪೇಟೆ, ಅಮ್ಮತ್ತಿ, ಬಾಳಲೆ, ಸೋಮವಾರಪೇಟೆ, ಶಾಂತಳ್ಳಿ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.ಜಿಲ್ಲೆಯಲ್ಲಿ ಪುನಃ ಆರಂಭವಾದ ಮಳೆಯಿಂದಾಗಿ ಇತ್ತೀಚೆಗೆ ಕುಸಿತಗೊಂಡಿದ್ದ ಹೆದ್ದಾರಿಯ ದುರಸ್ತಿ ಕಾಮಗಾರಿಗಳು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ. .ಮಡಿಕೇರಿಯಲ್ಲಿ ಶುಕ್ರವಾರ ಮಾರುಕಟ್ಟೆ ದಿನವಾಗಿದ್ದರಿಂದ ದಿನವಿಡೀ ಸುರಿದ ಮಳೆಯಿಂದಾಗಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಪರದಾಡುವ ಸ್ಥಿತಿ ನಿಮಾರ್ಣವಾಗಿತ್ತು.ಶಿವಮೊಗ್ಗ ವರದಿ: ಜಿಲ್ಲೆಯ ಹಲವೆಡೆ ಧಾರಾಕಾರವಾಗಿ ವರ್ಷಧಾರೆ ಆಗುತ್ತಿದೆ. ಗುರುವಾರ ರಾತ್ರಿಯಿಂದಲೇ ಆರಂಭವಾದ ಮಳೆ ಶುಕ್ರವಾರ ಮಧ್ಯಾಹ್ನದವರೆಗೂ ಬಿಡದೆ ಸುರಿಯಿತು.ಜಿಲ್ಲೆಯಾದ್ಯಂತ ಶುಕ್ರವಾರ ಇಡೀ ದಿನ ಮೋಡ ಮುಸುಕಿದ ವಾತಾವ­ರಣವಿತ್ತು. ಸಾಗರ, ಭದ್ರಾವತಿ, ತೀರ್ಥಹಳ್ಳಿ ಮತ್ತು ಹೊಸನಗರ ತಾಲ್ಲೂಕುಗಳಲ್ಲಿ ಉತ್ತಮ ಮಳೆ ಆಗಿದೆ.ಭದ್ರಾ, ತುಂಗಾ ಮತ್ತು ಲಿಂಗನಮಕ್ಕಿ ಜಲಾಶಯಗಳ ಒಳಹರಿವು ತುಸು ಏರಿಕೆ ಕಂಡಿದೆ.ದಾವಣಗೆರೆಯ ಜಿಲ್ಲೆಯ ಕೆಲವು ಕಡೆ ಶುಕ್ರವಾರ ಬೆಳಗಿನ ಜಾವದಿಂದ ಮಧ್ಯಾಹ್ನದವರೆಗೆ ಸಾಧಾರಣ ಮಳೆಯಾಗಿದೆ.ಕಾರವಾರ ವರದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಚುರುಕುಗೊಂಡಿರುವ ಮಳೆ ಶುಕ್ರವಾರ ಜೋರಾಗಿ ಸುರಿಯಿತು. ಮಳೆಯಿಂದಾಗಿ ಶಿರಸಿ ತಾಲ್ಲೂಕಿನ ಕಲ್ಕುಣಿಯಲ್ಲಿ ಹಾಗೂ ಭಟ್ಕಳ  ತಾಲ್ಲೂಕಿನ ಶಿರಾಲಿಯಲ್ಲಿ ಒಂದೊಂದು ಮನೆ ಹಾನಿಯಾಗಿದೆಕರಾವಳಿಯ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರದಲ್ಲಿ ಮಳೆ ದಿನವಿಡೀ ಮಳೆಯಾಗಿದ್ದು, ಕುಮಟಾ ತಾಲ್ಲೂಕಿನ ಕತಗಾಲ ಗ್ರಾಮದಲ್ಲಿ 126 ಮಿ.ಮೀ. ಮಳೆ ದಾಖಲಾಗಿದೆ. ಜಿಲ್ಲೆಯ ಮುಂಡಗೋಡ, ಸಿದ್ದಾಪುರ ದಿನವಿಡೀ ಮಳೆ ಸುರಿದಿದೆ. ದಾಂಡೇಲಿ, ಹಳಿಯಾಳ, ಯಲ್ಲಾಪುರ, ಶಿರಸಿಯಲ್ಲಿ ತುಂತುರು ಮಳೆಯಾಗಿದೆ.ಉಳಿದಂತೆ ಬಾಗಲಕೋಟೆ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದು ಗದಗ, ಬೆಳಗಾವಿ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry