ಬುಧವಾರ, ಏಪ್ರಿಲ್ 21, 2021
27 °C

ಮಳೆ ಕೊರತೆ- ಆತಂಕದಲ್ಲಿ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನಲ್ಲೆಡೆ ಸುರಿದ ಮಳೆಯ ಪ್ರಮಾಣದಲ್ಲಿ ಕೊರತೆಯಾಗಿದ್ದು, ಇದು ಕಬ್ಬು ಬೆಳೆದ ರೈತರಲ್ಲಿ ಆತಂಕ ಸೃಷ್ಠಿಸಿದೆ. ಇಲ್ಲಿಯವರೆಗೆ ಸುಮಾರು 170 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದ್ದು, ಕಳೆದ ಬಾರಿಗೆ ಹೊಲಿಸಿದರೆ ಮಳೆ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. ಅಲ್ಲದೇ ಅಂತರ್ಜಲ ಹೆಚ್ಚಳಕ್ಕೆ ಈ ಅತ್ಯಲ್ಪ ಮಳೆಯು ಕಾರಣವಾಗದಿರುವುದು ರೈತರರ ಗಾಬರಿ ಹೆಚ್ಚಿಸಿದೆ.ತಾಲ್ಲೂಕಿನಲ್ಲಿ ಸುಮಾರು ನಾಲ್ಕುವರೇ ಸಾವಿರದಷ್ಟು ಹೆಕ್ಟರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಮುಖ್ಯವಾಗಿ ಅಮರ್ಜಾ ಅಣೆಕಟ್ಟಿನ ಕೆಳಭಾಗದ ಕೋರಳ್ಳಿ, ಭೂಸನೂರು, ರಾಜೋಳ, ದೇವಂತಗಿ, ಗುಳ್ಳೋಳ್ಳಿ, ಸಂಗೋಳಗಿ(ಜಿ), ಹಿತ್ತಲ ಶಿರೂರು ಗ್ರಾಮಗಳ ವ್ಯಾಪ್ತಿಯಲ್ಲಿ ಒಟ್ಟು ಪ್ರಮಾಣದ ಅರ್ಧದಷ್ಟು ಕಬ್ಬು ಬೆಳೆಯುವ ರೈತರಿದ್ದಾರೆ. ಇವರು ಹೆಚ್ಚಾಗಿ ಕಬ್ಬು ಬೆಳೆಯನ್ನೇ ಅವಲಂಬಿತರಾಗಿದ್ದಾರೆ. ಹಳ್ಳ-ಕೊಳ್ಳ ತುಂಬಿ ಅಮರ್ಜಾ ನದಿಗೆ ಒಂದು ಬಾರಿಯು ನೀರು ಬಂದಿಲ್ಲ.ತಾಲ್ಲೂಕಿನ ಇತರ ಭಾಗದ ರೈತರು ಬಾವಿ ಮತ್ತು ಕೊಳವೆ ಬಾವಿಗಳನ್ನು ನಂಬಿಕೊಂಡು ಕಬ್ಬು ಬೆಳೆ ಬೆಳೆಯುವರು. ಕಳೆದ ಆರು ತಿಂಗಳಿಂದ ನೀರಿನ ಅಭಾವವು ಬೆಳೆಯ ಮೇಲೆ ಪರಿಣಾಮ ಬೀರಿದೆ. ಕಬ್ಬಿನ ಇಳುವರಿಗೆ ಬೇಕಾದ ರಸಾಯಿನಿಕ ಗೊಬ್ಬರ, ಕಳೆ ಮತ್ತಿತರ ಚಟುವಟಿಕೆಗಳು ಕಬ್ಬಿನ ಗದ್ದೆಗಳಲ್ಲಿ ಸಾಗುತ್ತಿದ್ದರೂ ರೈತರಿಗೆ ಮಾತ್ರ ಕಬ್ಬು ಕಹಿ ಅನುಭವ ನೀಡಿದಂತೆ ಭಾಸವಾಗುತ್ತಿದೆ.ಮಳೆಗಾಲ ಆರಂಭವಾಗಿ ಮೂರು ತಿಂಗಳು ಸಮೀಪಿಸಿದರು ಭೂಮಿ ಹದಗೊಳ್ಳುವಷ್ಟು ಮಳೆ ಬಂದಿಲ್ಲ. ಇನ್ನು ಕಬ್ಬಿಗೆ ಬೇಕಾದ ಹೆಚ್ಚಿನ ಪ್ರಮಾಣದ ನೀರುಣಿಸಲು ಬಾವಿಯಲ್ಲಿ ನೀರಿಲ್ಲ ಎಂದು ತೀರ್ಥ ಗ್ರಾಮದ ರೈತರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು. ಆರಂಭದಿಂದ ಮಳೆ ಪ್ರಮಾಣ ಕಡಿಮೆಯಾದ ಹಿನ್ನಲೆಯಲ್ಲಿ ಕಬ್ಬಿನ ಬೆಳೆವಣಿಗೆ ಮತ್ತು ಕವಲು ಪ್ರಮಾಣ ಕಡಿಮೆಯಾಗಿ ಈ ಬಾರಿ ಸುಮಾರು ಶೇ.30-40ರಷ್ಟು ಇಳುವರಿ ಕಡಿಮೆಯಾಗಲಿದೆ ಎಂದು ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿ ಶಶಾಂಕ ಶಹಾ ನುಡಿದರು.  ಭೂಸನೂರನ ಎನ್‌ಎಸ್‌ಎಲ್ ಕಾರ್ಖಾನೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯಲು ರೈತರಿಗೆ ಹಲವಾರು ಸೌಲಭ್ಯಗಳನ್ನು ಒದುಗಿಸಿರುವುದಲ್ಲದೆ, ಭಿನ್ನತಳಿಯ ಕಬ್ಬಿನ ಬೀಜ, ಗೊಬ್ಬರ, ಪ್ರತಿ ಎಕರೆಗೆ ಸಾಲದ ಸೌಲಭ್ಯ ನೀಡಿದ ಪರಿಣಾಮ ರೈತರಿಗೆ ಒಂದಿಷ್ಟು ಆಸರೆಯಾದರೂ ಸಹ ಈ ಬಾರಿ ವರುಣನ ಮುನಿಸು ಮಾತ್ರ ಕಬ್ಬು ಬೆಳೆಗಾರರಲ್ಲಿ ನಿರಾಸೆ ಮೂಡಿಸಿದೆ. ನೆರೆಯ ಮಹಾರಾಷ್ಟ್ರದ ಕಬ್ಬಿನ ಕಾರ್ಖಾನೆಗಳು ಸಹ ಈಗಾಗಲೇ ಕಬ್ಬು ಬೆಳೆಗಾರರ ಗದ್ದಗೆ ಸಮೀಕ್ಷೆ ಕೈಗೊಂಡು ಮುಂದೆ ತಮ್ಮ ಅನುಕೂಲ ದೃಷ್ಠಿಯಿಂದ ವಿವಿಧ ಸಹಾಯ ನೀಡಲು ಪೈಪೋಟಿಗೆ ಇಳಿದಿರುವುದರಿಂದ ಈಗಾಗಲೇ ಕಬ್ಬಿಗೆ ದೊರೆಯುವ ಬೆಲೆ ಹೆಚ್ಚಳವಾಗುವ ಮುನ್ಸೂಚನೆ ರೈತರಿಗೆ ಕಾಣುತ್ತಿದ್ದರು. ಇವರು ಅನಿವಾರ್ಯವಾಗಿ ಹೆಚ್ಚಿನ ಮಳೆಗಾಗಿ ಮುಗಿಲೇತ್ತರ ಮುಖ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.