ಮಳೆ ನಿಂತರೂ ನಿಲ್ಲದ ನೋವು..!

7
ಎಲ್ಲೆಲ್ಲೂ ದೂಳು, ಗಬ್ಬು ನಾರುವ ಕಸದ ರಾಶಿ, ಅಧಿಕಾರಿಗಳಿಗೆ ಹಿಡಿಶಾಪ!

ಮಳೆ ನಿಂತರೂ ನಿಲ್ಲದ ನೋವು..!

Published:
Updated:

ದಾವಣಗೆರೆ: ವರುಣ ಆರ್ಭಟಿಸಿ, ಎರಡು ದಿನಗಳಿಂದ ಮರೆಯಾಗಿದ್ದಾನೆ. ಆದರೆ, ಆರ್ಭಟ ಸೃಷ್ಟಿಸಿದ ನೋವು ಮಾತ್ರ ಇಂದಿಗೂ ಕಣ್ಣಿಗೆ ಕಟ್ಟುತ್ತಿವೆ!ನಗರವಿಡೀ ಈಗ ದೂಳಿನಿಂದ ತುಂಬಿ ಹೋಗಿದೆ. ಕಸದ ರಾಶಿ ಗಬ್ಬು ನಾರುತ್ತಿದೆ. ಆದರೆ, ಅಧಿಕಾರಿಗಳು ಮಾತ್ರ ನಮ್ಮ ಸಂಕಷ್ಟ ಆಲಿಸುತ್ತಿಲ್ಲ ಎಂಬುದು ಸ್ಥಳೀಯರ ದೂರು.‘ಮೊನ್ನೆ ಬಿದ್ದ ಮಳೆ ನಮ್ಮ ಜೀವನವನ್ನೇ ಹಾಳು ಮಾಡಿತು. ಕಾಳು-–ಕಡ್ಡಿಗಳು ಮಳೀ ನೀರಲ್ಲಿ ತೇವಗೊಂಡು ವರ್ಷದ ಕೂಳು ಹಾಳು ಮಾಡಿತು. ಪ್ರತಿ ವರ್ಷದ ದೊಡ್ಡ ಮಳೆಯಲ್ಲಿ ಈ ಚರಂಡಿ ನೀರು ಉಕ್ಕಿ ಹರಿಯುತ್ತದೆ. ಮನೆಯೊಳಗೆಲ್ಲಾ ಕೊಳಚೆ ನೀರು ಬಂದು ಹಾಳು ಮಾಡಿದೆ. ಮನೆಯೂ ಗಬ್ಬು ನಾರುತ್ತಿದೆ. ಚುನಾವಣೆ ವೇಳೆ ಮತ ಕೇಳಲು ಮಾತ್ರ ಬರ್ತಾರೆ. ಆದ್ರೆ ನಮ್ಮ ಸಂಕಷ್ಟ ಕೇಳಲು ಯಾರೂ ಬರೋದಿಲ್ಲ! ಮೊನ್ನೆ ಬಿದ್ದ ಮಳೆಯ ಬಳಿಕ ಅಧಿಕಾರಿಗಳು ಬಂದು ಬರೆದುಕೊಂಡು ಹೋಗ್ಯಾರೆ. ಪರಿಹಾರ ಮಾತ್ರ ಮರೀಚಿಕೆ’ ಎಂಬುದು ಶೇಖರಪ್ಪ ನಗರದ ಅಂಗಡಿ ಗಂಗಮ್ಮ ಅವರ ದೂರು.‘ಸೀಮೆಎಣ್ಣೆ ಚರಂಡಿ ಪಾಲಾಗಿದೆ. ದವಸ–ಧಾನ್ಯ ಮೊಳೆಕೆ ಒಡೆಯುತ್ತಿವೆ. ಹೊಸ ದಾವಣಗೆರೆ ಭಾಗದ ಆಸ್ಪತ್ರೆ ತ್ಯಾಜ್ಯಗಳು ಕೊಚ್ಚಿಕೊಂಡು ಬಂದಿವೆ. ಸತ್ತ ನಾಯಿ-ಹಂದಿಗಳ ಶವ ತೇಲಿ ಬರುತ್ತಿವೆ. ಸೊಳ್ಳೆಗಳ ಕಾಟ ವಿಪರೀತವಾಗಿದೆ. ಇದರಿಂದ ಮಕ್ಕಳು ರೋಗದಿಂದ ಬಳಲುತ್ತಿದ್ದಾರೆ. ಚರಂಡಿ ದುರಸ್ತಿ ಮಾಡಿಸಿ ಎಂದು ಜನಪ್ರತಿನಿಧಿಗಳಲ್ಲಿ ಹಾಗೂ ಅಧಿಕಾರಿಗಳ ಬಳಿ ಮೊರೆಯಿಟ್ಟರೂ ನಮ್ಮ ಅಳಲು ಕೇಳಿಸಿಕೊಳ್ಳುತ್ತಿಲ್ಲ’ ಎಂದು ಭಾರತ್ ಕಾಲೊನಿಯ ನಿವಾಸಿ ಜಯಮ್ಮ ಅವರ ಅಳಲು.ಚರಂಡಿ ತರುವ ಅನಾಹುತ...: ಹೊಸ ದಾವಣಗೆರೆ ಭಾಗದ ಕೊಳಚೆ ನೀರು ಜಿಲ್ಲಾಸ್ಪತ್ರೆಯ ಎದುರು, ಭಗತ್‌ಸಿಂಗ್ ನಗರ, ಕೆ.ಟಿ.ಜೆ. ನಗರ, ಕೆಎಸ್‌ಆರ್‌ಟಿಸಿ ಪಕ್ಕ, ಎಪಿಎಂಸಿ ಅಕ್ಕಪಕ್ಕ, ಶೇಖರಪ್ಪ ನಗರ, ಭಾರತ್ ಕಾಲೊನಿಯಲ್ಲಿ ಹರಿದು ಜನರ ಜೀವ ಹಿಂಡುತ್ತಿದೆ. ಪ್ರತಿವರ್ಷ ಜೋರು ಮಳೆಯಲ್ಲಿ ಜನರ ಬದುಕನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ.ಈ ವರ್ಷದ ಮಳೆಯಲ್ಲಿ ಈ ಚರಂಡಿ ತಂದ ಅನಾಹುತ ಅಷ್ಟಿಷ್ಟಲ್ಲ. ಮೂವರನ್ನು ಬಲಿ ತೆಗೆದುಕೊಂಡಿದೆ. ಹೀಗಾಗಿ, ಈ ದೊಡ್ಡ ಚರಂಡಿ ತಡೆಗೋಡೆ ಎತ್ತರಿಸಿ ನಮ್ಮ ಜೀವ ಉಳಿಸಿ ಎಂಬುದು ಈ ಭಾಗದ ಜನರ ಆಗ್ರಹ.‘ಬದುಕೇ ಬೇಸರ ಆಗಿದೆ. ಸ್ವಂತ ಮನೆ; ಬಿಟ್ಟು ಬೇರೆಡೆ ಹೋಗುವ ಹಾಗಿಲ್ಲ. ಜೀವನಕ್ಕೆ ಕೂಲಿಯೇ ಆಸರೆ. ಬೀಡಿ ಕಟ್ಟುವುದು, ಕಾಂಕ್ರೀಟ್ ಕೆಲಸವೇ ನಮಗೆ ಆಧಾರ. ಜೋರು ಮಳೆ ನಮಗೆ ಅನಾಹುತ ತಂದಿದೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪ್ರತಿಭಟನೆ ನಡೆಸಿ ಸಾಕಾಗಿದೆ. ಇನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮನೆಗೆ ಮುತ್ತಿಗೆ ಹಾಕುವುದೇ ಒಂದೇ ಬಾಕಿ ಉಳಿದಿರುವುದು’ ಎಂದು ಎಚ್ಚರಿಸುತ್ತಾರೆ ಶೇಖರಪ್ಪ ನಗರದ ಪರಿಪೂರ್ಣಮ್ಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry