ಮಳೆ ಹೊಡೆತಕ್ಕೆ ನಲುಗಿದ ಬೆಳೆ

7
ಕೆಂಭಾವಿ: ರಸ್ತೆ ಮೇಲೆ ಹರಿಯುತ್ತಿರುವ ಕಾಲುವೆ ನೀರು

ಮಳೆ ಹೊಡೆತಕ್ಕೆ ನಲುಗಿದ ಬೆಳೆ

Published:
Updated:

ಕೆಂಭಾವಿ: ತಾಲ್ಲೂಕಿನಾದ್ಯಂತ 15 ದಿನಗಳಿಂದ ಸುರಿಯುತ್ತಿರುವ ಧಾರಾ­ಕಾರ ಮಳೆಯಿಂದ ಮುಂಗಾರು ಹಂಗಾಮಿನ ಬೆಳೆಗಳು ಕೈಗೆಟುಕುವ ವಿಶ್ವಾಸವನ್ನು ರೈತರು ಕಳೆದು­ಕೊಳ್ಳುತ್ತಿದ್ದು, ಬರದ ನಂತರ ನೆರೆಯ ಹೊಡೆತಕ್ಕೆ ಸಿಲುಕಿದ ರೈತರಿಗೆ ದಿಕ್ಕು ತೋಚದಂತಾಗಿದೆ.ಮುಂಗಾರು ಹಂಗಾಮಿನ ಹೆಸರು ಮಳೆಯಿಂದಾಗಿ ಹಾಳಾಗಿದ್ದು, ತೊಗರಿ, ಹತ್ತಿ, ಸೂರ್ಯಕಾಂತಿ ಬೆಳೆಗಳಿಗೆ ತೇವಾಂಶ ಹೆಚ್ಚಳದಿಂದ ಕೆಂಪು ರೋಗ ಹರಡುತ್ತಿದೆ. ನಿತ್ಯ ಸುರಿಯುತ್ತಿರುವ ಮಳೆಯಿಂದ ಜಮೀನಿನಲ್ಲಿ ನೀರು ನಿಲ್ಲುತ್ತಿದ್ದು, ಇದ್ದ ಅಲ್ಪಸ್ವಲ್ಪ ಬೆಳೆಯೂ ಕೊಳೆತು ಹೋಗುವಂತಾಗಿದೆ.ಕಳೆದ ಬಾರಿ ಮಳೆಯಿಲ್ಲದೆ ಬರಗಾಲ ಅನುಭವಿಸಿದ್ದ ರೈತರಿಗೆ, ಈ ಬಾರಿ ಅಲ್ಪ ಸ್ವಲ್ಪ ಮಳೆಯಲ್ಲಿ ಬಿತ್ತನೆ ಮಾಡಿದ್ದರು.  ಉತ್ತಮ ಫಸಲು ಪಡೆಯುವ ಉತ್ಸಾಹದಲ್ಲಿದ್ದರು. ಆದರೆ ಸದ್ಯ ಸುರಿ­ಯುತ್ತಿರುವ ಮಳೆಯಿಂದ ರೈತರು ಕಂಗಾಲಾಗಿದ್ದಾರೆ.‘ಸಾಲ ಸೋಲ ಮಾಡಿ. ಬೀಜ, ಗೊಬ್ಬರವನ್ನು ತಂದು ಬಿತ್ತಿವ್ರಿ. ಅಂಗ­ಡ್ಯಾಕ ಉದ್ರಿ ಎಣ್ಣಿ, ಗೊಬ್ಬರಾ ತಂದಿವಿ. ಮಳಿ ಹೆಚ್ಚಾಗಿ ತೊಗರಿ ಮತ್ತ ಹತ್ತಿಗಿ ರೋಗ ಬಲ್ರಿಕತ್ತದ. ಬೆಳಿ ಬರು ಭರೋಸಾ ಇಲ್ಲದಂಗಾಗ್ಯದ‘ ಎಂದು ರೈತ ಬಸವರಾಜ ಪೂಜಾರಿ ಹೇಳುತ್ತಾರೆ.‘ಮಳಿ ಹೆಚ್ಚಾಗಿ ಬೆಳಿ ನಿಟಾ ಹೊಗ್ಯಾವ್ರಿ. ತೊಗರಿಗೆ ನೀರ ಹೆಚ್ಚಾದ್ರ ಬೇರ ಕೊಳತ ಬಿಡತದ. ಈಗ ಹಂಗ ಆಗ್ಯದ್ರಿ. ತೊಗರಿ ಗಿಡಾ ಹಳದಿ ಬಣ್ಣಕ್ಕ ತಿರಿಗ್ಯಾವ. ಇನ್ನೊಂದ ಸ್ವಲ್ಪ ದಿನ ಮಳಿ ಬಂದ್ರ ಬೆಳಿ ಒಣಗಿ ಬಿಡತಾವ, ನಮ್ಮುವೆಲ್ಲ ಕಪ್ಪ ಮಣ್ಣಿನ ಜಮೀನ ಹಸಿಯಾದುವಂದ್ರ, ಒಣಗಲಿಕ್ಕ ಭಾಳ ದಿನಾ ಬೇಕು. ಅಂತದ್ರಾಗ ದಿನಾ ಮಳಿ ಬರಲಿಕ್ಕದ. ಬೆಳಿ ಬರೋದ ಖಾತ್ರಿ ಇಲ್ಲರಿ‘ ಎಂದು ರೈತ ಸಿದ್ಧಾರೂಢ ಆತಂಕ ವ್ಯಕ್ತಪಡಿಸುತ್ತಾರೆ.‘ಮಳೆ ಹೆಚ್ಚಾಗಿದ್ದು, ಆಮ್ಲಜನಕದ ಕೊರತೆಯಿಂದ ತೊಗರಿ ಬೆಳೆ ಹಳದಿ ಬಣ್ಣಕ್ಕೆ ತಿರುಗುತ್ತದೆ‘ ಎಂದು ತಾಲ್ಲೂಕು ಕೃಷಿ ಇಲಾಖೆ ಅಧಿಕಾರಿ ಕೇಸರಸಿಂಗ್ ಹಜಾರೆ ಹೇಳುತ್ತಾರೆ.’ಇದೇ ರೀತಿ ಮುಂದುವರಿದರೆ ಕೊಳೆ (ಚಾಕಿಂಡ್ ವೈಲ್ಟ ಡಿಸಿಜ್) ರೋಗ ಬಂದು ಬೆಳೆ ಹಾನಿಯಾಗುವ ಸಂಭವವಿದೆ. ಮಳೆ ನಿಂತರೆ ಶೇ 2 ರಷ್ಟು ಡಿಎಪಿಯನ್ನು ಸಿಂಪಡಿಸಬಹುದು. ಎಕರೆಗೆ 10 ಕೆ.ಜಿ. ಯುರಿಯಾ ಗೊಬ್ಬರ­ವನ್ನು ಹಾಕುವುದರಿಂದ ಬೆಳೆ­ಹಾನಿ ತಪ್ಪಿಸಬಹುದು. ತೊಗರಿ ಬೆಳೆ ಹೂವು ಹಿಡಿದಿದ್ದರೆ ಯುರಿಯಾ ಗೊಬ್ಬರ ಹಾಕಬಾರದು. ಡಿಎಪಿಯನ್ನು ಎರಡು ಬಾರಿ ಸಿಂಪಡಿಸುವುದರಿಂದ ಕೊಳೆ ರೋಗವನ್ನು ತಡೆಗಟ್ಟಬಹುದು’ ಎಂದು ಹೇಳುತ್ತಾರೆ.ಶುದ್ಧೀಕರಣ ಘಟಕ ಜಲಾವೃತ:ಸತತಿ ಸುರಿಯುತ್ತಿರುವ ಮಳೆಯಿಂದಾಗಿ ಎಡದಂಡೆ ಕಾಲುವೆ­ಯ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಜನ ಮತ್ತಷ್ಟು ತೊಂದರೆ ಅನುಭವಿಸು­ವಂತಾಗಿದೆ.ಪಟ್ಟಣದ ಕೃಷಿ ಉಪ ಮಾರು­ಕಟ್ಟೆಯ ರಸ್ತೆಯ ಮೇಲೆ, ಗುತ್ತಿ­ಬಸವೇಶ್ವರ ಏತ ನೀರಾವರಿ ಉಪ ಕಾಲುವೆ ನೀರು ಹರಿಯುತ್ತಿದೆ. ಉಪ­ಕಾಲುವೆ ನೀರು ರಸ್ತೆಯಲ್ಲಿ ಹರಿ­ಯುತ್ತಿದ್ದು, ಒಡೆದ ಕಾಲುವೆ ದುರಸ್ತಿ ಮಾಡಿ ಎಂದು ಗ್ರಾಮ ಪಂಚಾ­ಯಿತಿಯವರು,  ಕೆಬಿಜೆ­ಎನ್ಎಲ್ ಅಧಿ­ಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.ಎಪಿಎಂಸಿ ಗೋದಾಮು, ನೀರು ಶುದ್ಧಿಕರಣ ಘಟಕ, ಪಶು ಆಸ್ವತ್ರೆ, ಆಶ್ರಯ ಕಾಲೊನಿಗೆ ಈ ರಸ್ತೆಯ ಮೂಲಕವೇ ಜನರು ಹೆಚ್ಚಾಗಿ ಓಡಾ­ಡುತ್ತಿದ್ದು, ರಸ್ತೆಯ ಮೇಲೆ ನೀರು ಹರಿ­ಯುತ್ತಿರುವುದರಿಂದ ಪಾದ­ಚಾರಿಗಳಿಗೆ ತೊಂದರೆ­ಯಾಗುತ್ತಿದೆ.ಈ ಬಗ್ಗೆ ಅಧಿಕಾರಿಗಳು ಗಮನ ಹರಿಸದಿದ್ದಲ್ಲಿ ಹೋರಾಟ ನಡೆಸುವು­ದಾಗಿ ಗ್ರಾಮ ಪಂಚಾಯತಿ ಸದಸ್ಯ ರಂಗಪ್ಪ ವಡ್ಡರ ಎಚ್ಚರಿಸಿದ್ದಾರೆ.ಗುತ್ತಿಬಸವೇಶ್ವರ ಏತ ನೀರಾವರಿ ಉಪ­ಕಾಲುವೆಯಿಂದ ಭಾರಿ ಪ್ರಮಾಣ­ದಲ್ಲಿ ಹರಿಯುತ್ತಿರುವ ನೀರಿನಿಂದಾಗಿ ಪಟ್ಟಣದಲ್ಲಿ ಆರಂಭಿಸಿರುವ ನೀರು ಶುದ್ಧೀಕರಣ ಘಟಕವು ಸಂಪೂರ್ಣ ಜಲಾವೃತಗೊಂಡಿದೆ. ಈ ಘಟಕದ ಶುದ್ಧ ನೀರು ಬಳಸುವ ಜನರಿಗೆ ತೊಂದರೆ­ಯಾಗುತ್ತಿದೆ ಎಂದು ಭೀಮಣ್ಣ ಹೇಳುತ್ತಾರೆ.ಕಾಲುವೆಯ ನೀರು ಪೋಲಾಗದಂತೆ ತಡೆಯಲು ನಿಗಮ ಯೋಜನೆಗಳನ್ನು ರೂಪಿಸುತ್ತಿರುವಾಗ  ಪೋಲಾ­ಗುತ್ತಿ­ರುವ ನೀರನ್ನು ತಡೆ­ಯುವಂತೆ ಹೇಳಿ­ದರೂ ನಿಗಮದ ಅಧಿಕಾರಿಗಳು ಮಾತ್ರ ಸ್ಪಂದಿಸದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.ಭೀತಿ: ನಿತ್ಯ ಕಾಲುವೆಯ ಸೇತುವೆಯ ಮೇಲೆ ನೀರು ಸರಾಗವಾಗಿ ಹರಿ­ಯುತ್ತಿದ್ದು, ಸೇತುವೆ ಹಾಳಾಗುವ ಭೀತಿ ಎದುರಾಗಿದೆ.’ಬ್ರಿಡ್ಜ್‌ ಮ್ಯಾಗ ದಿನಾ ನೀರ ಹಿಂಗ ಹರಕೊಂಡ ಹೊದ್ರ ಬ್ರಿಡ್ಜ್‌ ಹಾಳಾಗತದ್ರಿ, ಮಳಕಾಲಮಟ್ಟ ನೀರಾಗ ದಿನಾ ನಾವು ತಿರಗಾಡಬೇಕ್ರಿ. ಆರ ತಿಂಗಳಿಂದ ಹೇಳಕತ್ತಿವಿ ಯಾರು ತಲ್ಯಾಗ ಹಾಕೊಂಡಿಲ್ಲ, ನಮ್ಮ ಗತಿನ ಇಷ್ಟಾದ ನೋಡ್ರಿ. ಮಳಿ ಬಂದರು ಅಷ್ಟ, ಇಲ್ಲಂದ್ರು ಅಷ್ಟ. ಈ ನೀರಾಗ ನಡಕೋತ ಹೊಗೊದು ನಮ್ಮ ಹಣೆಬರರಿ’ ಎಂದು ಶರಣಯ್ಯ ಹೇಳುತ್ತಾರೆ.ಮಳೆ: ಹತ್ತಿ ಬೆಳೆ ಹಾನಿ

ಶಹಾಪುರ: ಜುಲೈ ತಿಂಗಳಲ್ಲಿ ಬರ­ಗಾಲದ ದವಡೆಗೆ ಸಿಲುಕಿದ ತಾಲ್ಲೂಕು ಇಂದು ಅತಿವೃಷ್ಟಿಯ ಸಮಸ್ಯೆಯನ್ನು ಎದುರಿಸಿದ ಬೆನ್ನಲ್ಲೆ ವಾರದಿಂದ  ಸುರಿ­ಯುತ್ತಿರುವ ಅಕಾಲಿಕ ಮಳೆಯಿಂದ ರೈತರು ಕಂಗಾಲು ಆಗಿದ್ದಾರೆ.ಇನ್ನೇನು ಕಟಾವಿಗೆ ಬಂದಿದ್ದ ಸಜ್ಜೆ ನೀರು ಪಾಲಾಗಿದೆ. ನೀರಾವರಿ ಪ್ರದೇಶ­ದ ವಾಣಿಜ್ಯ ಬೆಳೆಯಾದ ಹತ್ತಿ, ಮೆಣಸಿನಕಾಯಿ ಬೆಳೆಗೆ ಕುತ್ತು ಬಂದಿದೆ.ಕೃಷ್ಣಾ ಅಚ್ಚುಕಟ್ಟು ಪ್ರದೇಶದ ತಾಲ್ಲೂಕಿನ ಹೆಚ್ಚಿನ ರೈತರು ಹತ್ತಿ ಬೆಳೆ ಬಿತ್ತನೆ ಮಾಡಿದ್ದರು. ಹೂ ಮತ್ತು ಕಾಯಿ ಕಟ್ಟುವ ಹಂತದಲ್ಲಿ ಬೆಳೆ ಇದೆ.  ಮಳೆಯ ಕಾಟದಿಂದ ತಂಪು ಹೆಚ್ಚಾಗಿ ಬೆಳೆ ಮುದಟಿಕೊಳ್ಳುತ್ತಲಿದೆ. ಹತ್ತಿಯ ಹೊಲದಲ್ಲಿ ನೀರು ನಿಂತಿದ್ದು ಬೆಳೆ ಕೊಳೆಯುವ ಅಪಾಯವಿದೆ.ಸಾವಿರಾರು ರೂಪಾಯಿ ವೆಚ್ಚ ಮಾಡಿ ಉತ್ತಮ ಫಸಲು  ಬರುವ  ನಿರೀಕ್ಷೆ­ಯಲ್ಲಿರುವಾಗ ಮಳೆ ನಮಗೆ ಅಘಾತ ನೀಡಿದೆ ಎನ್ನುತ್ತಾರೆ ರೈತ ನಿಂಗಣ್ಣ ಮುಡಬೂಳ.ಕಳೆದ ವರ್ಷ ಗದ್ದೆಯನ್ನು  ಮಾಡಿ ಬತ್ತ ನಾಟಿ ಮಾಡಿದ್ದೇವು. ಉತ್ತಮ ಧಾರಣಿ ಹಾಗೂ ಕಡಿಮೆ ಖರ್ಚು ಬರುತ್ತದೆ ಎಂದು ಗದ್ದೆ ತೆಗೆದು ಹತ್ತಿ ನಾಟಿ ಮಾಡಿದ್ದೆ. ತುಸು ತಗ್ಗು ಪ್ರದೇಶವಾಗಿದ್ದರಿಂದ ಹೊಲದ ತುಂಬಾ ಮಳೆಯ ನೀರು ಸಂಗ್ರಹ­ವಾಗಿದೆ. ಹವಾಮಾನದ ಏರು­ಪೇರಿನಿಂದ  ನಮ್ಮ ಬದುಕಿನಲ್ಲಿಯೂ ಏರುಪೇರು ಉಂಟಾಗಿದೆ. ಮಳೆ ನೀರಿನಿಂದ ಹತ್ತಿ ಸಂಪೂರ್ಣವಾಗಿ ನಾಶವಾಗುವ ಭೀತಿ ಎದುರಾಗಿದೆ. ಮುಂದಿನ ಭವಿಷ್ಯವನ್ನು ನೆನೆಸಿಕೊಂಡರೆ ದಿಕ್ಕು ತೋಚದಾಗಿದೆ ಎಂದು ಹಲಬುತ್ತಾರೆ ರೈತ ಹಣಮಂತ.ಮಳೆಹಾನಿ  ಬಗ್ಗೆ ಸರ್ಕಾರ ತಕ್ಷಣ ಸಮೀಕ್ಷೆ ನಡೆಸಬೇಕು. ಸೂಕ್ತ ಪರಿಹಾರವನ್ನು ನೀಡಬೇಕೆಂದು ಮಳೆ ಹಾನಿಯಿಂದ ತೊಂದರೆ ಅನುಭವಿಸುತ್ತಿರುವ ರೈತರು ಮನವಿ ಮಾಡಿದ್ದಾರೆ.624 ಮನೆ ಜಖಂ

ಶಹಾಪುರ ತಾಲ್ಲೂಕಿನಲ್ಲಿ ವಾರದಿಂದ ಸುರಿದ ಮಳೆಯಿಂದ 624 ಮನೆಗಳು ಜಖಂಗೊಂಡಿವೆ. ಬೆಳೆ ಹಾನಿ ಸಮೀಕ್ಷೆ ನಡೆಸಿ ನಿಖರವಾದ ವರದಿಯನ್ನು ಸೆ.25 ಒಳಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ ಎಂದು ತಾಲ್ಲೂಕು ದಂಡಾಧಿಕಾರಿ ಡಿ.ವೈ ಪಾಟೀಲ್‌ ತಿಳಿಸಿದ್ದಾರೆ.  ತಾಲ್ಲೂಕಿನ  ಪ್ರದೇಶದಲ್ಲಿ ರಸ್ತೆಗಳು  ಹಾಳಾಗಿವೆ. ನಿರಂತರವಾಗಿ ಸುರಿ­ಯುತ್ತಿರುವ ಮಳೆಯಿಂದ  ಗ್ರಾಮೀಣ ಪ್ರದೇಶದ ಜನತೆ ಭೀತಿಯಲ್ಲಿದ್ದಾರೆ. ಇನ್ನೂ ಮಳೆ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ.  ಸರ್ವೆ ನೆಪದಲ್ಲಿ ಕಾಲ­ಹರಣ ಮಾಡದೆ ತ್ವರಿತವಾಗಿ  ಹೋಬಳಿ ಪ್ರದೇಶದಲ್ಲಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಬೇಕು.ಮಳೆ ಹಾನಿಯಿಂದ ಮನೆ ಕುಸಿತವಾಗಿವೆ. ಸಂಕಷ್ಟದಲ್ಲಿರುವ ನೊಂದ ಜನತೆಯ ನೆರವಿಗೆ ತಾಲ್ಲೂಕು ಆಡಳಿತ ಬರಬೇಕೆಂದು ಗ್ರಾಮೀಣ ಪ್ರದೇಶದ ಜನತೆ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.ಸೂಚನೆ: ಮಳೆಹಾನಿಯಿಂದ ತೊಂದರೆ ಸಿಲುಕಿದವರ ನೆರವಿಗೆ ಅಧಿಕಾರಿಗಳು ಸಕರಾತ್ಮಕವಾಗಿ ಸ್ಪಂದಿಸಿ ಸೂಕ್ತ ನೆರವು ನೀಡಬೇಕು. ಕಂದಾಯ ಇಲಾಖೆ ಸಿಬ್ಬಂದಿ  ಹಳ್ಳಿಗೆ ತೆರಳಿ ಬಿದ್ದ ಮನೆಗಳ ಸಮೀಕ್ಷೆ­ಯನ್ನು ತ್ವರಿತವಾಗಿ ನಡೆಸಿ. ರಸ್ತೆ ಸಂಚಾರದ ಸಮಸ್ಯೆ ಉಂಟಾದ ಕಡೆ ಗಮನಹರಿಸಬೇಕೆಂದು ಶಾಸಕ ಗುರುಪಾಟೀಲ್‌ ಶಿರವಾಳ ಅಧಿ­ಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry