ಮಸಣದ ಹೂವುಗಳು

7

ಮಸಣದ ಹೂವುಗಳು

Published:
Updated:
ಮಸಣದ ಹೂವುಗಳು

ನಗರದ ಪ್ರಮುಖ ರುದ್ರಭೂಮಿಯೊಂದರ ನಟ್ಟ ನಡುವೆ ಪುಟ್ಟ ಮನೆ. ಟಿ.ವಿ ನೋಡುತ್ತಿದ್ದಾನೆ. ಇದ್ದಕ್ಕಿದ್ದಂತೆ ಅಳುವ ಸದ್ದು. ಭೋರಿಡುವ ಸದ್ದು. ಆತ ಎದ್ದು ಒಮ್ಮೆ ಹೊರ ಇಣುಕಿ, ತನ್ನಪ್ಪನಿಗೆ ಯಾರೋ ಬಂದರು ಎಂದು ಹೇಳಿ ಟೀವಿ ನೋಡುವಲ್ಲಿ ನಿರತನಾಗುತ್ತಾನೆ. ಅದ್ಯಾರೋ ಸತ್ತವರ ಕುಟುಂಬದವರ ಅಳು. ಹೆಣ ತಂದಿದ್ದಾರೆ. ಅಂತ್ಯಕ್ರಿಯೆ ಆಗುವವರೆಗೂ ಅಪ್ಪ-ಅಮ್ಮ ಮನೆಯಲ್ಲಿರುವುದಿಲ್ಲ. ನಿರಾತಂಕವಾಗಿ ಕಾರ್ಟೂನ್ ನೋಡಬಹುದು.ಇವನು ಸ್ಮಶಾನದಲ್ಲೊಂದು ಮನೆಯ ಮಾಡಿ, ಇಹಲೋಕದ ಯಾತ್ರೆಗೆ ಸಜ್ಜುಗೊಳಿಸುವ ಕುಟುಂಬದ ಹುಡುಗ.ಬೇಸರವಾದಾಗ, ಕರೆಂಟ್ ಹೋದರೆ ಈ ಹುಡುಗ ಏಕಾಂಗಿ. ಬದುಕಿದ್ದಾಗ, ಮಸಣ ಕಾಯುವವನ ಮಗ ಎಂದು ಜರೆದವರ ಸಮಾಧಿಯ ಮೇಲೆ ನಿರಾತಂಕವಾಗಿ ಆಟವಾಡುತ್ತಾನೆ. ಗೋರಿಗಳ ನಡುವೆ ಗೋಲಿ ಆಡುತ್ತಲೇ ಅಳುವವರತ್ತ ಒಮ್ಮೆ ಕಣ್ಣು ಹಾಯಿಸುತ್ತಾನೆ. ಬಹುಶಃ ಸತ್ತವ ಮುದುಕನಿರಬಹುದು. ಅಳುತ್ತಿದ್ದರೂ ಕುಟುಂಬದವರ ಮುಖದ ಮೇಲೆ ಅಧ್ಯಾಯವೊಂದು ಮುಗಿದ ಕಳೆ. ದೊಡ್ಡ ಕುಂಕುಮದೊಂದಿಗೆ ಬಂದಿರುವ ಅಜ್ಜಿಯೊಂದೇ ಗೋಳಾಡುತ್ತಿದೆ. ಮುತ್ತೈದೆತನ ಕಳೆದುಕೊಂಡ ದುಃಖದಲ್ಲಿ. ಆ ಅಜ್ಜಿಯನ್ನೇ ಒಂದರೆ ಕ್ಷಣ ದಿಟ್ಟಿಸುವ ಈ ಹುಡುಗ, ಮತ್ತೆ ತನ್ನ ಗೋಲಿಗೆ ದೃಷ್ಟಿ ನೆಡುತ್ತಾನೆ. ಅದ್ಯಾಕೋ ಹಣೆಗೆ ಕುಂಕುಮವಿರದ ಟೀಚರ್ ನೆನಪಾಗುತ್ತಾರೆ.ಜೀವನದೊಂದಿಗೆ ಸಾವು ಬೆಸೆದಿದೆ. ಆದರೆ ಪ್ರತಿಯೊಬ್ಬರೂ ತಾವು ಶಾಶ್ವತರೇನೊ ಎಂಬಂತೆ ಅಗಲಿದವರನ್ನು ಕಂಡು ರೋದಿಸುತ್ತಾರೆ. ಸ್ಮಶಾನಕ್ಕೆ ಬರಲು ಹಿಂಜರಿಯುತ್ತಾರೆ. ಅವ್ಯಕ್ತ ಭಯ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇಲ್ಲಿ ವಾಸಿಸುವ ನಮಗೆ ಮಾತ್ರ ಯಾವ ಭಯವೂ ಕಾಡದು. ಸತ್ತವರೆಂದೂ ಕಾಡರು. ಬದುಕಿರುವವರೇ ನಮ್ಮನ್ನು ಜರೆದು ಕಾಡುತ್ತಾರೆ ಎನ್ನುತ್ತಾರೆ ಸ್ಮಶಾನದಲ್ಲಿ ಮನೆ ಮಾಡಿಕೊಂಡಿರುವ ಶ್ರೀನಿವಾಸ್. `ಏಕ ಜಾತಿ~ ಎಂದು ಹೇಳುವ ಸಮುದಾಯಕ್ಕೆ ಸೇರಿದವರು ಇವರು. ಕಾಶಿ ವಿಶ್ವನಾಥ ಇವರ ಆರಾಧ್ಯ ದೈವ. ಮಸಣದಲ್ಲಿ ವಾಸಿಸುವ ರುದ್ರನ ಮಕ್ಕಳು ತಾವು ಎಂಬ ನಂಬಿಕೆಯುಳ್ಳವರು.ಈ ಜನರು ಬದುಕಿನ ಬಹುಭಾಗ ಸ್ಮಶಾನದಲ್ಲಿ ಕಳೆಯುತ್ತಾರೆ. ಶವಗಳನ್ನು ಹೂಳುವ ಅಥವಾ ಬೆಂಕಿಗೆ ಆಹುತಿ ಮಾಡುವುದು ಕಾಯಕ. ತಮ್ಮ ಮಗನ ಜೊತೆ ಆಡಬೇಡ ಎಂದು ಹಿಂದೊಮ್ಮೆ ಒಬ್ಬರು ಸ್ಮಶಾನದಲ್ಲಿ ವಾಸ ಮಾಡುವ ಹುಡುಗನನ್ನು ಬೈದು ಕಳಿಸಿದ್ದರು. ಅವರ ಮಗನೇ ಅಪಘಾತಕ್ಕೆ ಈಡಾಗಿ ಮೃತಪಟ್ಟಾಗ ಈ ಹುಡುಗ ಬೆರಗಾಗಿದ್ದ. ಅದೇ ಹುಡುಗ ಈಗ ತಮ್ಮ ಮನೆಯ ಅಂಗಳದಲ್ಲಿ ಎಂದು ಮೃತ ಬಾಲಕನ ಅಮ್ಮ ಕಣ್ಣೀರಿಡುತ್ತಿದ್ದರು.ಗೋರಿಗಳ ನಡುವೆ ಇದ್ದ ಹುಡುಗ ದಿಗ್ಗನೆದ್ದು ನಿಂತು ನೋಡಿದ್ದ. ಒಮ್ಮೆ ಬೆರಗಾದರೂ ಆ ಹುಡುಗನ ಸಾವು ಹೆಚ್ಚೇನೂ ಕಾಡಲಿಲ್ಲ. ಜೀವಂತವಿದ್ದಾಗಲೂ ಆಟಕ್ಕಿರಲಿಲ್ಲ. ಇನ್ನು ಮುಂದೆಯೂ ಆಟಕ್ಕಿಲ್ಲ. ಇನ್ಯಾಕೆ ದುಃಖ ಎಂಬಂತೆ ಸುಮ್ಮನಾಗಿದ್ದ. ಸ್ಮಶಾನದ ಮರಕ್ಕೆ ಕಟ್ಟಿದ್ದ ಜೋಕಾಲಿಯಲ್ಲಿ ಅವನು ನಿರಾಳವಾಗಿ ಜೀಕುತ್ತಿದ್ದ.`ನಮ್ಮನ್ನು ಕೀಳು ದೃಷ್ಟಿಯಿಂದ ನೋಡುತ್ತಾರೆ. ನಮ್ಮ ಮಕ್ಕಳೊಂದಿಗೆ ಬೇರೆ ಮಕ್ಕಳು ಬೆರೆಯಲು ಬಿಡುವುದಿಲ್ಲ. ಹಾಗಾಗಿ ಇಲ್ಲಿರುವ ಗೋರಿಗಳ ನಡುವೆಯೇ ಆಟವಾಡುತ್ತಾರೆ. ಹೀಗಳೆಯುವ ಜನರಿಗಿಂತ ಈ ಸಮಾಧಿಯ ಬದಿ ಆಡುವುದೇ ಸಮಾಧಾನ ತರುತ್ತದೆ~ ಎನ್ನುತ್ತಾರೆ ಈ ಹುಡುಗನ ತಂದೆ ಶ್ರೀನಿವಾಸ್.`ನಮ್ಮ ಮಕ್ಕಳಿಗೂ ಶಿಕ್ಷಣ ಬೇಕು, ಮೊದಲು ಶಾಲೆಗೆ ಹೋಗುತ್ತಿದ್ದ ನನ್ನ ಮಗ, ಸಹಪಾಠಿಗಳೆಲ್ಲ ಛೇಡಿಸಿದರು ಎಂಬ ಕಾರಣದಿಂದಾಗಿ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ. ನನಗೂ ಶಾಲೆಗೆ ಹೋಗುವ ಆಸೆ. ಎಲ್ಲರೊಂದಿಗೆ ಆಡುವ ಆಸೆ. ಆದರೆ ಯಾರ ಮಕ್ಕಳೂ ನಮ್ಮಂದಿಗೆ ಬೆರೆಯುವುದಿಲ್ಲ. ನಮ್ಮ ಬದುಕೇ ದ್ವೀಪದಂತಾಗಿದೆ. ಇನ್ನು ಆಟ-ಬದುಕಿನ ಪಾಠ ಎಲ್ಲವೂ ಸ್ಮಶಾನದಲ್ಲೇ~ ಎನ್ನುತ್ತಾನೆ ಹದಿಹರೆಯದ ಈ ಪೋರ. ಕಳೆದ ಹಲವಾರು ತಿಂಗಳಿನಿಂದ ಹರಿಶ್ಚಂದ್ರ ಘಾಟ್‌ನ ರುದ್ರಭೂಮಿಯಲ್ಲಿ ಅಗ್ನಿ ಸಂಸ್ಕಾರ ನಿಲ್ಲಿಸಲಾಗಿದೆ. ಇಲ್ಲಿ ಮೊದಲಿನಿಂದಲೂ  ಹೆಣಗಳನ್ನು ಸುಡುವ ವ್ಯವಸ್ಥೆ ಇತ್ತು. `ವಿದ್ಯುತ್ ಚಿತಾಗಾರದಿಂದಾಗಿ ಕೆಟ್ಟ ವಾಸನೆ ಬರುತ್ತಿತ್ತು. ಆದರೆ ಸೌದೆಯಿಂದ ಸಂಸ್ಕಾರ ಮಾಡುವುದನ್ನೂ ನಿಲ್ಲಿಸಲಾಯಿತು. ಆದರೆ ಬೆಂಕಿ ಬಿದ್ದಿರುವುದು ಮಾತ್ರ ನಮ್ಮ ಬದುಕಿಗೆ~ ಎಂದು ಅಲವತ್ತುಕೊಳ್ಳುತ್ತಾರೆ ಶ್ರೀನಿವಾಸ್. `ಇನ್ನು ಕೆಲವು ವರ್ಷಗಳಲ್ಲೇ ಮಗನಿಗೆ ಮದುವೆ ಮಾಡಬೇಕು. ಮದುವೆಗೆ ಹೆಣ್ಣು ಕೊಡುವವರು ಇನ್ನೊಂದು ಸ್ಮಶಾನದವರು. ಯಾವ ಸ್ಮಶಾನ? ದಿನಕ್ಕೆಷ್ಟು ಶವ ಬರುತ್ತವೆ ಎಂಬ ಲೆಕ್ಕಾಚಾರದ ಮೂಲಕ ಹುಡುಗನಿಗೆ ನೀಡಬೇಕಾದ ತೆರದ ಬಗ್ಗೆ ನಿಷ್ಕರ್ಷೆ ನಡೆಯುತ್ತದೆ. ಹೀಗೆಯೇ ಮುಂದುವರಿದರೆ ಮಗನಿಗೆ ಹೆಣ್ಣು ಯಾರು ಕೊಡುತ್ತಾರೆ?~ ಎನ್ನುವ ಸ್ಮಶಾನ ವಾಸಿಗಳಿಗೆ ಸಾವಿನ ನಡುವೆಯೇ ಬದುಕು ಇಂಥ ಪ್ರಶ್ನೆಗಳನ್ನು ಹುಟ್ಟುಹಾಕಿದೆ.`ನಮಗೆ ಈ ವೃತ್ತಿ ಬಿಟ್ಟು ಬೇರೆ ಕೆಲಸ ಗೊತ್ತಿಲ್ಲ, ಕಳೆದ ಹತ್ತು ತಿಂಗಳಿನಿಂದ ಶವ ಸಂಸ್ಕಾರ ಸ್ಥಗಿತಗೊಂಡಿರುವುದರಿಂದ ಸಂಪಾದನೆ ಕಡಿಮೆಯಾಗಿದೆ. ಹೂಳಲು ಹೆಚ್ಚಿನ ನೆಲವಿಲ್ಲ. ಸುಡಲು ಅನುಮತಿ ಇಲ್ಲ. ಸತ್ತವರನ್ನೇ ನಂಬಿದ ನಮ್ಮ ಬದುಕೂ ಬೆಂಕಿ ಇಲ್ಲದೆಯೇ ಸುಡುತ್ತಿದೆ~ ಎಂದು ಕಣ್ಣೀರಿಡುತ್ತಾರೆ ಹರಿಶ್ಚಂದ್ರ ಘಾಟ್‌ನಲ್ಲಿರುವ ಶ್ರೀನಿವಾಸ್. ವಿಲ್ಸನ್ ಗಾರ್ಡನ್ ರುದ್ರಭೂಮಿಯಲ್ಲಿ ವಾಸ ಮಾಡುವ ದೇವರಾಜ್ (ಹೆಸರು ಬದಲಾಯಿಸಲಾಗಿದೆ) ಕತೆಯೇ ಇನ್ನೊಂದು ಬಗೆಯದ್ದು.`ಮೊದಲು ದಿನಕ್ಕೆ ಮೂರರಿಂದ ನಾಲ್ಕು ಶವಗಳು ಬರುತ್ತಿದ್ದವು. ಆದರೆ ಈಗ ಎರಡು ಬಂದರೆ ಹೆಚ್ಚು. ಬಹುತೇಕ ಜನ ವಿದ್ಯುತ್ ಚಿತಾಗಾರದಲ್ಲೇ  ಸಂಸ್ಕಾರ ಮಾಡಿ ಮುಗಿಸುತ್ತಾರೆ. ಕೆಲವರು ಹೋಗುವ ಮುನ್ನ ಜೇಬಿನಲ್ಲಿರುವ ದುಡ್ಡನ್ನು ಮನೆಗೊಯ್ಯುವುದಿಲ್ಲ. ಇನ್ನು ಕೆಲವರು ಅಲ್ಪ ಸ್ವಲ್ಪ ಕೊಟ್ಟು ಹೋಗುತ್ತಾರೆ.ಕೆಲವರಂತೂ ಏನೂ ಕೊಡುವುದಿಲ್ಲ. ಮನೆಯಲ್ಲಿ ಮೂವರು ಹೆಣ್ಣು ಮಕ್ಕಳು ಇದ್ದಾರೆ. ಶವಗಳು ಬಂದರೆ ಮಾತ್ರ ಕೆಲಸ. ಇಲ್ಲದಿದ್ದರೆ ಅಂದು ಉಪವಾಸವೇ ಗತಿ~ ಎಂದು ನಿಟ್ಟುಸಿರು ಬಿಡುತ್ತಾರೆ.ಸತ್ತವರ ನೆರಳೇ ಬದುಕಿನ ಕಾರಣಕ್ಕೆ ಮುಖ್ಯವಾದ ಸ್ಮಶಾನವಾಸಿಗಳು ನಗರದಲ್ಲೂ ಪಡಿಪಾಟಲು ಪಡುತ್ತಿದ್ದರೂ ಅವರ ಮಕ್ಕಳು ಉಳಿದವರಂತೆ ಶಾಲೆಗೆ ಹೋಗುವಾಗ ಭವಿಷ್ಯದ ಬಗ್ಗೆ ಅವರಲ್ಲಿ ಉತ್ಸಾಹದ ಮಿಂಚು ಮೂಡುತ್ತದೆ. 

 ಚಿತ್ರಗಳು: ಎಂ.ಎಸ್ ಮಂಜುನಾಥ್ 

          

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry