ಮಳೆ ಅಭಾವ; ರೂ. 26.10 ಕೋಟಿ ನಷ್ಟ

ಭಾನುವಾರ, ಮೇ 26, 2019
32 °C

ಮಳೆ ಅಭಾವ; ರೂ. 26.10 ಕೋಟಿ ನಷ್ಟ

Published:
Updated:

ಚಿತ್ರದುರ್ಗ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಬಿತ್ತನೆಯಾದ ಪ್ರದೇಶದಲ್ಲಿ ಮಳೆಯ ಅಭಾವದಿಂದ ರೂ. 26.10 ಕೋಟಿ ಬೆಳೆ ನಷ್ಟವಾಗಿದೆ ಎಂದು ಸಹಕಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆ. ಪುಟ್ಟಸ್ವಾಮಿ ತಿಳಿಸಿದರು.

ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಮೈದಾನದಲ್ಲಿ ಬುಧವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಇದುವರೆಗೆ ಜಿಲ್ಲೆಯ 22 ಹೋಬಳಿಗಳ ಪೈಕಿ 12 ಹೋಬಳಿಗಳಲ್ಲಿನ 2.17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಮಳೆ ಕೊರತೆಯಿಂದ 0.2 ಲಕ್ಷ ಹೆಕ್ಟೇರ್ ಬೆಳೆ ಹಾನಿಗೊಳಗಾಗಿದೆ. 1.41 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಳೆಯ ಅಭಾವದಿಂದ ಬಿತ್ತನೆ ಕಾರ್ಯ ಕೈಗೊಂಡಿಲ್ಲ. ಈಗಾಗಲೇ ಬಿತ್ತನೆ ಮಾಡಿರುವ ಪ್ರದೇಶದಲ್ಲಿನ ಬೆಳೆಗಳು ಸಹ ಮಳೆ ಅಭಾವದಿಂದ ಬಾಡುತ್ತಿವೆ ಎಂದು ವಿವರಿಸಿದರು.

2011-12ನೇ ಸಾಲಿನಲ್ಲಿ 600 ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ರೂ. 15 ಕೋಟಿ ವೆಚ್ಚ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಇಲ್ಲಿಯವರೆಗೆ 358 ಗ್ರಾಮಗಳ್ಲ್ಲಲಿ ಕುಡಿಯುವ ನೀರಿನ ಅಭಾವವಿದ್ದು, ರೂ. 10 ಕೋಟಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಜಾನುವಾರುಗಳ ಸಂರಕ್ಷಣೆಗಾಗಿ 15 ಗೋಶಾಲೆಗಳನ್ನು ಆರಂಭಿಸಿ, 13 ಸಾವಿರ ಜಾನುವಾರಗಳಿಗೆ ಮೇವು ಮತ್ತು ನೀರಿನ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸಕಾಲ ಯೋಜನೆ ಜಾರಿಯಾದ ನಂತರ ಜಿಲ್ಲೆಯಲ್ಲಿ 2.30 ಲಕ್ಷಕ್ಕಿಂತ ಹೆಚ್ಚು ಅರ್ಜಿಗಳು ಸ್ವೀಕೃತಗೊಂಡಿದ್ದು, 2.07 ಲಕ್ಷ ಅರ್ಜಿಗಳು ವಿಲೇವಾರಿಯಾಗಿವೆ. ಸಕಾಲ ಯೋಜನ್ನೆ ಅನುಷ್ಠಾನಗೊಳಿಸುವಲ್ಲಿ ಜಿಲ್ಲೆಯು ರಾಜ್ಯದಲ್ಲಿ 2ನೇ ಸ್ಥಾನ ಗಳಿಸಿರುವುದು ಸಂತಸದ ವಿಷಯ ಎಂದು ನುಡಿದರು.

ಕಳೆದ 65 ವರ್ಷಗಳಲ್ಲಿ ದೇಶ ಎಲ್ಲ ರಂಗಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಜಗತ್ತಿನ ವಿವಿಧ ದೇಶಗಳು ಸಹ ನಮ್ಮ ಪ್ರಗತಿಯನ್ನು ನೋಡುತ್ತಿವೆ. ಕರ್ನಾಟಕ ಸಹ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದರು.

ಪದಾಧಿಕಾರಿ ಆಯ್ಕೆ

ಜೆಡಿಎಸ್ ಜಿಲ್ಲಾ ಘಟಕದ ಸೇವಾ ದಳದ ನೂತನ ಅಧ್ಯಕ್ಷರಾಗಿ ಕೆ.ಬಿ. ಚೈತನ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಶಾಸಕ ಎಸ್.ಕೆ. ಬಸವರಾಜನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry