ಸೋಮವಾರ, ಮೇ 17, 2021
22 °C

ಮಳೆ ಮಾಹಿತಿ: ಟೆಲಿಮೆಟ್ರಿಕ್ ನಿಖರ ಮಾಪನ

ಪ್ರಜಾವಾಣಿ ವಾರ್ತೆ/ಹರ್ಷವರ್ಧನ ಪಿ.ಆರ್. Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸ್ಥಳೀಯವಾಗಿ, ವೇಗವಾಗಿ ಅತಿ ನಿಖರ ಮಳೆ ಪ್ರಮಾಣ ದೊರೆಯುವ ದಿನಗಳು ದೂರವಿಲ್ಲ. ಅಕ್ಟೋಬರ್ ಬಳಿಕ ಜಿಲ್ಲೆಯಲ್ಲಿ ಬಹುತೇಕ ನಿಖರ ಮಳೆ ಮಾಹಿತಿ ಲಭ್ಯವಾಗಲಿದೆ!ಜಿಲ್ಲೆಯ ಎಲ್ಲ 220 ಗ್ರಾಮ ಪಂಚಾಯಿತಿಗಳಲ್ಲಿ ಜಿಪಿಆರ್‌ಎಸ್ ಆಧಾರಿತ ಟೆಲಿಮೆಟ್ರಿಕ್ ಮಳೆ ಮಾಪನ ಘಟಕ ಯಂತ್ರ ಅಳವಡಿಸುವ ಮೂಲಕ ಪಕ್ಕಾ ಮಳೆ ವಿವರ ನೀಡಲು ರಾಜ್ಯ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ)ವು ಸಿದ್ಧತೆ ನಡೆಸುತ್ತಿದೆ.ಈಗಾಗಲೇ 32 ಹೋಬಳಿ ಕೇಂದ್ರ ಸೇರಿದಂತೆ 74 ಕಡೆಗಳಲ್ಲಿ ಈ ಯಂತ್ರವು ಕಾರ್ಯನಿರ್ವಹಿಸುತ್ತಿದ್ದು, ಇನ್ನು 146 ಕಡೆಗಳಲ್ಲಿ ಅನುಷ್ಠಾನ ಬಾಕಿ ಇದೆ. ಸರ್ಕಾರದ ಅನುದಾನ ಕೂಡಲೇ ಬಿಡುಗಡೆಗೊಂಡರೆ ಅಕ್ಟೋಬರ್ ವೇಳೆಗೆ ಎಲ್ಲವೂ ಚಾಲನೆಗೊಳ್ಳಲಿದೆ. ಅನಿಶ್ಚಿತ ಮತ್ತು ಅನಿರೀಕ್ಷಿತ ಮಳೆಯನ್ನು ಶೇ 100ರಷ್ಟು ಅಂದಾಜಿಸುವ ತಂತ್ರಜ್ಞಾನ ಇನ್ನೂ ಬಂದಿಲ್ಲ. `ಮಳೆ ಬಂದರೆ ಎತ್ತಿನ ಎರಡೂ ಕೊಂಬು ತೋಯಬೇಕಿಲ್ಲ' ಎಂಬ ಜನಪದರ ಮಾತೇ ಈ ಕಷ್ಟವನ್ನು ಹೇಳುತ್ತದೆ. ಅಂತೆಯೇ ಜಿಲ್ಲೆಯ ಮಳೆ ವರದಿಯು ಜನಪ್ರತಿನಿಧಿಗಳ ಟೀಕೆಗೆ ತುತ್ತಾಗಿತ್ತು. `ಅವಾಸ್ತವಿಕ ಮಳೆ ವರದಿ ಪರಿಣಾಮ ಜಿಲ್ಲೆಗೆ ಬರುವ ವಿಮೆ, ಅಭಿವೃದ್ಧಿ ಅನುದಾನಗಳು ಸೇರಿದಂತೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿವೆ' ಎಂಬ ಆರೋಪ ಕೇಳಿಬಂದಿತ್ತು.ತಂತ್ರಜ್ಞಾನ: `ಕೆಎಸ್‌ಎನ್‌ಡಿಎಂಸಿಯು ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಸ್ಥಾಪಿಸಿದ ಟೆಲಿಮೆಟ್ರಿಕ್‌ನಿಂದ ಮಳೆ ಪ್ರಮಾಣ ಸಂಗ್ರಹಿಸಿ ಥೈಯಿಸನ್ ಪಾಲಿಗಾನ್ಸ್ (ಛಿಜಿಛ್ಞಿ ಟ್ಝಜಟ್ಞ) ಮಾದರಿಯಲ್ಲಿ ಸರಾಸರಿ ವರದಿ ನೀಡಲಿದೆ. ಕರ್ನಾಟಕ ಮಾತ್ರವಲ್ಲ, ಇದು ಅಭಿವೃದ್ಧಿಶೀಲ ದೇಶಗಳಲ್ಲೇ ಪ್ರಥಮ' ಎನ್ನುತ್ತಾರೆ ಕೆಎಸ್‌ಎನ್‌ಡಿಎಂ ಕೇಂದ್ರದ ನಿರ್ದೇಶಕ ವಿ.ಎಸ್.ಪ್ರಕಾಶ್.ಈ ಯಂತ್ರವು ಜಿಪಿಆರ್‌ಎಸ್ (ಮೊಬೈಲ್ ಮಾದರಿ) ತಂತ್ರಜ್ಞಾನ ಮೂಲಕ ಪ್ರತಿ 15 ನಿಮಿಷಕೊಮ್ಮೆ  ಕೇಂದ್ರ ಕಚೇರಿಯ ಸರ್ವರ್‌ಗೆ  ಮಾಹಿತಿ ರವಾನಿಸುತ್ತದೆ. ಡಿಜಿಟಲ್ ಮಾಹಿತಿ ನೀಡುವ ಕಾರಣ 2 ನಿಮಿಷದಲ್ಲಿ  ವಿಶ್ಲೇಷಣೆ, ಸಂಸ್ಕರಣೆ, ಸರಾಸರಿ ಮತ್ತಿತರ ವಿವರ ಪಡೆಯಲು ಸಾಧ್ಯ. ನೆಟ್‌ವರ್ಕ್ ಸಿಗದಿದ್ದರೆ ಇ ಮೇಲ್, ಪೆನ್‌ಡ್ರೈವ್ ಮೂಲಕವೂ ಮಾಹಿತಿ ಪಡೆಯಬಹುದು. ಇದು ಸ್ವಯಂ ಚಾಲಿತವಾದ  ಕಾರಣ ಮನುಷ್ಯರ ತಪ್ಪುಗಳು ಇರುವುದಿಲ್ಲ' ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.ವ್ಯತ್ಯಯ: ಮಳೆ ಮಾಪಕರಿಗೆ ಸರ್ಕಾರ ರೂ. 450  ಮಾಸಿಕ ವೇತನ ನೀಡುತ್ತದೆ. ಹೀಗಾಗಿ ಈ ವೃತ್ತಿಯನ್ನು ಪರ್ಯಾಯವಾಗಿ ಮಾಡುತ್ತಾರೆ. ಅವರು ಬೆಳಿಗ್ಗೆ 8.30ಕ್ಕೆ ವರದಿ ನೀಡಬೇಕು. ಆದರೆ ಶನಿವಾರ, ಭಾನುವಾರ, ಕೌಟುಂಬಿಕ ಕಾರ್ಯಕ್ರಮ, ಜಾತ್ರೆ, ಅನಾರೋಗ್ಯದ ದಿನಗಳಲ್ಲಿ ಮಾಪಕರು ಕಳುಹಿಸಿದ ಮಳೆ ಪ್ರಮಾಣ ವ್ಯತ್ಯಯಗೊಳ್ಳುತ್ತಿತ್ತು. ಕೆಲವು ಕೇಂದ್ರಗಳಲ್ಲಿ ದೂಳು, ಹುಲ್ಲು ಬೆಳೆದು ವರದಿ ವ್ಯತ್ಯಯಗೊಂಡ ನಿದರ್ಶನಗಳೂ ಇವೆ. ಹೀಗಾಗಿ ಸರ್ಕಾರದ ಕೋಟ್ಯಂತರ ರೂಪಾಯಿ ಯೋಜನೆಗೆ ಬಳಸುವ ಮೂಲ ಮಾಹಿತಿ ವ್ಯತ್ಯಾಸಗೊಂಡು ಸಿಟ್ಟಿಗೆ ತುತ್ತಾಗಿವೆ.ಮತ್ತೊಂದು ಸಮಸ್ಯೆ: ಮಳೆ ಎಲ್ಲೆಡೆ ಏಕಪ್ರಮಾಣದಲ್ಲಿ ಸುರಿಯುವುದಿಲ್ಲ. ಹೀಗಾಗಿ ಬಸ್‌ಸ್ಟ್ಯಾಂಡ್‌ನಲ್ಲಿ ಮಾಪನ ಕೇಂದ್ರವಿದ್ದು, ಮಾಪನ ಕೇಂದ್ರ ಇಲ್ಲದ ರೈಲ್ವೆ ನಿಲ್ದಾಣದಲ್ಲಿ ಭಾರಿ ಮಳೆ ಬಂದರೂ `ನಗರದಲ್ಲಿ ಶೂನ್ಯ ಮಿ.ಮೀ. ಮಳೆ' ಎಂದೇ ದಾಖಲಾಗುತ್ತಿದೆ. ಈ ಹಿಂದೆ ಇದೇ ರೀತಿಯ ಅಂಕಿ ಅಂಶವು ಇಡೀ `ಹೋಬಳಿಯ ಮಳೆ ವರದಿ' ಆಗಿ ಸರ್ಕಾರದ ಕಡತಗಳಲ್ಲಿ ದಾಖಲಾಗುತ್ತಿತ್ತು.ಎಷ್ಟು ಬೇಕು: ಹವಾಮಾನ ಇಲಾಖೆಯ ತಂತ್ರಜ್ಞರ ಪ್ರಕಾರ 40ಚದರ ಕಿ.ಮೀ.ಗೆ ಕನಿಷ್ಠ ಒಂದು ಮಳೆಮಾಪನ ಕೇಂದ್ರ ಬೇಕು. ಅಂದರೆ ಸುಮಾರು 3.5 ಕಿ.ಮೀ. ಸುತ್ತಳತೆಗೆ ಒಂದು. ಗ್ರಾಮ ಪಂಚಾಯಿತಿಗೆ ಒಂದು ಯಂತ್ರ ಅಳವಡಿಸಿದರೆ ವರದಿಯು ಬಹುತೇಕ ನಿಖರವಾಗಲಿದೆ. ಮಳೆಮಾಪನ ಮಾಡುವುದೇ ವಿಜ್ಞಾನ ಮತ್ತು ಕಲೆ. ವೈಜ್ಞಾನಿಕ ಯಂತ್ರ ಬಳಸಿ ಬಹುತೇಕ ನಿಖರ ಮಾಹಿತಿ ಪಡೆಯುತ್ತೇವೆ. ಸಮಸ್ಯೆ ತಲೆದೋರಿದರೆ ವಿಶ್ಲೇಷಿಸುವ ಇನ್ನಿತರ ಕಲೆಗಳನ್ನೂ ಬಳಸುತ್ತೇವೆ. ಹೀಗಾಗಿ ನಿಖರತೆಗೆ ಇನ್ನಷ್ಟು ಹತ್ತಿರವಾಗುತ್ತೇವೆ' ಎನ್ನುತ್ತಾರೆ ವಿ.ಎಸ್.ಪ್ರಕಾಶ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.