ಶುಕ್ರವಾರ, ಫೆಬ್ರವರಿ 26, 2021
28 °C

ಮಳೆ ಅಭಾವ: ಅಂತರ್ಜಲ ಇಳಿಕೆ

ಭೀಮಸೇನ ಚಳಗೇರಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆ ಅಭಾವ: ಅಂತರ್ಜಲ ಇಳಿಕೆ

ಕೊಪ್ಪಳ:  ಮುಂಗಾರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬಿತ್ತನೆಗೆ ತೀವ್ರ ಹಿನ್ನಡೆಯಾಗಿದೆ. ಆದರೆ, ಜಿಲ್ಲೆಯಲ್ಲಿ ಅಂತರ್ಜಲ ಮಟ್ಟದಲ್ಲಿಯೂ ಕುಸಿತ ಉಂಟಾಗಿರುವುದು ಭವಿಷ್ಯದ ದಿನಗಳ ಬಗ್ಗೆ ಆತಂಕ ಮೂಡಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದಾಗ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟದಲ್ಲಿ ಮತ್ತಷ್ಟು ಇಳಿಕೆ ಕಂಡು ಬಂದಿದೆ.ಅತಿಯಾದ ಬಳಕೆಯಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ ಎಂಬ ಕಾರಣಕ್ಕೆ ಕೊಳವೆ ಬಾವಿಗಳನ್ನು ಕೊರೆಯುವುದಕ್ಕೆ ಅವಕಾಶ ನೀಡಬಾರದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಶಿಫಾರಸು ಮಾಡಿದೆ. ಆದರೂ ಜಿಲ್ಲೆಯ ಕೆಲವೆಡೆ ಕೊಳವೆಬಾವಿಗಳನ್ನು ಕೊರೆಯಲಾಗುತ್ತಿದೆ.ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ನಿರ್ಮಿಸಿರುವ ಅಧ್ಯಯನ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಜಿಲ್ಲೆಯಲ್ಲಿ ಒಟ್ಟು 29 ಅಧ್ಯಯನ ಬಾವಿಗಳಿವೆ. 2011ರ ಜೂನ್‌ನಲ್ಲಿ ದಾಖಲಿಸಿದ ವಿವರಗಳ ಪ್ರಕಾರ 8 ಅಧ್ಯಯನ ಬಾವಿಗಳಲ್ಲಿ ಅಂತರ್ಜಲ ಮಟ್ಟದಲ್ಲಿ ಇಳಿಕೆ ಕಂಡು ಬಂದಿತ್ತು. ಆದರೆ, 2012ರ ಜೂನ್‌ನಲ್ಲಿ 22 ಅಧ್ಯಯನ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದು ಸಮಸ್ಯೆಯ ಗಂಭೀರತೆಯನ್ನು ತೋರುತ್ತದೆ ಎಂದು ಅಧಿಕಾರಿಗಳು ನುಡಿಯುತ್ತಾರೆ.2011ರಲ್ಲಿ ಅಂತರ್ಜಲ ಮಟ್ಟದಲ್ಲಿ ಗರಿಷ್ಠ ಇಳಿಕೆ 1.20 ಮೀ. ನಷ್ಟು ಕೊಪ್ಪಳ ತಾಲ್ಲೂಕಿನಲ್ಲಿ ದಾಖಲಾಗಿತ್ತು. ಆದರೆ, ಈ ವರ್ಷ ಯಲಬುರ್ಗಾ ತಾಲ್ಲೂಕಿನ ಬಂಡಿ ಗ್ರಾಮದಲ್ಲಿರುವ ಅಧ್ಯಯನ ಬಾವಿಯಲ್ಲಿ 1.80 ಮೀ.ನಷ್ಟು ಇಳಿಕೆ ದಾಖಲಾಗಿದೆ.2011ರಲ್ಲಿ ಗಂಗಾವತಿ ತಾಲ್ಲೂಕಿನ ಕನಕಗಿರಿಯಲ್ಲಿರುವ ಅಧ್ಯಯನ ತೋಡು ಬಾವಿಯಲ್ಲಿ 5.30 ಮೀ. ನಷ್ಟು ಆಳದಲ್ಲಿ ನೀರು ಸಿಗುತ್ತಿತ್ತು. ಆದರೆ, ಈ ವರ್ಷ ಇದೇ ಬಾವಿಯಲ್ಲಿ ನೀರಿನ ಮಟ್ಟ 6.60 ಮೀ.ಗೆ ಕುಸಿದಿದೆ ಎಂದು ಇಲಾಖೆಯ ವರದಿಗಳು ಸ್ಪಷ್ಟಪಡಿಸುತ್ತವೆ.ಇದೇ ತಾಲ್ಲೂಕಿನ ಕನಕಾಪುರದಲ್ಲಿನ ಅಧ್ಯಯನ ಕೊಳವೆ ಬಾವಿಯಲ್ಲಿ 2011ರ ಜೂನ್‌ನಲ್ಲಿ ಸ್ಥಿರ ಜಲಮಟ್ಟ 10.20 ಮೀ. ನಷ್ಟಿದ್ದರೆ, ಈ ವರ್ಷ ಸದರಿ ಕೊಳವೆ ಬಾವಿಯಲ್ಲಿನ ಸ್ಥಿತ ಜಲ ಮಟ್ಟ 17.65 ಮೀ.ಗೆ ಇಳಿದಿರುವುದು ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವುದು ಕಂಡು ಬರುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.