ಶುಕ್ರವಾರ, ಏಪ್ರಿಲ್ 23, 2021
31 °C

ಮಳೆ ಭಟ್ಟರ ಹೊಸ ಮುಂಗಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯೋಗರಾಜಭಟ್ಟರ `ಡ್ರಾಮಾ~ ಟೆಂಟು ಮೈಸೂರಿನಿಂದ ಕುಂದಾಪುರದ ಕಡಲ ಕಿನಾರೆಗೆ ಬಂದು ಬಹಳ ದಿನಗಳಾಗಿವೆ. ಬೀಜಾಡಿ ಸಮುದ್ರ ತಟದ ಮರಳ ಹಾಸಿನ ಮೇಲೆ ಅವರು `ರಂಗಮಂಚ~ ಕಟ್ಟಿದ್ದಾರೆ. `ಮುಂಗಾರು ಮಳೆ~ಗೆ ಕಾದು ಚಿತ್ರೀಕರಣ ನಡೆಸುತ್ತಿದ್ದಾರೆ. ಮಳೆ ಬಾರದ ಹೊತ್ತಿನಲ್ಲಿ ಕೃತಕ ಮಳೆ ತಂದು ಆಕ್ಷನ್ ಕಟ್ ಹೇಳುತ್ತಿದ್ದಾರೆ.  ಅದು ಚಿತ್ರದ ಪ್ರಥಮ ಅಧಿಕೃತ ಪತ್ರಿಕಾಗೋಷ್ಠಿ. ಕಡಲಿನ ಮೊರೆತದಂತೆಯೇ ಭಟ್ಟರ ಮಾತು ಸಾಗಿತ್ತು. ಅವರದೇ `ಪರಮಾತ್ಮ~ ಚಿತ್ರಕ್ಕಿಂತ ಭಿನ್ನವಾದ ಕಥಾವಸ್ತು ಚಿತ್ರದಲ್ಲಿದೆಯಂತೆ.ಇಂಥ ಬದಲಾವಣೆಗೆ ಒತ್ತಡವೇನಾದರೂ ಇತ್ತೇ ಎಂಬ ಪ್ರಶ್ನೆಗೆ ಅವರು ಒತ್ತಡವಿಲ್ಲದಿದ್ದರೂ ಬದಲಾಣೆಯ ಅಗತ್ಯವಿತ್ತು ಎಂಬುದನ್ನು ಸೂಚ್ಯವಾಗಿ ತಿಳಿಸಿದರು. ಜತೆಗೆ ಕತೆಯ ಮಂಥನಕಾರ್ಯದಲ್ಲಿ ತೊಡಗಿದ್ದ ವಿಕಾಸ್ ಇಂಥ ಬದಲಾವಣೆಗೆ ಕಾರಣ ಎಂದು ಮೆಚ್ಚಿಕೊಂಡರು.ಪದೇ ಪದೇ ಭಟ್ಟರ ಚಿತ್ರಗಳು ಮಳೆ ಅಥವಾ ಸಮುದ್ರವನ್ನೇ ಅರಸಿ ಹೊರಡುತ್ತಿರುವುದೇಕೆ? ಈ ಪ್ರಶ್ನೆಗೆ ಅವರ ಉತ್ತರ ಸೌಂದರ್ಯ ಮೀಮಾಂಸೆಯ ತುಣುಕಿನಂತಿತ್ತು. ಮಳೆ ಮತ್ತು ಸಮುದ್ರದ ಹಿತಕರ ವಾತಾವರಣ ಹಾಗೂ ಕ್ಯಾಮೆರಾ ಭಾಷೆಯಲ್ಲಿಹೇಳುವುದಾದರೆ ಅದರ `ಸ್ಯಾಚುರೇಷನ್~ ನೋಡಲು ಚಂದ ಎಂಬ ಕಾರಣಕ್ಕೆ ಮರಳಿ ಇಂಥದ್ದೇ ಯತ್ನಕ್ಕೆ ಕೈ ಹಾಕಿದ್ದಾರೆ ಅವರು. ಅಂದಹಾಗೆ, ಚಿತ್ರ ಶೇ 20ರಷ್ಟು ಮಳೆಯಲ್ಲಿ ತೋಯ್ದಿದೆ! ಅದರಲ್ಲಿಯೂ ಛಾಯಾಗ್ರಾಹಕ ಕೃಷ್ಣ ಹೊಸತೊಂದು ಕೈಚಳಕವನ್ನು ಚಿತ್ರದಲ್ಲಿ ತೋರಿಸಿದ್ದಾರಂತೆ.ಪ್ರತಿ ದೃಶ್ಯದಲ್ಲೂ ಸಣ್ಣಗೆ ಅಲುಗಾಡುವ ಕ್ಯಾಮೆರಾ `ಲೈವ್~ (ಹಿಡನ್ ಕ್ಯಾಮೆರಾ ಮೂಲಕ ದೃಶ್ಯ ಸೆರೆಹಿಡಿಯುವುದನ್ನು ನೆನಪಿಸಿಕೊಳ್ಳಿ) ಅನುಭವವನ್ನು ತಂದುಕೊಡುತ್ತದಂತೆ. ಎಪ್ಪತ್ತಕ್ಕೂ ಹೆಚ್ಚು ತಾಣಗಳಲ್ಲಿ `ಡ್ರಾಮಾ~ ಚಿತ್ರೀಕರಣ ನಡೆದಿದೆ.ಇದೇ ಕತೆಗೆ ಅಂಟಿಕೊಳ್ಳಲು ಕಾರಣ ಏನೆಂಬುದನ್ನು ಭಟ್ಟರು ವಿವರಿಸುತ್ತಾ ಹೋದರು. ವೆಂಕ್ಟ ಹಾಗೂ ಸತೀಶ ಪಾತ್ರಗಳು ಭಟ್ಟರನ್ನು ದೆವ್ವದಂತೆ ಆವರಿಸಿಕೊಂಡಿದ್ದವಂತೆ. ಕಾಲೇಜು ಹುಡುಗರ ಕತೆಯಾದರೂ ಇದು ಅದಷ್ಟೇ ಅಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರದಲ್ಲಿ ಗಂಭೀರವಾದ ಸಂದೇಶವಿದೆ.ಅದು ಈವರೆಗಿನ ಅವರ ಎಲ್ಲಾ ಚಿತ್ರಕ್ಕಿಂತಲೂ ಗಂಭೀರವಾದುದು ಎಂಬುದನ್ನು ಒತ್ತಿ ಹೇಳಿದರು. ನಿರ್ದೇಶಕರಿಗೂ, ನಿರ್ಮಾಪಕ ಜಯಣ್ಣರ ಪಾಲಿಗೂ ಇದು ಹೆಚ್ಚು ಬಜೆಟ್‌ನ ಚಿತ್ರ. `ಪರಮಾತ್ಮ~ ಚಿತ್ರದ ನಿರ್ಮಾಣದ ವೇಳೆ ಉಂಟಾದ ಎಡರು ತೊಡರುಗಳನ್ನು ಕಥಾ ರಚನೆಯ ಕಾಲಕ್ಕೆ ನಿವಾರಿಸಿಕೊಂಡಿದ್ದರಿಂದ ನಿರ್ಮಾಣದ ವೇಳೆ ಅನಗತ್ಯ ವೆಚ್ಚವಾಗಿಲ್ಲ ಎಂದರು ಜಯಣ್ಣ. ಆ ನಿಟ್ಟಿನಲ್ಲಿ ಭಟ್ಟರು ಹೆಚ್ಚು ಮೆಚ್ಯೂರ್ ಆಗಿ ನಿರ್ಮಾಪಕರಿಗೆ ಕಂಡಿದ್ದಾರೆ.  ಚಿತ್ರದ ನಾಲ್ಕು ಹಾಡುಗಳು ಭಟ್ಟರದು. ಉಳಿದ ಎರಡನ್ನು ಸಾಹಿತಿ ಜಯಂತ ಕಾಯ್ಕಿಣಿ ಒದಗಿಸುತ್ತಿದ್ದಾರೆ. ಸಂಗೀತ ನೀಡಿರುವುದು ವಿ. ಹರಿಕೃಷ್ಣ. ಮಾಧುರ್ಯ ಹೆಚ್ಚಾಯಿತು ಎಂದಾಗ ಪೋಲಿ ಗೀತೆಗಳನ್ನು ಬರೆಯತೊಡಗಿದ್ದು ಇದೇ ಭಟ್ಟರು. ಆದರೆ ಅದೂ ಅತಿ ಎನಿಸಿದಾಗ `ಡ್ರಾಮಾ~ ಹಾಡುಗಳನ್ನು ಭಿನ್ನವಾಗಿ ರಚಿಸಿದ್ದಾರೆ.ಕರಾವಳಿ ಸೀಮೆಯಲ್ಲಿ ಹುಟ್ಟಿ ಧಾರವಾಡ ಸೀಮೆಯನ್ನು ಹತ್ತಿರದಿಂದ ಕಂಡ ಅವರಿಗೆ ಮಂಡ್ಯ ಭಾಷೆಯಲ್ಲಿ ಸಂಭಾಷಣೆ ರಚಿಸುವುದು ಕಷ್ಟವಾಗಲಿಲ್ಲ. ಆ ಭಾಷೆಯಲ್ಲಿ ಬರೆಯತೊಡಗಿದಾಗ ಅಚ್ಚರಿ ಎನಿಸುವಷ್ಟು ಪದಪುಂಜಗಳ ರಾಶಿಯೇ ಹರಿದು ಬಂತಂತೆ. ಸಣ್ಣ ಪುಟ್ಟ ಎಡರು ತೊಡರುಗಳನ್ನು ಇಲ್ಲವಾಗಿಸಿದ್ದು ಮಂಡ್ಯದವರೇ ಆದ ಯಶ್, ಸತೀಶ್ ನೀನಾಸಂ ಹಾಗೂ ಅಂಬರೀಷ್ ಅವರ ಡೈಲಾಗ್ ಡೆಲಿವರಿ.            

ರಾಧಿಕಾ ಪಂಡಿತ್ ಚೆಲ್ಲು ಚೆಲ್ಲಾಗಿ ಕಾಣಿಸಿಕೊಳ್ಳುವಷ್ಟೇ ಸಲೀಸಾಗಿ ಗಂಭೀರ ಸನ್ನಿವೇಶಗಳಲ್ಲೂ ದುಡಿದಿದ್ದಾರೆ. ಇವರ ಅಭಿನಯ ಕೌಶಲ್ಯ ಸ್ವತಃ ಭಟ್ಟರನ್ನೂ ನಿಬ್ಬೆರಗಾಗಿಸಿದೆ. ಮೂಲತಃ ಕರಾವಳಿಯ ಹುಡುಗಿಯಾದ ಅವರಿಗೆ `ಮಳೆ ತಜ್ಞ~ರಾದ ಭಟ್ಟರು ಹಾಗೂ ಕೃಷ್ಣ ಅವರ ಜತೆ ಕೆಲಸ ಮಾಡುತ್ತಿರುವುದು ಅಪೂರ್ವ ಅನುಭವವಂತೆ.

ಸತೀಶ್ ನೀನಾಸಂ ಎರಡನೇ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಯಶ್ ಅವರೊಂದಿಗೆ `ಕಿರಾತಕ~, `ಜಾನು~ ಚಿತ್ರಗಳಲ್ಲಿ ಅಭಿನಯಿಸಬೇಕಿದ್ದ ಸತೀಶ್ ಅವರಿಗೆ ಆ ಅವಕಾಶ ದೊರೆತಿದ್ದು ಡ್ರಾಮಾ ಮೂಲಕ. ಸತೀಶ್ ಜೋಡಿಯಾಗಿ ಕಾಣಿಸಿಕೊಂಡಿರುವ ಸಿಂಧು ಲೋಕನಾಥ್ ಅವರದು ಚಿತ್ರದಲ್ಲಿ ಮೂಕಾಭಿನಯ. ಚಿತ್ರದಲ್ಲಿ ಸಿಂಧು ಅವರ ಮಾತನ್ನೂ ಸತೀಶರೇ ಆಡುತ್ತಾರಂತೆ. ಪತ್ರಿಕಾಗೋಷ್ಠಿಯಲ್ಲಿ ಅದೇ ಸ್ಥಿತಿ ಒದಗಿ ಬಂತು. ಸಿಂಧು ಹಾಜರಿರದ ಕಾರಣ ಅವರ ಮಾತುಗಳನ್ನೆಲ್ಲಾ ಸತೀಶರೇ ಆಡಿ ಮುಗಿಸಿದರು!ಚಿತ್ರೀಕರಣದಲ್ಲಿ ಸಿಂಧು, ಮಿತ್ರ, ಕಲ್ಯಾಣಿ ಕೂಡ ಪಾಲ್ಗೊಂಡಿದ್ದರು. ಕ್ಲೈಮ್ಯಾಕ್ಸ್ ಲೀಡ್ ಸೇರಿದಂತೆ ಇಡೀ ದಿನ ಮೂರು ದೃಶ್ಯಗಳನ್ನು ಸೆರೆ ಹಿಡಿಯಲಾಯಿತು. ಇನ್ನೂ ಹತ್ತರಿಂದ ಹನ್ನೆರಡು ದಿನ ಚಿತ್ರೀಕರಣ ಮುಂದುವರಿಯಲಿದೆ. ಅದಾದ ಬಳಿಕ ಎರಡು ಹಾಡುಗಳ ಶೂಟಿಂಗ್. ಜುಲೈ ಅಂತ್ಯದ ವೇಳೆಗೆ ಧ್ವನಿ ಮುದ್ರಿಕೆ ಬಿಡುಗಡೆಯಾಗಲಿದೆ. ಸೆಪ್ಟೆಂಬರ್ ಹೊತ್ತಿಗೆ ಚಿತ್ರ ತೆರೆ ಕಾಣಲಿದೆ.

ಡ್ರಾಮಾ: ಪಾತ್ರ ಪರಿಚಯ

ಯೋಗರಾಜ ಭಟ್ಟರು ಎಂದಿನಂತೆ ತಮ್ಮ ಚಿತ್ರದ ಕಥಾಸಾರವನ್ನು ಉಣಬಡಿಸಿದರು. ಪಾತ್ರಗಳ ಪರಿಚಯ ಮಾಡಿಸಿದರು. ಆ ಮೂಲಕ `ಡ್ರಾಮಾ~ ಕತೆಯ ಎಳೆಯನ್ನು ಬಿಡಿಸಿಟ್ಟರು. ಚಿತ್ರದ ಪ್ರಮುಖ ಪಾತ್ರಗಳು ಹೇಗಿವೆ ಎಂಬ ನಿಮ್ಮ ಕುತೂಹಲವನ್ನು ತಣಿಸುವ ಯತ್ನ ಇಲ್ಲಿದೆ.

ಯಂಕ್ಟ: ಅಲಿಯಾಸ್ ಟಿ.ಕೆ.ವೆಂಕಟೇಶ (ಯಶ್) ಎಂಬ ಪಡ್ಡೆ ಯುವಕನಿಗೆ ಎಲ್ಲ ಗೊತ್ತು ಅನ್ನೋದು ಬಿಟ್ಟರೆ ಏನೂ ಗೊತ್ತಿರೋದಿಲ್ಲ. ಆತ ಅಸಾಧ್ಯ ಜೀವನ ಪ್ರೇಮಿ. ಅಸಾಧ್ಯ ತುಂಟ ಹಾಗೂ ಪುಟಗೋಸಿ ಕವಿ.

 

ಸತೀಶ: ಮಂಡ್ಯದ ಕಡೆ ಪುಂಡಾಟಿಕೆ ನಡೆಸುತ್ತಿದ್ದ ಯಂಕ್ಟನ ಪ್ರಾಣಸ್ನೇಹಿತ ಸತೀಶ (ನೀನಾಸಂ ಸತೀಶ್). ವಿಚಿತ್ರ ಸ್ವಭಾವದ ಗುಮ್ಮನ ಗುಸ್ಕ. ಯಾವಾಗಲೂ ಏನೋ ಗಾಬರಿ. ಹೆಣ್ಣುಮಕ್ಕಳ ವಿಚಾರದಲ್ಲಿ ಮಿತಿ ಮೀರಿದ ಉತ್ಸಾಹ. ಕೆಲವು ಪ್ರೇಮ-ಕಾಮ ವೈಫಲ್ಯಗಳನ್ನು ಕಂಡವ.

ನಂದಿನಿ: ಇಡೀ ಊರಿಗೆ ತಲೆ ನೋವಾಗಿರುವ ಯಂಕ್ಟನ ಬದುಕಿನಲ್ಲಿ ನಂದಿನಿಯ (ರಾಧಿಕಾ ಪಂಡಿತ್) ಪರಿಚಯವಾಗುತ್ತದೆ. ಆಕೆಯದು ಅಸಾಧಾರಣ ಧೈರ್ಯ, ವಿದ್ಯೆ, ಮೊಂಡಾಟ. ಈಕೆಯ ಹಿಂದೆ ಯಂಕ್ಟ ಊರು ಬಿಟ್ಟು ಹೊರಡುತ್ತಾನೆ. ಅವನ ಹಿಂಬಾಲಕ ಸತೀಶ. ಎಂದೂ ಓದಲು ಬಯಸದ ಇವರು ಹುಡುಗಿಗಾಗಿ ಕಾಲೇಜು ಮೆಟ್ಟಿಲೇರುತ್ತಾರೆ.

ಚಂದ್ರಿಕಾ: ಕಾಲೇಜಿನಲ್ಲಿ ಸತೀಶನಿಗೆ ಜತೆಯಾಗುವವಳು ಚಂದ್ರಿಕಾ (ಸಿಂಧು ಲೋಕನಾಥ್). ಕಡುಬಡವಿ. ಮೂಕಿ. ಚಂದ್ರಿಕಾಳ ಮಾತುಗಳನ್ನು ಆಡುವುದು ಸತೀಶನೇ.

ಪ್ರಾಂಶುಪಾಲರು: ಇಂಥ ಹೊತ್ತಿನಲ್ಲಿ ಪ್ರಾಂಶುಪಾಲರು (ಸುಚೇಂದ್ರ ಪ್ರಸಾದ್) ವಿನಾಕಾರಣ ಈ ವಿದ್ಯಾರ್ಥಿಗಳಿಗೆ ಹತ್ತಿರವಾಗುತ್ತಾರೆ. ಹೆಂಡತಿ ಮಕ್ಕಳನ್ನು ಬಿಟ್ಟುಹೋದ ಇವರದು ಒಂಟಿ ಬದುಕು. ಹುಡುಗರ ಕಿತಾಪತಿಯಿಂದ ಅವರ ಬದುಕು ಭೀಕರವಾದಂತೆಯೇ ಮತ್ತೆ ಸುಂದರ ಕೂಡ ಆಗುತ್ತದೆ. ಇಂಥ ಹೊತ್ತಿನಲ್ಲಿ ಪ್ರಾಂಶುಪಾಲರು ಬದುಕಿದ್ದೂ ಸತ್ತಂತಾಗುತ್ತಾರೆ. ಅವರ ಗುರುತನ್ನು ಹೇಳುವ ಶವವೊಂದು ಊರಲ್ಲಿ ಸಿಗುತ್ತದೆ.

ಇನ್ಸ್‌ಪೆಕ್ಟರ್: ಈ ಅಸಂಗತ ಸಾವಿನ ಹಿಂದೆ ಬೀಳುವ ಇನ್ಸ್‌ಪೆಕ್ಟರ್‌ಗೆ (ರಾಕ್‌ಲೈನ್ ವೆಂಕಟೇಶ್) ಹಲವಾರು ಘೋರ ಸಂಗತಿಗಳು ಗೋಚರಿಸತೊಡಗುತ್ತವೆ. ಇವೆಲ್ಲದಕ್ಕೂ ಯಂಕ್ಟ ಹಾಗೂ ಸತೀಶ ಪರೋಕ್ಷವಾಗಿ ಕಾರಣರಾಗುತ್ತಾ ಸಾಗುತ್ತಾರೆ.

ಡಿಸೋಜಾ: ಈತ (ಸಂಪತ್ ಕುಮಾರ್) ಕರಾಳ ಚರಿತ್ರೆಯುಳ್ಳ ವ್ಯಕ್ತಿ. ಸಾವೊಂದರಿಂದಾಗಿ ಇವನ ಹಾಗೂ ದಂಡಪಾಣಿ (ಲೋಹಿತಾಶ್ವ) ಎಂಬ ಮಾಜಿ ಭೂಗತ ದೊರೆಯ ನಡುವೆ ತಿಕ್ಕಾಟ ಶುರುವಾಗುತ್ತದೆ. ಸತ್ತಿರುವ ವ್ಯಕ್ತಿ ದಂಡಪಾಣಿಯ ಮಗ. ಈ ಇಬ್ಬರ ಸಂಘರ್ಷ ಮಿತಿ ಮೀರಿ ಕಥಾನಾಯಕಿ ನಂದಿನಿಯನ್ನು ಕೊಲ್ಲುವ ರುದ್ರನಾಟಕವಾಗಿ ಪರಿಣಮಿಸುತ್ತದೆ.

ಜೋಗಯ್ಯ: ಕತೆಯ ಆರಂಭದಲ್ಲೇ ಬರುವ ಇನ್ನೊಂದು ಪ್ರಮುಖ ಪಾತ್ರ ಗೊಂಬೆ ಭವಿಷ್ಯ ಹೇಳುವ ಜೋಗಯ್ಯನದು (ಅಂಬರೀಷ್). ಆತ ಹೇಳಿದ ಭವಿಷ್ಯದಂತೆ ಒಂದು ತಿಂಗಳಲ್ಲಿ ಯಂಕ್ಟನ ಬದುಕು ಚಿತ್ರವಿಚಿತ್ರವಾಗುತ್ತದೆ. ಸಾವು ಬೆನ್ನಟ್ಟುವ ಮಟ್ಟಕ್ಕೆ ಹೈರಾಣಾಗುತ್ತದೆ. ಕಾಮವೇ ಜೀವನ ಎಂದುಕೊಂಡ ಸತೀಶನ ಬದುಕು ಸಂಬಂಧಿಕಳೊಬ್ಬಳ ಅನೈತಿಕ ಚಟುವಟಿಕೆಯಿಂದಾಗಿ ಗಬ್ಬೆದ್ದು ಹೋಗುತ್ತದೆ.

***

ಒಂದೆಡೆ ಪ್ರಾಂಶುಪಾಲರ ಸಾವಿನ ಸುತ್ತ ಬೆಳೆಯುವ ಪ್ರಶ್ನೆಗಳ ಹುತ್ತದಿಂದ ಹಲವು ಸರ್ಪಗಳು ಹೊರ ಬರುತ್ತವೆ. ವಯೋ ಸಹಜವಾಗಿ ಆಳವಾದ ಪ್ರೇಮದಲ್ಲಿ ಮುಳುಗಿರುವ ಯಂಕ್ಟನಿಗೆ ಜೀವನ ನಾಟಕ ಹೇಗೆ ಅರ್ಥವಾಗುತ್ತದೆ?ಬದುಕಿನ ಘೋರ ಸತ್ಯಗಳಿಗೆ ಆತ ಹೇಗೆ ಎದೆಗೊಡುತ್ತಾನೆ? ಸಾವಿನ ನೆರಳು ಯಂಕ್ಟನ ಮೇಲೆ ಬೀಳುವಾಗ ಬದುಕಿನಲ್ಲಿ ಆಸಕ್ತಿ ಕಳೆದುಕೊಂಡಿರುವ ಸತೀಶ ಏನು ಮಾಡುತ್ತಾನೆ? ಪ್ರೇಮವೆಂದರೇನು? ಸ್ನೇಹವೆಂದರೇನು? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು `ಡ್ರಾಮಾ~ ಚಿತ್ರವನ್ನು ಪೂರ್ತಿ ನೋಡಬೇಕು.ಜತೆಗೆ ಅಚ್ಯುತ್‌ಕುಮಾರ್, ಮಾಳವಿಕಾ, ಅಭಿನಯಾ, ಕಲ್ಯಾಣಿ, ಹೊನ್ನವಳ್ಳಿ ಕೃಷ್ಣ, ಉಮೇಶ್, ರಾಜಶೇಖರ್ ನಾಯ್ಡು, ಮೈಸೂರು ಬಾಲಣ್ಣ, ವಿಜಯ ಸಾರಥಿ ಮುಂತಾದವರ ದೊಡ್ಡ ತಾರಾ ಬಳಗ `ಡ್ರಾಮಾ~ ಮಾಡಲಿದೆ!

  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.