ಮಳೆ ಕೊರತೆ: ತೊಗರಿ ಬೆಳೆಗೆ ಕುತ್ತು!

7

ಮಳೆ ಕೊರತೆ: ತೊಗರಿ ಬೆಳೆಗೆ ಕುತ್ತು!

Published:
Updated:
ಮಳೆ ಕೊರತೆ: ತೊಗರಿ ಬೆಳೆಗೆ ಕುತ್ತು!

ಅಫಜಲಪುರ: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ 47,000 ಹೆಕ್ಟೇರ್ ಬೆಳೆ ಸೇರಿದಂತೆ, ಸುಮಾರು 80,500 ಹೆ. ಪ್ರದೇಶದ ಬೆಳೆ ಮಳೆ ಕೊರತೆಯಿಂದ ಬಾಡುತ್ತಿವೆ. ಸದ್ಯ ತೊಗರಿ ಮತ್ತು ಸೂರ್ಯಕಾಂತಿ ಹೂವಾಡುವ ಹಂತದಲ್ಲಿವೆ. ಆದರೆ ತೇವಾಂಶ ಕೊರತೆಯಿಂದ ಬೆಳವಣಿಗೆ ಕುಂಠಿತವಾಗಿದ್ದು, ಇಳುವರಿ ಪ್ರಮಾಣ ಕುಸಿಯಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.ತೊಗರಿ ಬಿತ್ತನೆ ಮಾಡಿ ಮೂರು ತಿಂಗಳು ಕಳೆದರೂ ಸಮರ್ಪಕವಾಗಿ ಮಳೆ ಆಗದೇ ಇರುವುದರಿಂದ ಮುಂಗಾರಿ ಹಂಗಾಮಿನಲ್ಲಿ ಬಿತ್ತಿರುವ ತೊಗರಿ, ಸೂರ್ಯಕಾಂತಿ ಇತರ ವಾಣಿಜ್ಯ ಬೆಳೆ ಬಾಡುತ್ತಿವೆ. ಹಿಂಗಾರು ಮಳೆ ಆರಂಭವಾಗಿ ಈಗಾಗಲೇ `ಉತ್ತರಿ ಮಳೆ~ ಮುಗಿದು ಹೋಗಿ `ಹಸ್ತಾ ಮಳೆ~ ಆರಂಭವಾಗಿದೆ. ಅಲ್ಲಲ್ಲಿ ಅಲ್ಪಸ್ವಲ್ಪ ಮಳೆ ಎರಡು ದಿನಗಳಿಂದ ಆಗುತ್ತಿದೆ. ಸಮಯಕ್ಕೆ ಸರಿಯಾಗಿ ಮಳೆಯಾಗದ ಕಾರಣ ಶೇ. 30ರಷ್ಟು ಇಳುವರಿ ಕಡಿಮೆಯಾಗಲಿದೆ.ತಾಲ್ಲೂಕಿನ ಕರಜಗಿ, ಅಫಜಲಪುರ, ಅತನೂರ ರೈತ ಸಂಪರ್ಕ ಕೇಂದ್ರಗಳಲ್ಲಿ ಒಂದು ಹನಿ ಕೂಡ ಮಳೆ ಬಾರದಿರುವುರಿಂದ ಬಿತ್ತನೆ ಮಾಡಿರುವ ತೊಗರಿ, ಸೂರ್ಯಕಾಂತಿ ಬೆಳೆಗಳು ಬಾಡುತ್ತಿವೆ. ಇನ್ನು ಒಂದು ವಾರ ಮಳೆ ಬರದಿದ್ದರೆ ಶೇ. 50ರಷ್ಟು ಇಳುವರಿ ಕಡಿಮೆಯಾಗಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಈಶ್ವರಪ್ಪ ಬಾಡಗಿ ಹಾಗೂ ತಾಂತ್ರಿಕ ಅಧಿಕಾರಿ ಸದಾರ್‌ರ ಬಾಷಾ ನದಾಫ್ ಸೋಮವಾರ `ಪ್ರಜಾವಾಣಿ~ಗೆ ತಿಳಿದರು.ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ಶೇ. 85ರಷ್ಟು ಬಿತ್ತನೆಯಾಗಿದೆ. ಹಿಂಗಾರು ಹಂಗಾಮಿನಲ್ಲಿ ಜೋಳ, ಕಡಲೆ ಬಿತ್ತನೆ ಆರಂಭಿಸಿದ್ದಾರೆ. ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಬಿತ್ತನೆ ಬೀಜ ನೀಡಲಾಗುತ್ತಿದೆ. ಭಾನುವಾರ ಸಂಜೆ ಅಫಜಲಪುರ ಮಳೆಮಾಪನ ಕೇಂದ್ರದಲ್ಲಿ 64.9 ಮಿ.ಮೀ ಮಳೆಯಾದ ದಾಖಲೆ ಸಂಗ್ರಹವಾಗಿದೆ. ಕರಜಗಿ ಮತ್ತು ಅತನೂರ ಮಳೆಮಾಪನ ಕೇಂದ್ರದಿಂದ ಮಳೆ ಬಿದ್ದ ಬಗ್ಗೆ ವರದಿ ಬಂದಿಲ್ಲ ಎಂದು ಅವರು ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry