ಸೋಮವಾರ, ಮೇ 10, 2021
21 °C
ನಗರ ಸಂಚಾರ

ಮಳೆ ಬಂದರೆ ಬಳ್ಳಾರಿ ಗೇಟ್ ರಸ್ತೆ ಬಂದ್!

ಕೆ.ಎಸ್.ಸುನಿಲ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆ ಬಂದರೆ ಬಳ್ಳಾರಿ ಗೇಟ್ ರಸ್ತೆ ಬಂದ್!

ಗದಗ: ಮಳೆ ಬಂದರೆ ಸಾಕು ಈ ರಸ್ತೆ ಸಂಚಾರವೇ ಬಂದ್ ಆಗುತ್ತದೆ.ಹೌದು. ಈ ಸಮಸ್ಯೆ ನಿನ್ನೆ, ಮೊನ್ನೆಯದ್ದಲ್ಲ. ದಶಕಗಳಿಂದ ಜನತೆ ಸಮಸ್ಯೆ  ಎದುರಿಸುತ್ತಿದ್ದಾರೆ. ಪ್ರತಿ ವರ್ಷವೂ ಮಳೆಗಾಲದಲ್ಲಿ ಬಳ್ಳಾರಿ ರೈಲ್ವೆ ಗೇಟ್ ರಸ್ತೆಯಲ್ಲಿ ನೀರು ನಿಂತು ಸಾರ್ವಜನಿಕರು ಸಂಚರಿಸಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಗದಗ -ಬೆಟಗೇರಿ ಅವಳಿ ನಗರದ ಸಂಪರ್ಕ ಕಡಿತಗೊಂಡು ಜನರು ಪರದಾಡುವಂತಾಗಿದೆ.ಬೆಟಗೇರಿಯ ಬಸ್‌ನಿಲ್ದಾಣ, ಮಾರುಕಟ್ಟೆಗೆ ಗದಗನಿಂದ ಹೋಗಲು ಈ ರಸ್ತೆ ಅವಶ್ಯಕ. ಬೆಟಗೇರಿಯಿಂದ ಗದಗ, ಕೆ.ಸಿ.ರಾಣಿ ರಸ್ತೆ, ರಾಜೀವ ಗಾಂಧಿನಗರ ಸೇರಿದಂತೆ ಹಲವು ನಗರಗಳಿಗೆ ಸಂಪರ್ಕವಾಗಿದೆ. ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಶಾಲಾ-ಕಾಲೇಜು ಮತ್ತು ಕಚೇರಿಗೆ ಹೋಗುವವರು ಇದೇ ರಸ್ತೆ ಮೂಲಕ ಹಾದು ಹೋಗಬೇಕು. ಮಳೆಗಾಲದಲ್ಲಿ ರಸ್ತೆ ಸಂಚಾರ ಸ್ಥಗಿತಗೊಳ್ಳುವುದರಿಂದ ಜನರ ಪಾಡು ಅಷ್ಟಿಷ್ಟಲ್ಲ.ಜೋರು ಮಳೆಯಾಗುವುದಿರಲಿ ಅಲ್ಪ ಪ್ರಮಾಣ ದಲ್ಲಿ ಮಳೆಯಾದರೆ ಸಾಕು ಬಳ್ಳಾರಿ ಗೇಟ್ ರಸ್ತೆಯಲ್ಲಿ ಹೆಚ್ಚು ನೀರು ನಿಂತು ಸಂಪರ್ಕ ಕಡಿತಗೊಳ್ಳುತ್ತದೆ. ಜನರು ಅನ್ಯ ಮಾರ್ಗವಿಲ್ಲದೆ ಸುತ್ತು ಹಾಕಿಕೊಂಡು ಮತ್ತೊಂದು ರಸ್ತೆಯ ಮೂಲಕ ಹೋಗಬೇಕು.ಈ ರಸ್ತೆಯಲ್ಲಿ ಅಡ್ಡಲಾಗಿ ರೈಲ್ವೆ ಮಾರ್ಗ ಹಾದು ಹೋಗಿರುವುದರಿಂದ ಇಲ್ಲಿ ಮೇಲ್ಸೇತುವೆ ನಿರ್ಮಿಸಲಾಗಿದೆ. ಬಳ್ಳಾರಿ ಗೇಟ್ ತಗ್ಗು ಪ್ರದೇಶದಲ್ಲಿ ಇರುವ ಕಾರಣ ಮಳೆಯಾದರೆ ಸುತ್ತಮುತ್ತಲಿನ ಭಾಗದ ನೀರು ಇಲ್ಲಿ ಸಂಗ್ರಹವಾಗುತ್ತದೆ. ಸೇತುವೆ ಕಳೆಭಾಗದಲ್ಲಿ ನೀರ ಹರಿದು ಹೋಗಲು ಸಣ್ಣ ಪ್ರಮಾಣದ ಪೈಪ್ ಅಳವಡಿಸಲಾಗಿದೆ. ಆದರೆ ನೀರು ಹೋಗುವ ಜಾಗದಲ್ಲಿ ತ್ಯಾಜ್ಯ ಶೇಖರಣೆಗೊಂಡು ಬಂದ್ ಆಗಿ ರುವುದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಈ ರಸ್ತೆಯಲ್ಲಿ ಮಳೆಯ ನೀರು ವಾರಗಟ್ಟಲೇ ನಿಲ್ಲುವುದರಿಂದ ಸೊಳ್ಳೆಗಳು ಹುಟ್ಟಿಕೊಂಡು ಸುತ್ತಲಿನ ಪ್ರದೇಶದಲ್ಲಿ ಸಾಂಕ್ರಮಿಕ ರೋಗಗಳು ಹರಡುವ ಸಾಧ್ಯತೆಯೂ ಇದೆ. ರಾತ್ರಿ ವೇಳೆ ಗೊತ್ತಿಲ್ಲದೆ ಹೋದ ವಾಹನಗಳು ಅಪಘಾತಕ್ಕೀಡಾಗಿರುವ ಘಟನೆಗಳು ನಡೆದಿವೆ.ಕೋರ್ಟ್ ಮುಂದಿನ ರೈಲ್ವೆ ಕೆಳಸೇತುವೆ ರಸ್ತೆ ಮಾದರಿಯಲ್ಲಿಯೇ ಪುನರ್ ನಿರ್ಮಾಣ ಮಾಡ ಬೇಕು ಎಂಬುದು ಸಾರ್ವಜನಿಕರ ಒತ್ತಾಯ ವಾ ಗಿದೆ. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಅವರು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಯನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.ಆದ್ದರಿಂದ ಸಂಬಂಧಪಟ್ಟ ಇಲಾಖೆ ವಿಳಂಬ ಮಾಡದೇ ಶೀಘ್ರದಲ್ಲಿಯೇ ಕಾಮಗಾರಿ ಕೈಗೊಂಡು ಸಮಸ್ಯೆ ಪರಿಹರಿಸಲು ಮುಂದಾಗಬೇಕು. ರಸ್ತೆಯಲ್ಲಿ ನೀರು ಸಂಗ್ರಹ ಗೊಳ್ಳದಂತೆ ಶಾಶ್ವತ ಪರಿಹಾರ ಕಲ್ಪಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು ಎನ್ನುತ್ತಾರೆ ನಾಗರಿಕರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.