ಮಳೆ ನೀರಿನಿಂದ ಕೊಯ್ಲಿಗೆ ಬಂದ ಭತ್ತ

ಮುಳಬಾಗಲು: ತಾಲ್ಲೂಕಿನ ದೇವರಾಯಸಮುದ್ರ ಗ್ರಾಮದ ಸುತ್ತಮುತ್ತಲಿನ ಕೆಲ ಹಳ್ಳಿಗಳಲ್ಲಿ ಮಳೆ ನೀರಿಗೆ ನಾಟಿ ಮಾಡಿದ್ದ ಭತ್ತದ ಬೆಳೆ ಇದೀಗ ಕೊಯ್ಲಿಗೆ ಬಂದಿದೆ.
ಮುಂಗಾರು ಮಳೆಗೆ ಇಲ್ಲಿನ ಗದ್ದೆಗಳಲ್ಲಿ ಭತ್ತದ ಪೈರು ನಾಟಿ ಮಾಡಲಾಗಿತ್ತು. ನಂತರ ಬಿದ್ದ ಮಳೆಗೆ ತಾಲ್ಲೂಕಿನಾದ್ಯಂತ ಕೆರೆ ಕುಂಟೆಗಳು ಕೋಡಿ ಹರಿದವು. ಹಿಂಗಾರಿನಲ್ಲಿ ಭತ್ತದ ಬೆಳೆ ತೆಗೆಯಬಹುದು ಎಂದು ಜನರು ಸಂತಸಪಟ್ಟಿದ್ದರು.
ಜಿಲ್ಲೆಯಲ್ಲಿ ಅಂತರ್ಜಾಲ ಮಟ್ಟ ಕುಸಿಯುತ್ತಿದ್ದರಿಂದ ಕೆರೆಯ ನೀರನ್ನು ಬೇಸಾಯಕ್ಕೆ ಬಳಸಬಾರದು ಎಂದು ಜಿಲ್ಲಾಧಿಕಾರಿ ಆದೇಶ ರೈತರ ಉತ್ಸಾಹ ತಗ್ಗಿಸಿತು. ಆದರೆ ಬೆಟ್ಟದ ತಪ್ಪಲಿನಲ್ಲಿರುವ ಗದ್ದೆಗಳು ಸದಾ ಕಾಲ ನೀರು ಇರುವ ಜೌಗು ಭೂಮಿಯಾಯಿತು. ನೀರಿನ ಪಸೆ ಆರದಿರುವುದು ಕಂಡ ರೈತರು ಭತ್ತ ಬಿತ್ತಿದರೆ ನಷ್ಟವಾಗದು ಎಂದು ಉಲ್ಲಸಿತರಾದರು.
ಮಳೆ ನೀರಿನಿಂದಾಗಿ ಹಲವು ಕೊಳವೆಬಾವಿಗಳಲ್ಲಿ ಜಲಮರುಪೂರಣಗೊಂಡಿದೆ. ನೀರಿಲ್ಲದೆ ಬತ್ತಿಹೋಗಿದ್ದ ಹಲವು ಕೊಳವೆಬಾವಿಗಳಲ್ಲಿ ಮತ್ತೆ ನೀರು ಕಾಣಿಸಿದೆ. ತೆರೆದ ಬಾವಿಗಳಲ್ಲೂ ನೀರು ತುಂಬಿ ತುಳುಕುತ್ತಿದೆ.
ದೇವರಾಯಸಮುದ್ರ ವ್ಯಾಪ್ತಿಯ ಬೆಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಭತ್ತದ ಬೆಳೆ ಬೆಳೆದು ರೈತರು ಕಣಜ ತುಂಬಿಸಿಕೊಂಡಿರುವುದು ತಾಲ್ಲೂಕಿನ ಜನರಲ್ಲಿ ಅಚ್ಚರಿ ಮೂಡಿಸಿದೆ. ಬೆಟ್ಟದ ತಪ್ಪಲಿನ ಗದ್ದೆಗಳಲ್ಲಿ ಇಂದಿಗೂ ನೀರು ಹರಿಯುತ್ತಿರುವುದು ಕಣ್ಣಿಗೆ ಬೀಳುತ್ತದೆ.
ಭತ್ತ ಕೊಯ್ಲು ಮಾಡುವಾಗಲೂ ಗದ್ದೆಗಳಲ್ಲಿ ನೀರು ನಿಂತಿತ್ತು. ರೈತರು ನೀರಿನಲ್ಲಿ ನಿಂತೇ ಪೈರು ಕೊಯ್ಲು ಮಾಡಿದ್ದರು ಎಂದು ಕೀಲುಹೊಳಲಿ ಗ್ರಾಮಸ್ಥರು ತಿಳಿಸಿದರು.
ದೇವರಾಯಸಮುದ್ರದ ಗದ್ದೆಗಳನ್ನು ಕೀಲುಹೊಳಲಿ ಗ್ರಾಮದ ಕೆಲ ರೈತರು ಗುತ್ತಿಗೆಗೆ ಪಡೆದುಕೊಂಡಿದ್ದಾರೆ. ಉತ್ತಮ ಇಳುವರಿ ಬಂದಿರುವುದರಿಂದ ರೈತರಿಗೆ ಲಾಭವಾಗಿದೆ ಎಂದು ಗ್ರಾಮದ ಮುಖಂಡ ವೆಂಕಟರಾಯಪ್ಪ ‘ಪ್ರಜಾವಾಣಿ’ಗೆ ತಿಳಿದರು.
‘10 ಗುಂಟೆ ವಿಸ್ತೀರ್ಣದ ಒಂದು ಗದ್ದೆ ಗೇಯ್ಮೆ ಮಾಡಿದರೆ ಮಾಲೀಕರಿಗೆ ಒಂದು ಮೂಟೆ ಭತ್ತ ಕೊಡಬೇಕು ಎಂಬ ಒಪ್ಪಂದದಂತೆ ಇಲ್ಲಿ ಕೃಷಿ ನಡೆಯುತ್ತದೆ. ಭತ್ತದ ಹುಲ್ಲು ಮತ್ತು ಹೆಚ್ಚುವರಿ ಫಸಲಿನ ಮೇಲೆ ಮಾಲೀಕರಿಗೆ ಅಧಿಕಾರ ಇರುವುದಿಲ್ಲ’ ಎಂದು ಗ್ರಾ.ಪಂ. ಸದಸ್ಯ ವಿ.ಸುರೇಶ್ ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.