ಮಳೆ ಹಾನಿ: ಆಯುಕ್ತ ಸಿದ್ದಯ್ಯ ಪರಿಶೀಲನೆ

7

ಮಳೆ ಹಾನಿ: ಆಯುಕ್ತ ಸಿದ್ದಯ್ಯ ಪರಿಶೀಲನೆ

Published:
Updated:

ಬೆಂಗಳೂರು: ಸೋಮವಾರ ಸುರಿದ ಮಳೆಯಿಂದಾಗಿ ನಗರದ ವಿವಿಧೆಡೆ ಚರಂಡಿಗಳಲ್ಲಿ ಪ್ರವಾಹ ಉಂಟಾಗಿ ಕೆಲವು ಮನೆಗಳಿಗೆ ನೀರು ನುಗ್ಗಿತ್ತು. ಕೆಲ ಬಡಾವಣೆಗಳಲ್ಲಿ ಮರಗಳು ಉರುಳಿಬಿದ್ದಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ.ಮಡಿವಾಳ ಬಳಿಯ ವೆಂಕಟೇಶ್ವರ ಬಡಾವಣೆಯ ದೊಡ್ಡ ಮೋರಿಯಲ್ಲಿ ಹಲವಾರು ಪೈಪ್‌ಗಳನ್ನು ಹಾಕಿದ್ದರ ಪರಿಣಾಮ ನೀರು ಸರಾಗವಾಗಿ ಹರಿಯದೇ ಅಕ್ಕ-ಪಕ್ಕದ ಮನೆಗಳಿಗೆ ನುಗ್ಗಿದ್ದರಿಂದ ನಿವಾಸಿಗಳು ತೊಂದರೆಗೊಳಗಾದರು. ಶಿಥಿಲಾವಸ್ಥೆಯಲ್ಲಿದ್ದ ಕೆಲ ಮನೆಗಳೂ ಕುಸಿದು ಬಿದ್ದಿವೆ.ಬಡಾವಣೆ ವ್ಯಾಪ್ತಿಯ ಸಂಧ್ಯಾ ಚಿತ್ರಮಂದಿರದ ಬಳಿ ಇರುವ ಚರಂಡಿ ಸಮೀಪ ಜಲಮಂಡಳಿಯು ಹೊಸ ಪೈಪುಗಳನ್ನು ಅಳವಡಿಸುವ ಕಾಮಗಾರಿಯನ್ನು ನಡೆಸುತ್ತಿದೆ. ಕೆಲಸ ಅಪೂರ್ಣವಾದ ಹಿನ್ನೆಲೆಯಲ್ಲಿ ಅವನ್ನು ಮೋರಿಯಿಂದ ತೆಗೆದಿರಲಿಲ್ಲ.ದಿಢೀರ್ ಸುರಿದ ಮಳೆಯಿಂದಾಗಿ ಈ ಪೈಪುಗಳಾಚೆ ನೀರು ಹರಿಯಲು ಸಾಧ್ಯವಾಗದೆ ಇಳಿಜಾರಿನ ಪ್ರದೇಶದಲ್ಲಿದ್ದ ಮನೆಗಳೆಡೆಗೆ ನುಗ್ಗಿತ್ತು. ಸ್ಥಳೀಯ ನಿವಾಸಿಗಳು ಜಲಮಂಡಳಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಬಾಣಸವಾಡಿ ಮುಖ್ಯ ರಸ್ತೆಯ ಜಯಭಾರತಿ ನಗರದ ರಾಘವೇಂದ್ರಸ್ವಾಮಿ ಮುಖ್ಯರಸ್ತೆ ಹಾಗೂ ಅಶೋಕನಗರದ ವುಡ್‌ಶೀಟ್ ಬಳಿ ಮರದ ಬೃಹತ್ ರೆಂಬೆಗಳು ನೆಲಕ್ಕುರುಳಿದ್ದವು. ಆಜಾದ್ ನಗರದ ಒಂದನೇ ಅಡ್ಡ ರಸ್ತೆಯಲ್ಲಿ ಮೋರಿಯ ತಡೆಗೋಡೆ ಮುರಿದುಬಿದ್ದಿದೆ.

ಸದಾಶಿವನಗರದ ಬಿಇಎಲ್ ರಸ್ತೆ ಹಾಗೂ ಬಸವೇಶ್ವರ ನಗರದ 3ನೇ ಅಡ್ಡರಸ್ತೆ ಎರಡು ಮರಗಳು ಉರುಳಿಬಿದ್ದಿದ್ದವು. ಮಹಾನಗರ ಸಿಬ್ಬಂದಿ ಮಂಗಳವಾರ ಬೆಳಿಗ್ಗೆ ಅವುಗಳನ್ನು ತೆರವುಗೊಳಿಸಿದರು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.ಆಯುಕ್ತ ಸಿದ್ದಯ್ಯ ಪರಿಶೀಲನೆ: ಸೋಮವಾರ ಧಾರಾಕಾರ ಮಳೆಯಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಸಿದ್ದಯ್ಯ ಅವರು ಮಂಗಳವಾರ ಈಜಿಪುರ, ರಾಷ್ಟ್ರೀಯ ಕ್ರೀಡಾ ಗ್ರಾಮ, ಕೋರಮಂಗಲದ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ಈ ಪ್ರದೇಶಗಳಲ್ಲಿ ಮಳೆ ನೀರಿನಿಂದಾಗುವ ತೊಂದರೆ ತಪ್ಪಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಆಯುಕ್ತರು, ಮುಖ್ಯ ಎಂಜಿನಿಯರ್‌ಗೆ ಸೂಚಿಸಿದರು. ಕೋರಮಂಗಲ, ಜಕ್ಕಸಂದ್ರ, ಬಿಟಿಎಂ ಬಡಾವಣೆಗಳಲ್ಲಿ  ಚರಂಡಿ ಹೂಳು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry