ಮಳೆ ಅಭಾವ: ಒಣ ಮಣ್ಣಿನಲ್ಲಿ ಬಿತ್ತನೆ

ಭಾನುವಾರ, ಜೂಲೈ 21, 2019
26 °C

ಮಳೆ ಅಭಾವ: ಒಣ ಮಣ್ಣಿನಲ್ಲಿ ಬಿತ್ತನೆ

Published:
Updated:

ಚಿಂಚೋಳಿ: ತಾಲ್ಲೂಕಿನಲ್ಲಿ ವರುಣ ದೇವನ ಕಣ್ಣಾಮುಚ್ಚಾಲಾಟ ಮುಂಗಾರು ಬಿತ್ತನೆಗೆ ಹಿನ್ನಡೆ ಉಂಟು ಮಾಡಿದೆ.ಮಳೆಯ ಅಭಾವದಿಂದ ಭೂಮಿ ಪೂರ್ಣಪ್ರಮಾಣದಲ್ಲಿ ಹಸಿಯಾಗದ ಕಾರಣ ಅನ್ನದಾತರು, ಒಲ್ಲದ ಮನಸ್ಸಿನಿಂದಲೇ ಒಣ ಮಣ್ಣಿನಲ್ಲಿ ಮುಂಗಾರು ಬಿತ್ತನೆ ನಡೆಸುತ್ತಿದ್ದಾರೆ.ಮಳೆ ಮುಂದಕ್ಕೆ ಹೋದಷ್ಟು ಅಲ್ಪಾವಧಿ ಬೆಳೆಗಳ ಬಿತ್ತನೆ ಅವಧಿ ಮುಗಿಯುತ್ತದೆ. ಹೀಗಾಗಿ ರೈತರು ಅರೆಬರೆ ಹಸಿಯಲ್ಲಿಯೇ ಮುಂಗಾರಿನ ಉದ್ದು, ಹೆಸರು, ಬಿತ್ತನೆ ಮುಂದುವರೆಸಿದ್ದಾರೆ.ಜೂನ್ 8ರಿಂದ ಆರಂಭವಾದ ಮಿರ್ಗಾ ಮಳೆ ತಾಲ್ಲೂಕಿನ ಸುಲೇಪೇಟ ಹಾಗೂ ಕೋಡ್ಲಿ ಸುತ್ತಮುತ್ತ ಒಮ್ಮೆ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಸುರಿದಿತ್ತು. ಆ ಭಾಗದ ರೈತರಲ್ಲಿ ನಿರೀಕ್ಷೆ ಹುಟ್ಟಿಸಿತ್ತು. ಆದರೆ ನಂತರ ತಾಲ್ಲೂಕಿನಾದ್ಯಂತ ಮೃಗಶಿರಾ ಕೇವಲ ಕಣ್ಣಾಮುಚ್ಚಾಲೆ ಆಡುತ್ತಿದೆ. ತಾಲ್ಲೂಕಿನ ಸುಲೇಪೇಟ, ಕೋಡ್ಲಿ, ಐನಾಪೂರ, ಚಿಮ್ಮನಚೋಡ ಹಾಗೂ ಕೊಂಚಾವರಂ ಸುತ್ತಮುತ್ತ ಬಿತ್ತನೆಯ ಭರಾಟೆಯಲ್ಲಿ ರೈತರು ನಿರತರಾಗಿದ್ದಾರೆ.ಫಲವತ್ತಾದ ಹಾಗೂ ಹೊಡ್ಡಿನ ಪ್ರದೇಶದಲ್ಲಿರುವ ಜಮೀನುಗಳಿಗೆ ಸಧ್ಯ ಸುರಿದ ಮಳೆ ಸಾಕಾಗದ ಹಿನ್ನೆಲೆಯಲ್ಲಿ ರೈತರು, ಬಿತ್ತನೆ ನಡೆಸುತ್ತಿಲ್ಲ. ಆದರೆ ಮಳೆ ಸುರಿಯುವ ನಿರೀಕ್ಷೆ ಹೊತ್ತು ಬೀಜ ಗೊಬ್ಬರ ದಾಸ್ತಾನು ಮಾಡಿಕೊಂಡು ವರುಣನನ್ನು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.ಆಕಾಶದಲ್ಲಿ ಮೋಡ ಕವಿದ ವಾತಾವರಣ ಕಂಡು ಬಂದರೆ, ರಭಸವಾಗಿ ಬೀಸುತ್ತಿರುವ ಗಾಳಿ ಕೃಷಿ ಕಾರ್ಮಿಕರನ್ನು ದಣಿಯುವಂತೆ ಮಾಡುತ್ತಿದೆ. ಜತೆಗೆ ಗಾಳಿಯಿಂದ ಭೂಮಿಯ ತೇವಾಂಶ ಕಡಿಮೆಯಾಗಿ ಮೊಳಕೆಯೊಡೆದ ಪೈರು ಬಾಡಿದರೂ ಅಚ್ಚರಿಯಿಲ್ಲ.ರಾಜ್ಯದಲ್ಲಿ ಪ್ರಸಕ್ತ ವರ್ಷ ಮುಂಗಾರು ಉತ್ತಮವಾಗಿದೆ ಎಂದು ಕೃಷಿ ವಿಜ್ಞಾನಿಗಳು ಹೇಳುತ್ತಿದ್ದರೂ ತಾಲ್ಲೂಕಿನಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿದಿಲ್ಲ.ಬಿತ್ತನೆಯ ಪ್ರಮುಖ ದಿನಗಳು ಉರುಳುವ ಮೊದಲು ಮಳೆ ಸುರಿದರೆ ಕೃಷಿಕರ ಮುಖದಲ್ಲಿ ಕಳೆ ಗೋಚರಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry