ಮಸಣವಾದ ಮದುವೆ ಮಂಟಪ

7

ಮಸಣವಾದ ಮದುವೆ ಮಂಟಪ

Published:
Updated:
ಮಸಣವಾದ ಮದುವೆ ಮಂಟಪ

ಪಿರಿಯಾಪಟ್ಟಣ: ಹಸೆಮಣೆ ಏರಬೇಕಿದ್ದ ಯುವಕ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಆಕಸ್ಮಿಕವಾಗಿ ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ದೊಡ್ಡಕಮರವಳ್ಳಿ ಗ್ರಾಮದ ಬಳಿ ಶುಕ್ರವಾರ ಸಂಭವಿಸಿದೆ.ತಾಲ್ಲೂಕಿನ ಕೊಪ್ಪ ಗ್ರಾಮದ ಮದುಮಗ ಶಿವು (22), ಈತನ ತಾಯಿ ನಿರ್ಮಲ (47), ಚಿಕ್ಕಮ್ಮ ನೀಲಾ (28), ಅವರ ಮಗಳು ಪ್ರೀತಿ (7) ಮೃತರು. ಶಿವು ಅವರ ವಿವಾಹ ಶುಕ್ರವಾರವೇ ನಿಶ್ಚಯವಾಗಿತ್ತು. ಈ ಕಾರ್ಯ ನಿಮಿತ್ತ ಕುಟುಂಬದ ಸದಸ್ಯರೆಲ್ಲ ದೊಡ್ಡಕಮರವಳ್ಳಿ ಗ್ರಾಮಕ್ಕೆ ಬಂದಿದ್ದರು. ಅಂದುಕೊಂಡಂತೆ ನಡೆದಿದ್ದರೆ ಕೆಲ ಹೊತ್ತಿನಲ್ಲೇ ಅಲ್ಲಿ ಮದುವೆಯ ಸಂಭ್ರಮ ಮನೆಮಾಡುತ್ತಿತ್ತು. ಆದರೆ ದುರ್ಘಟನೆ ಮದುವೆ ಮಂಟಪವನ್ನೇ ಮಸಣವಾಗಿ ಪರಿವರ್ತಿಸಿದೆ.ಶುಕ್ರವಾರ ಬೆಳಿಗ್ಗೆ ಶಿವು ಚಿಕ್ಕಮ್ಮ ನೀಲಾ ತಮ್ಮ ಮಗಳು ಪ್ರೀತಿಯೊಂದಿಗೆ ನಿಸರ್ಗ ಕರೆಗೆ ದೊಡ್ಡಕಮರವಳ್ಳಿ ಗ್ರಾಮದ ಬಳಿಯ ಕಾವೇರಿ ನದಿ ದಂಡೆಗೆ ತೆರಳಿದ್ದರು. ಈ ವೇಳೆ ನೀರು ತುಂಬಿಕೊಳ್ಳಲು ಹೋದ ಬಾಲಕಿ ಪ್ರೀತಿ ಆಕಸ್ಮಿಕವಾಗಿ ನೀರಿಗೆ ಬಿದ್ದಳು. ಮಗಳನ್ನು ಉಳಿಸಲು ನೀಲಾ ನೀರಿಗೆ ಧುಮುಕಿದಾಗ ಅವರೂ ಮುಳುಗಿದರು. ನೀಲಾ ಮುಳುಗುತ್ತಿದ್ದುದನ್ನು ಕಂಡು ಅಲ್ಲಿಯೇ ಇದ್ದ ಆಕೆಯ ಅಕ್ಕ ನಿರ್ಮಲ ಕೂಡ ನೀರಿಗೆ ಇಳಿದರು.ಮೂವರೂ ಮುಳುಗುತ್ತಿದ್ದುದನ್ನು ಕಂಡ ಮದುಮಗ ಶಿವು ಅವರ ರಕ್ಷಣೆಗೆ ಮುಂದಾದಾಗ ನಾಲ್ವರೂ ನೀರುಪಾಲಾಗಿದ್ದಾರೆ. ಈ ಸಂದರ್ಭದಲ್ಲಿ ಶಿವು ತಂದೆ ರೇವಣ್ಣ ಸಹ ಎಲ್ಲರನ್ನು ರಕ್ಷಿಸಲು ಯತ್ನಿಸಿದರು. ಆದರೆ ಸಕಾಲದಲ್ಲಿ ಗ್ರಾಮಸ್ಥರು ಮತ್ತು ಸಂಬಂಧಿಕರು ಅವರನ್ನು ಮೇಲೆತ್ತಿದ್ದರಿಂದ ಅವರ ಪ್ರಾಣ ಉಳಿದಿದೆ.ಶಿವು ವಿವಾಹ ಕೊಡಗಿನ ಬಾಣಾವರ ಗ್ರಾಮದ ಯುವತಿಯೊಂದಿಗೆ ನಿಶ್ಚಯವಾಗಿತ್ತು. ಕುಶಾಲನಗರ ಬಳಿಯ ಕಣಿವೆ ಶ್ರೀರಾಮ ದೇವಾಲಯದಲ್ಲಿ ಶುಕ್ರವಾರ ವಿವಾಹ ನೇರವೇರಬೇಕಿತ್ತು. ಆದರೆ ಕೊನೇ ಕ್ಷಣದಲ್ಲಿ ವಿಧಿ ಇವರ ಬಾಳಲ್ಲಿ ಅಟ್ಟಹಾಸ ಮೆರೆದಿದೆ. ಮದುವೆ ನಡೆಯಬೇಕಿದ್ದ ಕಣಿವೆಯ ಶ್ರೀರಾಮ ದೇವಾಲಯಕ್ಕೂ ಘಟನೆ ನಡೆದ ಸ್ಥಳಕ್ಕೂ ಕೇವಲ 200 ಮೀಟರ್ ಅಂತರ. ನದಿಯ ಕಾಲುವೆಗೆ ಕಟ್ಟಲಾಗಿದ್ದ ಮೇಲು ಸೇತುವೆಯನ್ನು ದಾಟಿ ಅವರು ಈಚೆ ದಡಕ್ಕೆ ಬಂದಿದ್ದರು. ಆಗ ಈ ಘಟನೆ ನಡೆದಿದೆ. ಕೆಲ ಹೊತ್ತಿನ ನಂತರ ನಾಲ್ವರ ಶವಗಳನ್ನು ನೀರಿನಿಂದ ಹೊರತೆಗೆದು ಕುಶಾಲನಗರ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆ ಮುಂದೆ ಕಿಕ್ಕಿರಿದು ಜನ ಸೇರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry