ಭಾನುವಾರ, ಮೇ 9, 2021
26 °C

ಮಳೆ ನೀರು ಸಂಗ್ರಹ ಪದ್ಧತಿ ಅಸಮರ್ಪಕ- ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:`ಶಾಲೆ, ಕಾಲೇಜು, ಸರ್ಕಾರಿ ಕಟ್ಟಡಗಳೂ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಳೆ ನೀರು ಸಂಗ್ರಹ ಪದ್ಧತಿಯನ್ನು ಸಮರ್ಪಕವಾಗಿ ಅಳವಡಿಸಲಾಗುವುದು ಎಂದು ರಾಜ್ಯ ಸರ್ಕಾರವು 2006ರಲ್ಲಿ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು. ಆದರೆ ಇದುವರೆಗೂ ಮಳೆ ನೀರು ಸಂಗ್ರಹ ಪದ್ಧತಿಯನ್ನು ಸರಿಯಾದ ಪ್ರಮಾಣದಲ್ಲಿ ಜಾರಿಗೊಳಿಸಿಲ್ಲ~ ಎಂದು ನೀರಾವರಿ ತಜ್ಞ ಕ್ಯಾಪ್ಟನ್ ಎಸ್. ಡಾ.ರಾಜಾರಾವ್ ಅಸಮಾಧಾನ ವ್ಯಕ್ತಪಡಿಸಿದರು.ವಿದ್ಯಮಾನ ವೇದಿಕೆಯು ನಗರದ ಗಾಂಧಿ ಭವನದಲ್ಲಿ ಶನಿವಾರ ಆಯೋಜಿಸಿದ್ದ `ಬೆಂಗಳೂರು ನಗರದ ನೀರಿನ ಸಮಸ್ಯೆ ಮತ್ತು ಪರಿಹಾರಗಳು~ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ರಾಜ್ಯದ 32 ತಾಲ್ಲೂಕುಗಳಲ್ಲಿ ಅಂತರ್ಜಲ ಸಂಪೂರ್ಣವಾಗಿ ಬತ್ತಿದೆ. ಕುಡಿಯುವ ನೀರಿನ ಸಮಸ್ಯೆಗೆ ಅಂತರ್ಜಲದ ಬಳಕೆ ಮತ್ತು ಮಳೆ ನೀರು ಸಂಗ್ರಹ ಪದ್ದತಿಯನ್ನು ಅಳವಡಿಸಿಕೊಳ್ಳದೇ ಬೇರೆ ವಿಧಿಯಿಲ್ಲ.ನಗರದಲ್ಲಿ ಪೂರೈಕೆಯಾಗುತ್ತಿರುವ ನೀರಿನಲ್ಲಿ ಶೇ 40 ರಷ್ಟು ಪ್ರಮಾಣದ  ಸೋರಿಕೆಯಾಗುತ್ತಿದೆ. ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಸೋರಿಕೆ ಶೇ 16ಕ್ಕೆ ಇಳಿಸಬೇಕು~ ಎಂದು ಸಲಹೆ ನೀಡಿದರು.`ಕೃಷ್ಣರಾಜಸಾಗರ ಸೇರಿದಂತೆ ಇತರೆ ಜಲಾಶಯಗಳಲ್ಲಿ ಅಂತರ್ಜಲದ ಕೊಳವೆಬಾವಿಗಳನ್ನು ನಿರ್ಮಿಸಬೇಕು. ಜಲಾಶಯದಲ್ಲಿ ಹರಿಯುವಷ್ಟೇ ಭೂಮಿಯ ಅಂತರದಲ್ಲೂ ನೀರಿನ ಹರಿವು ಉತ್ತಮವಾಗಿರುವುದರಿಂದ ಸಾಕಷ್ಟು ನೀರಿನ ಸಮಸ್ಯೆಯನ್ನು ಪರಿಹರಿಸಬಹುದು~ ಎಂದು ಹೇಳಿದ ಅವರು, `ನೀರು ಪೋಲಾಗದಂತೆ ಮತ್ತು ನೀರಿನ ಮಹತ್ವದ ಬಗ್ಗೆ ಜನರಲ್ಲಿ ತಿಳಿ ಹೇಳುವ ಅಗತ್ಯವಿದೆ~ ಎಂದರು.`ಸರ್ಕಾರ ಪದೇ ಪದೇ ನೀರಿನ ಸಮಸ್ಯೆ ಕುರಿತು ತಜ್ಞರ ಸಮಿತಿಗಳನ್ನು ರಚಿಸಿ ಪರಿಹಾರ ಕಂಡುಕೊಳ್ಳುತ್ತಿದೆ. ಸಮಿತಿಯಲ್ಲಿ ವ್ಯಕ್ತವಾದ ಸಲಹೆಗಳನ್ನು ಪ್ರಾಯೋಗಿಕವಾಗಿ ಅಳವಡಿಸಲು ಹಿಂದೇಟು ಹಾಕುತ್ತಿದೆ. ಇದನ್ನು ತಡೆಯುವ ಸಲುವಾಗಿ ಪ್ರಾಧಿಕಾರ ರಚಿಸಬೇಕು. ಬೇಸಿಗೆ ಕಾಲ ಬರುವ ಮುನ್ನವೇ ನೀರಿನ ಸಮಸ್ಯೆಯನ್ನು ಪರಿಹರಿಸಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು~ ಎಂದು ಆಗ್ರಹಿಸಿದರು.ವೇದಿಕೆಯ ಅಧ್ಯಕ್ಷ ಶೈಲೇಶ್‌ಚಂದ್ರ ಗುಪ್ತಾ, ವೇದಿಕೆಯ ಪೋಷಕರಾದ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ, ಕಾರ್ಯದರ್ಶಿ ಸಂಪತ್‌ರಾಜ್ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.