ಮಳೆ-ಇಳೆಯ ಸಾಂಗತ್ಯದ ಸಂಗೀತ ರಸಧಾರೆ

7

ಮಳೆ-ಇಳೆಯ ಸಾಂಗತ್ಯದ ಸಂಗೀತ ರಸಧಾರೆ

Published:
Updated:

ಚಿತ್ರದುರ್ಗ: ಅಲ್ಲಿ ಸಂಗೀತದ ರಸಧಾರೆ ಹರಿದು ಬಂದಿತು. ಮೇಘರಾಜನಿಗೆ ಸಂಗೀತ ನಿನಾದ ಆಲಿಸುವ ಕಲಾವಿದರ ಹರ್ಷಚಿತ್ತ ಮೊಗದ ಗಾಯನಕ್ಕೆ ಪ್ರೇಕ್ಷಕರು ತಲೆದೂಗಿದರು.ಮಳೆ-ಇಳೆಯ ಅವಿನಾಭಾವ ಸಾಂಗತ್ಯದ ಸುಗಮ ಸಂಗೀತ ಕಾರ್ಯಕ್ರಮ `ಮೇಘ-ಮಲ್ಹಾರ~ ಮನತಣಿಸಿತು. ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದ ನಗರದ ತರಾಸು ರಂಗಮಂದಿರದಲ್ಲಿ ಮಳೆ, ಮೋಡಗಳ ಚಿತ್ತಾರ ಸಂಗೀತದಲ್ಲಿ ಮೂಡಿ ಬಂದಿತ್ತು.ಚಿತ್ರದುರ್ಗ ಆಕಾಶವಾಣಿ ಕೇಂದ್ರದ ವತಿಯಿಂದ ಭಾನುವಾರ ಸಂಜೆ ಆಯೋಜಿಸಿದ್ದ ಈ ಸಂಗೀತ ಕಾರ್ಯಕ್ರಮ ರಸದೌತಣ ಉಣಿಸಿತು. ಕಲಾವಿದರಾದ ಲಕ್ಷ್ಮೀ ನಟರಾಟ, ಮೇಘನಾ ವೆಂಕಟೇಶ್, ಗಣೇಶ್ ದೇಸಾಯಿ, ಇಂದು ನಾಗರಾಜ್ ಮಳೆರಾಯನ ಕುರಿತು ಪ್ರಸ್ತುತಪಡಿಸಿದ ಹಾಡುಗಳಿಗೆ ಪ್ರೇಕ್ಷಕರು ತಲೆದೂಗಿದರು.ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ, ಅಸಿಮ ರೂಪಿ ಅಂಬರದಲ್ಲಿ, ಬಾ ಮಳೆಯೇ ಬಾ ಅಷ್ಟು ಬಿರುಸಾಗಿ ಬಾರದಿರು, ಮುಂಗಾರಿನ ಅಭಿಷೇಕದಲಿ, ಇಳಿದು ಬಾ ತಾಯಿ.... ಮುಂತಾದ ಹಾಡುಗಳು ಸಂಗೀತ ಪ್ರೇಮಿಗಳನ್ನು ಭಾವಪರವಶವನ್ನಾಗಿ ಮಾಡಿದವು.ವಾದ್ಯಗಳನ್ನು ನುಡಿಸಿದ ಪುರುಷೋತ್ತಮ್, ಆರ್. ರಘುನಾಥ್, ಶಿವಲಿಂಗ್, ಆರ್. ಮೋಹನ್‌ಕುಮಾರ್ ಗಮನಸೆಳೆದರು. ಈ ಸಂಗೀತ ಕಾರ್ಯಕ್ರಮಕ್ಕೆ ಹಿರಿಯ ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಸಾಹಿತ್ಯ ಒದಗಿಸಿದ್ದರು. ಜಯಾಪ್ರಾಣೇಶ ಮತ್ತು ಆಕಾಶವಾಣಿಯ ಮಧುಸೂಧನ ನಿರೂಪಿಸಿದ ಈ ಕಾರ್ಯಕ್ರಮ ವಿಭಿನ್ನವಾಗಿ ಮೂಡಿ ಬಂತು. ಅಂತಿಮವಾಗಿ ಇಂದು ನಾಗರಾಜ್ ಅವರ `ಪ್ಯಾರ‌್ಗೆ ಆಗ್ಬಿಟ್ಟೈತೆ~ ಹಾಡಿಗೆ ಪ್ರೇಕ್ಷಕರು ಸಂಭ್ರಮಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿವಮೂರ್ತಿ ಮುರುಘಾ ಶರಣರು, ಇಂದು ನಿಸರ್ಗದ ಮೇಲೆ ದೌರ್ಜನ್ಯ ನಡೆದು ಸುಂದರ ವಾತಾವರಣವನ್ನು ಹಾಳು ಮಾಡುತ್ತಿದ್ದೇವೆ. ಪ್ರಕೃತಿಗೆ ಖುಷಿ, ಸಂತಸವಾದಾಗ ಆನಂದ ಬಾಷ್ಪಗಳು ಸುರಿಯುತ್ತವೆ. ಆದರೆ, ಇಂದು ನಿಸರ್ಗದ ಮಡಿಲಲ್ಲಿ ಯಾತನೆಯ ಕಣ್ಣೀರು ಬರುತ್ತಿದೆ. ಅದು ಸಂತೋಷದ ಕಣ್ಣೀರು ಅಲ್ಲ. ಪ್ರಕೃತಿ ಮಾತೆಯ ನೀರಿನ ಸೆಲೆ ಬತ್ತುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಮುಂದಿನ ಪೀಳಿಗೆ ಬದುಕು ಉದ್ಧಾರವಾಗಲು ನಿಸರ್ಗ ಪೋಷಿಸಿ, ಬೆಳೆಸಬೇಕು ಎಂದು ಕರೆ ನೀಡಿದರು.

ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಮಿಲನ್‌ಸರ್ ಅಹ್ಮದ್, ಎಂಜಿನಿಯರ್ ವಿಭಾಗದ ಉಪನಿರ್ದೇಶಕರು, ಎಸ್.ಪಿ. ಮೇತ್ರಿ ಉಪಸ್ಥಿತರಿದ್ದರು.  ಕಾರ್ಯಕ್ರಮ ನಿರ್ವಾಹಕಿ ಉಷಾಲತಾ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry