ಬುಧವಾರ, ಮೇ 18, 2022
24 °C

ಮಳೆ-ಗಾಳಿಗೆ ಹಾರಿಹೋದ ಆಸರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಪ್ರತಿ ವರ್ಷ ಮಳೆಗಾಳ ಬಂದಾಗಲೊಮ್ಮೆ ನಗರದ ಹೊರವಲಯದಲ್ಲಿರುವ ಅಲೆಮಾರಿಗಳ ಬಡಾವಣೆಯಲ್ಲಿ ಭೀಕರ ದೃಶ್ಯಗಳು ಗೋಚರಿಸಲು ಆರಂಭಿಸುತ್ತವೆ. ಹಾರಿ ಹೋಗುವ ಗುಡಿಸಲಿನಲ್ಲಿ ಸಾಮಗ್ರಿಗಳನ್ನು ಹೊಂದಿಸಿ ಇಟ್ಟುಕೊಳ್ಳುವುದರಲ್ಲಿಯೇ ಸಾಕಾಗಿ ಹೋಗುತ್ತಿದೆ. ಈ ಸಮಸ್ಯೆ ಇಂದು, ನಿನ್ನೆಯದಲ್ಲ. ಹಲವಾರು ವರ್ಷಗಳಿಂದ ಈ ಬಡಾವಣೆಯಲ್ಲಿ ವಾಸಿಸುತ್ತಿರುವ ಜನರ ಬದುಕು ನರಕಮಯವಾಗಿದೆ.

ಭಾನುವಾರದಿಂದ ಆರಂಭವಾಗಿರುವ ಮಳೆಯಿಂದ ರೈತರು ಸಂತಸದಲ್ಲಿದ್ದರೆ, ನಗರದ ಹೊರವಲಯದಲ್ಲಿರುವ ಅಲೆಮಾರಿ ಕುಟುಂಬಗಳು ನೋವು ಅನುಭವಿಸುವಂತಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ನಗರದ ಹೊರವಯದಲ್ಲಿರು ಅಲೆಮಾರಿ ಜನಾಂಗದ ಗುಡಿಸಲುಗಳು ತತ್ತರಿಸಿ ಹೋಗಿವೆ.ಮಳೆಗಾಲದಲ್ಲಿ ತಾತ್ಕಾಲಿಕವಾಗಿ ತಾಲ್ಲೂಕು ಆಡಳಿತ ಪ್ರಾರಂಭಿಸುವ ಗಂಜಿಕೇಂದ್ರದಲ್ಲಿ 15 ದಿನಗಳೋ ಅಥವಾ 1 ತಿಂಗಳು ಮಾತ್ರ ಅನುಕೂಲ ಕಲ್ಪಿಸಲಾಗುತ್ತದೆ. ಆದರೆ ಮತ್ತೆ ಅದೇ ಗೋಳು. ಶಾಶ್ವತ ನೆಲೆ ಕಲ್ಪಿಸುವಂತೆ ಮಾಡಿಕೊಳ್ಳುವ ಮನವಿಗಳಿಗೂ ಸ್ಪಂದನೆ ಸಿಗದೇ ಇರುವುದರಿಂದ ಇಲ್ಲಿನ ಜನರು ರೋಸಿ ಹೋಗಿದ್ದಾರೆ.ಕಳೆದ ಎರಡು ದಿನಗಳಿಂದ ಬೀಸುತ್ತಿರುವ ಮಳೆ ಗಾಳಿಗೆ ಈ ಅಲೆಮಾರಿಗಳ ಗುಡಿಸಲುಗಳು ಉರುಳಿ ಹೋದರೂ ಜನಪ್ರತಿನಿಧಿಗಳಾರೂ ಇತ್ತ ಗಮನ ನೀಡುತ್ತಿಲ್ಲ ಎಂದು ಬಡಾವಣೆಯ ಜನರು ದೂರುತ್ತಿದ್ದಾರೆ.ಚುನಾವಣೆ, ಮದುವೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ತಲ್ಲೆನರಾಗಿರುವ ಜನಪ್ರತಿನಿಧಿಗಳಿಗೆ ನಮ್ಮ ಗೋಳು ಹೇಗೆ ಅರ್ಥವಾಗಬೇಕು ಎಂಬ ಪ್ರಶ್ನೆಗೆ ಉತ್ತರ ಸಿಗದಾಗಿದೆ. ಈಗಾಗಲೇ ಈ ಜನರಿಗೆ ನಿವೇಶನ ಒದಗಿಸುವ ಬಗ್ಗೆ ಚರ್ಚಿಸಲಾಗಿದೆ ಎಂದಷ್ಟೇ ಉತ್ತರ ನೀಡಲಾಗುತ್ತಿದ್ದು, ಆ ಪ್ರಕ್ರಿಯೆ ಎಲ್ಲಿಗೆ ಬಂತು ಎಂಬುದು ಇನ್ನೂ ತಿಳಿಯುತ್ತಿಲ್ಲ ಎಂದು ಬಡಾವಣೆಯ ಆಂಜನೇಯ ಹೇಳುತ್ತಾರೆ.ಮಳೆಗಾಲ ಬಂತೆಂದರೆ ಸಾಕು, ವಿಷ ಜಂತುಗಳ ಕಾಟ ಹೆಚ್ಚಾಗುತ್ತದೆ. ವೃದ್ಧರು, ಮಹಿಳೆಯರು, ಮಕ್ಕಳಾದಿಯಾಗಿ ನಿದ್ದೆ ಮಾಡುವುದಕ್ಕೂ ಹಿಂಜರಿಯುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅದೆಷ್ಟೋ ಬಾರಿ ಗರ್ಭೀಣಿಯರಿಗೆ ಚೇಳು ಕಚ್ಚಿ ಮೂರ್ಛೆ ಹೋದ ಘಟನೆಗಳು ನಡೆದಿವೆ. ತಕ್ಕ ಮಟ್ಟಿಗೆ ಆಯುರ್ವೇದದ ಬಗ್ಗೆ ತಿಳಿದಿರುವ ಇಲ್ಲಿನ ವೃದ್ಧರು ಸೊಪ್ಪಿನ ಔಷಧಿಯ ಚಿಕಿತ್ಸೆ ನೀಡುತ್ತಿದ್ದಾರೆ. ವಿಪರೀತ ಚಳಿಯಿಂದಾಗಿ ಕಳೆದ ವರ್ಷ ಶಾಂತಾ ಎಂಬ ಮಹಿಳೆ ಮೃತಪಟ್ಟಿದ್ದು, ಆಕೆಯನ್ನು ನೆನೆದು ಈಗಲೂ ಸಹೋದರರು ಕಣ್ಣೀರಿಡುತ್ತಾರೆ.ದಿನವಿಡಿ ದುಡಿದು ಬಂದರೂ ಜೀವನಕ್ಕೆ ನೆಮ್ಮದಿ ಇಲ್ಲದಾಗಿದೆ. ಈಗಲಾದರೂ ಜಿಲ್ಲಾಡಳಿತ ನಮಗೊಂದು ಆಸರೆ ಮಾಡಿಕೊಡಬೇಕು ಎಂಬ ಮನವಿಯಲ್ಲಿ ಇಲ್ಲಿಯ ಜನರು ಮಾಡುತ್ತಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.