ಮಳೆ ವಿರಾಮ: ಕೃಷಿ ಕಾರ್ಯ ಚುರುಕು

ಗುರುವಾರ , ಜೂಲೈ 18, 2019
22 °C

ಮಳೆ ವಿರಾಮ: ಕೃಷಿ ಕಾರ್ಯ ಚುರುಕು

Published:
Updated:

ಹಿರೇಕೆರೂರ: ಎರಡು ವಾರಗಳಿಂದ ಕೃಷಿ ಕಾರ‌್ಯಕ್ಕೆ ಅಡಚಣೆ ಉಂಟು ಮಾಡಿದ್ದ ಜಿಟಿಜಿಟಿ ಮಳೆ ಎರಡು ದಿನಗಳಿಂದ ಬಿಡುವು ನೀಡಿರುವುದರಿಂದ ಗೋವಿನ ಜೋಳ ಬಿತ್ತನೆ ಕಾರ‌್ಯ ತಾಲ್ಲೂಕಿನಾದ್ಯಂತ ಭರದಿಂದ ಸಾಗಿದೆ.ತಾಲ್ಲೂಕಿನಲ್ಲಿ ಅಸಮಾನ ಮಳೆ ಹಂಚಿಕೆಯಿಂದಾಗಿ ಕೆಲವು ಭಾಗಗಳಲ್ಲಿ ಬಿತ್ತನೆ ಪೂರ್ಣಗೊಂಡು ಇನ್ನು ಕೆಲವು ಭಾಗಗಳಲ್ಲಿ ಅರ್ಧಕ್ಕಿಂತ ಕಡಿಮೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಗೋವಿನ ಜೋಳವನ್ನು ಬಿತ್ತುವ ಅವಧಿ ಮೀರುತ್ತಿದೆ ಎಂಬ ಆತಂಕವು ಕೆಲವರು ಹಸಿ ಹಸಿ ನೆಲದಲ್ಲಿಯೇ ಬಿತ್ತನೆ ಮಾಡಲು ಕಾರಣವಾಗಿತ್ತು.ಈಗ ಮಳೆ ಬಿಡುವು ನೀಡಿದ್ದರಿಂದ ಬಿತ್ತನೆ ಕಾರ‌್ಯವು ಭರದಿಂದ ಸಾಗಿದೆ. ಮೊದಲೇ ಬಿತ್ತಿದ್ದ ಗೋವಿನ ಜೋಳ ವನ್ನು ಹರಗುವ (ಎಡೆ ಹೊಡೆಯುವ) ಕೆಲಸ ಶುರುವಾಗಿದೆ. ಬಿ.ಟಿ.ಹತ್ತಿ ಬೆಳೆ ಸಹ ಉತ್ತಮ ಸ್ಥಿತಿಯಲ್ಲಿ ಇರುವು ದರಿಂದ ಹರಗಲು ಆರಂಭಿಸಿದ್ದಾರೆ.ಮಾನ್ಸೂನ್ ಆರಂಭಕ್ಕೆ ಮೊದಲೇ ಬೀಜವನ್ನು ಭೂಮಿಗೆ ಹಾಕಿ ಒಂದೆರಡು ಬಾರಿ ಹರಗುವ ಕೆಲಸ ಮುಗಿಸಿದರೆ ಮುಂದೆ ಹೊಲವನ್ನು ಕಳೆಯಾಗದಂತೆ ನೋಡಿಕೊಳ್ಳಬಹುದು. ಆಗ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ. ಅಲ್ಲದೇ ಕೂಲಿ ಕಾರ್ಮಿಕರು ಬಳಕೆ ಸಹ ಕಡಿಮೆಯಾಗಲು ಕಾರಣವಾಗುತ್ತದೆ ಎಂಬುದು ರೈತರ ಅಭಿಪ್ರಾಯ.ಗೋವಿನ ಜೋಳದ ಬಿತ್ತನೆಗೆ ಮೊದಲು ಟ್ರ್ಯಾಕ್ಟರ್ ಇಲ್ಲವೇ ಬೇಸಾಯದಿಂದ ಸಾಲು ಹೊಡೆಯಲು ಹಿಂದಿನಿಂದ ಸಾಲುಗಳಲ್ಲಿ ಬೀಜಗಳನ್ನು ಹಾಕುತ್ತಾ ಎತ್ತುಗಳ ಬೇಸಾಯದಿಂದ ಕುಂಟೆ ಹೊಡೆಯುವ (ಬಳಿಸಾಲು) ಮೂಲಕ ಕಾಳು ಮುಚ್ಚುವುದು ಸಾಮಾನ್ಯವಾಗಿ ಬಿತ್ತುವ ಪದ್ಧತಿ ಯಾಗಿದೆ. ಆದರೆ ಈ ಬಾರಿ ಪದೇ ಪದೇ ಮಳೆಯಾಗಿದ್ದರಿಂದ ಕೆಲವು ರೈತರು ಮಳೆಗೆ ಸಡ್ಡು ಹೊಡೆದು ಹತ್ತಿ ಬೀಜವನ್ನು ಹಾಕುವ ರೀತಿಯಲ್ಲಿಯೇ ಗೋವಿನ ಜೋಳವನ್ನು ಬಿತ್ತನೆ ಮಾಡಿದ್ದಾರೆ.ಪ್ರತಿ ಎಕರೆ ಗೋವಿನ ಜೋಳಕ್ಕೆ ಬಿತ್ತನೆ ಮಾಡುವಾಗ 2-3 ಚೀಲ ರಾಸಾಯನಿಕ ಗೊಬ್ಬರ ಬಳಕೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಡಿಎಪಿ ಹಾಗೂ ಪೊಟ್ಯಾಷ್ ಮಿಶ್ರಣ ಮಾಡಿ ಹಾಕುತ್ತಿದ್ದ ರೈತರು ಪ್ರಸಕ್ತ ಸಾಲಿನಲ್ಲಿ ಡಿಎಪಿ ಕೊರತೆ ಇರುವು ದರಿಂದ ಅನಿವಾರ್ಯವಾಗಿ ಕಾಂಪ್ಲೆಕ್ಸ್ ಗೊಬ್ಬರ ಬಳಕೆ ಮಾಡುತ್ತಿದ್ದಾರೆ.ಗೊಬ್ಬರ ಹಾಕುವ ಪ್ರಮಾಣದ ಮೇಲಿಂದ ಇಳುವರಿ ನಿರ್ಧಾರ ಆಗುತ್ತದೆ ಎಂಬ ಖಚಿತ ಅಭಿಪ್ರಾಯಕ್ಕೆ ಬಂದಿರುವ ರೈತರು ಗೊಬ್ಬರ ಬಳಕೆ ಯನ್ನು ಹೆಚ್ಚು ಮಾಡುತ್ತಾ ಸಾಗು ತ್ತಿದ್ದಾರೆ. ಕೃಷಿ ಇಲಾಖೆ ಮೂಲಗಳ ಪ್ರಕಾರ ಈ ವರ್ಷ ತಾಲ್ಲೂಕಿನ ಒಟ್ಟು ಬಿತ್ತನೆ ಕ್ಷೇತ್ರ 61 ಸಾವಿರ ಹೆಕ್ಟೇರ್. ಈ ಪೈಕಿ 30 ಸಾವಿರ ಹೆಕ್ಟೇರ್‌ನಲ್ಲಿ ಗೋವಿನ ಜೋಳ ಹಾಗೂ 18 ಸಾವಿರ ಹೆಕ್ಟೇರ್‌ನಲ್ಲಿ ಬಿ.ಟಿ. ಹತ್ತಿಯನ್ನು ಬೆಳೆಯಲು ರೈತರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry