ಮಳೆ ಆಶ್ರಯದಲ್ಲಿ ಟೊಮೆಟೊ

7

ಮಳೆ ಆಶ್ರಯದಲ್ಲಿ ಟೊಮೆಟೊ

Published:
Updated:

ಕನಕಪುರ ತಾಲೂಕಿನ ಸಾಧೇನಹಳ್ಳಿಯ ಸಣ್ಣ ರೈತರಾದ ಬಸವಯ್ಯ ಅವರು ಮಳೆ ಆಶ್ರಯದಲ್ಲಿ ಟೊಮೆಟೊ ಬೆಳೆದು ಸುತ್ತ ಮುತ್ತಲಿನ ರೈತರ ಗಮನ ಸೆಳೆದಿದ್ದಾರೆ. ಅವರಿಗೆ ನೀರಾವರಿ ಸೌಲಭ್ಯ ಇಲ್ಲ. ಮಳೆ ಆಶ್ರಯದಲ್ಲಿ ರಾಗಿ ಬೆಳೆಯುತ್ತಿದ್ದ ಅವರು ದೈನಂದಿನ ಖರ್ಚುಗಳಿಗೆ ಹಣ ಗಳಿಸಲು ಕಳೆದ ಏಳು ವರ್ಷಗಳಿಂದ ಮಳೆ ಆಶ್ರಯದಲ್ಲಿ ಟೊಮೆಟೊ ಬೆಳೆಯುತ್ತಿದ್ದಾರೆ.ಟೊಮೆಟೊಗೆ ಅವರು ಮೀಸಲಿಟ್ಟಿರುವುದು ಹದಿನೈದು ಗುಂಟೆ ಭೂಮಿ. ಇನ್ನುಳಿದ ಮೂರು ಎಕರೆಯಲ್ಲಿ ರಾಗಿ, ತೊಗರಿ, ಮೆಣಸಿನಕಾಯಿ, ಅವರೆಕಾಳು ಮತ್ತು ಹುಚ್ಚೆಳ್ಳು ಬೆಳೆದುಕೊಳ್ಳುತ್ತಾರೆ. ಸ್ವಲ್ಪ ಭೂಮಿಯಲ್ಲಿ ಮೇವಿನ ಜೋಳ ಬೆಳೆಯುತ್ತಾರೆ. ಹೊಲದ ಬದುಗಳ ಮೇಲೆ ನಾಲ್ಕು ಹಲಸಿನ ಮರಗಳಿವೆ. ಅವುಗಳಿಂದಲೂ ಅವರಿಗೆ ಆದಾಯವಿದೆ.ಹೆಬ್ಬಾಳದಿಂದ ಕೃಷಿ ವಿಜ್ಞಾನ ಕೇಂದ್ರದಿಂದ ನಾಟಿ ತಳಿಯ (ಕ್ರಾಸ್ ಮಾಡಿದ) ಟೊಮೆಟೊ ಬಿತ್ತನೆ ಬೀಜ ತಂದು ಸಸಿಗಳನ್ನು ಬೆಳೆಸಿಕೊಂಡು ನಾಟಿ ಮಾಡಿದ್ದರು. ಗಿಡಗಳಲ್ಲಿ ಬಿಟ್ಟ ದಪ್ಪ ಗಾತ್ರದ ಹಣ್ಣುಗಳನ್ನು ಗಿಡಗಳಲ್ಲೇ ಉಳಿಸಿ ಅವುಗಳ ಬೀಜ ಸಂಗ್ರಹಿಸಿ ಮರು ವರ್ಷ ನಾಟಿ ಮಾಡಿದರು.ಈ ವರ್ಷ ಜುಲೈ ತಿಂಗಳಿನಲ್ಲಿ ಮಳೆಯ ಹದ ನೋಡಿಕೊಂಡು ಸಸಿಗಳನ್ನು ನಾಟಿ ಮಾಡಿದರು. ನಾಟಿಗೆ ಮೊದಲು ಕೊಟ್ಟಿಗೆ ಗೊಬ್ಬರ ಹಾಕಿದ್ದರು. ಎಂಟು ದಿನಗಳ ನಂತರ ಅರ್ಧ ಚೀಲದಷ್ಟು ಸುಫಲಾ ಗೊಬ್ಬರವನ್ನು ಗಿಡಗಳ ಬುಡಕ್ಕೆ ಹಾಕಿ ಮಣ್ಣು ಮುಚ್ಚಿದರು. ಇಪ್ಪತ್ತೈದು ದಿನಗಳ ನಂತರ ಇನ್ನರ್ಧ ಚೀಲ ಅದೇ ಗೊಬ್ಬರ ಹಾಕಿದರು. ನಂತರ ಗಿಡಗಳು ನೆಲಕ್ಕೆ ಬಾಗದಂತೆ ಗೂಟದ ಆಸರೆ ನೀಡಿದರು. ಗಿಡಗಳು ಚೆನ್ನಾಗಿ ಬೆಳೆದವು.ಉತ್ತರೆ ಮಳೆ ಕೈ ಕೊಟ್ಟಿದ್ದರಿಂದ ಗಿಡಗಳ ಬೆಳವಣಿಗೆ ಸ್ವಲ್ಪ ಕಡಿಮೆಯಾಯಿತು. ಕಳೆದ ವರ್ಷ ಮೂರು ಗುಂಟೆಯಲ್ಲೇ ಇನ್ನೂರೈವತ್ತು ಸಿಮೆಂಟ್ ಚೀಲಗಳಷ್ಟು ಟೊಮೆಟೊ ಬೆಳೆದಿದ್ದರು. ಒಂದು ಚೀಲದ ಹಣ್ಣಿಗೆ ನೂರು ರೂಪಾಯಿನಂತೆ ಮಾರಾಟ ಮಾಡಿದ್ದರು. ಖರ್ಚು ಕಳೆದು ಇಪ್ಪತ್ತು ಸಾವಿರ ರೂ ಲಾಭ ಗಳಿಸಿದ್ದರು. ಈ ವರ್ಷ ಇಳುವರಿ ಕಡಿಮೆ ಇದೆ. ಆದರೆ ಚೀಲಕ್ಕೆ ಇನ್ನೂರು ರೂಪಾಯಿ ಬೆಲೆ ಸಿಗುತ್ತಿರುವುದರಿಂದ ಉತ್ತಮ ಆದಾಯ ನಿರೀಕ್ಷಿಸಿದ್ದೇನೆ ಎನ್ನುತ್ತಾರೆ ಬಸವಯ್ಯ. ಮಳೆ ಹೆಚ್ಚಾದರೆ ಎಲೆ ಚುಕ್ಕಿ ಮತ್ತು ಬೆಂಕಿ ರೋಗ ಬರುವ ಸಾಧ್ಯತೆ ಇರುತ್ತದೆ. ಈ ವರ್ಷ ರೋಗಳ ಬಾಧೆ ಇಲ್ಲ ಎನ್ನುವ ಬಸವಯ್ಯ ಒಂದು ಸಲ ಔಷಧಿ ಸಿಂಪಡಿಸಿದ್ದಾರೆ. ತಿಪ್ಪೆ ಗೊಬ್ಬರ ಹಾಕಿದ್ದರಿಂದ ಮಳೆ ಬರದೆ ಇದ್ದರೂ ಗಿಡಗಳು ಬಾಡಲಿಲ್ಲ. ಒಟ್ಟಿನಲ್ಲಿ ಟೊಮೆಟೊ ಬೇಸಾಯ ಇತರ ರೈತರ ಗಮನ ಸೆಳೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry