ಮಂಗಳವಾರ, ಜನವರಿ 28, 2020
21 °C

ಮಳೆ ನೀರು ಸಂಗ್ರಹ: ಮಾ. 31ರವರೆಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ 60x40 ಚದರ ಅಡಿ ಹಾಗೂ ಅದಕ್ಕಿಂತಲೂ ಹೆಚ್ಚು ವಿಸ್ತೀರ್ಣದ ನಿವೇಶನಗಳಲ್ಲಿ ನಿರ್ಮಿಸಿರುವ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವಿಧಾನವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾರ್ಚ್ 31ವರೆಗೆ ಕಾಲಾವಕಾಶ ನೀಡಿದೆ.ಈ ಅವಧಿಯೊಳಗೆ ಕಡ್ಡಾಯವಾಗಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಳ್ಳದ ಕಟ್ಟಡಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ಸಂಪರ್ಕ ಕಡಿತಗೊಳಿಸಲು ಜಲಮಂಡಳಿ ನಿರ್ಧರಿಸಿದೆ. ಈ ಹಿಂದೆ ಡಿ. 31ರವರೆಗೆ ನೀಡಿದ್ದ ಗಡುವನ್ನು ಬಿಬಿಎಂಪಿ ಕೋರಿಕೆ ಮೇರೆಗೆ ಜಲಮಂಡಳಿ ಮಾ. 31ರವರೆಗೆ ವಿಸ್ತರಿಸಿದೆ.ನಗರದಲ್ಲಿ 60x40 ಚದರ ಅಡಿ ಹಾಗೂ ಅದಕ್ಕಿಂತಲೂ ಹೆಚ್ಚು ವಿಸ್ತೀರ್ಣದ ನಿವೇಶನಗಳಲ್ಲಿ 55 ಸಾವಿರ ಕಟ್ಟಡಗಳಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಇದುವರೆಗೆ 35 ಸಾವಿರ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಳ್ಳಲಾಗಿದೆ. ಇನ್ನು, 20 ಸಾವಿರ ಕಟ್ಟಡಗಳ ಮಾಲೀಕರು ಮಾ. 31ರೊಳಗಾಗಿ ಮಳೆ ನೀರು ಸಂಗ್ರಹ ವಿಧಾನವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.`ಕಟ್ಟಡ ಮಾಲೀಕರು ನಿಗದಿತ ಅವಧಿಯೊಳಗೆ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಳ್ಳಲು ಬದ್ಧತೆ ಪ್ರಮಾಣ ಪತ್ರವನ್ನು ಜಲಮಂಡಳಿಗೆ ನೀಡಬೇಕಾಗುತ್ತದೆ. ಈಗಾಗಲೇ ಇಂತಹ ಸುಮಾರು 1500 ಅರ್ಜಿಗಳನ್ನು ಮಂಡಳಿ ಸ್ವೀಕರಿಸಿದೆ~ ಎಂದು ಜಲಮಂಡಳಿ ಪ್ರಧಾನ ಮುಖ್ಯ ಎಂಜಿನಿಯರ್ ಟಿ. ವೆಂಕಟರಾಜು `ಪ್ರಜಾವಾಣಿ~ಗೆ ತಿಳಿಸಿದರು.`ಈ ರೀತಿ ಕಾಲಾವಕಾಶ ವಿಸ್ತರಿಸಲು ಜಲಮಂಡಳಿಗೆ ಕಾಯ್ದೆಯಡಿ ಪರೋಕ್ಷವಾದ ಅಧಿಕಾರವನ್ನು ಸರ್ಕಾರ ನೀಡಿದೆ. ಇದನ್ನು ಬಳಸಿಕೊಂಡು ಸಾರ್ವಜನಿಕರಿಗೆ ಕೊನೆಯ ಅವಕಾಶ ನೀಡುತ್ತಿದ್ದೇವೆ. ನಂತರವೂ ಈ ವಿಧಾನವನ್ನು ಅಳವಡಿಸಿಕೊಳ್ಳದ ಕಟ್ಟಡಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ಸಂಪರ್ಕವನ್ನು ಕಡಿತಗೊಳಿಸಲು ಕಟ್ಟುನಿಟ್ಟಿನ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ~ ಎಂದು ಅವರು ಎಚ್ಚರಿಸಿದರು.

ಪ್ರತಿಕ್ರಿಯಿಸಿ (+)