ಮಳೆ, ಚಳಿ, ಗಾಳಿಯ ಜುಗಲ್‌ಬಂದಿ

7

ಮಳೆ, ಚಳಿ, ಗಾಳಿಯ ಜುಗಲ್‌ಬಂದಿ

Published:
Updated:
ಮಳೆ, ಚಳಿ, ಗಾಳಿಯ ಜುಗಲ್‌ಬಂದಿ

ಚಿಕ್ಕಬಳ್ಳಾಪುರ: ಒಂದೆಡೆ ಕೈಕಾಲು ನಡುಗಿಸುವ ಗಡಗಡ ಚಳಿ. ಮತ್ತೊಂದೆಡೆ ಮೈಯನ್ನು ಒದ್ದೆ ಯಾಗಿಸುವ ಜಡಿ ಮಳೆ. ಇನ್ನೊಂದೆಡೆ ಮನೆಯಿಂದ ಹೊರಗಡೆ ಹೆಜ್ಜೆಯಿಡ ದಂತೆ ಬೀಸುವ ತಂಗಾಳಿ. ಇವು ಮೂರು `ಅತಿಥಿ~ಗಳ ಜುಗಲಬಂದಿ ಕಳೆದ ನಾಲ್ಕು ದಿನಗಳಿಂದ ನಿರಾತಂಕವಾಗಿ ಮುಂದು ವರೆದಿದ್ದು, ಇಡೀ ಜೀವನಶೈಲಿಯ ಮೇಲೆ ಪರಿಣಾಮ ಬೀರಿದೆ. ಚಳಿ, ಮಳೆ ಮತ್ತು ಗಾಳಿ ಮೂರು ಮೇಳೈಸಿಕೊಂಡು ಸಹಜ ಹವಾಮಾನದ ವಾತಾವರಣ ವನ್ನೇ ಬದಲಾಯಿಸಿವೆ.ಮುಂಜಾನೆ 6 ಗಂಟೆ ವೇಳೆಗೆ ಮನೆಬಾಗಿಲಿಗೆ ಬರುತ್ತಿದ್ದ ಸೂರ್ಯನ ಕಿರಣಗಳು ಇತ್ತೀಚಿನ ದಿನಗಳಲ್ಲಿ ಸಂಜೆಯಾದರೂ ಕಾಣಸಿಗುತ್ತಿಲ್ಲ. ದಟ್ಟವಾದ ಮೋಡಗಳನ್ನು ಸರಿಸಿ ಕೊಂಡು ಬಾರದ ರೀತಿಯಲ್ಲಿ ಸೂರ್ಯ ಬಂಧಿಯಾಗಿದ್ದಾನೆಯೇ ಅಥವಾ ಅಡಗಿಕೊಂಡಿದ್ದಾನೆಯೇ ಸ್ಪಷ್ಟ ವಾಗುತ್ತಿಲ್ಲ.

 

ನವೆಂಬರ್ ತಿಂಗಳಿನ ಸಹಜ ಚಳಿಯನ್ನು ಹೇಗೋ ಕಷ್ಟಪಟ್ಟು ಸಹಿಸುತ್ತಿದ್ದ ಜನರಿಗೆ `ಅತಿ~ಯಾದ ಚಳಿ ಕಂಗೆಡಿಸಿದೆ, ಬೆಳಿಗ್ಗೆಬೆಳಿಗ್ಗೇನೆ ಶಾಲೆಗೆ ಹೋಗಲ್ಲ ಎಂದು ಮಕ್ಕಳು ರಚ್ಚೆ ಹಿಡಿಯುತ್ತಿದ್ದರೆ, ಮಕ್ಕಳನ್ನು ಸಮಾ ಧಾನಪಡಿಸಿ ಸರಿಯಾದ ಸಮಯಕ್ಕೆ ಶಾಲೆಗೆ ಕಳುಹಿಸಲು ಪೋಷಕರು ಹರಸಾಹಸಪಡುತ್ತಿದ್ದಾರೆ.ಪೋಷಕರು ಮತ್ತು ಮಕ್ಕಳು ಒಂದು ರೀತಿಯ ಕಷ್ಟ ಅನುಭವಿಸಿದರೆ, ಕೂಲಿ ಕಾರ್ಮಿಕರು, ಬೀದಿ ವ್ಯಾಪಾರಸ್ಥರು, ಹಣ್ಣುಸೊಪ್ಪು ಮಾರಾಟಗಾರರು ಮತ್ತೊಂದು ರೀತಿಯ ಸಂಕಟ ಎದುರಿಸುತ್ತಿದ್ದಾರೆ. ಗಾರೆ ಕೆಲಸ, ಮೂಟೆ ಹೊರುವುದು ಮುಂತಾದ ಕೆಲಸ ಮಾಡುತ್ತಿದ್ದ ಕೂಲಿಕಾರ್ಮಿಕರು ಕೆಲಸವಿಲ್ಲದೇ ಕಂಗಾಲಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಿಲ್ಲ ಎಂದು ಬೀದಿ ವ್ಯಾಪಾರಸ್ಥರು- ಹಣ್ಣುಸೊಪ್ಪು ಮಾರಾಟಗಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಪಾದಚಾರಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಮತ್ತೊಂದು ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಾಲೇಜು. ಕಾರ್ಯಕ್ರಮ ಅಥವಾ ಕೆಲಸಕಾರ್ಯ ಎಂದು ನೆಪ ಮಾಡಿಕೊಂಡು ಶುಭ್ರವಾದ ಬಿಳಿ ಬಣ್ಣದ ಉಡುಪುಗಳನ್ನು ತೊಡುವಂತಿಲ್ಲ. ಒಂದು ವೇಳೆ ತೊಟ್ಟರೂ ರಸ್ತೆಯಲ್ಲಿ ಕಾಲಿಟ್ಟ ಮರುಕ್ಷಣವೇ ಉಡುಪು ಕೆಸರು ಬಣ್ಣಕ್ಕೆ ತಿರಗುತ್ತದೆ. ತಲೆಯ ಮೇಲೆ ಟೋಪಿ ಮತ್ತು ಕೈಯಲ್ಲಿ ಛತ್ರಿಯಿಲ್ಲದೇ ಮನೆಯಿಂದ ಹೊರಗಡೆ ಹೆಜ್ಜೆಯಿಡುವಂತಿಲ್ಲ. ಚಳಿ-ತಂಗಾಳಿ ನಡುವೆ ಮಳೆರಾಯ ದಿಢೀರ್‌ನೇ ಆಗಮಿಸುತ್ತಾನೆ!ಈ ಅನಿರೀಕ್ಷಿತ ಹವಾಮಾನ ವೈಪರೀತ್ಯಕ್ಕೆ ಬಹುತೇಕ ಮಂದಿ ತಮಿಳುನಾಡಿನ ವಾಯುಭಾರ ಕುಸಿತವೇ (ಸೈಕ್‌ಲೋನ್) ಕಾರಣ ಎಂದು ಹೇಳುತ್ತಾರೆ. ಆದರೆ ಕೆಲವರು ಇದು ಇಲ್ಲಿನ ಹವಾಮಾನದ ಸಹಜ ಪ್ರಕ್ರಿಯೆ ಎಂದು ವಾದಿಸುತ್ತಾರೆ.

 

ಇವೆರಡನ್ನೂ ಒಪ್ಪದವರು ಸುತ್ತಮುತ್ತ ಲಿನ ಬೆಟ್ಟಗುಡ್ಡಗಳ ಸಾಲುಗಳೇ ಈ ಎಲ್ಲ ಬದಲಾವಣೆಗೆ ಕಾರಣ ಎಂದು ಸಮರ್ಥಿಸಿ ಕೊಳ್ಳುತ್ತಾರೆ. ಈ ಎಲ್ಲದರ ನಡುವೆ ಮಳೆಯು ಕೆಲವರಿಗೆ ಕಿರಿಕಿರಿ ಉಂಟುಮಾಡಿದ್ದರೂ ರಾಗಿ ಬೆಳೆಗಾರ ರಲ್ಲಿ ಕೊಂಚ ಮಂದಹಾಸ ಮೂಡಿಸಿದೆ.`ಇಂತಹ ವಾತಾವರಣದಲ್ಲಿ ಕೆಲಸ ಕಾರ್ಯ ಎಲ್ಲವನ್ನೂ ಮರೆತು ಮನೆ ಯಲ್ಲಿ ಸುಮ್ಮನೆ ಕೂರಬೇಕು ಇಲ್ಲವೇ ಕಂಬಳಿ ಹೊದ್ದುಕೊಂಡು ಮಲಗಬೇಕು ಅನ್ನಿಸುತ್ತದೆ. ಸಂಜೆ ಯಾದರೆ ಬಿಸಿ ಬಿಸಿ ಚಾಹ ಮತ್ತು ಬಜ್ಜಿ ತಿನ್ನುವುದು ಇದ್ದೇ ಇದೆ. ಮಳೆ- ಚಳಿಯಿಂದ ಶೀತವಾಗಿದೆ ಎಂದು ನೆಪ ಹೇಳಿಕೊಂಡು ಕಚೇರಿಗೆ ರಜೆಯನ್ನೂ ಹಾಕಬಹುದು. ಮನೆ ಯಲ್ಲಿ ಎಲ್ಲರೊಂದಿಗೆ `ಬಿಂದಾಸ್~ ಆಗಿ ಕಾಲ ಕಳೆಯಬಹುದು. ಏನು ಮಾಡಲಿ ಎಂಬುದನ್ನೇ ಯೋಚಿಸುತ್ತಿದ್ದೇನೆ~ ಎಂದು ಖಾಸಗಿ ಸಂಸ್ಥೆ ಉದ್ಯೋಗಿ ಅಮಿತ್ `ಪ್ರಜಾವಾಣಿ~ಗೆ ತಿಳಿಸಿದರು.`ಸದ್ಯದ ವಾತಾವರಣ ಒಂದು ರೀತಿಯಲ್ಲಿ ಹಿತವಾಗಿದೆ. ಆದರೆ ಚಳಿ, ಮಳೆ ಮತ್ತು ಗಾಳಿಯಿಂದ ಮನೆಯಲ್ಲಿ ಯಾರೂ ಕಾಯಿಲೆ ಬೀಳದಿದ್ದರೆ ಸಾಕು. ಇದಕ್ಕೆಂದೇ ಮಕ್ಕಳಿಗೆ ಬೆಚ್ಚನೆಯ ಸ್ವೆಟರ್ ತೊಡಿಸಿ, ತಲೆಗೆ ಟೋಪಿ ಹಾಕುತ್ತೇನೆ. ಮಳೆಯಲ್ಲಿ ನೆನೆಸಿ ಕೊಳ್ಳದಿರಲಿ ಅಂತ ಅವರ ಬ್ಯಾಗ್‌ನಲ್ಲಿ `ರೇನ್‌ಕೋಟ್~ ಕೂಡ ಹಾಕಿರುತ್ತೇನೆ~ ಎಂದು ಗೃಹಿಣಿ ಸುಮಲತಾ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry