ಮಂಗಳವಾರ, ಮೇ 18, 2021
24 °C

ಮಳೆ ನೀರು ಸಂಗ್ರಹ `ಒಳ-ಹೊರಗೆ'

ಚಿತ್ರ-ಲೇಖನ ಗಾಣಧಾಳು ಶ್ರಿಕಂಠ Updated:

ಅಕ್ಷರ ಗಾತ್ರ : | |

ಮಳೆ ನೀರು ಸಂಗ್ರಹ `ಒಳ-ಹೊರಗೆ'

ಅಪ್ಪಾ, ನೀರೆಲ್ಲಾ ಪೈಪ್‌ನಿಂದ ಹೊರಗೆ ಹೋಗ್ತಿದೆ. ಸಂಪ್‌ಗೆ ಇಳಿಯುತ್ತಿಲ್ಲ, ಬೇಗ ಬಾ'..

ಮನೆ ಹಿಂಬದಿಯ ನೀರಿನ ಸಂಪ್(ತೊಟ್ಟಿ) ಬಳಿ ನಿಂತಿದ್ದ ಮಗಳು, ಕಟ್ಟಡವೇ ಕುಸಿಯಿತೇನೋ ಎನ್ನುವಷ್ಟು ಗಾಬರಿಯಿಂದ ಕೂಗಿಕೊಂಡಳು.ಹೊರಗಡೆ ಜೋರು ಮಳೆ. ತಾರಸಿ ಮೇಲೆ ಸುರಿದ ಮಳೆ ನೀರು ಪೈಪ್ ಮೂಲಕ ಶೋಧಕ ತಲುಪಿ, ಅಲ್ಲಿಂದ  ಸಂಪ್‌ಗೆ ಇಳಿಯಬೇಕಿತ್ತು. ಆದರೆ ಹಾಗಾಗದೇ, ಮಳೆ ನೀರು ಚರಂಡಿಗೆ ಪಾಲಾಗುತ್ತಿತ್ತು. ಅದುವೇ ಆಕೆಯ ಆತಂಕಕ್ಕೆ ಕಾರಣವಾಗಿತ್ತು.

ಆಕೆ ಕೂಗಿದಷ್ಟೇ ವೇಗವಾಗಿ ಮನೆಯ ಹಿಂದಕ್ಕೆ ಓಡಿದೆ. ಸಂಪ್‌ಗೆ ಇಳಿಯಬೇಕಿದ್ದ ಚಾವಣಿ ನೀರು, ಮೂರು ಇಂಚು ಪೈಪ್ ಮೂಲಕ ಧೋ ಅಂತ ಹರಿದು ಚರಂಡಿ ಸೇರುತ್ತಿತ್ತು.ತಕ್ಷಣ ಮನೆಗೆ `ಮಳೆ ನೀರು ಸಂಗ್ರಹ ವ್ಯವಸ್ಥೆ' ಅಳವಡಿಸಿಕೊಟ್ಟ ಕಂಪೆನಿಗೆ ಕರೆ ಮಾಡಿದೆ. ತಾಂತ್ರಿಕ ಪರಿಣತರ ಸೂಚನೆ ಪ್ರಕಾರ ಫಿಲ್ಟರ್ ತೆಗೆದು ಸ್ವಚ್ಚ ಮಾಡಿದೆ. ನೀರು ಹೊರ ಹೋಗುವ ಪೈಪ್‌ನಲ್ಲಿ ಕಟ್ಟಿದ್ದ ಕಸವನ್ನೆಲ್ಲ ತೆಗೆದೆ. ಇಷ್ಟಾದರೂ ಮಳೆ ನೀರು ಸಂಪ್‌ಗೆ ಇಳಿಯುತ್ತಿರಲಿಲ್ಲ.ಬಾಡಿಗೆ ಟ್ಯಾಂಕರ್ ನೀರು ಖರೀದಿಸಿಯೇ ದಿನದೂಡುತ್ತಿರುವ ನಮಗೆ, ಮಳೆ ನೀರು ಚರಂಡಿ ಪಾಲಾಗುತ್ತಿದ್ದನ್ನು ನೋಡಿ ಸಂಕಟವಾಗುತ್ತಿತ್ತು. ಮತ್ತೊಮ್ಮೆ `ರೇನ್‌ವಾಟರ್ ಹಾರ್ವೆಸ್ಟ್' ಕಂಪೆನಿಯವರನ್ನು ಸಂಪರ್ಕಿಸಿ, ಎಂಜಿನಿಯರ್ ಕಳಿಸಲು ಕೋರಿದೆ. ಇಷ್ಟೆಲ್ಲ ಪ್ರಕ್ರಿಯೆ ಪೂರ್ಣಗೊಳ್ಳುವ ವೇಳೆಗೆ ಮಳೆ ನಿಂತೇ ಹೋಗಿತ್ತು.ಮರುದಿನ ಎಂಜಿನಿಯರ್ ಬಂದರು. ನಡೆದಿದ್ದೆಲ್ಲವನ್ನೂ ಅವರಿಗೆ ಒಪ್ಪಿಸಿದ್ದಾಯಿತು. ಎಂಜಿನಿಯರ್ ಕೆಲಸ ಶುರು ಮಾಡಿದರು.ಮೊದಲು ಶೋಧಕದೊಳಗಿದ್ದ ಸ್ಟೇನ್‌ಲೆಸ್ ಸ್ಟೀಲ್‌ಫಿಲ್ಟರ್ ತೆಗೆದು ಸ್ವಚ್ಚಗೊಳಿಸಲೆತ್ನಿಸಿದರು. ಆದರೆ ಫಿಲ್ಟರ್ ಮೇಲೆ ತೆಳುವಾಗಿಯೇ ಆದರೂ ಗಟ್ಟಿಯಾಗಿ ಅಂಟಿಕುಳಿತಿದ್ದ ಸಿಮೆಂಟ್ ಪದರ ತೆಗೆಯಲು ಅವರಿಗೆ ಸಾಧ್ಯವಾಗಲಿಲ್ಲ.`ಇಡೀ ಫಿಲ್ಟರ್‌ಗೆ ಸಿಮೆಂಟ್ ಅಂಟಿಕೊಂಡಿದೆಯಲ್ಲ ಸರ್. ಜಾಲರಿ ಕಣ್ಣುಗಳೆಲ್ಲ ಮುಚ್ಚಿಹೋಗಿವೆ. ಅದಕ್ಕೇ ಒಂದು ಹನಿ ನೀರೂ ನಿಮ್ಮ ಸಂಪ್‌ಗೆ ಇಳಿಯುತ್ತಿಲ್ಲ' ಎಂದರು.`ನೀವು ಹೇಳಿದಂತೆಯೇ ಮಳೆಗಾಲಕ್ಕೂ ಮುನ್ನವೇ ತಾರಸಿ ಸ್ವಚ್ಚಗೊಳಿಸಿದ್ದೆವು. ಆದರೂ ಹೀಗೇಕಾಯಿತು'? ಎಂದು ಅವರಿಗೇ ಜೋರು ಮಾಡಿದೆ.`ಇರಲಿ ಬಿಡಿ. ಮೊದಲು ಫಿಲ್ಟರ್ ಕ್ಲೀನ್ ಮಾಡಿ ಸಂಪ್‌ಗೆ ಮಳೆನೀರು ಇಳಿಯುವಂತೆ ಮಾಡೋಣ. ನಂತರ ಚಾವಣಿ ಸ್ವಚ್ಚತೆ ಬಗ್ಗೆ ಯೋಚಿಸೋಣ' ಎಂದ ಎಂಜಿನಿಯರ್, ಬ್ರಷ್‌ನಿಂದ ಫಿಲ್ಟರ್ ಮೇಲಿನ ಸೀಮೆಂಟ್ ತೆಗೆಯಲೆತ್ನಿಸಿದರು. ತಿಂಗಳಿನಿಂದ ಅಂಟಿಕೊಂಡು ಗಟ್ಟಿಯಾಗಿದ್ದ ಸಿಮೆಂಟ್ ಅಷ್ಟು ಸುಲಭವಾಗಿ ಹೋಗಲಿಲ್ಲ.`ಸಮೀಪದಲ್ಲಿ ಗ್ಯಾರೇಜ್ ಇದೆಯಾ. ಗ್ಯಾರೇಜ್‌ನಲ್ಲಿ ವಾಹನ ತೊಳೆಯುವಂತೆ ಜೋರಾಗಿ ಫಿಲ್ಟರ್ ಸ್ವಚ್ಛಗೊಳಿಸಿದರೆ ಸರಿಹೋಗುತ್ತದೆ' ಎಂದರು. ಸಮೀಪದ ಗ್ಯಾರೇಜ್‌ನಲ್ಲಿದ್ದ  ಹುಡುಗ ಫಿಲ್ಟರ್‌ಗೆ ಜೋರಾಗಿ ನೀರು, ಗಾಳಿ ಬಿಟ್ಟ. ಫಿಲ್ಟರ್‌ಗೆ ಅಂಟಿದ್ದ ಸಿಮೆಂಟ್ ಪದರ ನಿಧಾನವಾಗಿ ಕಳಚಿಕೊಂಡಿತು.ನಂತರ ಫಿಲ್ಟರನ್ನು ಮಳೆ ನೀರು  ಶೋಧಿಸುವ ಮುಖ್ಯ ಉಪಕರಣಕ್ಕೆ ಜೋಡಿಸಲಾಯಿತು. ನಂತರ ನೀರು ಸುರಿದು ಪರೀಕ್ಷಿಸಿದರೆ ಪೈಪ್‌ನಿಂದ ನೀರಿನ ಜತೆಗೆ ಹಾಲಿನ ಕವರ್, ಕಾಗದದ ಚೂರು, ತೆಂಗಿನ ನಾರು ಹೊರ ಬಂದವು. ಅದನ್ನೆಲ್ಲ ಸ್ವಚ್ಛಗೊಳಿಸಿ ಚಾವಣಿಯ ನೀರು ಸಂಪ್‌ಗೆ ಇಳಿಯುವ `ತಿರುಗಣೆ' ತೆರೆದ ಕೂಡಲೇ ಸಂಪ್‌ಗೆ ನೀರು ಇಳಿಯಿತು.ಅದನ್ನೆಲ್ಲ ನೋಡುತ್ತಿದ್ದ ಮಗಳು ಕೇಳಿದಳು, `ಅಪ್ಪಾ, ಈ ಪೈಪ್ ಒಳಗೆ ಹಾಲಿನ ಕವರ್, ತೆಂಗಿನ ನಾರು, ಕಾಗದ ಹೇಗೆ ಸೇರಿಕೊಂಡಿತು'?`ಪೈಪ್‌ನೊಳಗೆ ಇಲಿ, ಹೆಗ್ಗಣ ಓಡಾಡಿವೆ. ಅವು ತ್ಯಾಜ್ಯ ಒಳಸೇರಿಸಿವೆ' ಎಂದು ವಿವರಿಸಿದ ಎಂಜಿನಿಯರ್, ಪೈಪ್‌ಗೆ ಒಂದು ಜಾಲರಿಯುಕ್ತ ಟೋಪಿ ತೊಡಿಸಿದರೆ, ಸಮಸ್ಯೆ ಇರಲ್ಲ ಎಂದೂ ಸಲಹೆ ನೀಡಿದರು.ಹೊಸ ಬಡಾವಣೆಗಳಲ್ಲಿ ಮನೆಕಟ್ಟುವವರಿಗೆ ಇಂಥ ಸಮಸ್ಯೆ ಸಾಮಾನ್ಯ. ಏಕೆಂದರೆ, ನಾವು ವಾಸಿಸುವ ಮನೆಯ ಅಕ್ಕ ಪಕ್ಕದಲ್ಲಿ ಹೊಸದಾಗಿ ಮನೆಗಳು ನಿರ್ಮಾಣವಾಗುತ್ತಿರುತ್ತವೆ. ಆ ಮನೆಗಳಿಗೆ ಬಳಸುವ ಸಿಮೆಂಟ್, ಇಟ್ಟಿಗೆ ಚಾವಣಿ ಮೇಲೆ ಬೀಳುತ್ತಿರುತ್ತದೆ. ಹಾಗಾಗಿ ಸೀಮೆಂಟ್, ಮರಳು, ಸಣ್ಣ ಸಣ್ಣ ಕಲುಗ್ಲಳು ಮಳೆ ನೀರು ಸಂಗ್ರಹದ ಶೋಧಕದೊಳಗೆ ಸೇರಿಕೊಳ್ಳುತ್ತವೆ. ಇದರಿಂದ ಮಳೆ ನೀರು ಶೋಧಕವನ್ನು ದಾಟಿ ಸಂಪ್‌ಗೆ ಇಳಿಯುವ ಬದಲು ಅಶುದ್ಧ ನೀರು ಹೊರ ಹೋಗುವ (ಫಸ್ಟ್ ಫಷ್ಲ್ ಔಟ್) ಪೈಪಿನಿಂದ ಚರಂಡಿ ಸೇರುತ್ತದೆ ಎನ್ನುತ್ತಾರೆ `ಫಾರ್ಮ್ ಲ್ಯಾಂಡ್ ರೇನ್ ವಾಟರ್' ಸಂಸ್ಥೆಯ ಕೃಷ್ಣ.ಪರಿಹಾರ

ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಂಡಿರುವವರು, ಮಳೆಗಾಲ ಆರಂಭಕ್ಕೆ ಮುನ್ನ ಚಾವಣಿ ಸ್ವಚ್ಚಗೊಳಿಸಿಕೊಳ್ಳಬೇಕು.ಮನೆ ಸುತ್ತ ಹೊಸ ಮನೆಗಳು ನಿರ್ಮಾಣವಾಗುತ್ತಿದ್ದರೆ, ತಮ್ಮ ಮನೆ ಚಾವಣಿ ಸ್ವಚ್ಚವಾಗಿರುವುದರ ಬಗ್ಗೆ ನಿತ್ಯ ನಿಗಾವಹಿಸಬೇಕು.ಶೋಧಕದಿಂದ ಸಂಪ್‌ಗೆ ನೀರು ಇಳಿಯುತ್ತಿದೆಯೋ, ಇಲ್ಲವೋ ಖಚಿತಪಡಿಸಿಕೊಂಡು, ಆಗಾಗ್ಗೆ ಫಿಲ್ಟರ್ ಸ್ವಚ್ಚಗೊಳಿಸಬೇಕು.ಫಿಲ್ಟರ್‌ಮೆಷ್ ಹಾಗೂ ಮೇಲ್ಪದರದ ರಂಧ್ರ  ಶುದ್ಧವಾಗುವವರೆಗೂ ಬ್ರಷ್‌ನಿಂದ ಸ್ವಚ್ಚಗೊಳಿಸಬೇಕು.ಚಾವಣಿಯಲ್ಲಿ ಮಳೆ ನೀರು ಪೈಪ್ ಮೇಲ್ಭಾಗದಲ್ಲಿ ಸಣ್ಣ ಕಣ್ಣಿನ ಜಾಲರಿ ಅಳವಡಿಸಿದರೆ ಫಿಲ್ಟರ್ ಒಳಗೆ ಕಸಕಡ್ಡಿ ಇಳಿಯುವುದನ್ನು ತಪ್ಪಿಸಬಹುದು. ಆದರೆ ಸಿಮೆಂಟ್ ಪುಡಿ ಒಳ ಸೇರುವುದನ್ನು ತಪ್ಪಿಸಲು, ಸ್ವಚ್ಚಗೊಳಿಸುವುದೇ ಪರಿಹಾರ.ಎಂಡ್ ಪೈಪ್ ಅಥವಾ ಫಸ್ಟ್ ಫಷ್ಲ್ ಪೈಪ್ ತುದಿಗೆ ಟೋಪಿ ಅಳವಡಿಸಿ ಹೆಗ್ಗಣ, ಇಲಿ, ಹಲ್ಲಿ ಪ್ರವೇಶ ನಿರ್ಬಂಧಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.