`ಮಸೂದೆ ಅಂಗೀಕಾರವಾಗದಿದ್ದರೆ ಕಠಿಣ ನಿಲುವು'

7
ಎಸ್‌ಸಿ/ಎಸ್‌ಟಿ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ

`ಮಸೂದೆ ಅಂಗೀಕಾರವಾಗದಿದ್ದರೆ ಕಠಿಣ ನಿಲುವು'

Published:
Updated:
`ಮಸೂದೆ ಅಂಗೀಕಾರವಾಗದಿದ್ದರೆ ಕಠಿಣ ನಿಲುವು'

ನವದೆಹಲಿ (ಐಎಎನ್‌ಎಸ್/ಪಿಟಿಐ): ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರಕಿಸಿಕೊಡಲು ಸರ್ಕಾರ ವಿಫಲವಾದರೆ ಕಠಿಣ ನಿಲುವು ತೆಗೆದುಕೊಳ್ಳುವುದಾಗಿ ಬಿಎಸ್‌ಪಿ ಎಚ್ಚರಿಕೆ ನೀಡಿದೆ. ಆದರೆ, ಈ ಮಸೂದೆ ಅಂಗೀಕೃತವಾಗಲು ಅವಕಾಶ ನೀಡುವುದಿಲ್ಲ ಎಂದು ಎಸ್‌ಪಿ ಹೇಳಿದೆ.ಈ ಮಧ್ಯೆ, ಸಮಾಜವಾದಿ ಪಕ್ಷದ (ಎಸ್‌ಪಿ) ಮನವೊಲಿಸುವ ವಿಶ್ವಾಸವನ್ನು ಸರ್ಕಾರ ವ್ಯಕ್ತಪಡಿಸಿದೆ.

`ಈ ಮಸೂದೆಗೆ ತಡೆಯುಂಟು ಮಾಡಲೆಂದೇ ಬಿಜೆಪಿ ಅವರು ರಾಜ್ಯಸಭೆ ಕಲಾಪಕ್ಕೆ ಅಡ್ಡಿ ಉಂಟುಮಾಡಿದರು. ಎಸ್‌ಪಿ ಸದಸ್ಯರು ಕೂಡ ಬಿಜೆಪಿ ತಾಳಕ್ಕೆ ಕುಣಿದರು' ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಕಿಡಿಕಾರಿದ್ದಾರೆ.`ನಾವು ಇನ್ನು 3-4 ದಿನ ಕಾಯುತ್ತೇವೆ. ಅಷ್ಟರಲ್ಲಿ ಸರ್ಕಾರ ತನ್ನ ನಿಲುವು ಸ್ಪಷ್ಟ ಪಡಿಸಬೇಕು. ಇಲ್ಲದಿದ್ದರೆ ಕಠಿಣ ನಿಲುವು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ರಾಜ್ಯಸಭೆಯಲ್ಲಿ ಸುಗಮ ಕಲಾಪ ನಡೆಸುವಂತಹ ಸನ್ನಿವೇಶವನ್ನು ನಿರ್ಮಿಸುವುದು ಸರ್ಕಾರದ ಹೊಣೆ. ಈ ಸದನದಲ್ಲಿ ಮಸೂದೆಗೆ ಮೇಲೆ ಚರ್ಚೆಗೆ ಅವಕಾಶ ಕಲ್ಪಿಸಿ, ಅಂಗೀಕಾರ ದೊರಕುವಂತೆ ಮಾಡುವ ಜವಾಬ್ದಾರಿಯೂ ಸರ್ಕಾರದ ಮೇಲಿದೆ' ಎಂದು ಮಾಯಾವತಿ ಸಂಸತ್ ಹೊರಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ.ಮಸೂದೆ ಒಪ್ಪಿಗೆ ಸಿಗಲು ಬಿಡೆವು: `ಯಾವುದೇ ಕಾರಣಕ್ಕೂ ರಾಜ್ಯಸಭೆಯಲ್ಲಿ ಈ ಮಸೂದೆ  ಅಂಗೀಕಾರವಾಗಲು ಬಿಡುವುದಿಲ್ಲ. ಕಲಾಪ ಭಂಗವಾಗಿ, ಪಕ್ಷದ ಸದಸ್ಯರು ಅಮಾನತುಗೊಂಡರು ಸರಿಯೇ ಮೇಲ್ಮನೆಯಲ್ಲಿ ಒಪ್ಪಿಗೆ ಸಿಗಲು ಅವಕಾಶ ನೀಡುವುದಿಲ್ಲ' ಎಂದು ಎಸ್‌ಪಿ ಮುಖಂಡ ರಾಮ್ ಗೋಪಾಲ್ ಯಾದವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.`ಈ ಮಸೂದೆಯು ಅಸಂವಿಧಾನಿಕ ಮತ್ತು ಅನೈತಿಕವಾದುದು. ಸಮಾಜದಲ್ಲಿ ಒಡಕನ್ನುಂಟುಮಾಡಿ ಹಗೆಯ ವಾತಾವರಣವನ್ನು ನಿರ್ಮಾಣ ಮಾಡುತ್ತದೆ. ಇಂತಹದಕ್ಕೆ ನಾವು ಅವಕಾಶ ನೀಡುವುದಿಲ್ಲ' ಎಂದು ಅವರು ಹೇಳಿದ್ದಾರೆ.ಎಸ್‌ಪಿ ಮನವೊಲಿಸುವ ವಿಶ್ವಾಸ: ಮಸೂದೆಯನ್ನು ತೀವ್ರಾಗಿ ವಿರೋಧಿಸುತ್ತಿರುವ ಸಮಾಜವಾದಿ ಪಕ್ಷದ ಮನವೊಲಿಸುವ ವಿಶ್ವಾಸವನ್ನು ಸರ್ಕಾರ ವ್ಯಕ್ತಪಡಿಸಿದೆ.`ಈ ಮಸೂದೆ ಸರ್ಕಾರಕ್ಕೆ ಮತ್ತೊಂದು ಅಗ್ನಿ ಪರೀಕ್ಷೆಯಾಗಿದೆ.ರಾಜ್ಯಸಭೆಯ ಕಲಾಪ ಪಟ್ಟಿಯಲ್ಲಿ ಈ ಮಸೂದೆ ಮೇಲಿನ ಚರ್ಚೆಯು ಮೊದಲ ಆದ್ಯತೆ ವಿಷಯವಾಗಿದೆ. ಬಿಎಸ್‌ಪಿ ಮಸೂದೆ ಪರವಾಗಿದರೆ, ಎಸ್‌ಪಿ ಇದನ್ನು ವಿರೋಧಿಸುತ್ತಿದೆ. ಈ ವಿಷಯದಲ್ಲಿ ಎಸ್‌ಪಿ ಮುಖಂಡರ ಮನವೊಲಿಸುವ ಪ್ರಯತ್ನದಲ್ಲಿ ಯಶಸ್ವಿಯಾಗುವ ವಿಶ್ವಾಸ ನಮಗಿದೆ' ಎಂದು ಸಂಸದೀಯ ವ್ಯವಹಾರಗಳ ಸಚಿವ ಕಮಲ್‌ನಾಥ್ ಹೇಳಿದ್ದಾರೆ.ತಿದ್ದುಪಡಿ ತಂದರೆ ಬೆಂಬಲ- ಬಿಜೆಪಿ

ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಮಸೂದೆಗೆ ಕೆಲವು ಮಾರ್ಪಾಟುಗಳನ್ನು ತರಲು ಸರ್ಕಾರ ಒಪ್ಪಿದರೆ ಈ ಮಸೂದೆಯನ್ನು ಬೆಂಬಲಿಸುವುದಾಗಿ ಬಿಜೆಪಿ ಹೇಳಿದೆ.`ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಲ್ಯಾಣದ ಪರವಾಗಿಯೇ ಬಿಜೆಪಿ ಇದೆ. ಆದರೆ ಅವರಿಗೆ ಸಾಮಾಜಿಕ ನ್ಯಾಯವನ್ನು ಕಲ್ಪಿಸುವ ಮಾರ್ಗ ಸಂವಿಧಾನದ ಚೌಕಟ್ಟಿನಲ್ಲಿ ಇರಬೇಕು. ಹಾಗಿದ್ದರೆ ಮಾತ್ರ ನಾವು ಈ ಮಸೂದೆ ಪರ ನಿಲ್ಲುತ್ತೇವೆ' ಎಂದು ರಾಜ್ಯಸಭೆಯಲ್ಲಿ ಪಕ್ಷದ ಉಪನಾಯಕರಾದ ರವಿಶಂಕರ್ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.`ವಿದೇಶಿ ನೇರ ಬಂಡವಾಳ ಹೂಡಿಕೆ/ವಾಲ್‌ಮಾರ್ಟ್ ವಿಷಯದಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡ ಸರ್ಕಾರಕ್ಕೆ ಈ ಮಸೂದೆ ವಿಷಯದಲ್ಲಿ ಈ ಎರಡೂ ಪಕ್ಷಗಳನ್ನು ಜೊತೆಗೂಡಿಸಲು ಸಾಧ್ಯವಾಗಿಲ್ಲ, ಏಕೆ. ಈ ಮಸೂದೆ ವಿಷಯದಲ್ಲಿ ಎರಡೂ ಪಕ್ಷಗಳು ನಡುವೆ ಶೀತಲ ಸಮರ ನಡೆಯುತ್ತಿದೆ, ಆದರೆ ಸರ್ಕಾರ ಅದನ್ನು ಸ್ಪಷ್ಟ ಪಡಿಸುತ್ತಿಲ್ಲ' ಎಂದೂ ಸರ್ಕಾರವನ್ನು ಕುಟುಕಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry