ಶನಿವಾರ, ಮೇ 8, 2021
27 °C
ಸ್ಥಳಾಂತರಕ್ಕೆ ಕಾದಿರುವ 40 ಸಾವಿರ ಸಂತ್ರಸ್ತರು, ಕೇದಾರದಲ್ಲಿ 123 ಶವಗಳ ಪತ್ತೆ

ಮಳೆ ಭೀತಿ: ರಕ್ಷಣೆ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆ ಭೀತಿ: ರಕ್ಷಣೆ ಚುರುಕು

ನವದೆಹಲಿ/ಡೆಹ್ರಾಡೂನ್(ಪಿಟಿಐ,ಐಎಎನ್‌ಎಸ್): ಉತ್ತರಾಖಂಡದಲ್ಲಿ ಸೋಮವಾರದಿಂದ (ಜೂನ್ 24) ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದು ಆತಂಕ ಮೂಡಿಸಿದ್ದು ರಕ್ಷಣಾ ಕಾರ್ಯ ಬಿರುಸುಗೊಂಡಿದೆ.ಸಾವಿನ ಸಂಖ್ಯೆ 680ಕ್ಕೆ ಏರಿದೆ. ಈ ಪೈಕಿ 123 ಶವಗಳು ಶನಿವಾರ ಕೇದಾರನಾಥ ದೇವಾಲಯದ ಆಸುಪಾಸಿನಲ್ಲಿ ಪತ್ತೆಯಾಗಿವೆ. `ಕೇದಾರನಾಥದಲ್ಲಿ ಇದ್ದವರನ್ನೆಲ್ಲ ತೆರವುಗೊಳಿಸಲಾಗಿದೆ. ಆದರೆ ಬದರಿಯಲ್ಲಿ ಸುಮಾರು 8 ಸಾವಿರ ಯಾತ್ರಿಗಳು ಸಿಕ್ಕಿಬಿದ್ದಿದ್ದು, ಅವರನ್ನು ಸುರಕ್ಷಿತವಾಗಿ ಕರೆತರಲು ಗಮನ ಹರಿಸಿದ್ದೇವೆ' ಎಂದು ಉತ್ತರಾಖಂಡ ಮುಖ್ಯಮಂತ್ರಿ ವಿಜಯ್ ಬಹುಗುಣ ಹೇಳಿದ್ದಾರೆ.ರಾಜ್ಯದಲ್ಲಿ ಒಟ್ಟಾರೆ 40 ಸಾವಿರ ಜನರು ಇನ್ನೂ ಸಂಕಷ್ಟದ ಸ್ಥಿತಿಯಲ್ಲೇ ಇದ್ದಾರೆ ಎಂದು ಅಂದಾಜಿಸಲಾಗಿದೆ. ಕೇದಾರನಾಥದ ಕಾಲುದಾರಿಯಲ್ಲಿನ ಕಮರಿಗಳಲ್ಲಿ ಸುಮಾರು 2,000 ಯಾತ್ರಿಗಳು ಸಿಕ್ಕಿ ಹಾಕಿಕೊಂಡಿದ್ದು ಪರದಾಡುತ್ತಿದ್ದಾರೆ.ವಿದೇಶಿಗರ ರಕ್ಷಣೆ:  ಉತ್ತರಕಾಶಿ ಜಿಲ್ಲೆಯ ಧರಾಸುವಿನಲ್ಲಿ ಸಿಕ್ಕಿಕೊಂಡಿದ್ದ 17 ವಿದೇಶಿ ಪ್ರವಾಸಿಗರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.  ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಶವಗಳ ಛಾಯಾಚಿತ್ರಗಳನ್ನು ತೆಗೆಯಲಾಗಿದ್ದು, ಗುರುತಿಸುವ ಸಲುವಾಗಿ ಈ ಚಿತ್ರಗಳನ್ನು ಉತ್ತರಾಖಂಡ ಸರ್ಕಾರದ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.`ಈವರೆಗೂ 73 ಸಾವಿರ ಯಾತ್ರಿಗಳು ಮತ್ತು ಪ್ರವಾಸಿಗರನ್ನು ರಕ್ಷಿಸಲಾಗಿದೆ. ಅನಾರೋಗ್ಯ ಪೀಡಿತರ ರಕ್ಷಣೆಗೆ ಆದ್ಯತೆ ನೀಡಲಾಗಿದೆ' ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯದರ್ಶಿ ತಿಳಿಸಿದ್ದಾರೆ.ಪ್ರಧಾನಿಗೆ ಮಾಹಿತಿ: ಮಳೆಯ ಸಾಧ್ಯತೆ ಕುರಿತು ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಕಾರಣ ರಕ್ಷಣಾ ಕಾರ್ಯವನ್ನು ತ್ವರಿತಗತಿಯಲ್ಲಿ ನಡೆಸುವಂತೆ ವಿಪತ್ತು ನಿರ್ವಹಣೆಯಲ್ಲಿ ತೊಡಗಿರುವ ಪಡೆಗಳಿಗೆ ಸೂಚಿಸಲಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕೇಂದ್ರ ಸಂಪುಟ ಕಾರ್ಯದರ್ಶಿ ಅಜಿತ್ ಸೇಥ್ ನವದೆಹಲಿಯಲ್ಲಿ ಮಾಹಿತಿ ನೀಡಿದ್ದಾರೆ.`56 ಹೆಲಿಕಾಪ್ಟರ್‌ಗಳು ನಿತ್ಯ 220 ಸಾರಿ ಪರ್ಯಟನೆ ಮಾಡುತ್ತಿವೆ. ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆ, ಆಹಾರ ಮತ್ತಿತರ ಅಗತ್ಯ ವಸ್ತುಗಳನ್ನು ಪೂರೈಸುತ್ತಿವೆ. ಆದರೆ, ಮಳೆ ಮುನ್ಸೂಚನೆ ಇರುವ ಕಾರಣ ಭಾನುವಾರ ಹೆಲಿಕಾಪ್ಟರ್‌ಗಳ ಪರ್ಯಟನೆಯನ್ನು 500 ಸಲಕ್ಕೆ ಹೆಚ್ಚಿಸಲು ಸೂಚಿಸಲಾಗಿದೆ' ಎಂದು ಸೇಥ್ ತಿಳಿಸಿದ್ದಾರೆ.ಶನಿವಾರ ಬೆಳಿಗ್ಗೆ ಪ್ರತಿಕೂಲ  ವಾತಾವರಣ ಇದ್ದ ಕಾರಣ ಕೆಲ ಕಾಲ ಹೆಲಿಕಾಪ್ಟರ್‌ಗಳ ಹಾರಾಟ ಸಾಧ್ಯವಾಗಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.