ಮಂಗಳವಾರ, ಏಪ್ರಿಲ್ 20, 2021
32 °C

ಮಳೆ ನೀರು ಸಂಗ್ರಹ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಪ್ರತಿ ಕಟ್ಟಡಗಳಲ್ಲಿ ಡಿಸೆಂಬರ್ 31ರ ಒಳಗಾಗಿ ಮಳೆ ನೀರು ಸಂಗ್ರಹ ಯೋಜನೆಯನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ತಪ್ಪಿದಲ್ಲಿ ನೀರು ಹಾಗೂ ಒಳಚರಂಡಿ ಸಂಪರ್ಕವನ್ನು ಬೆಂಗಳೂರು ಜಲಮಂಡಲಿ ಕಡಿತಗೊಳಿಸಲಿದೆ.ಸಚಿವ ಎಸ್. ಸುರೇಶ್ ಕುಮಾರ್ ಅವರ ನೇತೃತ್ವದಲ್ಲಿ ಸೋಮವಾರ ನಡೆದ ಜಲಮಂಡಲಿಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ನಿಯಮಾವಳಿಗಳನ್ನು ರೂಪಿಸಿದ ನಂತರ ಸರ್ಕಾರದಿಂದ ಅಧಿಕೃತ ಪ್ರಕಟಣೆ ಹೊರಬೀಳಲಿದೆ.ಬೆಂಗಳೂರು ಜಲಮಂಡಲಿ ಕಾಯ್ದೆ ಪ್ರಕಾರ ಗಡುವು ನಿಗದಿಪಡಿಸಲಾಗಿದೆ. ಯೋಜನೆ ಅಳವಡಿಸಿಕೊಳ್ಳದ ನಾಗರಿಕರ ವಿರುದ್ಧ ಕ್ರಮ ಕೈಗೊಳ್ಳಲು ಜಲಮಂಡಲಿಯ ನಿಯಮಾವಳಿಗಳಿಗೆ ತಿದ್ದುಪಡಿ ಮಾಡಲಾಗುತ್ತಿದೆ. ನಂತರವೂ ಯೋಜನೆಯನ್ನು ಅಳವಡಿಸಿಕೊಳ್ಳದೇ ಹೋದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಜಲಮಂಡಲಿ ಮೂಲಗಳು ತಿಳಿಸಿವೆ.‘ಸಭೆಯ ನಂತರ ಗಡುವು ಹಾಗೂ ನಿಯಮಾವಳಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿಕೊಡಲಾಗಿದೆ. ಇನ್ನು ಒಂದು ವಾರದ ಒಳಗೆ ಇಲಾಖೆ ಅಧಿಕೃತ ಪ್ರಕಟಣೆ ನೀಡಲಿದೆ’ ಎಂದು    ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ‘ಮಳೆ ನೀರು ಸಂಗ್ರಹ ಅಳವಡಿಸಿಕೊಳ್ಳುವವರಿಗೆ ಜಲಮಂಡಲಿ ವತಿಯಿಂದ ಈಗಾಗಲೇ ಸಾಲ ಸೌಲಭ್ಯ ಒದಗಿಸುತ್ತಿದೆ. ಅಲ್ಲದೇ ಆಸ್ತಿ ತೆರಿಗೆಯಲ್ಲಿ ಕನಿಷ್ಠ 5 ವರ್ಷಗಳ ಕಾಲ ಶೇ 2ರಷ್ಟು ತೆರಿಗೆ ವಿನಾಯ್ತಿ ನೀಡಲು ಮನವಿ ಮಾಡಲಾಗಿದೆ. ಡಿಸೆಂಬರ್ 31ರವರೆಗೂ ಮಳೆ ನೀರು ಸಂಗ್ರಹ ಕುರಿತು ಜನಜಾಗೃತಿ ಮುಂದುವರೆಸಲು ನಿರ್ಧರಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.2400 ಚದರ ಅಡಿ ಅಥವಾ ಅದಕ್ಕಿಂತ ದೊಡ್ಡ ನಿವೇಶನದಲ್ಲಿ ನಿರ್ಮಿಸಿದ ಕಟ್ಟಡದಲ್ಲಿ ಮಳೆ ನೀರು ಸಂಗ್ರಹವನ್ನು ಕಡ್ಡಾಯಗೊಳಿಸಲಾಗಿದೆ. ನಗರದಲ್ಲಿ ಸುಮಾರು 58 ಸಾವಿರ ಕಟ್ಟಡಗಳಿದ್ದು ಇವುಗಳಲ್ಲಿ ಅಂದಾಜು 29 ಸಾವಿರ ಕಟ್ಟಡಗಳು ಮಾತ್ರ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.