ಬುಧವಾರ, ಆಗಸ್ಟ್ 21, 2019
28 °C

ಮಳೆ ಕುಂಠಿತ; ಬಿತ್ತನೆ ಪ್ರಮಾಣ ಇಳಿಮುಖ

Published:
Updated:

ತುಮಕೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ಕುಂಠಿತಗೊಂಡಿದ್ದು, ಬಿತ್ತನೆ ಪ್ರಮಾಣ ಸಹ ಇಳಿಮುಖವಾಗಿದೆ. ಅಲ್ಲದೆ ರೈತರಿಗೆ ಬಿತ್ತನೆ ಮಾಡಿದ ಬೆಳೆ ಕೈಗೆ ಬರುವ ಸಾಧ್ಯತೆ ಇಲ್ಲವಾಗಿದ್ದು, ಇದರಿಂದ ರೈತ ಸಮುದಾಯ ಕಂಗಾಲಾಗಿದೆ.ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಸರಾಸರಿ ವಾಡಿಕೆ ಮಳೆ 59 ಮಿ.ಮೀ. ಆಗಬೇಕಾಗಿತ್ತು. ಆದರೆ ಇದುವರೆಗೆ ಕೇವಲ 33.8 ಮಿ.ಮೀ. ಮಳೆ ಆಗಿದೆ. ಕಳೆದ ವರ್ಷ ಇದೇ ತಿಂಗಳು 33.7 ಮಿ.ಮೀ. ಆಗಿತ್ತು. ಕಳೆದ ಜೂನ್‌ನಲ್ಲಿ 46 ಮೀ.ಮೀ. ವಾಡಿಕೆ ಮಳೆ ಬರಬೇಕಿದ್ದು, 55 ಮಿ.ಮೀ. ಆಗಿತ್ತು. ಇದರಿಂದ ಸ್ವಲ್ಪ ಪ್ರಮಾಣದ ಬಿತ್ತನೆಯಾಗಿತ್ತು. ಆದರೆ ಮತ್ತೆ ಮಳೆ ಬಾರದ ಕಾರಣ ಹಾಕಿದ ಬೆಳೆಗಳು ಒಣಗಿ ನಿಂತಿವೆ.ಜುಲೈ ತಿಂಗಳ ಅಂತ್ಯದವರೆಗೆ ಚಿಕ್ಕನಾಯಕನಹಳ್ಳಿಯಲ್ಲಿ 42.3 ಮಿ.ಮೀ, ಗುಬ್ಬಿ 39.5, ಕೊರಟಗೆರೆ 58.9, ಕುಣಿಗಲ್ 27.9, ಪಾವಗಡ 26, ತಿಪಟೂರು 20.5, ತುಮಕೂರು 63.4, ತುರುವೇಕರೆ 18.6 ಮಿ.ಮೀ. ಮಳೆಯಾಗಿದೆ. ಎಲ್ಲ ತಾಲ್ಲೂಕುಗಳಲ್ಲಿಯೂ ಸರಾಸರಿಗಿಂತ ಕಡಿಮೆ ಮಳೆಯಾಗಿದೆ.ಜಿಲ್ಲೆಯಲ್ಲಿ ಜೂನ್‌ನಲ್ಲಿ ಸರಾಸರಿ ಮಳೆ ಸಮರ್ಪಕವಾಗಿ ಆಗಿದ್ದರೂ, ಹದ ಮಳೆಯಾಗಿಲ್ಲ. ಅತಿ ಹೆಚ್ಚಾಗೆ ಶೇಂಗಾ ಬಿತ್ತನೆ ಮಾಡುವ ಶಿರಾ, ಪಾವಗಡ ತಾಲ್ಲೂಕಿನಲ್ಲಿ ಅರ್ಧದಷ್ಟು ಸಹ ಮಳೆಯಾಗಿಲ್ಲ. ಶಿರಾದಲ್ಲಿ 47 ಮಿ.ಮೀ.ಗೆ ಕೇವಲ 28.8 ಮತ್ತು ಪಾವಗಡದಲ್ಲಿ 46 ಮೀ.ಮೀ.ಗೆ 26 ಮೀ.ಮೀ ಮಳೆಯಾಗಿದೆ. ಇದರಿಂದ ಶೇಂಗಾ ಬಿತ್ತನೆ ಕುಂಠಿತಗೊಂಡಿದೆ. ಕಳೆದ 4 ವರ್ಷಗಳಿಂದ ಇಲ್ಲಿ ಶೇಂಗಾ ಬೆಳೆ ವಿಫಲವಾಗುತ್ತಿದ್ದು, ರೈತರು ಬೇರೆ ದಾರಿ ಕಾಣದಂತಾಗಿದ್ದಾರೆ. ಆಗಸ್ಟ್ ಮೊದಲ ವಾರದಲ್ಲಿ ಮಳೆ ಬಂದರೂ ರೈತರು ಶೇಂಗಾ ಬಿತ್ತನೆ ಮಾಡುತ್ತಾರೆ. ಆಗಸ್ಟ್ 15ರ ವರೆಗೆ ರಾಗಿ ಬಿತ್ತನೆಗೆ ಅವಕಾಶವಿದೆ. ಅದುವರೆಗೂ ಮಳೆ ಬಾರದಿದ್ದರೆ ಬದಲಿ ಬೆಳೆಗಳತ್ತ ರೈತರು ಚಿಂತಿಸಬೇಕಾಗುತ್ತದೆ.ತಿಪಟೂರು, ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಹೆಸರು, ಉದ್ದು, ಎಳ್ಳು, ಅಲಸಂದೆ, ಜೋಳ ಬಿತ್ತನೆ ಮಾಡಲಾಗಿದ್ದು, ಮಳೆ ಇಲ್ಲದೆ ಒಣಗುತ್ತಿವೆ. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 4.8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಾಗಿತ್ತು. ಆದರೆ ಇದುವರೆಗೆ ಕೇವಲ 51 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ಒಟ್ಟಾರೆ ಶೇ 11ರಷ್ಟು ಬಿತ್ತನೆ ಆದಂತಾಗಿದೆ.ರಾಗಿ 1.92 ಲಕ್ಷ ಹೆಕ್ಟೇರ್ ಮತ್ತು ಶೇಂಗಾ 1.42 ಲಕ್ಷ ಹೆಕ್ಟೇರ್ ಬಿತ್ತನೆಯಾಗಬೇಕು. ಇದರಲ್ಲಿ ಶೇಂಗಾ 20650 ಮತ್ತು ರಾಗಿ 1761 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜು. 15ರ ವರೆಗೆ ಏಕದಳ ಧಾನ್ಯ 6878 ಹೆಕ್ಟೇರ್, ಆಹಾರ ಕಾಳುಗಳು 4230, ಶೇಂಗಾ ಸೇರಿದಂತೆ ಎಣ್ಣೆ ಕಾಳುಗಳು 22477 ಹೆಕ್ಟೇರ್, ವಾಣಿಜ್ಯ ಬೆಳೆಗಳು 845 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿವೆ.ಜಿಲ್ಲೆಗೆ ಮುಂಗಾರಿನಲ್ಲಿ 79780 ಟನ್ ರಸಗೊಬ್ಬರದ ಅಗತ್ಯವಿದ್ದು, ಇದರಲ್ಲಿ 32138 ಕ್ವಿಂಟಲ್ ವಿತರಣೆ ಆಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ 42299 ಕ್ವಿಂಟಲ್ ಸಂಗ್ರಹವಿದೆ. ಈಗ ಖಾಸಗಿ ಮಾರಾಟಗಾರರು ಸೇರಿದಂತೆ ಒಟ್ಟು 28166 ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಆದರೆ ಮಳೆ ಬಾರದೆ ರೈತರು ಗೊಬ್ಬರ ಕೊಳ್ಳಲು ಮುಂದಾಗುತ್ತಿಲ್ಲ.

Post Comments (+)