ಮಸೂದೆಗೆ ಒಪ್ಪಿಗೆ ಬೇಡ: ರಾಜ್ಯಪಾಲರಿಗೆ ಜೆಡಿಎಸ್ ಮನವಿ

7

ಮಸೂದೆಗೆ ಒಪ್ಪಿಗೆ ಬೇಡ: ರಾಜ್ಯಪಾಲರಿಗೆ ಜೆಡಿಎಸ್ ಮನವಿ

Published:
Updated:

ಬೆಂಗಳೂರು: ವಿರೋಧ ಪಕ್ಷಗಳ ಪ್ರತಿಭಟನೆಯನ್ನು ಲೆಕ್ಕಿಸದೆ ವಿಧಾನಮಂಡಲದ ಅಧಿವೇಶನದಲ್ಲಿ ಅಂಗೀಕಾರ ಪಡೆದಿರುವ ಗೋಹತ್ಯೆ ನಿಷೇಧ ಮಸೂದೆ ಹಾಗೂ 13 ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಅವಕಾಶ ಕಲ್ಪಿಸುವ ಮಸೂದೆಗಳಿಗೆ ಅನುಮೋದನೆ ನೀಡಬಾರದು ಎಂದು ಜೆಡಿಎಸ್ ರಾಜ್ಯಪಾಲರಿಗೆ ಮನವಿ ಮಾಡಿದೆ.ಜೆಡಿಎಸ್ ರಾಜ್ಯಘಟಕದ ಅಧ್ಯಕ್ಷ  ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ನಿಯೋಗ ಶುಕ್ರವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಿತು. ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದ ನಂತರ ಹಲವು ಮಸೂದೆಗಳನ್ನು ಮಂಡಿಸಿ ಸದನದ ಒಪ್ಪಿಗೆ ಪಡೆದಿರುವುದು ಸಂವಿಧಾನಬಾಹಿರ ಕ್ರಮ. ಹೀಗಾಗಿ ಮಸೂದೆಗಳಿಗೆ ಅನುಮೋದನೆ ನೀಡಬಾರದು ಎಂದು ಜೆಡಿಎಸ್ ನಿಯೋಗ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿತು.ರಾಜ್ಯಪಾಲರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಗೋಹತ್ಯೆ ನಿಷೇಧ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸಂಬಂಧಿಸಿದ ಪ್ರಮುಖ ಮಸೂದೆಗಳಿಗೆ ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲಿ ಸರ್ಕಾರ ಅಂಗೀಕಾರ ಪಡೆದುಕೊಳ್ಳುವ ಮೂಲಕ ತಪ್ಪು ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದರು. ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ಸರ್ಕಾರ ಕಳುಹಿಸಿದ ಮಸೂದೆಯನ್ನು ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಕಳುಹಿಸಿದ್ದರು ಆದರೆ, ಅಲ್ಲಿ ಅನುಮೋದನೆ ನೀಡದೆ ಮಸೂದೆಯನ್ನು ವಾಪಸ್ ಕಳುಹಿಸಲಾಗಿತ್ತು. ಈಗ ಮತ್ತೊಮ್ಮೆ ಗೋಹತ್ಯೆ ನಿಷೇಧ ಮಸೂದೆ ಜಾರಿಗೆ ಸರ್ಕಾರ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.ಜಾತ್ಯತೀತ ಹಾಗೂ ಅಲ್ಪಸಂಖ್ಯಾತರ ಬಗ್ಗೆ ಭಾಷಣ ಮಾಡುವ ಕಾಂಗ್ರೆಸ್ ನಾಯಕರು ಕೇಂದ್ರದಲ್ಲಿ ತಮ್ಮದೇ ಸರ್ಕಾರ ಅಧಿಕಾರದಲ್ಲಿ ಇದ್ದರೂ ಗೋಹತ್ಯೆ ಮಸೂದೆ ಜಾರಿ ತಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಇದನ್ನು ಗಮನಿಸಿದರೆ ಬಿಜೆಪಿಯ ನಿರ್ಧಾರದ ಹಿಂದೆ ಕಾಂಗ್ರೆಸ್ ಪಾತ್ರವೂ ಇದೆ ಎಂಬ ಅನುಮಾನಗಳು ಮೂಡುತ್ತವೆ. ಈ ಬಗ್ಗೆ ಬಹಿರಂಗವಾಗಿ ಚರ್ಚೆಯಾಗಬೇಕು ಎಂದರು.ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡಿರುವ ತೀರ್ಮಾನ ವಿದ್ಯಾರ್ಥಿ ಸಮುದಾಯಕ್ಕೆ ಮಾರಕವಾಗಲಿದೆ. ಬಿಜೆಪಿ ಸರ್ಕಾರ ಮಂಡಿಸಿರುವ ಮಸೂದೆಯಲ್ಲಿ ಸಾಮಾಜಿಕ ನ್ಯಾಯವನ್ನು ಕಡೆಗಣಿಸಲಾಗಿದೆ. ಈ ಮೂಲಕ ವಿದ್ಯಾರ್ಥಿ ಸಮೂಹಕ್ಕೆ ದ್ರೋಹ ಮಾಡಲಾಗಿದೆ ಎಂದು ಆರೋಪಿಸಿದರು.ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ರೇವಣ್ಣ, ಸಂಸದ ಚೆಲುವರಾಯಸ್ವಾಮಿ, ಶಾಸಕರಾದ ಜಮೀರ್ ಅಹ್ಮದ್, ಪುಟ್ಟರಾಜು, ಪರಿಷತ್ ಸದಸ್ಯ ಎಂ.ಸಿ.ನಾಣಯ್ಯ ಸೇರಿದಂತೆ ಪಕ್ಷದ ಹಲವು ಮುಖಂಡರು ನಿಯೋಗದಲ್ಲಿ ಇದ್ದರು.

ಹಣದ ವ್ಯವಹಾರ

ಬೆಂಗಳೂರು: ರಾಜ್ಯ ಸರ್ಕಾರ 13 ಖಾಸಗಿ ವಿಶ್ವವಿದ್ಯಾಲಯಗಳಿಗೆ ಅನುಮತಿ ನೀಡಿರುವುದರ ಹಿಂದೆ 100 ಕೋಟಿ ರೂಪಾಯಿಗೂ ಹೆಚ್ಚಿನ ಹಣದ ವಹಿವಾಟು ನಡೆದಿದೆ ಎಂದು ಜೆಡಿಎಸ್ ಮುಖಂಡ ಎಂ.ಸಿ.ನಾಣಯ್ಯ ಗಂಭೀರ ಆರೋಪ ಮಾಡಿದರು.ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ವಿಶ್ವವಿದ್ಯಾಲಯಗಳ ಮಸೂದೆಗಳಿಗೆ ಅಂಗೀಕಾರ ಪಡೆಯುವ ಮುನ್ನ ಸಮಗ್ರ ಚರ್ಚೆಯಾಗಬೇಕಿತ್ತು. ಆದರೆ, ಪ್ರತಿಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳದೆ ಏಕಾಏಕಿ ಸರ್ಕಾರ ತೀರ್ಮಾನ ಕೈಗೊಂಡಿರುವುದನ್ನು ಗಮನಿಸಿದರೆ ಇದರಲ್ಲಿ ಭಾರಿ ಪ್ರಮಾಣದ ಹಣಕಾಸಿನ ವ್ಯವಹಾರ ನಡೆದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry