ಮಳೆ-ಬಿಸಿಲಿನ ಆಟ

7
ಮಂಜಿನ ನಡುವಿನ ಗುಡ್ಡ

ಮಳೆ-ಬಿಸಿಲಿನ ಆಟ

Published:
Updated:
ಮಳೆ-ಬಿಸಿಲಿನ ಆಟ

ಸುತ್ತಲೂ ಕಣ್ಣು ಹಾಯಿಸಿದಷ್ಟೂ ಹಚ್ಚ ಹಸಿರನ್ನು ಹೊದ್ದು ಮಲಗಿದಂತೆ ಕಾಣುವ ಭುವಿ. ಬೆಟ್ಟ-ಗುಡ್ಡಗಳ ಆವರಿಸಿದ ಮಂಜು ಕವಿದ ವಾತಾವರಣ. ನೇಸರನ ಕಣ್ಣಾಮುಚ್ಚಾಲೆ ನಡುವೆ ಕಂಗೊಳಿಸುವ ರಮಣೀಯ ದೃಶ್ಯ. ಗುಡ್ಡದ ಮೇಲೆ ನಿಂತಾಗ ಆಕಾಶವೇ ಅಂಗೈನಲ್ಲಿ ಹಿಡಿದಷ್ಟು ಅನುಭವ. ಒಮ್ಮೆಲೆ ಬರುವ ತುಂತುರು ಮಳೆ, ಸುತ್ತಲೂ ಆವರಿಸುವ ಮಂಜು ನಿಮ್ಮ ಮೈ-ಮನವನ್ನು ಪುಳಕಿತಗೊಳಿಸುತ್ತದೆ. ರಮ್ಯ-ರಮಣೀಯ ದೃಶ್ಯ ಕಂಡು ಒಂದು ಕ್ಷಣ ಎಲ್ಲವನ್ನು ಮೈಮರೆಯುತ್ತೇವೆ.

ಇದು ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಪಟ್ಲ ಗುಡ್ಡದ ಚಿತ್ರಣ. ಬಡವರ ಊಟಿ ಎಂದೇ ಪ್ರಸಿದ್ಧಿ. ಸಕಲೇಶಪುರಕ್ಕೆ ಹೋದವರು ಸಾಮಾನ್ಯವಾಗಿ ಬಿಸಿಲೇ ಘಾಟ್‌ಗೆ ಹೋಗುತ್ತಾರೆ. ಆದರೆ ಬಿಸಿಲೇ ಘಾಟ್‌ಗೆ 5 ಕಿ.ಮೀ. ಇರುವಂತಲೇ ಪಟ್ಲ ಗುಡ್ಡ ಇದೆ. ಈ ಗುಡ್ಡ ಹೊರಗಿನವರಿಗೆ ಅಷ್ಟಾಗಿ ಗೊತ್ತಿಲ್ಲ. ಸ್ಥಳೀಯರ ಸಹಾಯದಿಂದ ಸಕಲೇಶಪುರದಿಂದ ಪ್ರಯಾಣ ಬೆಳೆಸಿ ಹೆತ್ತೂರು ಹಾದು ಹೊನಗೂರು ವೃತ್ತದಿಂದ 15 ಕಿ.ಮೀ. ಕ್ರಮಿಸಿದರೆ ಪಟ್ಲ ಗುಡ್ಡ ಎದುರಾಗುತ್ತದೆ.

ಗುಡ್ಡಕ್ಕೆ ಹೋಗುವ ಹಾದಿ ಸುಗಮವಾಗಿಲ್ಲ. ಕಡಿದಾದ ರಸ್ತೆ. ಮುಖ್ಯ ರಸ್ತೆಯಲ್ಲಿ ವಾಹನ ನಿಲ್ಲಿಸಿ ಟ್ರೆಕಿಂಗ್ ಮೂಲಕ ಹೋದರೆ ಅನುಭವ ರೋಮಾಂಚನ. ಕಾಲ್ನಡಿಗೆಯಲ್ಲಿ ಹೋಗಲು ಆಗದವರು `ಎಕ್ಸ್‌ಟ್ರಾ ಗೇರ್' ಇರುವ ಜೀಪ್‌ನಲ್ಲಿ ಗುಡ್ಡದ ತುದಿ ತಲುಪಬಹುದು.

ರೋಮಾಂಚನದ ಕ್ಷಣ

ಮೈಸೂರಿನಿಂದ ಉತ್ಸಾಹಿ ಯುವಕರ ತಂಡ ಬಿಸಿಲೇ ಘಾಟ್‌ಗೆ ಈಚೆಗೆ ಪ್ರಯಾಣ ಬೆಳೆಸಿದೆವು. ಆದರೆ ಸ್ಥಳೀಯರ ಮಾರ್ಗದರ್ಶನದ ಮೇರೆಗೆ ಪಟ್ಲ ಬೆಟ್ಟಕ್ಕೆ ಪ್ರಯಾಣ ಬೆಳೆಸಬೇಕಾಗಿ ಬಂತು. ಜೀಪ್‌ನಲ್ಲಿ ಹೋದರೂ ಗುಡ್ಡ ಹತ್ತುತ್ತಿದ್ದಂತೆ ಸುತ್ತಲಿನ ರಮ್ಯ ರಮಣೀಯ ದೃಶ್ಯ ನೋಡಿ ಇಳಿದೇ ಬಿಟ್ಟೆವು. ಕಾಲ್ನಡಿಗೆಯಲ್ಲಿಯೇ ಸಾಗಿತು ನಮ್ಮ ಪಯಣ. ಒಂದಷ್ಟು ದೂರ ಹತ್ತುತ್ತಿದ್ದಂತೆ ಮಂಜು ಕವಿದ ವಾತಾವರಣ.

ಸುತ್ತಲಿನ ಹಸಿರಿನ ರಾಶಿ ಅದೃಶ್ಯ. ಈ ರೋಮಾಂಚನದ ನಡುವಿನ ಪಯಣದಲ್ಲಿ ಆಯಾಸವೇ ಮಾಯ. ಬೆಟ್ಟವನ್ನು ಇನ್ನಷ್ಟು ಮೇಲೇರುವ ಉತ್ಸಾಹ. ಗುಡ್ಡದ ತುತ್ತತುದಿ ಸಮೀಪಿಸುತ್ತಿದ್ದಂತೆ ರಮಣೀಯ ದೃಶ್ಯ ಕಂಡು ಧನ್ಯರಾದೆವು. ದೂರದಲ್ಲಿ ಸಣ್ಣ ಝರಿಯಂತೆ ಧುಮ್ಮಿಕ್ಕಿ ಹರಿಯುತ್ತಿದ್ದ ಮಲ್ಲಹಳ್ಳಿ ಫಾಲ್ಸ್. ಫಾಲ್ಸ್‌ನಿಂದ ಹರಿದು ಮುಂದೆ ಹೋಗುತ್ತಿದ್ದ ನೀರು ರೇಖಾಚಿತ್ರವನ್ನೇ ಬಿಡಿಸಿತ್ತು.

ಸಮುದ್ರ ಮಟ್ಟದಿಂದ ಸುಮಾರು 2,800 ಕಿ.ಮೀ. ಎತ್ತರದಲ್ಲಿ ಇರುವ ಪಟ್ಲ ಗುಡ್ಡ ಏರಿದರೆ ಕೊಡಗು ಜಿಲ್ಲೆಗೆ ಸೇರಿದ ಮಲ್ಲಹಳ್ಳಿ ಫಾಲ್ಸ್ ಮತ್ತು ದಕ್ಷಿಣ ಕನ್ನಡದ ಪುಷ್ಪಗಿರಿ ಬೆಟ್ಟಗುಡ್ಡಗಳನ್ನು ಕಾಣಬಹುದು. ಗುಡ್ಡದ ಮೇಲೆ ನಿಂತು ಸುತ್ತಲಿನ ನೈಸರ್ಗಿಕ ಸೌಂದರ್ಯವನ್ನು ಸವಿಯುತ್ತಲೇ ಮೈ-ಮನ ಪುಳಕಿತವಾಗುತ್ತದೆ. ಸ್ವರ್ಗ ಸಿಕ್ಕಂತಾಗುತ್ತದೆ. ನಿಸರ್ಗದತ್ತವಾಗಿ ಬಂದ ಸುಂದರ ಗುಡ್ಡವನ್ನು ನೋಡಿ ಮೈ ಮರೆತಂತಾಗುತ್ತದೆ. ಇಲ್ಲಿಯೇ ಮನೆ ಮಾಡಿಕೊಂಡು ಇರಬೇಕೆಂದು ಅನಿಸದೇ ಇರದು.

ನೆನಪಿನ ದೋಣಿಯಲ್ಲಿ ಮನಸ್ಸು ತೇಲುತ್ತಿರುವಾಗಲೇ ತುಂತುರು ಮಳೆ ನಿಮ್ಮನ್ನು ಎಚ್ಚರಗೊಳಿಸುತ್ತದೆ. ಮಳೆ ಜೊತೆ ಮಂಜು ಆವರಿಸಿಬಿಟ್ಟರೆ ಎದುರಿಗಿದ್ದವರು ಅದೃಶ್ಯವಾಗುತ್ತಾರೆ! ಇದ್ದಕ್ಕಿದ್ದಂತೆ ಮಳೆ ನಿಂತು ಬಿಸಿಲು ಕಾಣಿಸಿಕೊಂಡು ಬೆಟ್ಟ-ಗುಡ್ಡಗಳ ನಡುವೆ ದೃಶ್ಯ ಕಾವ್ಯ ಮೂಡಿ ಬರುತ್ತದೆ. ಸುಂದರ ವನರಾಶಿಗಳ ನಡುವೆ ನೆರಳು-ಬೆಳಕಿನ ಕಣ್ಣಾಮುಚ್ಚಾಲೆ ಮನಸ್ಸಿಗೆ ಮತ್ತಷ್ಟು ಮುದ ನೀಡುತ್ತದೆ.

ಗುಡ್ಡವನ್ನು ಬಿಟ್ಟು ಮುಂದೆ ಹೋಗಲು ಮನಸ್ಸು ಒಪ್ಪುವುದಿಲ್ಲ. ಸುತ್ತಲ ರಮಣೀಯ ದೃಶ್ಯವನ್ನು ಮನಸ್ಸಿನಲ್ಲಿ ಬಚ್ಚಿಟ್ಟುಕೊಳ್ಳಬೇಕೆಂಬ ಆಸೆ ಮೊಳಕೆಯೊಡೆಯುತ್ತದೆ. ಕ್ಯಾಮೆರಾದಲ್ಲಿ ನಿಮ್ಮ ಸುಂದರ ಕ್ಷಣಗಳನ್ನು ಸೆರೆಹಿಡಿದುಕೊಳ್ಳಬಹುದು.

ಪಟ್ಲ ಗುಡ್ಡದಲ್ಲಿ ಹಿಂದೆ ಸಿನಿಮಾ ಚಿತ್ರೀಕರಣ ಸಹ ನಡೆದಿದೆ. ಪಟ್ಲ ಗುಡ್ಡದಿಂದ ಮುಂದೆ ಪ್ರಯಾಣ ಬೆಳೆಸಿದರೆ ಪ್ರಸಿದ್ಧ ಬಿಸಿಲೇ ಘಾಟ್ ತಲುಪಬಹುದು. ಬಿಸಿಲೇ ಘಾಟ್‌ನಲ್ಲಿ ಒಂದಷ್ಟು ಸಮಯ ಕಳೆದು ಮತ್ತೆ 20 ಕಿ.ಮೀ. ಪ್ರಯಾಣ ಬೆಳೆಸಿದರೆ ಕುಕ್ಕೆ ಸುಬ್ರಹ್ಮಣ್ಯ ತಲುಪಬಹುದು. ಮಳೆಗಾಲದಲ್ಲಿ ಪಟ್ಲ ಗುಡ್ಡಕ್ಕೆ ಬಂದರೆ ಜಿಗಣೆ ಕಾಟ. ಮಧುಮೇಹಿಗಳು ತೊಂದರೆ ಅನುಭವಿಸಬೇಕಾಗುತ್ತದೆ. 

ಅಕ್ಟೋಬರ್‌ನಿಂದ ಜನವರಿ ಒಳಗೆ ಪಟ್ಲ ಗುಡ್ಡಕ್ಕೆ ಪ್ರಯಾಣ ಬೆಳೆಸುವುದು ಸೂಕ್ತ. ಜನವರಿ ನಂತರ ಗುಡ್ಡಗಳಲ್ಲಿನ ಹಸಿರು ಮಾಯವಾಗತೊಡಗುತ್ತದೆ. ಸಕಲೇಶಪುರದಿಂದ ಬಿಸಿಲೇ ಘಾಟ್‌ಗೆ ಹೋಗಲು ಬಸ್ ವ್ಯವಸ್ಥೆ ಇದೆ. ಸ್ವಂತ ವಾಹನ ಇದ್ದವರು ಸ್ಥಳೀಯರ ಸಹಾಯದಿಂದ ನೇರವಾಗಿ ಪಟ್ಲ ಗುಡ್ಡ ತಲುಪಬಹುದು. ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸ್ಥಳ ಇದು. ಒಮ್ಮೆ ಇಲ್ಲಿಗೆ ಭೇಟಿ ನೀಡಿ, ನೆನಪಿನ ಬುತ್ತಿಯನ್ನು ಕೊಂಡೊಯ್ಯಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry