ಸೋಮವಾರ, ಆಗಸ್ಟ್ 19, 2019
22 °C

ಮಳೆ ಇಳಿಮುಖ; ಪ್ರವಾಹ ಮುಂದುವರಿಕೆ

Published:
Updated:

 ಬೆಂಗಳೂರು: ರಾಜ್ಯದಲ್ಲಿ ಶನಿವಾರ ಮಳೆ ಇಳಿಮುಖವಾಗಿದೆ. ಆದರೆ ಜಲಾಶಯಗಳಿಂದ ಹೊರ ಹರಿವು ಹೆಚ್ಚಿರುವುದರಿಂದ ನದಿಗಳ ದಂಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿರುವುದರಿಂದ ಕೃಷ್ಣಾ ಮತ್ತು ಉಪನದಿಗಳಲ್ಲಿ ಪ್ರವಾಹ ಮಟ್ಟ ಸ್ವಲ್ಪ ಹೆಚ್ಚಿದೆ.ತುಂಗಾ ಮತ್ತು ಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಗೆ ಬಿಟ್ಟಿದ್ದರಿಂದ ತುಂಗಭದ್ರಾ ನದಿ ನೀರಿನ ಮಟ್ಟದಲ್ಲಿ ಶನಿವಾರ ಹೆಚ್ಚಳವಾಗಿದ್ದು, ಕೆಲ ಗ್ರಾಮಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.ಹಾವೇರಿ ತಾಲ್ಲೂಕಿನ ಗುಯಲಗುಂದಿ ಗ್ರಾಮ ನಡುಗಡ್ಡೆಯಂತಾಗಿದೆ. ಈ ಗ್ರಾಮದಲ್ಲಿ ಗಂಜಿ ಕೇಂದ್ರ ತೆರೆಯಲಾಗಿದ್ದು, 20ಕ್ಕೂ ಹೆಚ್ಚು ಕುಟುಂಬಗಳು ಗಂಜಿ ಕೇಂದ್ರದಲ್ಲಿ ವಾಸ್ತವ್ಯ ಮಾಡಿವೆ. ಇನ್ನೊಂದೆರಡು ಅಡಿ ನೀರು ಬಂದರೆ, ನದಿ ದಂಡೆಯಲ್ಲಿರುವ ರಾಣೆಬೆನ್ನೂರ ತಾಲ್ಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮಗಳು, ಹಾವೇರಿ ತಾಲ್ಲೂಕಿನ ಎಂಟು-ಹತ್ತು ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಲಿವೆ.ನಿರಾಶ್ರಿತ ಜನರಿಗಾಗಿ ಜಿಲ್ಲೆಯಲ್ಲಿ 6 ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಇನ್ನೂ 5 ಕಡೆಗಳಲ್ಲಿ ಗಂಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರವಾಹದಿಂದ ಹಾವೇರಿ ತಾಲ್ಲೂಕಿನ ಗುಯಲಗುಂದಿ, ಕಂಚಾರಗಟ್ಟಿ, ಗಳಗನಾಥ, ಹಾವಂಶ, ಶಾಖಾರ, ಹಾವನೂರು, ಹುರಳಿಹಾಳ, ಹರಳಹಳ್ಳಿ, ರಾಣೆಬೆನ್ನೂರ ತಾಲ್ಲೂಕಿನ ಚೌಡಯ್ಯದಾನಪುರ, ಹರನಗೇರಿ, ಚಿಕ್ಕಕುರವತ್ತಿ, ಹಳೇಚಂದಾಪುರ ಗ್ರಾಮಗಳು ರಸ್ತೆ ಸಂಪರ್ಕ ಕಡಿಗೊಂಡಿವೆ.ನದಿ ದಂಡೆಯಲ್ಲಿರುವ ರಾಣೆಬೆನ್ನೂರು ತಾಲ್ಲೂಕಿನ ಕೆಲ ಗ್ರಾಮಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥವಾಗಿದೆ. ನದಿ ಪಾತ್ರದ ಗ್ರಾಮಗಳಾದ ಚೌಡಯ್ಯದಾನಪುರ, ಚಂದಾಪುರ, ಚಿಕ್ಕಕುರುವತ್ತಿ, ಹರನಗಿರಿ ಮತ್ತು ಕುಮುದ್ವತಿ ನದಿಯ ಮಣಕೂರು ರಸ್ತೆ ಸಂಚಾರ ಸ್ಥಗಿತಗೊಂಡಿವೆ. ಕುಪ್ಪೇಲೂರು ಹಾಗೂ ಮುಷ್ಟೂರ ಗ್ರಾಮದಲ್ಲಿ ನೀರು ಗ್ರಾಮದೊಳಗೆ ನುಗ್ಗಿರುವುದರಿಂದ 15ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಶುಕ್ರವಾರ ರಾತ್ರಿಯಿಂದಲೇ ಎರಡು ಗ್ರಾಮಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ.ಸೇತುವೆ ಮತ್ತೆ ಜಲಾವೃತ: ಬಳ್ಳಾರಿ ಜಿಲ್ಲೆಯ ಕಂಪ್ಲಿ ಕೋಟೆ ಬಳಿಯ ಕಂಪ್ಲಿ-ಗಂಗಾವತಿ ಸೇತುವೆ ಮೇಲೆ ಶನಿವಾರ ಮಧ್ಯಾಹ್ನದಿಂದ ಮತ್ತೆ ಬಾರಿ ಪ್ರವಾಹ ಕಾಣಿಸಿಕೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.  ನದಿ ಪಕ್ಕದ 15ಮೀನುಗಾರರ ಕುಟುಂಬಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ. ಪ್ರವಾಹದಿಂದಾಗಿ ನದಿ ಅಕ್ಕಪಕ್ಕದ ಭತ್ತ, ಬಾಳೆ ಮತ್ತು ಕಬ್ಬಿನ ಗದ್ದೆಗಳು ಪುನಃ ಜಲಾವೃತವಾಗಿವೆ.ಕೃಷ್ಣಾ ಪ್ರವಾಹ ಏರಿಕೆ: ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಅಲ್ಲಿನ ಜಲಾಶಯಗಳಿಂದ ರಾಜ್ಯಕ್ಕೆ ಶನಿವಾರ ರಾಜ್ಯಕ್ಕೆ ಒಟ್ಟು 1.98 ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ  ಕಳೆದೆರೆಡು ದಿನಗಳಿಂದ ಚಿಕ್ಕೋಡಿ ತಾಲ್ಲೂಕಿನಲ್ಲಿ ಇಳಿಮುಖಗೊಂಡಿದ್ದ ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಟದಲ್ಲಿ ಮತ್ತೆ ಸ್ವಲ್ಪ ಏರಿಕೆ ದಾಖಲಾಗಿದೆ.ಶುಕ್ರವಾರವಷ್ಟೇ ಸಂಚಾರಕ್ಕೆ ತೆರೆದುಕೊಂಡಿದ್ದ ಯಕ್ಸಂಬಾ-ದಾನವಾಡ ನಡುವಿನ ಸೇತುವೆ ಮತ್ತೆ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ. ಚಿಕ್ಕೋಡಿ ತಾಲ್ಲೂಕಿನಲ್ಲಿ ವೇದಗಂಗಾ ನದಿಯಜತ್ರಾಟ-ಭೀವಶಿ, ಅಕ್ಕೋಳ-ಸಿದ್ನಾಳ, ಭೋಜವಾಡಿ-ಕುನ್ನೂರ, ದೂಧಗಂಗಾ ನದಿಯ ಸದಲಗಾ-ಬೋರಗಾಂವ, ಕಾರದಗಾ-ಭೋಜ, ಮಲಿಕವಾಡ-ದತ್ತವಾಡ ಹಾಗೂ ಕೃಷ್ಣಾ ನದಿಯ ಕಲ್ಲೋಳ-ಯಡೂರ ಗ್ರಾಮಗಳ ಮಧ್ಯೆ ಇರುವ ಕೆಳಮಟ್ಟದ ಸೇತುವೆಗಳು ಇನ್ನೂ ಜಲಾವೃತವಾಗಿಯೇ ಇವೆ.ಉ.ಕ. ಜಿಲ್ಲೆಯಾದ್ಯಂತ ಮಳೆ ಶನಿವಾರ ಕ್ಷೀಣಿಸಿತ್ತು. ಆದರೆ, ಕುಮಟಾದಲ್ಲಿನ ಅಘನಾಶಿನಿ ನದಿಯಲ್ಲಿ ಪ್ರವಾಹ ಮುಂದುವರಿದಿದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಕದ್ರಾ ಹಾಗೂ ಕೊಡಸಳ್ಳಿ ಜಲಾಶಯಗಳಿಗೆ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ಶನಿವಾರ ಬೆಳಿಗ್ಗೆಯಿಂದ ಕ್ರೆಸ್ಟ್‌ಗೇಟ್ ಮೂಲಕ ನೀರು ಹೊರಬಿಡಲಾಗಿದೆ.ಜಿಟಿಜಿಟಿ ಮಳೆ: ಉತ್ತರ ಕರ್ನಾಟಕ ಭಾಗದ ಧಾರವಾಡ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶನಿವಾರ ಜಿಟಿಜಿಟಿ ಮಳೆಯಾಗಿದೆ. ಆದರೆ ಬೇರೆ ಜಿಲ್ಲೆಗಳಲ್ಲಿ ಮಳೆಯಾಗಿಲ್ಲ.ಭದ್ರಾವತಿಯಲ್ಲಿ ಸೇತುವೆ ಮುಳುಗಡೆ: ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಶನಿವಾರವೂ ಮುಂದುವರಿದಿದೆ.  ನದಿ ಉಕ್ಕಿ ಹರಿಯುತ್ತಿದ್ದು, ಭದ್ರಾವತಿ ನಗರ ಹಾಗೂ ತಾಲ್ಲೂಕಿನ ವಿವಿಧೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಅನೇಕ ಮನೆಗಳಿಗೆ ಹಾನಿಯಾಗಿದೆ. ಭದ್ರಾವತಿ ನಗರದ ಹೊಸ ಸೇತುವೆ ಮುಳುಗಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.ಸಾಗರದಲ್ಲಿ ವರದಾ ನದಿ ಪ್ರವಾಹ ಮುಂದವರಿದಿದ್ದು, ಬೀಸನಗದ್ದೆ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಸಾವಿರಾರು ಜಮೀನಿನ ಮೇಲೆ ನಿಂತಿರುವ ನೀರು ಇನ್ನೂ ಸರಿದಿಲ್ಲ. ಇದರಿಂದ ಬತ್ತದ ಬೆಳೆ ಸಂಪೂರ್ಣ ನಾಶವಾಗುವ ಆತಂಕ ಎದುರಾಗಿದೆ.ತೀರ್ಥಹಳ್ಳಿ, ಶಿಕಾರಿಪುರ, ಸೊರಬ, ಹೊಸನಗರಗಳಲ್ಲೂ ಮಳೆ ಅಬ್ಬರ ಮುಂದುವರಿದಿದೆ. ಲಿಂಗನಮಕ್ಕಿ ಜಲಾಶಯದ ಒಳಹರಿವು 65,478 ಕ್ಯೂಸೆಕ್ ಇದ್ದು, ಅಣೆಕಟ್ಟೆಯ 11 ಗೇಟ್‌ಗಳನ್ನು ತೆರೆದು 52,668 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ ಶರಾವತಿ ನದಿ ಉಕ್ಕಿ ಹರಿದು ನದಿದಂಡೆಯ ಜನತೆಯಲ್ಲಿ ಆತಂಕ ಉಂಟುಮಾಡಿದೆ.ಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ತುಂಗಭದ್ರಾ ನದಿಗೆ ನೀರು ಹರಿದು ಬರುತ್ತಿದ್ದು, ಜಿಲ್ಲೆಯ ಹರಿಹರ, ಹೊನ್ನಾಳಿ ಹಾಗೂ ಹರಪನಹಳ್ಳಿ ತಾಲ್ಲೂಕುಗಳ ಕೆಲವು ಗ್ರಾಮಗಳಲ್ಲಿ ಶನಿವಾರವೂ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ.ಗಂಜಿ ಕೇಂದ್ರ: ಹೊನ್ನಾಳಿಯಲ್ಲಿ ನದಿ ಉಕ್ಕಿ ಹರಿಯುತ್ತಿರುವ ಕಾರಣ ಗಂಜಿ ಕೇಂದ್ರದಲ್ಲಿ 11 ಕುಟುಂಬಗಳ 65 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ.

ಬಂಬೂಬಜಾರ್ ಪ್ರದೇಶದಲ್ಲಿ ಪ್ರವಾಹ ಇನ್ನೂ ಇಳಿಮುಖವಾಗಿಲ್ಲ. ಹರಪನಹಳ್ಳಿ ತಾಲ್ಲೂಕಿನ ನಾಲ್ಕು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.ಹಲುವಾಗಲು- ಗರ್ಭಗುಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.

ನಂದ್ಯಾಲ-ನಿಟ್ಟೂರು ರಸ್ತೆ ಮಾರ್ಗವೂ ಸಂಪೂರ್ಣ ನೀರಿನಿಂದ ಆವೃತಗೊಂಡಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಹರಪನಹಳ್ಳಿ ತಾಲ್ಲೂಕಿನ ಗರ್ಭಗುಡಿ, ನಂದ್ಯಾಲ, ನಿಟ್ಟೂರು, ಹಲುವಾಗಲು ಗ್ರಾಮದ 300 ಎಕರೆ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳ, ಭತ್ತದ ಗದ್ದೆಗೆ ನೀರು ನುಗ್ಗಿದೆ.ನಿಟ್ಟುಸಿರು ಬಿಟ್ಟ ಜನ: ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕು, ಕೊಡಗು ಜಿಲ್ಲೆಯ ದಕ್ಷಿಣ ಭಾಗದಲ್ಲಿ ಶನಿವಾರ ಮಳೆ ಅಬ್ಬರ ತಗ್ಗಿದೆ. ಆದರೆ, ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಮಳೆ ಯಥಾಸ್ಥಿತಿಯಲ್ಲಿ ಮುಂದುವರಿದಿದ್ದು, ಜನಜೀವನ, ರಸ್ತೆ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ಎರಡು ದಿನಗಳಿಂದ ಮಳೆಯ ರುದ್ರ ತಾಂಡವ ನೋಡಿದ ಅರಸೀಕೆರೆ ತಾಲ್ಲೂಕಿನ ಜನ ಇನ್ನೂ ಅದರಿಂದ ಹೊರಬಂದಿಲ್ಲ.

  ಹೆಗ್ಗದ್ದೆಯಿಂದ ಆಲವಳ್ಳಿ- ಕಡಗರವಳ್ಳಿಗೆ ಮಾರ್ಗದ ರಸ್ತೆ ಮಳೆ ರಭಸಕ್ಕೆ ಕೊಚ್ಚಿಹೋಗಿದೆ. ಈಶ್ವರಹಳ್ಳಿ- ಮೆಣಸವಳ್ಳಿ ಮಧ್ಯದ ಸೇತುವೆ ಕುಸಿದುಬಿದ್ದಿದ್ದು, ಈ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ.ಹೇಮಾವತಿ ನದಿ ಪ್ರವಾಹದಲ್ಲಿ ತುಸು ಇಳಿಮುಖ ಕಂಡಿದೆ. ಆದರೂ, ಸಕಲೇಶಪುರದದ ಆಜಾದ್ ರಸ್ತೆ, ಹೊಳೆಮಲ್ಲೇಶ್ವರ ದೇವಸ್ಥಾನ, ಮಾಚಿದೇವರ ಗುಡಿ ಇನ್ನೂ ಜಲಾವೃತವಾಗಿವೆ.ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ಮಳೆ ತುಸು ಶಾಂತವಾಗಿದೆ. ನುಗು ಮತ್ತು ತಾರಕ ಜಲಾಶಯಗಳು ಭರ್ತಿಯಾಗಿವೆ.ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ, ಕೊಡ್ಲಿಪೇಟೆ, ಶಾಂತಳ್ಳಿ ಭಾಗಗಳಲ್ಲಿ ಮಳೆ ಮುಂದುವರಿದಿದ್ದು, ನಾಪೋಕ್ಲು, ಭಾಗಮಂಡಲ, ಸಿದ್ದಾಪುರ, ಗೋಣಿಕೊಪ್ಪಲು, ಶ್ರೀಮಂಗಲ ಭಾಗಗಳಲ್ಲಿ ಕೊಂಚ ಇಳಿಮುಖವಾಗಿದೆ. ಕುಶಾಲನಗರ ಭಾಗದಲ್ಲಿ ಕಾವೇರಿ ನದಿ ಅಪಾಯದಮಟ್ಟ ಮೀರಿ ಹರಿಯುತ್ತಿದೆ. ಕೊಲ್ಲಿ ಪ್ರದೇಶಗಳಲ್ಲಿ ಹೊಲ-ಗದ್ದೆಗಳು ನಾಶವಾಗಿವೆ.ಜನರ ರಕ್ಷಣೆಗೆ ಸಿದ್ಧತೆ: ಕೆಆರ್‌ಎಸ್ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಬಿಟ್ಟಿದ್ದರಿಂದ ಜಲಾವೃತಗೊಂಡಿದ್ದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ 4 ಗ್ರಾಮಗಳ ಸ್ಥಿತಿ ಹಾಗೇ ಇದೆ.ನದಿದಡದ ಗ್ರಾಮಗಳ ಜನರ ಸ್ಥಳಾಂತರಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದು, ಗಂಜಿ ಕೇಂದ್ರ ತೆರೆಯಲು ತಾಲ್ಲೂಕು ಆಡಳಿತ ಸಿದ್ಧತೆ ನಡೆಸಿದೆ.

ಇನ್ನೊಂದೆಡೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಜಲಾಶಯದಿಂದ ಶನಿವಾರ ಸಂಜೆ 1.04 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.

Post Comments (+)