ಗುರುವಾರ , ಮಾರ್ಚ್ 4, 2021
18 °C
ಬಾರದ ಮುಂಗಾರು:ಕೃಷಿ ಚಟುವಟಿಕೆಗಳಿಗೆ ತೊಂದರೆ

ಮಳೆ ಕೊರತೆ: ಬಿತ್ತನೆ ಅಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆ ಕೊರತೆ: ಬಿತ್ತನೆ ಅಪೂರ್ಣ

ಬಸವಕಲ್ಯಾಣ: ತಾಲ್ಲೂಕಿನಲ್ಲಿ ಕೆಲವೆಡೆ ಅಸಮರ್ಪಕವಾದ ಮಳೆಯಿಂದ ಒಣಹವೆ ಬೀಸುತ್ತಿರುವ ಕಾರಣ ಬಿತ್ತನೆ ಕಾರ್ಯ ಅಪೂರ್ಣವಾಗಿದೆ. ಮೃಗಶಿರಾ ನಕ್ಷತ್ರದ ಮಳೆ ಆರಂಭವಾದಾಗ ಮೊದಲ ವಾರದಲ್ಲಿ ಕೆಲವೆಡೆ ಮಳೆ ಸರಿಯಾದ ಪ್ರಮಾಣದಲ್ಲಿ ಸುರಿಯಿತು. ಒಂದೆರಡು ಸಲದ ವರ್ಷಾಧಾರೆಗೆ ಹೊಲದಲ್ಲಿ ನೀರು ನಿಂತು ಬಿತ್ತನೆಗೆ ಬೇಕಾಗುವಷ್ಟು ಹೊಲ ಹಸಿಯಾಯಿತು.ಈ ಕಾರಣ ತಾಲ್ಲೂಕಿನ ಶೇ 30 ರಷ್ಟು ಭಾಗದಲ್ಲಿ ಬಿತ್ತನೆ ನಡೆದು ಮೊಳಕೆಗಳು ನಳನಳಿಸುತ್ತಿವೆ. ಬಸವಕಲ್ಯಾಣ, ನಾರಾಯಣಪುರ, ಗೋರಟಾ(ಬಿ), ಮುಚಳಂಬ, ಹುಲಸೂರ, ಶಿವಪುರ, ಪ್ರತಾಪುರ, ಧನ್ನೂರ್ ಮುಂತಾದೆಡೆ ಸಮರ್ಪಕ ಮಳೆಯಾಗಿದ್ದರಿಂದ ಬಿತ್ತನೆ ನಡೆದಿದೆ. ಸೋಯಾ ಅವರೆ, ಹೆಸರು, ಉದ್ದು ಬಿತ್ತಲಾಗಿದೆ.ಇನ್ನುಳಿದೆಡೆ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ರೈತರು ಬಿತ್ತನೆ ಕೈಗೊಳ್ಳಲಿಲ್ಲ. ರಾಜೇಶ್ವರ, ಕೊಹಿನೂರ, ಮುಡಬಿ ಹೋಬಳಿಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಳೆ ಬಂದಿದ್ದರಿಂದ ಮಳೆಯ ಮೇಲೆ ಭರವಸೆ ಇಟ್ಟು ಅಲ್ಲಲ್ಲಿ ಕೆಲವರು ಮಾತ್ರ ಬಿತ್ತನೆ ನಡೆಸಿದ್ದಾರೆ.ತಾಲ್ಲೂಕಿನಲ್ಲಿ ಜೂನ್ ತಿಂಗಳಲ್ಲಿ ಸರಾಸರಿ 87 ಮಿ.ಮೀ. ಮಳೆ ಆಗಬೇಕಾಗಿತ್ತು. ಆದರೆ, ಕೇವಲ 57 ಮಿ.ಮೀ. ಆಗಿದೆ. ಕೆಲ ಭಾಗದಲ್ಲಿ ಅದಕ್ಕಿಂತ ಕಡಿಮೆ ಮಳೆಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಚೇಂದ್ರನಾಥ ವಡ್ಡಿ ತಿಳಿಸಿದ್ದಾರೆ.ಹುಲಸೂರ ಹೋಬಳಿಯಲ್ಲಿ 105 ಮಿ.ಮೀ., ಬಸವಕಲ್ಯಾಣ ಹೋಬಳಿಯಲ್ಲಿ 76 ಮಿ. ಮೀ., ರಾಜೇಶ್ವರನಲ್ಲಿ 23 ಮಿ.ಮೀ., ಮುಡಬಿಯಲ್ಲಿ 41 ಮಿ.ಮೀ, ಕೊಹಿನೂರನಲ್ಲಿ 42 ಮಿ.ಮೀ, ಮಂಠಾಳದಲ್ಲಿ 55 ಮಿ.ಮೀ. ಮಳೆ ಸುರಿದಿದೆ ಎಂದು ಅವರು ತಿಳಿಸಿದ್ದಾರೆ.ಆರಂಭದಲ್ಲಿ ಮುಂಗಾರು ಸರಿಯಾಗಿ ಆಗುವ ಲಕ್ಷಣಗಳು ಗೋಚರಿಸಿದ್ದರಿಂದ ಕೃಷಿಕರು ರೈತ ಸಂಪರ್ಕ ಕೇಂದ್ರಗಳಿಂದ ನೂಕುನುಗ್ಗಲಿನಲ್ಲಿ ಬಿತ್ತನೆ ಬೀಜ ಮತ್ತು ಗೊಬ್ಬರ ಖರೀದಿಸಿದ್ದಾರೆ. ಆದರೆ ನಂತರ ಮಳೆ ಕೈಕೊಟ್ಟಿದ್ದರಿಂದ ಸಮಸ್ಯೆಯಾಗಿದೆ.‘ನಾರಾಯಣಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಕೆಲ ಗ್ರಾಮಗಳ ವ್ಯಾಪ್ತಿಯಲ್ಲಿ ಸರಿಯಾಗಿ ಮಳೆಯಾದರೆ, ಕಿಟ್ಟಾ, ರಾಜೋಳಾ ಶಿವಾರದಲ್ಲಿ ಮಳೆಯಗದ ಕಾರಣ ಬಿತ್ತನೆ ನಡೆಸಲಿಲ್ಲ ಎಂದು ಗ್ರಾಮದ ರೈತ ಅರುಣಕುಮಾರ ಪಾಟೀಲ ಹೇಳಿದ್ದಾರೆ. ಕೊಹಿನೂರ ಮತ್ತು ಮುಡಬಿ ಹೋಬಳಿಗಳಲ್ಲಿಯೂ ಬಿತ್ತನೆ ನಡೆದಿಲ್ಲ ಎಂದು ಅಣವೀರಪ್ಪ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.