ಸೋಮವಾರ, ಏಪ್ರಿಲ್ 19, 2021
30 °C

ಮವಿವಿಯಲ್ಲಿ ಮಹಿಳಾ ಮ್ಯೂಸಿಯಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಇಲ್ಲಿಯ ಮಹಿಳಾ ವಿಶ್ವವಿದ್ಯಾಲಯ(ಮವಿವಿ) ಒಂಬತ್ತು ವಸಂತಗಳನ್ನು ಪೂರೈಸಿ ಹತ್ತನೆಯ ವರ್ಷಕ್ಕೆ ಕಾಲಿಟ್ಟಿದೆ. ದಶಮಾನೋತ್ಸವ ವರ್ಷದಲ್ಲಿ `ದಶಮಾನೋತ್ಸವ ಭವನ~ ನಿರ್ಮಾಣ, `ಮಹಿಳಾ ಮ್ಯೂಸಿಯಂ~ ಸ್ಥಾಪನೆಯೂ ಸೇರಿದಂತೆ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಕುಲಪತಿ ಡಾ.ಮೀನಾ ಚಂದಾವರಕರ ಹೇಳಿದರು.ದಶಮಾನೋತ್ಸವದ ಅಂಗವಾಗಿ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ರಮಗಳಲ್ಲಿ ವಿವಿಧ ವಿಷಯಗಳ ಕುರಿತು ವಿಶೇಷ ಉಪನ್ಯಾಸ, ಪ್ರತಿ ತಿಂಗಳು ಮಹಿಳಾ ಸಾಧಕಿಯರೊಂದಿಗೆ ವಿದ್ಯಾರ್ಥಿನಿಯರ ಮುಖಾಮುಖಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಜ್ಞಾನಶಕ್ತಿ ಆವರಣದಲ್ಲಿ ಸುಮಾರು ರೂ.5 ಕೋಟಿ ವೆಚ್ಚದಲ್ಲಿ `ದಶಮಾನೋತ್ಸವ ಭವನ~ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ, ಲೋಕಸಭೆ ಸದಸ್ಯರು, ರಾಜ್ಯಸಭೆ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರಿಂದ ಅನುದಾನ ಪಡೆದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಅಲ್ಲದೇ ವಿವಿಧ ದಾನಿಗಳಿಂದಲೂ ನೆರವು ಕೋರಲಾಗುತ್ತದೆ.ಈ ದಶಮಾನೋತ್ಸವ ಭವನದ ಒಂದು ಕೋಣೆ ನಿರ್ಮಾಣಕ್ಕೆ ಅಂದಾಜು 10 ಲಕ್ಷ ರೂಪಾಯಿಗಳು ವೆಚ್ಚವಾಗಲಿದೆ. ದಾನಿಗಳು ಮುಂದೆ ಬಂದು ಕನಿಷ್ಠ ಒಂದೊಂದು ಕೋಣೆಗೆ ತಗಲುವ ವೆಚ್ಚವನ್ನು ಭರಿಸಬೇಕು. ಈ ಹಣ ನೀಡಿದ ದಾನಿಗಳ ಹೆಸರನ್ನು ಆ ಕೋಣೆಯ ಮೇಲೆ ಬರೆಯಿಸುವ ಮೂಲಕ ಅವರ ನೆರವನ್ನು ಸ್ಮರಿಸಿ ಕೊಳ್ಳುತ್ತೇವೆ ಎಂದು ವಿವರಿಸಿದರು.ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯನ್ನು ಬಿಂಬಿಸುವ ಉದ್ದೇಶದಿಂದ ಸುಮಾರು ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ `ಮಹಿಳಾ ಮ್ಯೂಸಿಯಂ~ ಸ್ಥಾಪಿಸಲಾಗುವುದು. ಇದಕ್ಕೆ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು. ಬಹುಶಾಸ್ತ್ರೀಯ ಸಂಶೋಧನಾ ಕೇಂದ್ರ ಮತ್ತು ಆದರ್ಶ ಮಹಿಳಾ ಕೇಂದ್ರ.

 

ಪಿಯುಸಿಯಿಂದ ಎಂ.ಎ. ಪಿಎಚ್‌ಡಿ ವರೆಗೆ ಅಧ್ಯಯನಕ್ಕೆ ಅವಕಾಶವಿರುವ ಒಂದು ಪ್ರಾಯೋಗಿಕ ಮಹಾವಿದ್ಯಾಲಯ ಆರಂಭಿಸಲು ಉದ್ದೇಶಿಸಲಾಗಿದೆ. ದಶಮಾನೋತ್ಸವದ ಅಂಗವಾಗಿ 10 ಪುಸ್ತಕಗಳನ್ನು ಪ್ರಕಟಿಸಲಾಗುವುದು. ಅಖಿಲ ಭಾರತ ಮಹಿಳಾ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮ್ಮೇಳನ ಸಂಘಟಿಸಲು ಉದ್ದೇಶಿಸಲಾಗಿದೆ ಎಂದು ಡಾ.ಚಂದಾವರಕರ ಹೇಳಿದರು.ದೂರ ಶಿಕ್ಷಣ: ಎಂ.ಎ., ಎಂ.ಬಿ.ಎ. ಬಿ.ಎಡ್ ವಿಷಯದಲ್ಲಿ ದೂರ ಶಿಕ್ಷಣ ಆರಂಭಿಸಲಾಗುತ್ತಿದೆ. ದೂರ ಶಿಕ್ಷಣ ಕೌನ್ಸಿಲ್ (ಡೆಕ್)ನವರು ವಾರದ ಹಿಂದೆ ವಿವಿಗೆ ಭೇಟಿ ನೀಡಿ ಹೋಗಿದ್ದಾರೆ. 15 ದಿನಗಳಲ್ಲಿ ಅವರಿಂದ ಪರವಾನಿಗೆ ದೊರೆಯಲಿದೆ. ದೂರ ಶಿಕ್ಷಣದಲ್ಲಿಯ ಬಿ.ಎಡ್.ಗೆ ನ್ಯಾಶನಲ್ ಕೌನ್ಸಿಲ್ ಫಾರ್ ಟೀಚರ್ಸ್ ಎಜ್ಯುಕೇಶನ್ (ಎನ್‌ಸಿಟಿ)ಯಿಂದ ಪರವಾನಿಗೆ ಬರಬೇಕಿದೆ. ಅಕ್ಟೋಬರ್ ತಿಂಗಳಲ್ಲಿ ಈ ಕೋರ್ಸ್ ಆರಂಭಗೊಳ್ಳಲಿದೆ.

 

ಐದು ಅಧ್ಯಯನ ಕೇಂದ್ರಗಳಲ್ಲಿ ತಲಾ 100 ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುವುದು ಎಂದರು. ರಜಾ ಅವಧಿಯ ಎಂ.ಪಿಎಡ್ ಕೋರ್ಸ್ ಆರಂಭಕ್ಕೆ ಬೇಡಿಕೆ ಇದೆ. ಮೂರು ತಿಂಗಳ ರಜಾ ಅವಧಿಯಲ್ಲಿ ಕಾಲೇಜಿಗೆ ಹಾಜರಾಗುವ ನಾಲ್ಕು ವರ್ಷದ ಈ ಕೋರ್ಸ್ ಆರಂಭಿಸುವ ಚಿಂತನೆ ನಡೆದಿದೆ. ಇದರ ಜೊತೆಗೆ ಮಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿಗಳಲ್ಲಿ ಮಹಿಳಾ ವಿವಿಯ ಪ್ರಾದೇಶಿಕ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ ಎಂದರು.

 ಹಣಕಾಸು ಅಧಿಕಾರಿ ಡಾ.ಆರ್.ಸುನಂದಮ್ಮ, ಅಭಿವೃದ್ಧಿ ಅಧಿಕಾರಿ ಡಾ.ಪಿ.ಜಿ. ತಡಸದ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಓಂಕಾರ ಕಾಕಡೆ ಪತ್ರಿಕಾಗೋಷ್ಠಿಯಲ್ಲಿದ್ದರು.`6 ಹೊಸ ಕೋರ್ಸ್ ಆರಂಭ~

ವಿಜಾಪುರ: ಮಹಿಳಾ ವಿಶ್ವವಿದ್ಯಾಲಯದ 2012-13ನೇ ಸಾಲಿನ ಸ್ನಾತಕೋತ್ತರ, ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಪ್ರವೇಶ ನೀಡುವ ಪ್ರಕ್ರಿಯೆ ಶುಕ್ರವಾರದಿಂದ ಆರಂಭಗೊಂಡಿದೆ. ಹಳೆಯ 21 ಕೋರ್ಸ್‌ಗಳ ಜೊತೆಗೆ ಮೂಲ ವಿಜ್ಞಾನದ ಐದು ಹಾಗೂ ರಾಜ್ಯಶಾಸ್ತ್ರದ ಒಂದು ಹೀಗೆ ಒಟ್ಟಾರೆ 6 ಹೊಸ ಪಿಜಿ ಕೋರ್ಸ್‌ಗಳನ್ನು ಆರಂಭವಾಗಲಿದೆ ಎಂದು ಕುಲಪತಿ ಡಾ.ಮೀನಾ ಚಂದಾವರಕರ ಹೇಳಿದರು.ಮೂಲ ವಿಜ್ಞಾನ ಕೋರ್ಸ್‌ಗಳಾದ ಸಂಖ್ಯಾಶಾಸ್ತ್ರ, ಗಣಿತ, ಭೌತಶಾಸ್ತ್ರ, ಸಸ್ಯಶಾಸ್ತ್ರ, ರಸಾಯನಶಾಸ್ತ್ರ ಹಾಗೂ ರಾಜ್ಯ ಶಾಸ್ತ್ರ ವಿಷಯದ ಸ್ನಾತಕೋತ್ತರ ಕೋರ್ಸ್‌ಗಳನ್ನು ಈ ವರ್ಷದಿಂದ ಆರಂಭಿಸಲಾಗಿದೆ. ಅದಕ್ಕೆ ಸರ್ಕಾರ ಅನುಮತಿ ನೀಡಿದೆ. ಸದ್ಯಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಯೋಗಾಲಯ ಬಳಸಿಕೊಳ್ಳುತ್ತಿದ್ದು, ಮುಂದಿನ ವರ್ಷ ಮಹಿಳಾ ವಿವಿಯಲ್ಲಿಯೇ ಸುಸಜ್ಜಿತ ಪ್ರಯೋಗಾಲಯ ಸ್ಥಾಪಿಸಲಾಗುವುದು ಎಂದರು.ಮಹಿಳಾ ವಿಶ್ವವಿದ್ಯಾಲಯದ ಪ್ರವೇಶ ಪ್ರಕ್ರಿಯೆ ಆಗಸ್ಟ್ 16 ರವರೆಗೆ ದಂಡ ರಹಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 150 ರೂಪಾಯಿಗಳ ದಂಡ ಸಹಿತ ಆಗಸ್ಟ್ 25ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. 6ನೇ ಸೆಮಿಸ್ಟರ್ ಪದವಿ  ಪರೀಕ್ಷೆಗೆ  ಹಾಜರಾಗಿರುವ ವಿದ್ಯಾರ್ಥಿನಿಯರು ಫಲಿತಾಂಶ ಪ್ರಕಟಣೆ ಆಗದೆ ಇದ್ದರೂ ಸಹ  ಸಂಬಂಧಪಟ್ಟ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು. ಫಲಿತಾಂಶ ಘೋಷಣೆಯಾದ ನಂತರ ಅಂಕಪಟ್ಟಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ಹೇಳಿದರು.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.