ಮಳೆ ಕೊರತೆ: ಒಣಗುತ್ತಿದೆ ಬತ್ತದ ಬೆಳೆ

7

ಮಳೆ ಕೊರತೆ: ಒಣಗುತ್ತಿದೆ ಬತ್ತದ ಬೆಳೆ

Published:
Updated:

ಕುಶಾಲನಗರ: ಉತ್ತರ ಕೊಡಗಿನ ಹಳೇ ಮದಲಾಪುರ, ಸೀಗೆಹೊಸೂರು ಭಾಗದಲ್ಲಿ ಮಳೆ ನೀರಿನ ಆಶ್ರಯದಲ್ಲಿ ಬೆಳೆದಿರುವ ಬತ್ತದ ಗದ್ದೆಗಳು ಮಳೆ ಕೊರತೆಯಿಂದ ಒಣಗುತ್ತಿವೆ.ಸೋಮವಾರಪೇಟೆ ಭಾಗದಿಂದ ಹರಿದು ಬರುತ್ತಿದ್ದ ಕಕ್ಕೆಹೊಳೆ ಕಾಲುವೆಯಲ್ಲಿ ನೀರಿನ ಕೊರತೆ ಉಂಟಾಗಿ ಗದ್ದೆಗಳು ಬಿರುಕುಬಿಟ್ಟಿವೆ. ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕಕ್ಕೆಹೊಳೆ ಕಾಲುವೆಯಲ್ಲಿ ವೀಪರೀತ ಹೂಳು ತುಂಬಿದ್ದು, ಗಿಡಗಂಟಿ ಬೆಳೆದಿದೆ.ಇತ್ತೀಚಿನ ದಿನಗಳಲ್ಲಿ ಕಾಲುವೆಯ ನಿರ್ವಹಣೆಯಿಲ್ಲದೆ  ಕಾಲುವೆಯಲ್ಲಿ ನೀರು ಸಮರ್ಪಕವಾಗಿ ಹರಿದು ಬರುತ್ತಿಲ್ಲ ಎಂದು ರೈತ ಕೃಷ್ಣ ದೂರಿದ್ದಾರೆ. ಮಳೆ ನೀರಿನ ತೋಡು, ಜರಿಯಿಂದ ಕಾಡು ಪ್ರದೇಶದಲ್ಲಿ ಹರಿದು ಬರುತ್ತಿದ್ದ ನೀರು ಮಳೆ ಕೊರತೆಯಿಂದ ನೀರಿನ ಹರಿವು ಸ್ಥಗಿತಗೊಂಡಿದೆ. ಇದರಿಂದ ಈ ಭಾಗದಲ್ಲಿ 600 ಎಕೆರೆ ಪ್ರದೇಶದಲ್ಲಿ ಬೆಳೆದಿರುವ ಬತ್ತದ ಬೆಳೆ ಒಣಗುತ್ತಿದೆ ಎಂದು ಕೃಷಿಕ ಶಿವಣ್ಣ ಆತಂಕ ವ್ಯಕ್ತಪಡಿಸಿದರು.   ಈ ಕೃಷಿ ಪ್ರದೇಶ ಹಾರಂಗಿ ನೀರಾವರಿ ಕಾಲುವೆಗೆ ಹೊಂದಿಕೊಂಡಿದೆ. ಗದ್ದೆಯ ಬಲಭಾಗದಲ್ಲಿ ಹಾರಂಗಿ ನೀರು ಹರಿಯುತ್ತಿದ್ದರೂ ಮೇಲ್ಭಾಗದ ಈ ಜಮೀನಿಗೆ ನೀರಿನ ಲಭ್ಯತೆ ಇಲ್ಲವಾಗಿದೆ. ಈ ಭಾಗದಲ್ಲಿ ಬತ್ತದ ಬೆಳೆ ಒಣಗುತ್ತಿರುವುದನ್ನು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪರಿಹಾರ ಕಲ್ಪಿಸಬೇಕು ಎಂದು ರೈತರು ಭಾನುವಾರ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry