ಮಂಗಳವಾರ, ಏಪ್ರಿಲ್ 13, 2021
23 °C

ಮಸ್ಕಿ: ದೇವಸ್ಥಾನ ಬಳಿ ನಿಧಿಗಾಗಿ ಶೋಧ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಸ್ಕಿ: ಐತಿಹಾಸಿಕ ಅಶೋಕ ಶಿಲಾಶಾಸನ ಹೊಂದಿರುವ ಮಸ್ಕಿಯ ಬೆಟ್ಟದಲ್ಲಿ ಇದೀಗ ನಿಧಿಗಾಗಿ ಶೋಧ ನಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 15 ದಿನಗಳ ಹಿಂದೆಯಷ್ಟೇ ಮಲ್ಲಿಕಾರ್ಜುನ ಬೆಟ್ಟಕ್ಕೆ ಹೊಂದಿಕೊಂಡಿರುವ ದುರ್ಗಾಬೆಟ್ಟದ ಆಂಜನೇಯ ದೇವಸ್ಥಾನದ ಸಮೀಪ ನಿಧಿಗಳ್ಳರು ವಾಮಚಾರ ನಡೆಸಿ ನಿಧಿಯನ್ನು ದೋಚಿಸಿದ್ದಾರೆಂಬ ಶಂಕೆ ಪಟ್ಟಣದಲ್ಲಿ ವ್ಯಕ್ತವಾಗಿದೆ.ವರ್ಷದ ಹಿಂದೆಯಷ್ಟೇ ಇಲ್ಲಿಯ ಹಳೆ ಕ್ಯಾತನಹಟ್ಟಿಯ ವೀರಭದ್ರಶ್ವರ ದೇವಸ್ಥಾನದ ಸಮೀಪ ಭೂಮಿ ಅಗೆದು ಚಿನ್ನದ ನಾಣ್ಯಗಳನ್ನು ದೋಚಿದ್ದರು. ಈ ಬಗ್ಗೆ ಮಸ್ಕಿ ಪೊಲೀಸ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ಇದೀಗ ಆಂಜನೇಯ ದೇವಸ್ಥಾನದ ಬಳಿ ನಿಧಿಗಾಗಿ ಭೂಮಿ ಅಗೆದಿರುವುದು ಹಲವಾರು ಅನುಮಾನಗಳಿಗೆ ಪುಷ್ಠಿ ನೀಡಿದೆ.ನಿಧಿಗಾಗಿ ಶೋಧ ನಡೆಸಿದ ಸ್ಥಳದಲ್ಲಿ ವಾಮಚಾರದ ಪೂಜೆಗೆ ಬಳಿದರೆನ್ನಲಾದ ಸೀರೆ, ಬಳೆ, ಲಿಂಬೆಹಣ್ಣು, ಕುಂಕಮ, ಹರಿಸಿಣ, ಕಾಯಿ ಮುಂತಾದ ಸಾಮಾಗ್ರಿಗಳು ಪತ್ತೆಯಾಗಿವೆ. ಸುಮಾರು ಆರು ಅಡಿಗಳಷ್ಟು ಭೂಮಿ ಅಗೆಯಲಾಗಿದೆ. ಗಡಿಗೆ ಆಕಾರದಲ್ಲಿ ತಗ್ಗು ಕಂಡು ಬಂದಿದ್ದರಿಂದ ಇಲ್ಲಿ ನಿಧಿ ದೋಚಲಾಗಿದೆ ಎಂದು ಅನೇಕರು ಸಂಶಯ ವ್ಯಕ್ತಪಡಿಸಿದ್ದಾರೆ.ಹಲವಾರು ವರ್ಷಗಳಷ್ಟು ಪ್ರಾಚೀನವಾದ ಈ ಬೆಟ್ಟದಲ್ಲಿ ಭೂಮಿ ಅಗೆದು ನಿಧಿ ದೋಚಿಸುವ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿದ್ದರು ಸಹ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಈ ಕಡೆ ಗಮನ ಹರಿಸದೆ ನಿರ್ಲಕ್ಷ್ಯತಾಳಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.ಮಸ್ಕಿಯ ಗತವೈಭವ: ಈ ಹಿಂದೆ ವಿಜಯನಗರ ಸಾಮ್ರಾಜ್ಯ ಅರಸರು ಮಸ್ಕಿಗೆ ಭಾಗಕ್ಕೆ ಬಂದಿದ್ದಾಗ ತಮ್ಮ ಸಂಪತ್ತನ್ನು ಈ ಬೆಟ್ಟದಲ್ಲಿ ಅಡಗಿಸಿಟ್ಟಿದ್ದರು ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ, ನಿಧಿ ಇಟ್ಟ ಸ್ಥಳಗಳಲ್ಲಿ ಅಲ್ಲಲ್ಲಿ ಮೂರ್ತಿಗಳನ್ನು ನಿರ್ಮಿಸಿ ಅವುಗಳನ್ನು ತಮ್ಮ ಮಾರ್ಗಸೂಚಿಯನ್ನಾಗಿ ಮಾಡಿಕೊಂಡಿರುತ್ತಿದ್ದರು ಎಂದು ಸಂಶೋಧಕ ಡಾ. ಚನ್ನಬಸ್ಸಯ್ಯ ಹಿರೇಮಠ ಅಭಿಪ್ರಾಯ ಪಟ್ಟಿದ್ದಾರೆ.ಇದಕ್ಕೆ ಪುಷ್ಠಿ ಎನ್ನುವಂತೆ ಮಸ್ಕಿಯಲ್ಲಿ ನಿಧಿ ದೊರೆತ ಎಲ್ಲಾ ಸ್ಥಳಗಳು ದೇವಸ್ಥಾನಗಳ ಸಮೀಪವೇ ಇವೆ. ಮೂರ್ತಿಯ ಕೆಳಗೆ, ದೇವಸ್ಥಾನದ ಹೆಬ್ಬಾಗಿಲಿನ ಕೆಳಗೆ ಅಥವಾ ದೇವಸ್ಥಾನದ ಸಮೀಪ ನಿಧಿಗಳನ್ನು ಬಚ್ಚಿಡಲಾಗುತ್ತಿತ್ತು ಎಂದು ಡಾ. ಚನ್ನಬಸ್ಸಯ್ಯ ಹಿರೇಮಠ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.