ಸೋಮವಾರ, ಆಗಸ್ಟ್ 26, 2019
27 °C

ಮಳೆ ಕೊರತೆ: ರೈತರ ಆತಂಕ

Published:
Updated:

ಹೊಸಕೋಟೆ: ಆಗಸ್ಟ್ ತಿಂಗಳು ಆರಂಭವಾದರೂ ತಾಲ್ಲೂಕಿನಲ್ಲಿ ಸಾಕಷ್ಟು ಮಳೆ ಬೀಳದ ಕಾರಣ ರೈತರು ಆತಂಕಗೊಂಡಿದ್ದಾರೆ.

ತಾಲ್ಲೂಕಿನಲ್ಲಿ 12,150 ಹೆಕ್ಟೇರ್ ರಾಗಿ ಬಿತ್ತನೆ ಪ್ರದೇಶವಿದ್ದು ಶೇ 60 ರಷ್ಟು ಮಾತ್ರ ಬಿತ್ತನೆ ಆಗಿದೆ. ಕೆಲವೆಡೆ ಬಿತ್ತನೆ ಮಾಡಲು ರೈತರು ಇನ್ನೂ ಭೂಮಿಯ ಸಿದ್ಧತೆಯನ್ನೇ ಮಾಡಿಕೊಂಡಿಲ್ಲ. ಸಿದ್ಧತೆ ಮಾಡಿಕೊಂಡವರು ಮಳೆಗಾಗಿ ಕಾಯುವ ಪರಿಸ್ಥಿತಿ ಬಂದಿದೆ.ಹಲವೆಡೆ ರಾಗಿ ಬಿತ್ತಿದ್ದರೂ ಮಳೆ ಆಗದ ಕಾರಣ ಮೊಳಕೆಗಳು ಸೊರಗಿವೆ. ಈ ವಾರದಲ್ಲಿ ಮಳೆ ಆಗದಿದ್ದಲ್ಲಿ ಬಿತ್ತಿದ ರಾಗಿ ಸಂಪೂರ್ಣ ನಾಶವಾಗಲಿದ್ದು ರೈತರು ಚಿಂತೆಗೆ ಒಳಗಾಗಿದ್ದಾರೆ. ಹೀಗಾಗಿ ರೈತರು ಪ್ರತಿನಿತ್ಯ ಮುಗಿಲು ನೋಡುವ ಕೆಲಸ ಆಗಿದೆ.ಜುಲೈ ತಿಂಗಳಲ್ಲಿ ತಾಲ್ಲೂಕಿನಲ್ಲಿ ವಾಡಿಕೆ ಮಳೆಗಿಂತಲೂ ಕಡಿಮೆ ಅಂದರೆ 76.1 ಮಿ.ಮಿ ಮಾತ್ರ ಮಳೆ ಆಗಿದೆ. ಆಗಸ್ಟ್ 15 ರ ಒಳಗೆ ಮಳೆ ಆದಲ್ಲಿ ರೈತರು ಕಡಿಮೆ ಅವಧಿಯ ಜಿಪಿಯು 28 ತಳಿ ರಾಗಿ ಬಿತ್ತನೆ ಮಾಡಬಹುದಾಗಿದೆ. ನಂತರ ಮಳೆ ಆದಲ್ಲಿ ರೈತರು ಹುರಳಿ ಮುಂತಾದ ಪರ್ಯಾಯ ಬೆಳೆಗೆ ಹೋಗಬೇಕಿದೆ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕಿ ಜಿ.ಪಿ.ಭವ್ಯರಾಣಿ.ಮಳೆಯ ಪ್ರಮಾಣ ಕುಗ್ಗಿರುವುದರಿಂದ ಯಾವ ಕೆರೆಕುಂಟೆಗಳಲ್ಲೂ ನೀರಿಲ್ಲದೆ ಬತ್ತಿದೆ. ಅಂತರ್ಜಲ ಕುಸಿದಿದ್ದು ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಸುಮಾರು 18 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಮೋಡದ ವಾತಾವರಣವಿದ್ದರೂ ವರುಣನ ಕೃಪೆ ಆಗದೆ ತಾಲ್ಲೂಕಿನಲ್ಲಿ ಬರದ ಛಾಯೆ ಮೂಡಿದೆ.

Post Comments (+)