ಮಂಗಳವಾರ, ಆಗಸ್ಟ್ 20, 2019
27 °C

ಮಳೆ ಸುರಿದರೂಜಲಾಶಯಗಳಲ್ಲಿ ನೀರಿಲ್ಲ

Published:
Updated:

ಗುಲ್ಬರ್ಗ: ವಾಡಿಕೆ ಪ್ರಮಾಣದ ಮಳೆಗಿಂತಲೂ ಈ ಬಾರಿ ಗುಲ್ಬರ್ಗ ಜಿಲ್ಲೆಯಲ್ಲಿ ಹೆಚ್ಚು ಮಳೆ ಸುರಿದಿದೆ. ಆದರೆ ಜಲಾಶಯಗಳಿಗೆ ಮಾತ್ರ ನೀರು ಹರಿದು ಬಂದಿಲ್ಲ!ಜಿಲ್ಲೆಯ ಎಲ್ಲ ಏಳು ತಾಲ್ಲೂಕುಗಳಲ್ಲಿ ಜುಲೈ ತಿಂಗಳು ಎಡೆಬಿಡದೆ ಮಳೆ ಬಿದ್ದಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ದೊರೆತಿದೆ. ಆದರೆ ಜುಲೈ ತಿಂಗಳಲ್ಲಿ ಜಲಾಶಯಗಳಲ್ಲಿದ್ದ ಪ್ರಮಾಣದಷ್ಟು ನೀರು ಈಗ ಸಂಗ್ರಹಗೊಂಡಿಲ್ಲ.ಬರಿದಾದ ಜಲಾಶಯ: ಗುಲ್ಬರ್ಗ ನಗರಕ್ಕೆ ನೀರು ಪೂರೈಸುವ ಹಾಗೂ ಚಿತ್ತಾಪುರ ತಾಲ್ಲೂಕಿನ ಹೊಲಗಳಿಗೆ ನೀರುಣಿಸುವ ಬೆಣ್ಣೆತೊರಾ ಜಲಾಶಯದಲ್ಲಿ ಜುಲೈ 31ರ ವರೆಗೆ 1.303 ಟಿಎಂಸಿ ಮಾತ್ರ ನೀರು ಸಂಗ್ರಹವಾಗಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 2.886 ಟಿಎಂಸಿ ನೀರು ಸಂಗ್ರಹವಿತ್ತು.ಗುಲ್ಬರ್ಗ ತಾಲ್ಲೂಕಿನ ಗಂಡೋರಿನಾಲಾ ಜಲಾಶಯದಲ್ಲಿ ಹಿಂದಿನ ವರ್ಷ  ಇದೇ ಅವಧಿಯಲ್ಲಿ 1.018 ಟಿಎಂಸಿ ನೀರಿತ್ತು. ಈ ಬಾರಿ 0.815 ಟಿಎಂಸಿ ಮಾತ್ರ ನೀರಿದೆ. ಆಳಂದ ತಾಲ್ಲೂಕಿಗೆ ಕುಡಿಯುವ ನೀರು ಹಾಗೂ ನೀರಾವರಿ ಸೌಲಭ್ಯ ಒದಗಿಸುವ ಅಮರ್ಜಾದಲ್ಲಿ 0.135 ಟಿಎಂಸಿ ನೀರಿದೆ. ಹಿಂದಿನ ವರ್ಷ 0.280 ಟಿಎಂಸಿ ನೀರು ಸಂಗ್ರಹವಿತ್ತು.ಅಫಜಲಪುರ ತಾಲ್ಲೂಕಿನಲ್ಲಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಭೀಮಾ ಏತ ನೀರಾವರಿ ಅಣೆಕಟ್ಟೆಗೆ ಮಂಗಳವಾರ ರಾತ್ರಿಯಿಂದ 13,800 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜುಲೈ 26 ರಂದು ಕೇವಲ 840  ಕ್ಯೂಸೆಕ್ ಮಾತ್ರ ಒಳಹರಿವು ಇತ್ತು.ಒಟ್ಟು 3.160 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿರುವ ಭೀಮಾ ಏತ ನೀರಾವರಿ ಅಣೆಕಟ್ಟೆಯಲ್ಲಿ 2.302 ಟಿಎಂಸಿ ಮಾತ್ರ ನೀರಿದೆ. ಇದು ಭರ್ತಿಯಾದ ನಂತರ ಅಫಜಲಪುರ ತಾಲ್ಲೂಕಿನಲ್ಲಿರುವ ಇತರೆ ಅಣೆಕಟ್ಟೆಗೆ ನೀರು ಹರಿದು ಬರಲಿದೆ.ವಾಡಿಕೆಗಿಂತ ಹೆಚ್ಚು ಸುರಿದ ಮಳೆ: ಜುಲೈ 30ರ ವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 159.02 ಮಿ.ಮೀ.ನಷ್ಟು ಬೀಳಬೇಕು. ವಾಸ್ತವದಲ್ಲಿ 209.67 ಮಿ.ಮೀ. ಮಳೆ ಬಿದ್ದಿದೆ.ಶೇ 132.3ರಷ್ಟು ಮಳೆಯಾಗಿದೆ. ಜೇವರ್ಗಿ ತಾಲ್ಲೂಕು ಒಂದನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ           ಸುರಿದಿದೆ.ಇನ್ನುಳಿದ ತಾಲ್ಲೂಕುಗಳಿಗೆ ಹೋಲಿಸಿದರೆ ಚಿತ್ತಾಪುರ ತಾಲ್ಲೂಕಿನಲ್ಲಿ ಅತಿಹೆಚ್ಚು ಮಳೆಯಾಗಿದೆ.ಜುಲೈ 30ರ ವರೆಗೆ ಅಫಜಲಪುರ ತಾಲ್ಲೂಕಿನಲ್ಲಿ 114.9 ಮಿ.ಮೀ. ವಾಡಿಕೆ ಮಳೆ, ಬಿದ್ದಿರುವ ಮಳೆ 154 ಮಿ.ಮೀ., ಆಳಂದ ತಾಲ್ಲೂಕಿನಲ್ಲಿ 158 ಮಿ.ಮೀ. ವಾಡಿಕೆ ಮಳೆ, ಬಿದ್ದಿರುವ ಮಳೆ 195.5 ಮಿ.ಮೀ., ಚಿಂಚೋಳಿ ತಾಲ್ಲೂಕಿನಲ್ಲಿ 207 ಮಿ.ಮೀ. ವಾಡಿಕೆ ಮಳೆ, ಬಿದ್ದಿರುವ ಮಳೆ 261.1 ಮಿ.ಮೀ..ಚಿತ್ತಾಪುರ ತಾಲ್ಲೂಕಿನಲ್ಲಿ 147 ಮಿ.ಮೀ. ವಾಡಿಕೆ ಮಳೆ, ಬಿದ್ದಿರುವ ಮಳೆ 253 ಮಿ.ಮೀ., ಗುಲ್ಬರ್ಗ ತಾಲ್ಲೂಕಿನಲ್ಲಿ 142 ಮಿ.ಮೀ. ವಾಡಿಕೆ ಮಳೆ, ಬಿದ್ದಿರುವ ಮಳೆ 204.9 ಮಿ.ಮೀ..ಜೇವರ್ಗಿ ತಾಲ್ಲೂಕಿನಲ್ಲಿ 141.5 ಮಿ.ಮೀ. ವಾಡಿಕೆ ಮಳೆ, ಬಿದ್ದಿರುವ ಮಳೆ 138.4 ಮಿ.ಮೀ.ಸೇಡಂ  ತಾಲ್ಲೂಕಿನಲ್ಲಿ 201 ಮಿ.ಮೀ. ವಾಡಿಕೆ ಮಳೆ, ಬಿದ್ದಿರುವ ಮಳೆ 260.2 ಮಿ.ಮೀ. ರಷ್ಟು ಮಳೆಯಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ಇಲಾಖೆ          ತಿಳಿಸಿದೆ.2012ರಲ್ಲಿ ಗುಲ್ಬರ್ಗ ಜಿಲ್ಲೆಯ ಬರಪೀಡಿತ ಎಂದು ಸರ್ಕಾರ ಘೋಷಿಸಿತ್ತು. ಆ ವರ್ಷ ಕೆಲ ಸಮಯ ಮಳೆ ಜೋರಾಗಿ ಬಿದ್ದಿದ್ದರಿಂದ ತಕ್ಕಮಟ್ಟಿಗೆ ಜಲಾಶಯಗಳಿಗೆ ನೀರು ಹರಿದು ಬಂದಿತ್ತು. ಈ ವರ್ಷ ಮಳೆ ನಿರಂತರವಾಗಿದ್ದರೂ ನೀರು ಹರಿಯುವಷ್ಟರ ಮಟ್ಟಿಗೆ ಬಿರುಸಾಗಿಲ್ಲ.

ಬ್ರಿಡ್ಜ್ ಕಂ ಬ್ಯಾರೇಜ್ ಖಾಲಿ

ಭೀಮಾ ಏತ ನೀರಾವರಿಯೊಂದನ್ನು ಹೊರತುಪಡಿಸಿ ಭೀಮಾ ನದಿ ಹಾಗೂ ಕಾಗಿಣಾ ನದಿಯ ಮೇಲೆ ನಿರ್ಮಿಸಿರುವ ದೇವಲ ಗಾಣಗಾಪುರ, ಮಲಕುಡ, ಲಹೋರಾ, ಯಡಹಳ್ಳಿ, ಕಾಚೂರ, ಕುಕುಂದಾ, ಮೀನಹಾಬಳ, ಮಾಡಬೂಳ, ಮುತ್ತಗಾ, ಶಂಕರವಾಡಿ, ಇಂಗಳಗಿ ಹಾಗೂ ಮಳಖೇಡ್ ಬ್ರಿಡ್ಜ್ ಕಂ ಬ್ಯಾರೇಜ್‌ಗಳೆಲ್ಲ ನೀರಿಲ್ಲದೆ ಬರಿದಾಗಿವೆ.

Post Comments (+)