ಗುರುವಾರ , ಏಪ್ರಿಲ್ 15, 2021
27 °C

ಮಳೆ ನೀರು ಸಂಗ್ರಹ: ಹೈಕೋರ್ಟ್‌ಗೆ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಳೆ ನೀರು ಸಂಗ್ರಹಣೆಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಪ್ರತ್ಯೇಕ ವಿಭಾಗ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಪಾಲಿಕೆಯು ಹೈಕೋರ್ಟ್‌ಗೆ ಮಂಗಳವಾರ ತಿಳಿಸಿದೆ.ಮುಖ್ಯ ಎಂಜಿನಿಯರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ, ಮಳೆ ನೀರು ಸಂಗ್ರಹಕ್ಕೆ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಸಿದ್ದಯ್ಯ ಅವರು ತಿಳಿಸಿದ್ದಾರೆ.ನಗರದಲ್ಲಿ ರಸ್ತೆಗಳ ದುರಸ್ತಿಗೆ ಆದೇಶಿಸುವಂತೆ ಕೋರಿ 2007ರಲ್ಲಿ ಹಿರಿಯ ವಕೀಲ ಕೆ.ಎನ್.ಸುಬ್ಬಾರೆಡ್ಡಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸಿದ್ದಯ್ಯ ಅವರು ಈ ಪ್ರಮಾಣ ಪತ್ರವನ್ನು ಸಲ್ಲಿಸಿದ್ದಾರೆ.‘ಹೈಕೋರ್ಟ್ ನಿರ್ದೇಶನದ ಮೇಲೆ ರಚನೆಗೊಂಡ ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್ ಕ್ಯಾಪ್ಟನ್ ರಾಜಾರಾವ್ ಅವರ ನೇತೃತ್ವದ ತಜ್ಞರ ಸಮಿತಿಯು ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ 107 ಶಿಫಾರಸುಗಳನ್ನು ಮಾಡಿತ್ತು. ಆ ಪೈಕಿ 95 ಅನ್ನು ಪಾಲಿಕೆ ಅಳವಡಿಸಿಕೊಂಡಿದೆ’ ಎಂದು ಸಿದ್ದಯ್ಯ ತಿಳಿಸಿದ್ದಾರೆ.‘ಇ-ಟೆಂಡರಿಂಗ್, ಇ- ಪ್ರಕ್ಯೂರ್‌ಮೆಂಟ್, ತಾಂತ್ರಿಕ ವಿಚಕ್ಷಣ ಘಟಕ ಸ್ಥಾಪನೆ ಮುಂತಾದ ಶಿಫಾರಸುಗಳನ್ನು ಅಳವಡಿಸಲಾಗಿದ್ದು, ಈ ಮೂಲಕ ರಸ್ತೆ ದುರಸ್ತಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ‘ರಸ್ತೆ ಕಾಮಗಾರಿಗೆ ಮಾರ್ಗಸೂಚಿಗಳು’ ಎಂಬ ಪುಸ್ತಕ ಹೊರತರಲಾಗಿದೆ. ಯೋಜನೆಯ ಉಸ್ತುವಾರಿಯನ್ನು ‘ಸಿವಿಕ್ ಏಡ್ ಟೆಕ್ನೋ ಕ್ಲಿನಿಕ್’ ಎಂಬ ಸಂಸ್ಥೆಗೆ ನೀಡಲಾಗಿದೆ. ಈ ಸಂಸ್ಥೆಯು ರಸ್ತೆಯ ಗುಣಮಟ್ಟದ ಕುರಿತು ಪರಿಶೀಲನೆ ನಡೆಸುತ್ತದೆ’ ಎಂದು ಅವರು ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.